Bhagavad Gita: ಭಗವಂತನ ಈ 3 ರೂಪಗಳನ್ನು ಅರಿತವನು ಲೋಕದ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ; ಗೀತೆಯ ಅರ್ಥ ತಿಳಿಯಿರಿ
Mar 13, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತನ ಈ 3 ರೂಪಗಳನ್ನು ಅರಿತವನು ಲೋಕದ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 6ನೇ ಅಧ್ಯಾಯದ 4ನೇ ಶ್ಲೋಕದಲ್ಲಿ ಓದಿ.
ಅಧ್ಯಾಯ - 7 ಪರಾತ್ಪರ ಜ್ಞಾನ: ಶ್ಲೋಕ - 4
ಭೂಮಿರಾಪೋನಲೋ ವಾಯುಃ ಖಂ ಮನೋ ಬುದ್ಧಿರೇವ ಚ |
ಅಹನ್ಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ||4||
ಅನುವಾದ: ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ - ಈ ಎಂಟು ನನ್ನ ಪ್ರತ್ಯೇಕಗೊಂಡ ಭೌತಿಕ ಶಕ್ತಿಗಳಾಗಿವೆ.
ತಾಜಾ ಫೋಟೊಗಳು
ಭಾವಾರ್ಥ: ದೇವರ ವಿಜ್ಞಾನವು ಭಗವಂತನ ಸಹಜ ಸ್ವರೂಪವನ್ನೂ ಅವನ ವಿವಿಧ ಶಕ್ತಿಗಳನ್ನೂ ವಿಶ್ಲೇಷಿಸುತ್ತದೆ. ಐಹಿಕ ಪ್ರಕೃತಿ ಅಥವಾ ಭಗವಂತನ ವಿವಿಧ ಪುರುಷ ವಿಸ್ತರಣಗಳಲ್ಲಿ ಅವನ ಶಕ್ತಿ ಯಾವ ರೀತಿ ಇರುತ್ತದೆಂಬುದನ್ನು ಸಾತ್ವತ ತನ್ತ್ರದಲ್ಲಿ ಹೀಗೆ ವರ್ಣಿಸಿದೆ -
ವಿಷ್ಣೋಸ್ತು ತ್ರೀಣಿ ರೂಪಾಣಿ ಪುರುಷಾಖ್ಯಾನ್ಯಥೋ ವಿದುಃ |
ಏಕಂ ತು ಮಹತೃಃ ಸ್ರಷ್ಟೃ ದ್ವಿತೀಯಂ ತ್ವಂಡಸಂಸ್ಥಿತಮ್ ||
ತೃತೀಯಂ ಸರ್ವಭೂತಸ್ಥಂ ತಾನಿ ಜ್ಞಾತ್ವಾ ವಿಮುಚ್ಯತೇ |
Bhagavad Gita Updesh in Kannada: "ಐಹಿಕ ಸೃಷ್ಟಿಗೆ ಶ್ರೀಕೃಷ್ಣನ ಸ್ವಾಂಶ ವಿಸ್ತರಣೆಯು ಮೂರು ವಿಷ್ಣು ರೂಪಗಳನ್ನು ತಳೆಯುತ್ತದೆ. ಮೊದಲನೆಯದಾದ ಮಹಾವಿಷ್ಣುವು ಮಹತ್ ತತ್ತ್ವ ಎಂದು ಕರೆಯುವ ಒಟ್ಟು ಐಹಿಕ ಶಕ್ತಿಯನ್ನು ಸೃಷ್ಟಿಸುತ್ತಾನೆ. ಗರ್ಭೋದಕಶಾಯೀ ವಿಷ್ಣು ಎರಡನೆಯವನು. ಅವನು ಎಲ್ಲ ಲೋಕಗಳಲ್ಲಿ ವೈವಿಧ್ಯವನ್ನು ಸೃಷ್ಟಿಸಲು ಅವುಗಳನ್ನು ಪ್ರವೇಶಿಸುತ್ತಾನೆ. ಮೂರನೆಯದಾದ ಕ್ಷೀರೋದಕಶಾಯೀ ವಿಷ್ಣುವು ಸರ್ವಾಂತರ್ಯಾಮಿ ಪರಮಾತ್ಮನಾಗಿ ಎಲ್ಲ ಲೋಕಗಳಲ್ಲಿಯೂ ಹಬ್ಬಿದ್ದಾನೆ. ಅವನಿಗೆ ಪರಮಾತ್ಮನೆಂದು ಹೆಸರು. ಆತನು ಅಣುಗಳಲ್ಲಿಯೂ ಇದ್ದಾನೆ. ಈ ಮೂರು ವಿಷ್ಣು ರೂಪಗಳನ್ನು ಅರಿತವನು ಐಹಿಕ ಬಂಧನದಿಂದ ಮುಕ್ತನಾಗಬಲ್ಲ.
ಐಹಿಕ ಜಗತ್ತು ಭಗವಂತನ ಶಕ್ತಿಗಳಲ್ಲಿ ಒಂದರ ತಾತ್ಕಾಲಿಕ ಅಭಿವ್ಯಕ್ತಿ, ಶ್ರೀಕೃಷ್ಣನ ಮೂರು ವಿಷ್ಣು ವಿಸ್ತರಣಗಳು ಐಹಿಕ ಜಗತ್ತಿನ ಎಲ್ಲ ಚಟುವಟಿಕೆಗಳನ್ನು ನಿರ್ದೇಶಿಸುತ್ತವೆ. ಈ ಪುರುಷರಿಗೆ ಅವತಾರಗಳೆಂದು ಹೆಸರು. ಸಾಮಾನ್ಯವಾಗಿ ಭಗವಂತನ (ಕೃಷ್ಣನ) ವಿಜ್ಞಾನವನ್ನು ತಿಳಿಯದವನು ಜೀವಿಗಳೇ ಪುರುಷರೆಂದೂ ಮತ್ತು ಐಹಿಕ ಜಗತ್ತು ಇರುವುದೇ ಜೀವಿನಗಳ ಭೋಗಕ್ಕಾಗಿ ಎಂದೂ ಭಾವಿಸುತ್ತಾನೆ. ಪುರುಷ ಎಂಬ ಶಬ್ಧದ ಅರ್ಥ ಐಹಿಕ ಶಕ್ತಿಯ ಮೂಲ, ನಿಯಂತ್ರಕ ಮತ್ತು ಭೋಗಿ ಎಂಬುದಾಗಿದೆ. ಭಗವದ್ಗೀತೆಯ ಪ್ರಕಾರ ಈ ನಾಸ್ತಿಕ ನಿರ್ಣಯವು ಸುಳ್ಳು. ಪ್ರಸ್ತುತ ಶ್ಲೋಕದಲ್ಲಿ ಕೃಷ್ಣನು ಐಹಿಕ ಅಭಿವ್ಯಕ್ತಿಯ ಮೂಲಕಾರಣ ಎಂದು ಹೇಳಿದೆ. 'ಶ್ರೀಮದ್ಭಾಗವತವು ಇದನ್ನು ದೃಢಪಡಿಸುತ್ತದೆ.
ಐಹಿಕ ಅಭಿವ್ಯಕ್ತಿಯಲ್ಲಿ ಸೇರಿರುವ ಅಂಶಗಳು ಭಗವಂತನ ಪ್ರತ್ಯೇಕಗೊಂಡ ಶಕ್ತಿಗಳು. ನಿರಾಕಾರವಾದಿಗಳ ಅಂತಿಮ ಗುರಿಯಾದ ಬ್ರಹ್ಮಜ್ಯೋತಿಯು ಸಹ ಆಧ್ಯಾತ್ಮಿಕ ಗಗನದಲ್ಲಿ ಪ್ರಕಟಗೊಂಡ ಆಧ್ಯಾತ್ಮಿಕ ಶಕ್ತಿ, ವೈಕುಂಠ ಲೋಕಗಳಲ್ಲಿರುವಂತೆ ಬ್ರಹ್ಮ ಜ್ಯೋತಿಯಲ್ಲಿ ಆಧ್ಯಾತ್ಮಿಕ ಭಿನ್ನತೆಗಳಿಲ್ಲ. ನಿರಾಕಾರವಾದಿಯು ಈ ಬ್ರಹ್ಮಜ್ಯೋತಿಯನ್ನು ಅಂತಿಮ ನಿರಂತರ ಗುರಿಯೆಂದು ಸ್ವೀಕರಿಸುತ್ತಾನೆ. ಪರಮಾತ್ಮ ರೂಪವು ಸಹ ಕ್ಷೀರೋದಕಶಾಯಿ ವಿಷ್ಣುವಿನ ತಾತ್ಕಾಲಿಕ ಸರ್ವಾಂತರಾಮಿ ರೂಪ. ಪರಮಾತ್ಮರೂಪವು ಆಧ್ಯಾತ್ಮಿಕ ಜಗತ್ತಿನಲ್ಲಿ ನಿರಂತರವಾದಮದಲ್ಲ. ಆದುದರಿಂದ ದೇವೋತ್ತಮ ಪರಮ ಪುರುಷ ಕೃಷ್ಣನೇ ವಾಸ್ತವವಾಗಿ ಪರಮ ಸತ್ಯ. ಆತನು ಪೂರ್ಣ ಚೈತನ್ಯ ಪುರುಷ. ಅವನಿಗೆ ಬೇರೆ ಬೇರೆ ಪ್ರತ್ಯೇಕಗೊಂಡ ಶಕ್ತಿಗಳು ಮತ್ತು ಅಂತರಂಗ ಶಕ್ತಿಗಳು ಇವೆ.
ಮೇಲೆ ಹೇಳಿದಂತೆ ಐಹಿಕ ಶಕ್ತಿಯ ಪ್ರಧಾನರೂಪಗಳು ಎಂಟು. ಇವುಗಳಲ್ಲಿ ಮೊದಲನೆಯ ಐದಾದ ಭೂಮಿ, ನೀರು, ಅಗ್ನಿ, ಗಾಳಿ ಮತ್ತು ಆಕಾಶಗಳನ್ನು ಐದು ಮಹಾಸೃಷ್ಟಿಗಳು ಅಥವಾ ಸ್ಥೂಲ ಸೃಷ್ಟಿಗಳು ಎಂದು ಕರೆಯುತ್ತಾರೆ. ಅವುಗಳಲ್ಲಿ ಐದು ಇಂದ್ರಿಯ ವಸ್ತುಗಳೂ ಸೇರಿವೆ. ಇವು ಭೌತಿಕ ಶಬ್ದ, ಸ್ಪರ್ಶ, ರೂಪ, ರುಚಿ ಮತ್ತು ವಾಸನೆಗಳು. ಐಹಿಕ ವಿಜ್ಞಾನದಲ್ಲಿ ಇರುವುದು ಈ ಹತ್ತು ಅಂಸಗಳು, ಬೇರೇನೂ ಇಲ್ಲ. ಆದರೆ ಪ್ರಾಪಂಚಿಕವಾದಿಗಳು ಇನ್ನು ಮೂರು ಅಂಶಗಳಾದ ಮನಸ್ಸು, ಬುದ್ಧಿಶಕ್ತಿ ಮತ್ತು ಅಹಂಕಾರಗಳನ್ನು ಸಂಪೂರ್ಣವಾಗಿ ಅಲಕ್ಷ್ಯಮಾಡುತ್ತಾರೆ. ಮಾನಸಿಕ ಚಟುವಟಿಕೆಗಳಲ್ಲಿ ವಿವೇಚಿಸುವ ತತ್ವಜ್ಞಾನಿಗಳಿಗೂ ಸಹ ಪರಿಪೂರ್ಣ ಜ್ಞಾನವಿರುವುದಿಲ್ಲ. ಏಕೆಂದರೆ ಅವರಿಗೆ ಕಟ್ಟಕಡೆಯ ಮೂಲವಾದ ಕೃಷ್ಣನು ತಿಳಿದಿಲ್ಲ. ನಾನು ಇದ್ದೇನೆ ಮತ್ತು ಇದು ನನ್ನದು - ಇವು ಐಹಿಕ ಅಸ್ತಿತ್ವದ ಮೂಲ ತತ್ವ. ಇದು ಮಿಥ್ಯಾಹಂಕಾರ. ಈ ಮಿಥ್ಯಾಹಂಕಾರದಲ್ಲಿ ಐಹಿಕ ಚಟುವಟಿಕೆಗಳ ಹತ್ತು ಇಂದ್ರಿಯಗಳು ಇವೆ.
ಬುದ್ಧಿಶಕ್ತಿಯು ಮಹತ್ ತತ್ತ್ವ ಎಂದು ಕರೆಯುವ ಒಟ್ಟು ಭೌತಿಕ ಸೃಷ್ಟಿಗೆ ಸಂಬಂಧಿಸಿದ್ದು. ಆದುದರಿಂದ ಭಗವಂತನ ಎಂಟು ಪ್ರತ್ಯೇಕಗೊಂಡ ಶಕ್ತಿಗಳಿಂದ ಐಹಿಕ ಜಗತ್ತಿನ ಇಪ್ಪತ್ತನಾಲ್ಕು ಅಂಶಗಳು ಪ್ರಕಟಗೊಂಡಿವೆ. ಈ ಅಂಶಗಳು ಸಾಂಖ್ಯನಾಸ್ತಿಕ ದರ್ಶನದ ವಸ್ತು ವಿಷಯ. ಅವು ಮೂಲತಃ ಕೃಷ್ಣನ ಶಕ್ತಿಗಳಿಂದ ಉದ್ಭವಿಸಿದವು ಮತ್ತು ಅವನಿಂದ ಪ್ರತ್ಯೇಕವಾದವು. ಆದರೆ ಅಲ್ಪಜ್ಞಾನಿಗಳಾದ ನಾಸ್ತಿಕ ಸಾಂಖ್ಯತತ್ವಶಾಸ್ತ್ರಜ್ಞರಿಗೆ ಕೃಷ್ಣನು ಎಲ್ಲ ಕಾರಣಗಳ ಕಾರಣ ಎಂದು ತಿಳಿದಿಲ್ಲ. ಸಾಂಖ್ಯ ತತ್ವಶಾಸ್ತ್ರದ ಚರ್ಚೆಯ ವಸ್ತು, ಭಗವದ್ಗೀತೆಯಲ್ಲಿ ವರ್ಣಿತವಾಗಿರುವಂತೆ, ಕೃಷ್ಣನ ಬಹಿರಂಗ ಶಕ್ತಿಯ ಅಭಿವ್ಯಕ್ತಿ ಮಾತ್ರ.
(This copy first appeared in Hindustan Times Kannada website. To read more like this please logon to kannada.hindustantimes.com )