ಕೊಹ್ಲಿ ಭೇಟಿಗೆ ಮನ ತುಡಿಯುತ್ತಿದೆ; ಕ್ರಿಕೆಟ್ ದಿಗ್ಗಜನ ಬಣ್ಣಿಸಿದ ಟೆನಿಸ್ ಲೆಜೆಂಡ್ ಜೊಕೊವಿಕ್
ಕನ್ನಡ ಸುದ್ದಿ  /  ಕ್ರೀಡೆ  /  ಕೊಹ್ಲಿ ಭೇಟಿಗೆ ಮನ ತುಡಿಯುತ್ತಿದೆ; ಕ್ರಿಕೆಟ್ ದಿಗ್ಗಜನ ಬಣ್ಣಿಸಿದ ಟೆನಿಸ್ ಲೆಜೆಂಡ್ ಜೊಕೊವಿಕ್

ಕೊಹ್ಲಿ ಭೇಟಿಗೆ ಮನ ತುಡಿಯುತ್ತಿದೆ; ಕ್ರಿಕೆಟ್ ದಿಗ್ಗಜನ ಬಣ್ಣಿಸಿದ ಟೆನಿಸ್ ಲೆಜೆಂಡ್ ಜೊಕೊವಿಕ್

Novak Djokovic on Virat Kohli: ವಿರಾಟ್ ಕೊಹ್ಲಿ ಜೊತೆಗಿನ ಗೆಳೆತನದ ಬಗ್ಗೆ ಬೆಳಕು ಚೆಲ್ಲಿರುವ ಟೆನಿಸ್ ದಿಗ್ಗಜ, ಕೆಲವು ವರ್ಷಗಳಿಂದ ಪರಸ್ಪರ ಸಂದೇಶಗಳನ್ನು ವಿನಿಯಮ ಮಾಡಿಕೊಳ್ಳುತ್ತಿದ್ದೇವೆ. ಆದರೆ ಪರಸ್ಪರ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ

ವಿರಾಟ್ ಕೊಹ್ಲಿ ಮತ್ತು ನೊವಾಕ್ ಜೊಕೊವಿಕ್.
ವಿರಾಟ್ ಕೊಹ್ಲಿ ಮತ್ತು ನೊವಾಕ್ ಜೊಕೊವಿಕ್.

ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯಂತ ಜನಪ್ರಿಯ ಅಥ್ಲೀಟ್‌ಗಳಲ್ಲಿ ಒಬ್ಬರು. ಅಭಿಮಾನಿಗಳು ಮಾತ್ರವಲ್ಲದೆ, ಇತರ ಕ್ರೀಡೆಗಳ ಕ್ರೀಡಾಪಟುಗಳು ಸಹ ಕೊಹ್ಲಿಗೆ ಅಭಿಮಾನಿಗಳಾಗಿದ್ದಾರೆ. ಜಾಗತಿಕ ತಾರೆಗಳು ಬ್ಯಾಟಿಂಗ್ ಮಾಂತ್ರಿಕನನ್ನು ಹಾಡಿ ಹೊಗಳಿದ ಸನ್ನಿವೇಶಗಳು ಸಾಕಷ್ಟಿವೆ. ಲೆಜೆಂಡರಿ ಕ್ರೀಡಾಪಟುಗಳೇ ಇಂಡಿಯನ್ ಸೂಪರ್​ಸ್ಟಾರ್​ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪಟ್ಟಿಗೆ ಮತ್ತೊಬ್ಬ ಲೆಜೆಂಡರಿ ಆಟಗಾರ ಸೇರ್ಪಡೆಯಾಗಿದ್ದಾರೆ.

ಕೊಹ್ಲಿಯನ್ನು ಬಣ್ಣಿಸಿದ ನೊವಾಕ್

ಟೆನಿಸ್ ಲೋಕದ ದಿಗ್ಗಜ ನೊವಾಕ್ ಜೊಕೊವಿಕ್ (Novak Djokovic) ಅವರು ವಿರಾಟ್ ಕೊಹ್ಲಿ ಅವರನ್ನು ಹಾಡಿ ಹೊಗಳಿದ್ದಾರೆ. ಸೋನಿ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಜೊಕೊವಿಕ್, ಕೊಹ್ಲಿ ಜೊತೆಗಿನ ಗೆಳೆತನದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಭಾರತೀಯ ಕ್ರಿಕೆಟಿಗನನ್ನು ಇದುವರೆಗೂ ಭೇಟಿಯಾಗದ ಕುರಿತು ಹೇಳಿದ 24 ಗ್ರ್ಯಾಂಡ್‌ಸ್ಲಾಮ್ ವಿಜೇತ, ಕೆಲವು ವರ್ಷಗಳಿಂದ ಪರಸ್ಪರ ಸಂದೇಶಗಳನ್ನು ವಿನಿಯಮ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಕೊಹ್ಲಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಟೆನಿಸ್ ದಿಗ್ಗಜ.

ಕೊಹ್ಲಿ, ನಾನು ಪರಸ್ಫರ ಭೇಟಿಯಾಗಿಲ್ಲ ಎಂದ ಜೊಕೊವಿಕ್​

ಭಾರತದ ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಕೊಹ್ಲಿ ಅವರೊಂದಿಗೆ ವಿಶೇಷ ಭಾಂದವ್ಯ ಹೊಂದಿದ್ದಾರೆ. ಕೊಹ್ಲಿ ಮತ್ತು ನಾನು ಕೆಲವು ವರ್ಷಗಳಿಂದ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ಆದರೆ ಇಬ್ಬರು ಸಹ ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಸಿಗಲಿಲ್ಲ. ಅವರು (ಕೊಹ್ಲಿ) ನನ್ನ ಕುರಿತು ಆಡುವ ಮಾತುಗಳು ತುಂಬಾ ಹಿತವಾಗಿರುತ್ತದೆ. ಕೇಳಲು ಗೌರವ ಎನಿಸುತ್ತದೆ. ಅವರ ವೃತ್ತಿ ಮತ್ತು ಸಾಧನೆಗಳನ್ನು ತುಂಬಾ ಹೆಮ್ಮೆಪಡುತ್ತೇನೆ ಎಂದ ಜೊಕೊವಿಕ್, ಭಾರತಕ್ಕೆ ಹೋಗುವ ಮುನ್ನ ಕ್ರಿಕೆಟ್ ಕೌಶಲ್ಯ ಸುಧಾರಿಕೊಳ್ಳುತ್ತೇನೆ ಎಂದು ತಮಾಷೆ ಮಾಡಿದ್ದಾರೆ.

‘ಕೊಹ್ಲಿ ಭೇಟಿಗೆ ಮನ ತುಡಿಯುತ್ತಿದೆ’

ವಿರಾಟ್ ಅವರನ್ನು ಪರಸ್ಪರ ಮುಖಾಮುಖಿ ಭೇಟಿ ಮಾಡಬೇಕು ಎಂಬ ಬಯಕೆ ಇದೆ. ಅದಕ್ಕಾಗಿ ಮನ ತುಡಿಯುತ್ತಿದೆ. ಕಳೆದ 11 ವರ್ಷಗಳಲ್ಲಿ ನಾನು ಭಾರತಕ್ಕೆ ಒಂದು ಸಲ ಮಾತ್ರ ಭೇಟಿ ಕೊಟ್ಟಿದ್ದೇನೆ. ಅಂದು ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ. ತದ ನಂತರ ಭಾರತಕ್ಕೆ ಭೇಟಿ ನೀಡಿಲ್ಲ. ಹಾಗಾಗಿ ವಿಶ್ವದಲ್ಲೇ ಶ್ರೀಮಂತ ಕಲೆ ಹಾಗೂ ಸಂಸ್ಕೃತಿ ಹೊಂದಿರುವ ಭಾರತಕ್ಕೆ ಶೀಘ್ರವೇ ಭೇಟಿ ನೀಡುವೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಕೌಶಲ ಹೆಚ್ಚಿಸಿಕೊಳ್ಳುತ್ತೇನೆ ಎಂದ ದಿಗ್ಗಜ

ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದ್ದೇನೆ. ಆದರೆ ನನಗೆ ಚೆನ್ನಾಗಿ ಆಡಲು ಬರುವುದಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸಹಜವಾಗಿ ಕ್ರಿಕೆಟ್ ದೊಡ್ಡ ಕ್ರೀಡೆಯಾಗಿದೆ. ಹಾಗಾಗಿ ನಾನು ಭಾರತಕ್ಕೆ ಹೋಗುವ ಮುನ್ನ ಕ್ರಿಕೆಟ್​ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತೇನೆ. ಏಕೆಂದರೆ ಅಲ್ಲಿಗೆ ಹೋದ ನಂತರ ನಾನು ಸರಿಯಾಗಿ ಆಡಲಿಲ್ಲ ಎಂದರೆ ನನಗೆ ಮುಜುಗರ ಆಗುತ್ತದೆ ಎಂದು ಹೇಳುತ್ತಾ ನಕ್ಕರು. ಕೊಹ್ಲಿ ಕುರಿತು ಜೊಕೊವಿಕ್ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಸ್ಮಿತ್ ಜೊತೆ ಕ್ರಿಕೆಟ್ ಆಡಿದ್ದ ನೊವಾಕ್

'ಎ ನೈಟ್ ವಿತ್ ನೊವಾಕ್ ಅಂಡ್ ಫ್ರೆಂಡ್ಸ್' ಎಂಬ ಕಾರ್ಯಕ್ರಮದಲ್ಲಿ ಜೊಕೊವಿಕ್ ಅವರು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಜೊತೆಗೆ ಟೆನಿಸ್ ಆಡಿದರು. ರಾಕೆಟ್ ಹಿಡಿದು ಟೆನಿಸ್ ಲೋಕ ಆಳುತ್ತಿರುವ ಜೊಕೊವಿಕ್, ತಾನು ಕ್ರಿಕೆಟ್​ ಬ್ಯಾಟ್ ಹಿಡಿದು ಸಿಕ್ಸರ್​ ಬಾರಿಸಿದರು. ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದ್ದರು.

ಸ್ಮಿತ್​ಗೆ ಶಿರಬಾಗಿದ ನೊವಾಕ್​

ಮೊದಲು ಸ್ಮಿತ್ ಮತ್ತು ನೊವಾಕ್ ಟೆನಿಸ್ ಆಡಿದರು. ಆದರೆ, ಸ್ಮಿತ್​ ನಿಧಾನಗತಿಯಲ್ಲಿ ಸರ್ವ್​ ಮಾಡಿದ ಪರಿಗೆ ಟೆನಿಸ್ ಮಾಂತ್ರಿಕ ಒಂದು ಕ್ಷಣ ದಂಗಾಗಿ ಹೋದರು. ತುಂಬಾ ಆಶ್ಚರ್ಯ ವ್ಯಕ್ತಪಡಿಸಿದ ನೊವಾಕ್, ರಾಕೆಟ್​ ಕೈಬಿಟ್ಟು ಶಿರಬಾಗಿ ನಮಸ್ಕರಿಸಿದರು. ಜೊಕೊವಿಕ್ ಸ್ಮಿತ್​ಗೆ ಬಿರುಸಾಗಿ ಸರ್ವ್ ಮಾಡಿದರೆ, ಸ್ಮಿತ್ ಕೌಶಲ್ಯದಿಂದ ಅಡೆತಡೆಯಿಲ್ಲದೆ ಸರ್ವ್ ಮಾಡಿದ್ದನ್ನು ಕಂಡು ಸರ್ಬಿಯಾದ ಸ್ಟಾರ್, ಅಭಿನಂದಿಸಿದರು.

ಬ್ಯಾಟ್ ಹಿಡಿದ ಜೊಕೊವಿಕ್

ಜೊಕೊವಿಕ್ ಹಂಚಿಕೊಂಡ ಮತ್ತು ವಿಡಿಯೋದಲ್ಲಿ ಸೆಂಟರ್-ಕೋರ್ಟ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಾಣಬಹುದು. ಮೊದಲ ಎಸೆತವನ್ನು ಬಾರಿಸುವಲ್ಲಿ ವಿಫಲರಾದ ನೊವಾಕ್, ಬ್ಯಾಟ್ ಬಿಸಾಡಿ ಟೆನಿಸ್ ರಾಕೆಟ್​​ನಿಂದ ಸಿಕ್ಸರ್​ ಬಾರಿಸಿದರು. ಚೆಂಡನ್ನು ಪ್ರೇಕ್ಷಕರ ಗ್ಯಾಲರಿಗೆ ಬಾರಿಸಿದರು. ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.