Feng Shui Tips: ಮನೆಯಲ್ಲಿ ಹಡಗು ಮಾದರಿಯ ಮೂರ್ತಿ ಇದೆಯಾ? ವ್ಯಾಪಾರದಲ್ಲಿ ಲಾಭ ಸೇರಿ ನೀವೆಷ್ಟು ಅದೃಷ್ಟವಂತರು ನೋಡಿ
Sep 07, 2024 12:47 PM IST
Feng Shui Tips: ಮನೆಯಲ್ಲಿ ಹಡಗು ಮಾದರಿಯ ಮೂರ್ತಿ ಇದೆಯಾ? ವ್ಯಾಪಾರದಲ್ಲಿ ಲಾಭ ಸೇರಿ ಹಲವು ಪ್ರಯೋಜನಗಳಿವೆ.
- Feng Shui Tips: ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ಶುಭಫಲಗಳಿರುತ್ತವೆ. ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ. ಫೆಂಗ್ ಶುಯಿ ವಾಸ್ತು ಪ್ರಕಾರ ಮನೆಯಲ್ಲಿ ಹಡಗು ಮಾದರಿಯ ಮೂರ್ತಿ ಇದ್ದರೆ ಏನೆಲ್ಲಾ ಲಾಭಗಳಿರುವ ತಿಳಿಯೋಣ. ಹಸುವಿನ ಮೂರ್ತಿ ಬಗ್ಗೆಯೂ ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)
Feng Shui Tips: ಚೀನಾದಲ್ಲಿ ಜಿಯೋಮ್ಯಾನ್ಸಿ ಅಂತ ಕರೆಯಲಾಗುವ ಫೆಂಗ್ ಶುಯಿ ಶಾಸ್ತ್ರಕ್ಕೆ ಭಾರಿ ಮಹತ್ವವಿದೆ. ಈ ಶಾಸ್ತ್ರದಲ್ಲಿ ಒಬ್ಬ ಮನುಷ್ಯನ ಜೀವನಕ್ಕೆ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ತರಲು ವಿವಿಧ ಶಕ್ತಿಗಳನ್ನು ಬಳಸುವ ಮಾರ್ಗವೇ ಫೆಂಗ್ ಶುಯಿ ಶಾಸ್ತ್ರ. ಇದೊಂದು ರೀತಿಯ ವಾಸ್ತು ಶಾಸ್ತ್ರವೂ ಹೌದು. ಈ ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಹಡಗು ಮಾದರಿಯ ಮೂರ್ತಿ ಅಥವಾ ವಸ್ತುಗಳನ್ನು ಇಟ್ಟುಕೊಂಡಿದ್ದರೆ ಏನೆಲ್ಲಾ ಲಾಭಗಳಿವೆ ಎಂಬುದರ ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ. ಹಡಗಿನ ಮಾದರಿಯ ಪ್ರತಿಮೆ ಹಣಕಾಸಿನ ವಿಚಾರದಲ್ಲಿ ಉತ್ತಮ ಫಲವನ್ನು ನೀಡುತ್ತದೆ. ಈ ಹಡಗು ಡ್ರಾಗನ್ ಮುಖವನ್ನು ಹೊಂದಿರುತ್ತದೆ. ಇದರಲ್ಲಿ ವ್ಯಾಪಾರಿಗಳ ತಂಡವಿರುತ್ತದೆ. ಇದರಲ್ಲಿ ಮೂರು, ಐದು ಅಥವಾ 11 ನಾಣ್ಯಗಳನ್ನು ಇಡಬೇಕು. ಇದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಈ ಪ್ರತಿಮೆ ಇದ್ದಲ್ಲಿ ಅವಿರತ ಯಶಸ್ಸು ಅಥವಾ ಗೆಲುವು ದೊರೆಯುತ್ತದೆ ಎಂಬ ನಂಬಿಕೆ ಇದೆ.
ತಾಜಾ ಫೋಟೊಗಳು
ಮನೆಯಲ್ಲಿ ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು?
ಫೆಂಗ್ ಶುಯಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಡಗು ಮಾದರಿಯ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿ ಇಡಬೇಕಾಗುತ್ತೆ. ಇದರಿಂದ ವಂಶದ ಆಸ್ತಿ ಅಥವಾ ಹಣದ ವಿಚಾರದಲ್ಲಿ ಮನಸ್ತಾಪ ಇದ್ದಲ್ಲಿ ಬಗೆಹರಿಯುತ್ತದೆ. ಆಸ್ತಿಯಲ್ಲಿ ನ್ಯಾಯ ಸಮ್ಮತವಾದ ಪಾಲು ದೊರೆಯುತ್ತದೆ. ವಂಶಾಧಾರಿತ ವೃತ್ತಿ ಅಥವಾ ವ್ಯಾಪಾರವನ್ನು ಅನುಸರಿಸಿದಲ್ಲಿ ಉನ್ನತ ಪ್ರಗತಿ ದೊರೆಯುತ್ತದೆ.
ವ್ಯಾಪಾರದ ಸಂಸ್ಥೆಯಲ್ಲಿ ಇದನ್ನು ಮೇಜಿನ ಮೇಲೆ ಜನರಿಗೆ ಕಾಣುವಂತೆ ಅಥವಾ ಉತ್ತರ ದಿಕ್ಕಿನಲ್ಲಿ ಇದನ್ನು ಇಡಬಹುದು. ಇದರಿಂದ ಉತ್ತಮ ಲಾಭ ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರವಿದ್ದಲ್ಲಿ ಪಾಲುಗಾರರೊಂದಿಗೆ ಉತ್ತಮ ಒಡನಾಟ ಉಂಟಾಗುತ್ತದೆ. ಉದ್ಯೋಗ ಮಾಡುವ ಜಾಗದಲ್ಲಿ ಇದನ್ನು ಇಟ್ಟಲ್ಲಿ ಉದ್ಯೋಗ ನೀಡಿದ ಸಂಸ್ಥೆಯ ಮುಖಾಂತರ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ.
ಚೈನೀಸ್ ನಾಣ್ಯಗಳಿಂದಲೂ ಪ್ರಯೋಜಗಳಿವೆ
ಚೈನೀಸ್ ನಾಣ್ಯಗಳು ನಮ್ಮ ಜೀವನದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮೂರು ರೀತಿಯ ನಾಣ್ಯಗಳು ನಮಗೆ ದೊರೆಯುತ್ತವೆ. ಸಾಮಾನ್ಯವಾಗಿ ಈ ನಾಣ್ಯಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಡಬೇಕು. ಇಲ್ಲವಾದಲ್ಲಿ ಕೆಂಪು ದಾರದಲ್ಲಿ ವಿನೂತನ ಮಾದರಿಯಲ್ಲಿ ಪೋಣಿಸಬೇಕು. ನಮ್ಮ ಅಂಗೈಯಗಲದ ಕೆಂಪು ಬಟ್ಟೆಯಿಂದ ಹೊಲೆದ ಸಣ್ಣ ಚೀಲದಲ್ಲಿಯೂ ಸಹ ಇರಿಸಬಹುದು. ಇದನ್ನು ನಮ್ಮ ಮನೆಯ ಬಾಗಿಲ ಹಿಂಭಾಗದಲ್ಲಿ ಕಟ್ಟಬೇಕು. ಇದರಿಂದಾಗಿ ಹಣಕಾಸಿನ ವಿಚಾರದಲ್ಲಿಉತ್ತಮ ಪ್ರಗತಿ ಉಂಟಾಗುತ್ತದೆ. ಬೇರೆಯವರಿಗೆ ಸಾಲವಾಗಿ ನೀಡಿದ್ದ ಹಣವು ಸುಲಭವಾಗಿ ಮರಳಿ ಕೈ ಸೇರುತ್ತದೆ.
ದಾರದೊಂದಿಗೆ ಇರುವ ನಾಣ್ಯವನ್ನು ಉಡುಗೊರೆಯಾಗಿ ನೀಡಿದರೆ ಕೊಟ್ಟವರಿಗೂ ತೆಗೆದುಕೊಂಡವರಿಗೂ ಉತ್ತಮ ಲಾಭ ಕಂಡು ಬರುತ್ತದೆ. ಇದನ್ನು ಗಲ್ಲಾಪೆಟ್ಟಿಗೆಯಲ್ಲಿ ಇರಿಸಿದಲ್ಲಿ ಕಷ್ಟವೆನಿಸಿದರು ಹಣವನ್ನು ಉಳಿಸಬಹುದು. ನಾಣ್ಯಗಳ ತುದಿಗೆ ಸಣ್ಣ ಗಂಟೆಯನ್ನು ಕಟ್ಟಿದಲ್ಲಿ ಹಣಕಾಸಿನ ಪ್ರಗತಿಯು ಉಂಟಾಗುತ್ತದೆ. ಇದನ್ನು ವ್ಯವಹಾರದ ಲೆಕ್ಕ ಬರೆಯುವ ಪುಸ್ತಕದಲ್ಲಿಯೂ ಇಡಬಹುದು. ಈ ನಾಣ್ಯಗಳನ್ನು ನಮ್ಮ ಜೇಬಿನಲ್ಲಿ ಅಥವಾ ನಿತ್ಯ ಬಳಸುವ ಚೀಲದಲ್ಲಿ ಇಡಬಹುದು. ಆದರೆ ಯಾವುದೇ ಕಾರಣಕ್ಕೂ ನಮ್ಮ ಕತ್ತಿನಲ್ಲಿ ಇದನ್ನು ಧರಿಸಬಾರದು. ಸ್ವಂತ ಉದ್ದಿಮೆ ಇದ್ದಲ್ಲಿ ಇದನ್ನು ಹಣಕಾಸನ್ನು ಸಂಗ್ರಹಿಸುವ ಪೆಟ್ಟಿಗೆಯಲ್ಲಿ ಇಡುವುದು ಹೆಚ್ಚು ಸೂಕ್ತ. ಆದರೆ ಯಾವುದೇ ಕಾರಣಕ್ಕೂ ನಾವು ಬಳಸುತ್ತಿರುವ ನಾಣ್ಯವನ್ನು ಬೇರೆಯವರಿಗೆ ನೀಡಬಾರದು.
ಮನೆಯಲ್ಲಿ ಹಸುವಿನ ಮೂರ್ತಿಯಿದ್ದರೆ ಲಾಭ ಇದೆಯಾ?
ಹಸುವಿನ ಪ್ರತಿಮೆ ಇದ್ದಲ್ಲಿ ವಿಶೇಷ ಫಲಗಳು ದೊರೆಯುತ್ತವೆ. ಹಿಂದೂ ಧರ್ಮದಲ್ಲಿ ಇದನ್ನು ಕಾಮಧೇನು ಎಂದು ಕರೆಯುತ್ತೇವೆ. ಹಸುವಿನ ಭಾವಚಿತ್ರವಾಗಲಿ ಅಥವಾ ಪ್ರತಿಮೆಯಾಗಲಿ ಮನೆಯಲ್ಲಿ ಇದ್ದರೆ ಕುಟುಂಬದ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ. ಕೇವಲ ಹಸುವಲ್ಲದೆ ಹಸುವಿನ ಜೊತೆಯಲ್ಲಿ ಕರುವಿದ್ದಲ್ಲಿ ಹೆಚ್ಚಿನ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರ ಮಾಡುವ ಸ್ಥಳದಲ್ಲಿ ಇದ್ದಲ್ಲಿ ನಷ್ಟವು ಮರೆಯಾಗಿ ಉತ್ತಮ ಲಾಭ ದೊರೆಯುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.