ಗ್ರಹಣಗಳು 2025: ಮುಂದಿನ ವರ್ಷ ಸಂಭವಿಸಲಿರುವ ಸೂರ್ಯ ಗ್ರಹಣ, ಚಂದ್ರ ಗ್ರಹಣಗಳ ವಿವರ; ಭಾರತದಲ್ಲಿ ಗೋಚರಿಸುವ ಗ್ರಹಣ ಯಾವುದು?
Dec 08, 2024 12:32 PM IST
2025 ರಲ್ಲಿ ಸಂಭವಿಸಲಿರುವ ಸೂರ್ಯ ಗ್ರಹಣ, ಚಂದ್ರ ಗ್ರಹಣಗಳು
Eclipses in 2025: ಮುಂದಿನ ವರ್ಷ 2 ಸೂರ್ಯ ಗ್ರಹಗಣ, 2 ಚಂದ್ರಗ್ರಹಗಳು ಸಂಭವಿಸುತ್ತವೆ. ಅದರಲ್ಲಿ ಎರಡು ಸೂರ್ಯ ಗ್ರಹಣಗಳು ಹಾಗೂ ಒಂದು ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಒಂದು ಚಂದ್ರಗ್ರಹಣ ಮಾತ್ರ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಗೋಚರಿಸುತ್ತದೆ.
ಗ್ರಹಣಗಳು 2025: ವೈದಿಕ ಜ್ಯೋತಿಷ್ಯದಲ್ಲಿ ಗ್ರಹಣಗಳಿಗೆ ಬಹಳ ಪ್ರಾಮುಖ್ಯತೆ ಇದೆ. ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಇರುವ ವಿವಿಧ ಗ್ರಹಗಳು ಜೀವನದ ವಿವಿಧ ಅಂಶಗಳ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರುತ್ತವೆ. ಸೂರ್ಯನನ್ನು ಆತ್ಮ ಮತ್ತು ಬ್ರಹ್ಮಾಂಡದ ಮೂಲವಾಗಿ ನೋಡಲಾಗುತ್ತದೆ, ಆದರೆ ಚಂದ್ರನನ್ನು ಮನಸ್ಸಿನ ಆಡಳಿತಗಾರನಾಗಿ ನೋಡಲಾಗುತ್ತದೆ. ಆದ್ದರಿಂದ ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ.
ತಾಜಾ ಫೋಟೊಗಳು
ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ಚಂದ್ರನು ಸಂಪೂರ್ಣವಾಗಿ ಆವರಿಸಿದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಈ ವಿದ್ಯಮಾನವನ್ನು "ಸಂಪೂರ್ಣ ಸೂರ್ಯಗ್ರಹಣ" ಎಂದೂ ಕರೆಯಲಾಗುತ್ತದೆ. ಸೂರ್ಯನ ಬೆಳಕನ್ನು ಭೂಮಿಗೆ ಬರದಂತೆ ಚಂದ್ರನು ಭಾಗಶಃ ನಿರ್ಬಂಧಿಸಿದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ, ಸೂರ್ಯನು ಭಾಗಶಃ ಅಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾನೆ. ಇದನ್ನು "ಭಾಗಶಃ ಸೂರ್ಯಗ್ರಹಣ" ಎಂದು ಕರೆಯಲಾಗುತ್ತದೆ. ಅದೇ ರೀತಿ ಭೂಮಿಯು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನು ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ, ಇದು "ಬ್ಲಡ್ ಮೂನ್" ಎಂದು ಕರೆಯಲಾಗುತ್ತದೆ. ಚಂದ್ರನ ಒಂದು ಭಾಗವನ್ನು ಮಾತ್ರ ಭೂಮಿಯ ನೆರಳಿನಿಂದ ಅಸ್ಪಷ್ಟಗೊಳಿಸಿದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.
ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2025ರಲ್ಲಿ 2 ಸೂರ್ಯಗ್ರಹಣ, 2 ಚಂದ್ರಗ್ರಹಗಣಗಳು ಸಂಭವಿಸುತ್ತವೆ. ಇದರ ಬಗ್ಗೆ ವಿವರ ಇಲ್ಲಿದೆ.
ಸೂರ್ಯ ಗ್ರಹಣ 2025
2025ರ ಮೊದಲ ಸೂರ್ಯಗ್ರಹಣ ಮಾರ್ಚ್ 29, ಶನಿವಾರ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಬರ್ಮುಡಾ, ಬಾರ್ಬಡೋಸ್, ಡೆನ್ಮಾರ್ಕ್, ಆಸ್ಟ್ರಿಯಾ, ಬೆಲ್ಜಿಯಂ, ಉತ್ತರ ಬ್ರೆಜಿಲ್, ಫಿನ್ಲ್ಯಾಂಡ್, ಜರ್ಮನಿ, ಫ್ರಾನ್ಸ್, ಹಂಗೇರಿ, ಐರ್ಲೆಂಡ್, ಮೊರಾಕೊ, ಗ್ರೀನ್ಲ್ಯಾಂಡ್, ಪೂರ್ವ ಕೆನಡಾ, ಲಿಥುವೇನಿಯಾ, ಹಾಲೆಂಡ್ ದೇಶಗಳಲ್ಲಿ ಈ ಸೂರ್ಯಗ್ರಹಣವನ್ನು ನೋಡಬಹುದು.
ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21, ಭಾನುವಾರ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವೂ ಆಗಿರುತ್ತದೆ. ಇದು ಕೂಡಾ ಭಾರತದಲ್ಲಿ ಗೋಚರಿಸುವುದಿಲ್ಲ, ನ್ಯೂಜಿಲೆಂಡ್, ಫಿಜಿ, ಅಂಟಾರ್ಟಿಕಾ, ದಕ್ಷಿಣ ಆಸ್ಟ್ರೇಲಿಯಾ ದೇಶಗಳಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಆದ್ದರಿಂದ ಈ ಎರಡೂ ಸೂರ್ಯ ಗ್ರಹಗಣಗಳು ಭಾರತಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮಹತ್ವವನ್ನು ಹೊಂದಿರುವುದಿಲ್ಲ.
ಚಂದ್ರ ಗ್ರಹಣ 2025
ಮೊದಲ ಚಂದ್ರಗ್ರಹಣ ಮಾರ್ಚ್ 14 ಶುಕ್ರವಾರ ಸಂಭವಿಸುತ್ತದೆ. ಇದು ಸಂಪೂರ್ಣ ಗ್ರಹಣವಾಗಿರುತ್ತದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾದ ಬಹುಪಾಲು, ಯುರೋಪ್‌ನ ಬಹುಭಾಗ, ಆಫ್ರಿಕಾದ ಬಹುಪಾಲು, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ, ಆರ್ಕ್ಟಿಕ್ ಮಹಾಸಾಗರ, ಪೂರ್ವ ಏಷ್ಯಾ ಮತ್ತು ಅಂಟಾರ್ಟಿಕಾಗಳಲ್ಲಿ ಈ ಚಂದ್ರಗ್ರಹಣ ಗೋಚರಿಸುತ್ತದೆ.
ಸೆಪ್ಟೆಂಬರ್ 7-8, ಭಾನುವಾರ-ಸೋಮವಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ಸಮಯದಲ್ಲಿ ಎರಡನೇ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಭಾರತ, ಆಸ್ಟ್ರೇಲಿಯಾ, ಯುರೋಪ್, ನ್ಯೂಜಿಲೆಂಡ್, ಪಶ್ಚಿಮ ಮತ್ತು ಉತ್ತರ ಅಮೆರಿಕಾ, ಆಫ್ರಿಕಾ, ದಕ್ಷಿಣ ಅಮೆರಿಕಾದ ಪೂರ್ವ ಭಾಗ ಸೇರಿದಂತೆ ಇಡೀ ಏಷ್ಯಾದ ವಿವಿಧ ಭಾಗಗಳಲ್ಲಿ ಗೋಚರಿಸುತ್ತದೆ. ಇದು ಕುಂಭ ರಾಶಿಯ ಅಡಿಯಲ್ಲಿ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ನಡೆಯುತ್ತದೆ.
ಗ್ರಹಣ ಸಮಯದಲ್ಲಿ ಪಠಿಸಬಹುದಾದ ಮಂತ್ರಗಳು
ಸೂರ್ಯಗ್ರಹಣದ ಸಮಯದಲ್ಲಿ ಓಂ ಆದಿತ್ಯಾಯ ವಿದ್ಮಹೇ ದಿವಾಕರಾಯ ಧೀಮಹಿ ತನ್ನೋ ಸೂರ್ಯಃ ಪ್ರಚೋದಯಾತ್ ಹಾಗೂ ಚಂದ್ರಗ್ರಹಣದ ಸಮಯದಲ್ಲಿ ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತ ತತ್ವಾಯ ಧೀಮಹಿ ತನ್ನೋ ಚಂದ್ರಃ ಪ್ರಚೋದಯಾತ್ ಎಂಬ ಮಂತ್ರವನ್ನು ಪಠಿಸಬಹುದು. ಜೊತೆಗೆ ಗ್ರಹಣದ ಸಮಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಕೂಡಾ ಒಳ್ಳೆಯದು. ಗ್ರಹಣವು ನಿಮ್ಮ ರಾಶಿಚಕ್ರ ಚಿಹ್ನೆ ಅಥವಾ ನಕ್ಷತ್ರದಲ್ಲಿ ನಡೆಯುತ್ತಿದ್ದರೆ ಹಾಗೂ ಗ್ರಹಣವು ನಿಮ್ಮ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಎನ್ನುವುದಾದರೆ ನಿಮ್ಮ ಜನ್ಮರಾಶಿ ಅಥವಾ ನಕ್ಷತ್ರದ ಆಡಳಿತ ಗ್ರಹದ ಮಂತ್ರವನ್ನು ಪಠಿಸಬಹುದು. ಹೆಚ್ಚಿನ ಮಾಹಿತಿಗೆ ಸೂಕ್ತ ಜ್ಯೋತಿಷಿಗಳ ಬಳಿ ಸಲಹೆ ಪಡೆಯಿರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.