ಕನ್ನಡ ಸುದ್ದಿ  /  ಜೀವನಶೈಲಿ  /  ಹೆಣ್ಣು ಅಡುಗೆಮನೆಗೇ ಸೀಮಿತ, ಗಂಡಿಗಿಂತ ಆಕೆ ಎಂದಿಗೂ ಮೇಲಲ್ಲ ಎಂಬ ಗಂಡಸರ ಟಾಕ್ಸಿಕ್‌ ಮನೋಭಾವ ಬದಲಿಸುವುದು ಹೇಗೆ- ಕಾಳಜಿ ಅಂಕಣ

ಹೆಣ್ಣು ಅಡುಗೆಮನೆಗೇ ಸೀಮಿತ, ಗಂಡಿಗಿಂತ ಆಕೆ ಎಂದಿಗೂ ಮೇಲಲ್ಲ ಎಂಬ ಗಂಡಸರ ಟಾಕ್ಸಿಕ್‌ ಮನೋಭಾವ ಬದಲಿಸುವುದು ಹೇಗೆ- ಕಾಳಜಿ ಅಂಕಣ

ಸಮಾಜ ಎಷ್ಟೇ ಬದಲಾದರೂ ಮನುಷ್ಯನ ಮನೋಭಾವ ಬದಲಾಗುತ್ತಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಹಿಂದಿನ ಕಾಲದ ಮನಸ್ಥಿತಿಯೇ ಮುಂದುವರಿದೆ. ಹೆಣ್ಣುಮಕ್ಕಳು ಗಂಡಿಗಿಂತ ಎಂದಿಗೂ ಮೇಲಲ್ಲ, ಅವರು ಅಡುಗೆಮನೆಗೆ ಸೀಮಿತರು, ಕಚೇರಿಯಲ್ಲೂ ಅವರು ಮೇಲುಗೈ ಸಾಧಿಸಬಾರದು ಎಂಬ ಗಂಡುಮಕ್ಕಳ ಮನೋಭಾವಕ್ಕೆ ಕಾರಣವೇನು, ಅಂತಹವರೊಂದಿಗೆ ಹೇಗೆ ವ್ಯವಹರಿಸಬೇಕು ನೋಡಿ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ: ಇದು ನನ್ನ ಕಚೇರಿಯ ಕಥೆ. ಇಲ್ಲಿ ನಾನು ನಾಲ್ಕು ವರ್ಷಗಳ ಹಿಂದೆ‌ ಕೆಲಸಕ್ಕೆ‌ ಸೇರಿದ್ದೆ. ನನ್ನ ಕೌಶಲ ನೋಡಿ ನನಗೆ ಸಂಬಳವೂ ಜಾಸ್ತಿ ಆಯಿತು. ‌ಹಾಗೆಯೇ ಪ್ರಮೋಶನ್ ಕೂಡ‌ ಸಿಕ್ಕಿತು. ಪ್ರೊಮೋಷನ್‌ಗೂ ಮೊದಲು ನನ್ನ ಸಹೋದ್ಯೋಗಿಯೊಬ್ಬ ನನ್ನ ಬಗ್ಗೆ ಬಹಳ ಕಾಳಜಿ, ಕನಿಕರ ತೋರಿ ಸಹಾಯ ಮಾಡುತ್ತಿದ್ದ. ಸಾಯಂಕಾಲ ಮನೆಗೆ ಹೋಗುವಾಗ ಹುಷಾರು, ಡ್ರಾಪ್ ಮಾಡಲೇ ಎನ್ನುವ ಕಾಳಜಿ ತೋರಿಸುತ್ತಿದ್ದ. ಆದರೆ ಈ ಪ್ರಮೋಶನ್ ಬಂದಮೇಲೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾನೆ. ಅವಳ ಸೌಂದರ್ಯದಿಂದ ಅವಳಿಗೆ‌ ಎಲ್ಲಾ ಸೌಲಭ್ಯಗಳೂ ಸಿಗುತ್ತಿವೆ, ಅವಳು ಬಾಸ್‌ನೊಂದಿಗೆ‌ ಓಡಾಡುತ್ತಾಳೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ. ಅವನನ್ನು ನೇರವಾಗಿ ಕೇಳಿದಾಗ ʼನೀನೇ ಆಗಿದ್ದರೆ ಕೇಳುತ್ತೀಯ, ಕುಂಬಳಕಾಯಿ ಕಳ್ಳ‌ ಅಂದರೆ‌ ಹೆಗಲು ಯಾಕೆ ಮುಟ್ಪಿ ನೋಡುತ್ತೀರಿ, ನಿಮ್ಮಂತವರು ಅಡುಗೆ ಮನೇಲಿ ಇರುವುದನ್ನು ಬಿಟ್ಟು ನಮ್ಮಂತಹವರ ಕೆಲಸ‌ ಕಿತ್ತುಕೊಳ್ಳುತ್ತೀರಾ?ʼ ಎಂದು ಇನ್ನೂ ಇಲ್ಲಿ ಬರೆಯಲಾಗದಷ್ಟು ಅಸಭ್ಯವಾಗಿ ಹೇಳಿದ. ಇವನ ಈ ವರ್ತನೆ ನನ್ನ ಮೇಲಷ್ಟೇ ಅಲ್ಲ, ಬಹುತೇಕ ಹೆಂಗಸರಿಗೆ ಅವನಿಂದ ಇದೇ ರೀತಿ ತೊಂದರೆ ಆಗುತ್ತಿದೆ.‌ ಅಚ್ಚರಿ ಅಂದರೆ ಕಷ್ಟದಲ್ಲಿರುವ, ಕಣ್ಣೀರು ಹಾಕುವ, ಅಸಹಾಯಕ ಹೆಂಗಸರಿಗೆ ಈತ ಬಹಳ ಒಳ್ಳೆಯವನಾಗಿರುತ್ತಾನೆ. ಅವನ ಮೇಲೆ ಈಗಾಗಲೇ ಆಫೀಸಿನಲ್ಲಿ ದೂರು ಕೊಟ್ಟು ವಿಚಾರಣೆ ನಡೆಯುತ್ತಿದೆ. ಆದರೂ ಆತ ತನ್ನ ಈ ಕೆಟ್ಟ ಚಾಳೀ ಬಿಡುತ್ತಿಲ್ಲ. ಅವನ ಜೊತೆಗೆ ಇನ್ನೊಂದಷ್ಟು ಜನ ಹೀಗೇ ಅವನೊಂದಿಗೆ ಪ್ರೋತ್ಸಾಹ ನೀಡುತ್ತಾರೆ. ನನ್ನ ಪ್ರಶ್ನೆ ಇಷ್ಟೆಲ್ಲಾ ಓದಿಯೂ ಗಂಡಸರೇಕೆ ಹೀಗೆ? ಹೆಣ್ಣಿನ ಏಳಿಗೆಯನ್ನು ಯಾಕೆ ಒಪ್ಪಿಕೊಳ್ಳಲಾಗುತ್ತಿಲ್ಲ, ಇಂತಹವರೊಂದಿಗೆ ಹೇಗೆ ವ್ಯವಹರಿಸಬೇಕು?

ಕುಸುಮಾ, ಧಾರವಾಡ

ಉತ್ತರ: ಈ ಸಮಸ್ಯೆ ನಿಮ್ಮದು ಮಾತ್ರವಲ್ಲ, ಇನ್ನೂ ಹಲವು ಹೆಣ್ಣುಮಕ್ಕಳದ್ದು, ಹೆಂಗಸರದ್ದು. ಪ್ರಪಂಚ ಬದಲಾಗುತ್ತಿದೆ. ಆದರೆ ‌‌ಹಲವು ಗಂಡಸರ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಈ ರೀತಿಯ ಮನೋಭಾವ ಇರುವ ಗಂಡಸರನ್ನು ಎಲ್ಲೆಡೆ ಕಾಣಬಹುದು. ಮೊದಲಿಗೆ ಇಂತಹ‌ ಗಂಡಸರು ಮೇಲ್ ಶ್ಯವನಿಸಂ ( ಪುರುಷರೇ ಮೇಲೆ, ‌ಹೆಂಗಸರು ಕೆಳಗೆ ಅನ್ನುವ ಮನಸ್ಥಿತಿ )ಹೊಂದಿರುತ್ತಾರೆ ಇದೊಂದು ಬಗೆಯ‌ ಟಾಕ್ಸಿಕ್ ಪುರುಷವಾದಿತ್ವ.

ಟ್ರೆಂಡಿಂಗ್​ ಸುದ್ದಿ

ಬೇಕಾದರೆ ಗಮನಿಸಿ ದುಡಿಯುವ ಹೆಣ್ಣುಮಕ್ಕಳು, ಗಂಡಿನ ಸಮಕ್ಕೆ ನಿಂತು ಮಾತಾಡುವ ಹೆಣ್ಣು, ಸ್ತ್ರೀಪರ ನಿಂತ ಹೆಣ್ಣುಗಳನ್ನು ಇವರು ಯಾವಾಗಲೂ ನಖಶಿಖಾಂತ ದ್ವೇಷಿಸುತ್ತಾರೆ. ಇವರ ಪ್ರಕಾರ ಹೆಣ್ಣು ಎಂದರೆ ಅಡುಗೆ ಮನೆ, ರಾತ್ರಿ ಮಲಗು, ಮಗು ಹೆರು ಇಷ್ಟೇ. ಇದರಿಂದಾಚೆಗೆ ಬಂದಿರುವ ಹೆಣ್ಣು ಇಂತಹವರಿಗೆ ಮಗ್ಗುಲ ಮುಳ್ಳು. ಇವರ ಪ್ರಕಾರ ಹೆಣ್ಣು ಮರುಕ ಪಡೆಯಲಷ್ಟೇ ಅರ್ಹಳು.

ಇಂತಹ‌ ಮನೋಸ್ಥಿತಿಯನ್ನು ಮನಃಶಾಸ್ತ್ರದಲ್ಲಿ ಆಂಬಿವಲೆಂಟ್ ಸೆಕ್ಸಿಸ್ಟ್ ಎಂದು ಕರೆಯುತ್ತೇವೆ‌. ಇಂತಹವರಿಗೆ ಹೆಣ್ಣಿನ ಪಾರಂಪರಿಕ ವ್ಯಾಖ್ಯೆಯೊಳಗಿರುವ ಹೆಣ್ಣು ಇಷ್ಟವಾಗುತ್ತದೆ. ಅಂದರೆ ಅಡುಗೆ‌ಮಾಡಿ, ಮನೆ ಒಪ್ಪ ಓರಣ ಮಾಡಿ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿಯೇ ಇರುವ ಹಾಗು‌ ಗಂಡಿಗಿಂತ ತಾವು ಕೆಳಗೆ ಎಂದು ಒಪ್ಪಿಕೊಂಡ ಹೆಣ್ಣು. ಇದು ಅವರು ಧರಿಸುವ ಬಟ್ಟೆ, ಮಾತು, ನಗು, ಪರ ಪುರುಷರೊಂದಿಗಿನ ಸಂಭಾಷಣೆ, ಅವರ ಹವ್ಯಾಸಗಳು ಎಲ್ಲವನ್ನೂ ಹೊಂದಿರುತ್ತದೆ.

ಅದನ್ನು ಮೀರಿದ ಹೆಣ್ಣು ಅವರ ನಿಂದನೆಗೆ ಆಹಾರವಾಗುತ್ತಾಳೆ. ಅವಳು ಎಂತಹ ಬಾಸ್ ಆಗಿರಲಿ ಅವಳು ‘ಏನೋ’ ಮಾಡಿಯೇ ಈ ಹುದ್ದೆ ತಲುಪಿದ್ದಾಳೆ ಎಂಬಂತಹ ಮಾತುಗಳು ಹಬ್ಬಿಸುತ್ತಾರೆ. ಇಂತಹವರ ಬಾಯಿಯನ್ನು ಮುಚ್ಚಿಸಲು ಕೇವಲ ಭಯದಿಂದಷ್ಟೆ ಸಾಧ್ಯ. ಇವರು ಎಂದಿಗೂ ಬದಲಾಗರು, ಸ್ವತಃ ತಮ್ಮ ಮನೆಯ ಹೆಂಗಸರಿಗೇ ಇವರು ಮರ್ಯಾದೆ ಕೊಟ್ಟಿರಲಾರರು.

ಇಂತಹವರು ಒಂದು ಹೆಣ್ಣು ತನ್ನ ಬಾಸ್ ಆಗಿರುವುದನ್ನೋ ಅಥವಾ ತನ್ನ ಹೆಂಡತಿ ತನಗಿಂತ ಮೇಲಿನ ಸ್ಥಾನಮಾನ ಪಡೆಯುವುದನ್ನೋ ಎಂದಿಗೂ ಸಹಿಸಲಾರರು.

ಇಂತಹ ಮನಸ್ಥಿತಿ ಗೆ ಮುಖ್ಯ ಕಾರಣ

👉ತಲೆತಲಾಂತರದಿಂದ ಬಂದ ಗಂಡಿನ ಆಳ್ವಿಕೆ ಹಾಗು ಅಧಿಕಾರ

👉ಸಿನಿಮಾ ಮತ್ತು ಇತರ ಮಾಧ್ಯಮಗಳಲ್ಲಿ ಗಂಡಿನ ವೈಭವೀಕರಣ

👉ಬಾಲ್ಯದಲ್ಲಿ ಕುಟುಂಬದಲ್ಲಿ ಇಂತಹ ಮನಸ್ಥಿತಿ ನೋಡಿದ ಪರಿಣಾಮ ಯಾವುದು ಬೇಕಿದ್ದರೂ ಆಗಿರಬಹುದು.

ಈ ರೀತಿಯ ಮನಸ್ಥಿತಿ ಹೆಂಗಸರಲ್ಲಿಯೂ ಇರುತ್ತದೆ. ಇಂತಹ‌ ಹೆಂಗಸರೂ ಪಾರಂಪರಿಕವಾಗಿ ಅಂತರ್ಗತವಾದ ಹೆಣ್ಣು ಮನೆಯ ಹೊಸ್ತಿಲಿನಾಚೆ ಬರಬಾರದು ಎಂಬ ಮನೋಭಾವ ಹೊಂದಿರುತ್ತಾರೆ.

ಇಂತಹವರೊಂದಿಗೆ ಹೇಗೆ ವ್ಯವಹರಿಸುವುದು?

* ನೀವು ದೂರು ಕೊಟ್ಟಿದ್ದು ಉಚಿತ ನಡೆಯೇ, ಇದು ಇಂತಹವರಿಗೆ ದೊಡ್ಡ ಎಚ್ಚರಿಕೆ, ಆದರೂ ಇವರು ಮನೋಭಾವದಲ್ಲಿ ಬದಲಾವಣೆ ಇರುವುದಿಲ್ಲ, ಆದರೆ ಆ ಮನೋಭಾವ ಭಯದಿಂದ ಅಡಗಿರುತ್ತದೆ. ಅಷ್ಟಾದರೂ ಇವರ ನಡೆಯಲ್ಲಿ ಬದಲಾವಣೆ ಇರುತ್ತದೆ.

* ಹೆಣ್ಣು‌ ಗಂಡಿನಲ್ಲಿ ಯಾರೂ ಮೇಲೂ ಅಲ್ಲ ಕೀಳೂ ಅಲ್ಲ . ಇಬ್ಬರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸಮಾನರು ಎಂಬ ತಿಳುವಳಿಕೆಯನ್ನು ಆಗಾಗ ಕೊಡುತ್ತಲಿರಬೇಕು.

* ಇಂತಹವರ ಸೆಕ್ಸಿಸ್ಟ್ (ಲಿಂಗಾಧಾರಿತ) ಹೇಳಿಕೆ, ಮಾತು ಕಥೆ, ಜೋಕ್‌ಗಳನ್ನು ಪ್ರೋತ್ಸಾಹಿಸಬಾರದು. ಅದು ಗಂಡನೇ ಆಗಿರಲಿ ಅಥವಾ ಮಿತ್ರನೇ ಆಗಿರಲಿ ಅಲ್ಲಿಯೇ ಖಂಡಿಸಬೇಕು. ಉದಾಹರಣೆಗೆ ಹೆಣ್ಣು ಕಾರ್ ಅಥವಾ ಬೈಕ್ ಓಡಿಸುವಾಗ ಯಾರೋ ಒಂದಿಬ್ಬರು ಮಾಡುವ ತಪ್ಪುಗಳನ್ನು ಸಾರ್ವತ್ರಿಕಗೊಳಿಸಿ ಹೆಂಗಸರೆಂದರೆ‌ ಇಷ್ಟೇ‌ ಎನ್ನುವ ಮಾತುಗಳು, ನಗುವ ಹೆಣ್ಣನ್ನು ನಂಬಬಾರದು, ಹೊಸಿಲು ದಾಟಿದ ಹೆಣ್ಣು ನಾಯಿಯ ಪಾಲು ಎಂಬೆಲ್ಲಾ ಮಾತುಗಳನ್ನು ಅಲ್ಲಿಯೇ ತುಂಡರಿಸಬೇಕು.

* ಯಾರಾದರೂ ಹೆಣ್ಣಿನ ಮೇಕಪ್ ಬಗ್ಗೆ ಅಥವಾ ಸಾಮಾಜಿಕ/ಕಾನೂನಾತ್ಮಕ ಚೌಕಟ್ಟಿನಲ್ಲಿದ್ದ ಅವಳ ಉಡುಪಿನ ಬಗ್ಗೆ ಅಥವಾ ಅವಳ ಚರಿತ್ರೆಯ ಬಗ್ಗೆ ಕೇವಲವಾಗಿ ಮಾತಾಡಿದರೆ ತಿಳಿ ಹೇಳಬೇಕು.

* ಯಾವುದೋ ಹೆಣ್ಣು ಚೆನ್ನಾಗಿ ಸಾಮಾಜಿಕ ಸ್ಥರದಲ್ಲಿ ಬೆಳೆದಾಗ ಅವಳನ್ನು ಏನೋ ಮಾಡಿಯೇ ಆ ಸ್ಥಾನ ತಲುಪಿದ್ದಾರೆ ಅಂದಾಗ ನಿನಗೆ‌ ಹೇಗೆ ಗೊತ್ತು, ಸಾಕ್ಷಿಕೊಡು ಇಲ್ಲವಾದರೆ ಬಾಯಿ‌ಮುಚ್ಚು ಎಂದು ಹೇಳಬೇಕು.

* ಯಾರಾದರೂ ದಪ್ಪ ಅಥವಾ ತೆಳ್ಳನೆಯ ಹೆಣ್ಣಿನ ದೇಹದ ಬಗ್ಗೆ ತಮಾಷೆಯ ಕಾಮೆಂಟ್ ಮಾಡಿದರೆ ಅಲ್ಲಿಯೇ ತುಂಡರಿಸಬೇಕು.

* ಸುಖಾಸುಮ್ಮನೇ ಪಾಪ ಹೆಣ್ಣು ಎಂದು ಕರುಣೆ ತೋರಿಸ ಬಂದರೆ ಬೇಡ ಎನ್ನಲೇಬೇಕು.

* ಇಂತಹವರ ಬಳಿ ಅನಗತ್ಯ ಸಹಾಯ ಕೇಳುವುದನ್ನು ನಿಲ್ಲಿಸಬೇಕು.

* ಇಂತಹವರ ಸುತ್ತ ಇರುವ ಅಂತಹ ಜನರಿಗೂ ಇದೇ ರೀತಿಯ ಟ್ರೀಟ್‌ಮೆಂಟ್‌ ಕೊಡಬೇಕು.

* ಆದಷ್ಟೂ ಇಂತಹವರಿಂದ ದೂರ ಇರಬೇಕು.

ಸಮಾಜ ಬದಲಾಗುತ್ತಿದೆ, ಬಹುತೇಕ ಹೆಣ್ಣಿನ ಸ್ಥಾನವೂ ಬದಲಾಗುತ್ತಿದೆ. ಆದರೆ ಇಂತಹ‌ ಮನಸ್ಥಿತಿಯ ಕೆಲವರು ಇದನ್ನು ಒಪ್ಪಿಕೊಂಡು ಬದಲಾಗಲು ಮನಸು‌ ಮಾಡುತ್ತಿಲ್ಲ‌. ಇಂತಹವರನ್ನು ಬೆಳೆಸುವುದು ಇವರನ್ನು ಪೋಷಿಸುವ ಅವರು ಸುತ್ತಮುತ್ತಲಿನ ಜನರೇ. ಪ್ರತಿಯೊಬ್ಬನ ತಾಯಿ, ಮಗಳು, ಅಕ್ಕ, ತಂಗಿ, ಹೆಂಡತಿ, ಗೆಳತಿ, ಪ್ರೇಯಸಿ ಇಂತಹವರ ನಡೆಯನ್ನು ಆಗಿಂದಾಗಲೇ ಖಂಡಿಸಿದರೆ ಇಂತಹ ಆಂಬಿವಲೆಂಟ್ ಸೆಕ್ಸಿಸ್ಟ್‌ಗಳ ಅಟ್ಟಹಾಸ ಅಡಗುತ್ತದೆ.