ಹುಡುಗರಿಗೆ ಎಂಥ ಹುಡುಗಿ ಇಷ್ಟ? ಕೋಟಿ ರೂಪಾಯಿ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿರಲ್ಲ, ಹುಡುಗರ ಮನಸು ನೀವಂದುಕೊಂಡಂತೆ ಅಲ್ಲವೇ ಅಲ್ಲ -ಕಾಳಜಿ ಅಂಕಣ
Nov 30, 2024 07:00 AM IST
ಹುಡುಗರಿಗೆ ಎಂಥ ಹುಡುಗಿಯರು ಹೆಚ್ಚು ಇಷ್ಟವಾಗುತ್ತಾರೆ? ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಕೊಟ್ಟಿರುವ ಉತ್ತರ ಇಲ್ಲಿದೆ.
- ಡಾ ರೂಪಾ ರಾವ್ ಬರಹ: ನಾನು ನನ್ನ ಸೆಷನ್‌ಗಳಲ್ಲಿ ನೋಡಿದಂತೆ ಗಂಡಸರು ಈ ಕೆಳಗಿನ ಗುಣಗಳನ್ನು ತಮ್ಮ ಸಂಗಾತಿಯಲ್ಲಿ ತುಂಬಾ ಇಷ್ಟಪಡುತ್ತೇವೆ, ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಹಾಗೆಂದು ಎಲ್ಲರೂ ಇದನ್ನೇ ಬಯಸುತ್ತಾರೆ ಅಥವಾ ಹೀಗೆಯೇ ಇರುತ್ತಾರೆ ಎಂದು ಒಂದೇ ತಕ್ಕಡಿಯಲ್ಲಿ ಹಾಕಲು ಆಗುವುದಿಲ್ಲ
ಪ್ರಶ್ನೆ: ನಮಸ್ಕಾರ ಮೇಡಂ. ನೀವು ಈವರೆಗೆ ಸಾವಿರಾರು ಜನರನ್ನು ಕೌನ್ಸೆಲಿಂಗ್ ಮಾಡಿದ್ದೀರಿ. ನಿಮ್ಮ ಅನುಭವ ಆಧರಿಸಿ ನನಗೆ ಟಿಪ್ಸ್ ಕೊಡಲು ಸಾಧ್ಯವೇ? ನನ್ನ ಪ್ರಶ್ನೆ ಇಷ್ಟೇ, ಹುಡುಗರಿಗೆ ಎಂಥ ಹುಡುಗಿ ಇಷ್ಟ ಆಗ್ತಾಳೆ? ಬಾಹ್ಯ ಸೌಂದರ್ಯ ಹುಡುಗರ ಗಮನ ಸೆಳೆಯುತ್ತೆ ಎನ್ನುವುದು ನನಗೂ ಗೊತ್ತು. ನೀವು ಅದರಿಂದಾಚೆಗೆ ಏನಾದರೂ ಉತ್ತರಿಸಬೇಕೆಂದು ಬಯಸುತ್ತೇನೆ.
ಉತ್ತರ: ನಿಮ್ಮ ಪ್ರಶ್ನೆ ಚೆನ್ನಾಗಿದೆ. ಖಂಡಿತ ಉತ್ತರಿಸಲು ಪ್ರಯತ್ನಿಸುತ್ತೇನೆ. ಇದೊಂದು ಅಪರೂಪದ ಪ್ರಶ್ನೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಈ ರೀತಿ ಪ್ರಶ್ನೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ಕೊಂಚ ಸುಂದರವಾಗಿ ಇರುವವರಂತೂ ನನಗೇನೂ ಯಾರಾದರೂ ಬೀಳುತ್ತಾರೆ. ನಾನೇಕೆ 'ಪಿಕ್ ಮಿ' ಅಂತಿರಲಿ ಎಂಬ ಆಟಿಟ್ಯೂಡ್ ಬೆಳೆಸಿಕೊಂಡಿರುತ್ತಾರೆ. ಆದರೆ, ಈ ಸುಂದರಿಯರೂ ಮದುವೆ ಅಥವಾ ಕಮಿಟೆಡ್ ರೀಲೇಶನ್‌ಶಿಪ್‌ಗೆ ಬಿದ್ದ ಒಂದೆರೆಡು ತಿಂಗಳು ಅಥವಾ ವರ್ಷಕ್ಕೇ ತನ್ನ ಗಂಡ ಅಥವಾ ಬಾಯ್‌ಫ್ರೆಂಡ್‌ನಿಂದ ಉಪೇಕ್ಷಿತರಾಗುವ ಸಾಧ್ಯತೆ ಇರುತ್ತದೆ.
ಒಂದು ಹೆಣ್ಣು ಗಂಡಿಗೆ ಆಕರ್ಷಕವಾಗಿ ಕಾಣಲು ಬಾಹ್ಯ ಸೌಂದರ್ಯ ಒಂದು ದೊಡ್ಡ ಕಾರಣವೇ ಆದರೂ ಅದು ಅವನು ಅವಳೊಂದಿಗೆ ಕಮಿಟ್ ಆಗಲು ಮುಖ್ಯ ಕಾರಣವೇ ಅಲ್ಲ. ಒಂದು ಸರ್ವೇ ಪ್ರಕಾರ ಗಂಡಿಗೆ ಜಂಬಗಾತಿ ಹೆಣ್ಣು ಇಷ್ಟವಾಗಿಬಿಡುತ್ತಾಳೆ. ಆಕರ್ಷಕವಾಗಿಯೂ ಕಾಣುತ್ತಾಳೆ. ಇದುಕೇವಲ ತಾತ್ಕಾಲಿಕ ಅಷ್ಟೇ.
ನೀವು ನನ್ನ ವೃತ್ತಿಪರ ಅನುಭವ ಕೇಳಿರುವುದರಿಂದ ನನ್ನ ಸೆಶನ್‌ಗಳಲ್ಲಿ ನಾನು ಮಾತನಾಡಿಸಿದ ಮದುವೆಯಾಗ ಬಯಸುವ, ಮದುವೆ ಆಗಿರುವ ಹುಡುಗರ ತಮ್ಮ ಹುಡುಗಿಯ ಬಗೆಗಿನ ನಿರೀಕ್ಷೆ ಅಪೇಕ್ಷೆಗಳನ್ನು ಪಟ್ಟಿ ಮಾಡಿರುವೆ. ಇದು ನನ್ನ ಸ್ವಂತ ಅಭಿಪ್ರಾಯವಲ್ಲ. ಹಾಗೆಯೇ ಇದು ಸರಿ ಅಥವಾ ತಪ್ಪು ಎಂಬ ಸಮರ್ಥನೆಯೂ ಅಲ್ಲ. ಇದನ್ನು ನಿಮ್ಮ ಪ್ರಶ್ನೆಯ ಹಿಂದಿನ ಜಿಜ್ಞಾಸೆಗೆ ಹೇಗೆ ಸೂಕ್ತವೋ ಹಾಗೆ ಬಳಸಿಕೊಳ್ಳಿ. ನಾನು ನನ್ನ ಸೆಷನ್‌ಗಳಲ್ಲಿ ನೋಡಿದಂತೆ ಗಂಡಸರು ಈ ಕೆಳಗಿನ ಗುಣಗಳನ್ನು ತಮ್ಮ ಸಂಗಾತಿಯಲ್ಲಿ ತುಂಬಾ ಇಷ್ಟಪಡುತ್ತೇವೆ, ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.
ಗಂಡಸರು ಹೆಂಗಸರಿಂದ ಬಯಸುವುದೇನು?
1) ಹೆಣ್ಣು ಶಾಂತವಾಗಿರಬೇಕು. ಜಗಳವಾಡಬಾರದು. ತಾನೆಷ್ಟೇ ಆವೇಶಗೊಂಡರೂ ಆಕೆ ನಗುನಗುತ್ತಾ ತನ್ನ ಕೋಪವನ್ನು ಶಮನ ಮಾಡಬೇಕು.
2) ಅಲಂಕರಿಸಿಕೊಂಡ ಬೇರೆ ಹೆಣ್ಣು ಕಣ್ಣು ಕುಕ್ಕಿದರೂ ತನ್ನ ಹೆಣ್ಣು ಮಾತ್ರ ಸರಳವಾಗಿರಬೇಕು. ಹಣೆಗೆ ಸಣ್ಣಬಿಂದಿ, ಕಣ್ಣಿಗೆ ಕಾಜೋಲ್, ತೀಡಿದ ಹುಬ್ಬು, ಲಕ್ಷಣವಾದ ಪೌಡರ್ ಇಷ್ಟಿದ್ದರೆ ಸಾಕು ಎನ್ನುವ ಗಂಡಸರೂ ಈ ಲಿಸ್ಟಿನಲ್ಲಿಯೇ ಇದ್ದಾರೆ.
3) ಹುಡುಗಿಯ ಮಾತು ನೇರವಾಗಿರಬೇಕು. ಸುತ್ತಿ ಬಳಸಿ ಮಾತಾಡುತ್ತಾ ಸಮಯ ವ್ಯರ್ಥ ಮಾಡಬಾರದು.
4) ಇನ್ನೊಂದು ವಿಚಿತ್ರ ವಿಧ ಅಂದರೆ ಯಾರೇ ಆಗಲೀ ಮಕ್ಕಳೊಂದಿಗೆ ಅವರನ್ನು ಕೇರ್ ಮಾಡುತ್ತಾ ಇರುವ ಹೆಣ್ಣುಗಳೆಂದರೆ ತನಗೇನೋ ಗೌರವ ಎನ್ನುವ ಮಂದಿಯೂ ಇದ್ದಾರೆ. ಬಹುಶಃ ಮಕ್ಕಳನ್ನು ತಾಳ್ಮೆ ಮತ್ತು ಕೇರ್ ಇಂದ ನೋಡಿಕೊಳ್ಳುವ ಹೆಣ್ಣು ನಿಜಕ್ಕೂ ತನ್ನನ್ನೂ ಹಾಗೆಯೇ ನೋಡಿಕೊಳ್ಳಬಲ್ಲಳು ಎಂಬ ಆಲೋಚನೆ ಇರುತ್ತದೆ. ಅಥವಾ ಈ ಹೆಣ್ಣು ತನ್ನ ಮಕ್ಕಳನ್ನು ಸರಿಯಾಗಿ ಕೇರ್ ಕೊಟ್ಟು ನೋಡಿಕೊಳ್ಳಬಹುದು ಎಂಬ ಆಸೆಯೂ ಇರಬೇಕು.
5) ಸದಾ ಮೊಬೈಲ್ ಫೋನ್‌ನಲ್ಲಿ ಮೈಮರೆಯುವ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಅದೇ ರೀತಿ ಹುಡುಗರಿಗೂ ಅಷ್ಟೇ, ಮೊಬೈಲ್ ಫೋನ್‌ನಲ್ಲಿ ಸದಾ ಕಾಲಕಳೆಯುವ ಹುಡುಗಿಯರು ಇಷ್ಟವಾಗುವುದಿಲ್ಲ.
6) ತಾನು ಚಾಟ್ ಮಾಡಿದ್ದ, ಫೇಸ್‌ಬುಕ್‌ನಲ್ಲಿ ಪರಿಚಯವಾದ ಹುಡುಗಿಯೊಂದಿಗೇ ಕಮಿಟೆಡ್ ರಿಲೇಷನ್‌ಶಿಪ್ ಆರಂಭಿಸಿರಬಹುದು. ಆದರೆ ಅವಳು ಕಮಿಟ್ ಆದ ಮೇಲೆ ಸೋಷಿಯಲ್ ಮೀಡಿಯಾದಿಂದ ದೂರವಿದ್ದರೆ ಸಾಕು ಕೈ ಎತ್ತಿ ಮುಗಿಯುವೆ ಎಂಬ ಗಂಡಸರೂ ಇದ್ದಾರೆ.
7) ಹಳೆಯದಾದರೂ ಶುಭ್ರವಾದ ಸೀರೆ, ಬಟ್ಟೆ ಧರಿಸಿದ್ದರೆ ಹೆಣ್ಣು ಮನಸು ಗೆಲ್ಲುತ್ತಾಳೆ ಎನ್ನುವವರೂ ಇದ್ದಾರೆ.
8) ಸಮಾನ ಹವ್ಯಾಸ ಇದ್ದರೆ ಅಂತಹ ಹುಡುಗಿಯನ್ನು ಮೆಚ್ಚುವಿಕೆಗೆ ಇನ್ನೊಂದು ಕಾರಣ ಎಂದೊಬ್ಬರು ಹೇಳಿದ್ದರು. ಅವರಿಗೆ ಟ್ರೆಕ್ಕಿಂಗ್ ಇಷ್ಟವಾಗಿದ್ದು ಹೆಂಡತಿಯಾಗುವ ಹುಡುಗಿಗೂ ಅದೇ ಆಸಕ್ತಿ ಇದ್ದರೆ ಬದುಕಲ್ಲಿ ಪರಸ್ಪರ ಸಂಘರ್ಷಗಳು ಕಡಿಮೆ ಆಗಬಹುದು ಎಂಬ ದೂರದೃಷ್ಟಿ ಅವರದ್ದು.
9) ತನ್ನನ್ನು ಮದುವೆಯಾಗುವ ಹುಡುಗಿ ಚುರುಕಾಗಿರಬೇಕು. ಹೇಳಿದ್ದನ್ನು ಕೂಡಲೇ ಅರ್ಥ ಮಾಡಿಕೊಳ್ಳಬೇಕು. ಆದರೆ ಮನೆ ಅಥವಾ ಮನಸ್ಸು ಒಡೆಯುವ ಚಾಲಾಕಿ ಆಗಿರಬಾರದು ಎನ್ನುವ ಗಂಡಸರೂ ಇದ್ದಾರೆ.
10) ತನ್ನ ಹುಡುಗಿ ಮುಗ್ಧಳಾಗಿರಬೇಕು. ತಾನು ಏನೇ ಹೇಳಿದರೂ ಹೊಂದಾಣಿಕೆ ಮಾಡಿಕೊಂಡು ಕಲಿಯಬೇಕು ಎನ್ನುವ ಹುಡುಗರೂ ಇದ್ದಾರೆ.
11) ಅವಳು ಹೇಗಾದರೂ ಹಾಡಲಿ, ಹಾಡು ಹೇಳುವ ಹುಡುಗಿ / ಹೆಣ್ಣು ಇಷ್ಟ ಆಗುತ್ತಾಳೆ ಅಂತ ಹೇಳಿರುವರೂ ಇದ್ದಾರೆ.
12) ತನ್ನ ಗಮನ ಸೆಳೆಯಲು (ಅಟೆನ್ಷನ್‌ಗಾಗಿ) ಗೋಳುಹೊಯ್ದುಕೊಳ್ಳಬಾರದು. ಆದರೆ, ಯಾವುದೇ ಕಷ್ಟ ಅಥವಾ ಸಮಸ್ಯೆ ಬಂದರೂ ತನ್ನ ಮೇಲೆ ಡಿಪೆಂಡ್ ಆಗಬೇಕು. ಇನ್ಯಾವುದೋ ಗಂಡಿನ ಮೊರೆ ಹೋಗುವುದಾದರೆ ತಾನೂ ಜೊತೆಗೇ ಇರಬೇಕು.
13) ತನ್ನನ್ನು ಇಷ್ಟಪಡುವ ಹಾಗೆಯೇ ತನ್ನ ಕುಟುಂಬವನ್ನೂ (ಅಪ್ಪ, ಅಮ್ಮ ಇತರರು)ಇಷ್ಟಪಡಬೇಕು. ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ವಯಸ್ಸಾದವರು ಏನಾದರೂ ಅಂದರೆ ಸಹಿಸಿಕೊಳ್ಳಬೇಕು.
14) ತನ್ನ ಮನಸ್ಸನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ಹಾಗೆ ವರ್ತಿಸಬೇಕು.
15) ಖರ್ಚು ಹೆಚ್ಚು ಮಾಡಬಾರದು, ಮಾಡಿಸಬಾರದು, ಶಾಪಿಂಗ್, ಪಾರ್ಲರ್‌ಗೆ ದುಡ್ಡು ಸುರಿಯಬಾರದು. ಅಂಗಾಂಗ ಪ್ರದರ್ಶನ ಎಷ್ಟು ಕನಿಷ್ಠವೋ ಅಷ್ಟೂ ಇಷ್ಟವಾಗುತ್ತಾಳೆ. ಮುಂಗೈ ತನಕ ಮುಚ್ಚುವ ಡ್ರೆಸ್ ಧರಿಸಿದರೆ ಇನ್ನೂ ಚೆಂದ ಎಂದವರೂ ಇದ್ದಾರೆ.
16) ಸಾಮಾಜಿಕವಾಗಿ ಕೌಟುಂಬಿಕ ಅಥವಾ ಸಮಾನ ಪರಿಚಿತರ ಸಮಾರಂಭಗಳಲ್ಲಿ ಚುರುಕಾಗಿರುವ ಆದರೆ ಆ ವಲಯದ ಹೊರಗೆ ದೂರವೇ ಇರುವ ಹೆಣ್ಣು ಇಷ್ಟ ಎಂದೊಬ್ಬರು ಹೇಳಿದ್ದರು.
ಈ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತೆ. ಸದ್ಯಕ್ಕೆ ಇಷ್ಟು ಸಾಕು. ನೆನಪಿಡಿ; ಗಂಡಸರಾಗಲಿ, ಹೆಂಗರಾಗಲಿ ಹೀಗೆಯೇ ಇರುತ್ತಾರೆ, ಇದನ್ನೇ ಬಯಸುತ್ತಾರೆ ಅಥವಾ ಹೀಗೇ ಇರುತ್ತಾರೆ ಎಂದು ಒಂದೇ ತಕ್ಕಡಿಯಲ್ಲಿ ಹಾಕಲು ಆಗುವುದಿಲ್ಲ. ನಿಮ್ಮ ಪ್ರಶ್ನೆಯ ಹಿಂದಿನ ಜಿಜ್ಞಾಸೆಗೆ ತಕ್ಕ ಹಾಗೆ ಇಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಮುಂದುವರೆಯಿರಿ.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990