ಮುಟ್ಟಿಗೂ ಮೂಡ್ ಸ್ವಿಂಗ್‌ಗೂ ಸಂಬಂಧವೇನು, ಆ ದಿನಗಳಲ್ಲಿ ಹೆಣ್ಣುಮಕ್ಕಳ ಮನಸ್ಥಿತಿ ಬದಲಾವಣೆ ಗುರುತಿಸುವುದು ಹೇಗೆ – ಕಾಳಜಿ ಅಂಕಣ
Oct 18, 2024 08:23 AM IST
ಡಾ. ರೂಪಾ ರಾವ್
- ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನು ಮೂಡ್ ಸ್ವಿಂಗ್ ಅಥವಾ ಮನಸ್ಥಿತಿಯ ಬದಲಾವಣೆ ಎಂದು ಕರೆಯುತ್ತಾರೆ. ಮುಟ್ಟಿಗೂ ಮೂಡ್ ಸ್ವಿಂಗ್‌ಗೂ ಇರುವ ಸಂಬಂಧವೇನು, ಮುಟ್ಟಿನ ದಿನಗಳಲ್ಲಿ ಮನಸ್ಥಿತಿ ಬದಲಾವಣೆ ಗುರುತಿಸುವುದು ಹೇಗೆ ಎಂಬುದನ್ನು ವಿವರಿಸಿದ್ದಾರೆ ಡಾ. ರೂಪಾ ರಾವ್.ಅ
ಪ್ರಶ್ನೆ: ನಾನು ಒಂದು ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಮ್ಯಾನೇಜ್‌ಮೆಂಟ್‌ನಲ್ಲಿ ಇರುವ ಹಲವರ ಪೂರ್ವಗ್ರಹಗಳಿಗೆ ವ್ಯತಿರಿಕ್ತವಾಗಿ ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ಕೊಟ್ಟೆ. ನಮ್ಮ ಸಂಸ್ಥೆಯಲ್ಲಿ ಮುಕ್ತ ವಾತಾವರಣ ಇದೆ, ಅದಕ್ಕಾಗಿ ನಾನು ಶ್ರಮಪಟ್ಟಿದ್ದೇನೆ. ಇತ್ತೀಚಿಗೆ ನನ್ನ ಮಹಿಳಾ ರಿಪೋರ್ಟಿಂಗ್ ಮ್ಯಾನೇಜರ್ ಒಬ್ಬರು ಏಕಾಏಕಿ ನನ್ನ ಮೇಲೆ ಏರು ಧ್ವನಿಯಲ್ಲಿ ಮಾತನಾಡಿದರು. ಅವರನ್ನು ಕೆಲಸದಿಂದ ತೆಗೆದುಬಿಡಬೇಕು ಅನ್ನಿಸಿತು. ಅವರು ಹಿಂದೆಂದೂ ಹಾಗೆ ವರ್ತಿಸಿರಲಿಲ್ಲ. ಹೀಗಾಗಿ ನಾನು ತಾಳ್ಮೆ ತಂದುಕೊಂಡು, ಒಂದು ಮಧ್ಯಾಹ್ನ ಒಟ್ಟಿಗೆ ಊಟ ಮಾಡಲು ಕರೆಸಿ ವಿಚಾರಿಸಿದೆ. ಆಗ ಅವರು ನನ್ನಲ್ಲಿ ಕ್ಷಮೆಯಾಚಿಸಿದರು. ನನಗೆ ಪಿರಿಯಡ್ಸ್ ಇತ್ತು ಸಾರ್. ಮೂಡ್ ಸ್ವಿಂಗ್ ಕಾರಣಕ್ಕಾಗಿ ಸಿಟ್ಟು ಜಾಸ್ತಿಯಿತ್ತು. ದಯವಿಟ್ಟು ಕ್ಷಮಿಸಿಬಿಡಿ ಎಂದೆಲ್ಲಾ ಕೇಳಿದರು. ನಾನು ಆ ವಿಷಯವನ್ನು ಅಲ್ಲಿಗೆ ಬಿಟ್ಟೆ. ನನ್ನ ಪ್ರಶ್ನೆ ಎಂದರೆ ಹೆಂಗಸರ ಪಿರಿಯಡ್ಸ್‌ಗೂ ಮೂಡ್ ಸ್ವಿಂಗ್‌ಗೂ ಏನು ಸಂಬಂಧ? ಇಂಥ ವರ್ತನೆ ಗಂಡಸರಲ್ಲಿಯೂ ಕಂಡುಬರುವುದೇ? ನಮ್ಮ ಕಂಪನಿಯು ಮುಂದೆಯೂ ಮಹಿಳಾ ಸ್ನೇಹಿಯಾಗಿಯೇ ಉಳಿಯಲು ನಾನು ಏನು ಮಾಡಬಹುದು?
ಮನೋಹರ್, ಬೆಂಗಳೂರು
ಉತ್ತರ: ಇದು ನಿಜವಾಗಿಯೂ ಬಹುವಾಗಿ ಬೇಕಾದ ಅರಿವು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಕ್ಕಾಗಿ ನಿಮಗೆ ಅಭಿನಂದನೆ. ನಾನು ನಿಮ್ಮ ಪ್ರಶ್ನೆಗೆ ಉತ್ತರವನ್ನು ಮಾನಸಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ, ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ. ಹೌದು, ಬಹಳಷ್ಟು ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ, ವಿಶೇಷವಾಗಿ ಋತುಚಕ್ರ ಆರಂಭವಾಗುವ ಎರಡು–ಮೂರು ದಿನ ಮೊದಲು ಮತ್ತು ಆ ಸಮಯದಲ್ಲಿ ಮನಸ್ಥಿತಿಯ ಬದಲಾವಣೆಗಳನ್ನು ಅನುಭವಿಸುವುದು ಸಾಮಾನ್ಯ. ಇದು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ಮಟ್ಟಗಳಲ್ಲಿನ ಏರಿಳಿತಗಳಿಂದಾಗಿ ಆಗುತ್ತದೆ.
ಈ ಹಾರ್ಮೋನುಗಳ ಏರಿಳಿತಗಳು ಮೆದುಳಿನಲ್ಲಿನ ಸೆರೋಟೊನಿನ್‌ನ ಮೇಲೆ ಪ್ರಭಾವ ಬೀರಬಹುದು, ಸೆರೋಟೊನಿನ್ ಮನಸ್ಥಿತಿ, ಆತಂಕ ಮತ್ತು ಸಂತೋಷವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೆರೋಟೊನಿನ್ ಹಾರ್ಮೋನ್‌ನ ಪ್ರಮಾಣ ಕಡಿಮೆಯಾದರೆ ಮಾನಸಿಕ ಕಿರಿಕಿರಿ, ದುಃಖ ಅಥವಾ ಅಗ್ರೆಸೀವ್ನೆಸ್‌ಗೆ ಕಾರಣವಾಗಬಹುದು.
ಮಾನಸಿಕ ಆರೋಗ್ಯದ ಪರಿಭಾಷೆಯಲ್ಲಿ, ಹೇಳುವುದಾದರೆ ಬಹಳಷ್ಟು ಮಹಿಳೆಯರು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (ಪಿಎಂಎಸ್) ಎಂದು ಕರೆಯಲ್ಪಡುವ ಒಂದಷ್ಟು ಅಸ್ವಸ್ಥತೆಯ ಲಕ್ಷಣಗಳಿಗೆ ಒಳಗಾಗುತ್ತಾರೆ ಮತ್ತು ಇನ್ನು ಕೆಲವರು ಪ್ರೀ ಮೆನ್ಸ್ಟ್ರುವಲ್ ಡಿಸ್ಫೊರಿಕ್ ಡಿಸಾರ್ಡರ್ (ಪಿಎಮ್‌ಡಿಡಿ) ಎಂಬ ಪಿಎಂಎಸ್‌ಗಿಂತ ಹೆಚ್ಚು ತೀವ್ರವಾದ ಲಕ್ಷಣಗಳನ್ನು ಅನುಭವಿಸಬಹುದು. ಈ ಪರಿಸ್ಥಿತಿಗಳು ಭಾವನಾತ್ಮಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತವೆ.
ಪಿಎಂಎಸ್, ಪಿಎಮ್‌ಡಿಡಿನ ಲಕ್ಷಣಗಳು
* ಖಿನ್ನತೆಯ ಮನಸ್ಥಿತಿ, ದುಃಖ, ಹತಾಶೆ ಅಥವಾ ನಿಷ್ಪ್ರಯೋಜಕಳೆಂಬ ಯೋಚನೆಗಳು, ಅಸಹಾಯಕ ಮನಸ್ಥಿತಿ
* ಹೆಚ್ಚಿದ ಆತಂಕ, ಉದ್ವಿಗ್ನತೆ ಅಥವಾ ಎಲ್ಲಾ ಸಮಯದಲ್ಲೂ ಒಂದು ರೀತಿಯ ರೆಸ್ಟ್‌ಲೆಸ್‌ನೆಸ್ ಭಾವನೆ
* ಮನಸ್ಥಿತಿಯ ಏರಿಳಿತಗಳು-ಮೂಡ್ ಸ್ವಿಂಗ್
* ತನ್ನನ್ನ ತಾನೇ ಬೈಯ್ದುಕೊಳ್ಳುವ ಆಲೋಚನೆಗಳು, ಯಾರಾದರೂ ಏನಾದರೂ ಅಂದರೆ ಅಥವಾ ಮಾಡಿದ ಕೆಲಸ ಸರಿ ಆಗಲಿಲ್ಲ ಅಂದರೆ ಕೂಡಲೇ ಕೋಪ ಅಥವಾ ಅಳುವಿನಿಂದ ರಿಯಾಕ್ಟ್ ಮಾಡುವುದು
* ಆಗಾಗ ಅಳುವುದು, ಹೆಚ್ಚಿದ ಕಿರಿಕಿರಿ, ಕೋಪ,
* ಸಹೋದ್ಯೋಗಿಗಳು ಅಥವಾ ಸ್ನೇಹಿತರೊಂದಿಗೆ ಗಲಾಟೆ ಅಥವಾ ಭಿನ್ನಾಭಿಪ್ರಾಯ
* ಸಾಮಾನ್ಯವಾಗಿ ಯಾವಾಗಲೂ ಮಾಡುವ ಚಟುವಟಿಕೆಗಳಲ್ಲಿಯೂ ಆಸಕ್ತಿ ಇಲ್ಲದಿರುವಿಕೆ
* ಕೆಲಸದಲ್ಲಿ ಏಕಾಗ್ರತೆ ಸಮಸ್ಯೆಗಳು
* ಆಯಾಸ, ಆಲಸ್ಯ ಅಥವಾ ಶಕ್ತಿಯ ಕೊರತೆ
* ಅತಿಯಾಗಿ ತಿನ್ನುವುದು, ಆಹಾರದ ಕಡುಬಯಕೆಯಂತಹ ಹಸಿವಿನಲ್ಲಿನ ಬದಲಾವಣೆಗಳು
* ಅತಿಯಾದ ನಿದ್ರೆ ಅಥವಾ ನಿದ್ದೆ ಬಾರದೇ ಇರುವಂತಹ ಬದಲಾವಣೆಗಳು
* ಅತಿಯಾದ ಅಥವಾ ನಿಯಂತ್ರಣ ತಪ್ಪಿದ ಭಾವನೆಗಳು
ಕೆಲಸದ ಸ್ಥಳದಲ್ಲಿ ನಿಮ್ಮ ಮಹಿಳಾ ಸಹೋದ್ಯೋಗಿಗಳು ಯಾವ ಸಮಯದಲ್ಲಿ ಮುಟ್ಟಿನ ಅವಧಿ ಅಥವಾ ಡಿಸ್‌ಕಂಫರ್ಟ್ ಆಗಿರುತ್ತಾರೆ ಎಂದು ತಿಳಿಯುವ ಅಗತ್ಯ ಇದೆಯೇ? ಹೇಗೆ ತಿಳಿಯುವುದು?
ತಮ್ಮ ಮುಟ್ಟಿನ ಅವಧಿಯನ್ನು ನೇರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳದ ಹೊರತು ನಿಖರವಾಗಿ ಇದರ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಟಿಕ್ಕಿ.
ಮ್ಯಾನೇಜರ್ ಅಥವಾ ಬಾಸ್ ಆಗಿ ಅವರ ಋತುಚಕ್ರದ ಸಮಯ ಅವಧಿಯ ಮೇಲೆ ಗಮನ ಕೇಂದ್ರೀಕರಿಸುವುದು ಬೇಕಾಗಿಲ್ಲ, ಆದರೆ ಅವರ ವರ್ತನೆಗಳ ಸಣ್ಣ ಬದಲಾವಣೆಗಳನ್ನು ತಿಳಿದಿರುವುದು, ಸೂಕ್ಷ್ಮವಾಗಿ ಮತ್ತು ಗೌರವದೊಂದಿಗೆ ಪರಿಸ್ಥಿತಿಯನ್ನು ಸಂಭಾಳಿಸುವುದು ಮುಖ್ಯ.
ಈ ನಿಟ್ಟಿನಲ್ಲಿ ಸಹಾಯ ಆಗಬಹುದಾದ ಕೆಲವು ಚಿಹ್ನೆಗಳು ಮತ್ತು ತಂತ್ರಗಳು ಇಲ್ಲಿವೆ
1. ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ
ಈ ಸಮಯದಲ್ಲಿ ಮಹಿಳಾ ಉದ್ಯೋಗಿಗಳ ಮನಸ್ಥಿತಿ ಬದಲಾಗುತ್ತದೆ. ಸಾಮಾನ್ಯವಾಗಿ ಶಾಂತ ಮತ್ತು ಸಂಯಮದ ಸಹೋದ್ಯೋಗಿಗಳೂ ಇದ್ದಕ್ಕಿದ್ದಂತೆ ಕಿರಿಕಿರಿ, ಆತಂಕ ಅಥವಾ ಎಮೋಷನಲ್ ಆಗಿ ಅತ್ತರೆ, ಅದು ಅವರ ಋತುಚಕ್ರದ ಅವಧಿ ಆಗಿರಬಹುದು.
ದೈಹಿಕ ಸೂಚನೆಗಳು ಅವರು ಮೈಕೈ ನೋವು ಅಥವಾ ತಲೆನೋವಿನಂತಹ ದೈಹಿಕ ಅಸ್ವಸ್ಥತೆ ಇದೆ ಎಂದು ಹೇಳಬಹುದು ಅಥವಾ ಇದ್ದಕ್ಕಿದ್ದ ಹಾಗೆ ದಣಿದಂತೆ ಕಾಣಿಸಬಹುದು.
ಕೆಲಸ ಮಾಡುವ ಸಾಮರ್ಥ್ಯ ಕುಂಠಿತವಾಗಿಬಹುದು. ಈ ಸಮಯದಲ್ಲಿ ಅವರ ಕೆಲಸದತ್ತ ಗಮನ ಕಡಿಮೆ ಆಗಿರಬಹುದು.
2. ನೀವು ಮುಕ್ತವಾಗಿ ಹೀಗೆ ಅನೌನ್ಸ್ ಮಾಡಿ, ‘ನಿಮ್ಮಲ್ಲಿ ಯಾರೇ ಯಾವುದೇ ರೀತಿ ಅಸ್ವಸ್ಥತೆ ಇದ್ದಲ್ಲಿ ಅಥವಾ ನಿಮ್ಮ ಕೆಲಸದಲ್ಲಿ ಯಾವುದೇ ಕ್ಷಣದಲ್ಲಿ ನಿಮ್ಮ ಗಮನ ಹರಿಸಲಾಗದಿದ್ದರೆ , ನನಗೆ ತಿಳಿಸಲು ಹಿಂಜರಿಯಬೇಡಿ. ನಾವು ಒಟ್ಟಿಗೇ ಸೇರಿ ಅದಕ್ಕೊಂದು ಪರಿಹಾರ ಹುಡುಕುವ‘.
3. ನಿಮ್ಮ ಕಚೇರಿಯ ಯಾವುದೇ ಮಹಿಳೆ ಮಾನಸಿಕವಾಗಿ ಎಂದಿಗಿಂತ ಕೊಂಚ ಬೇರೆಯಾಗಿ ವರ್ತಿಸುತ್ತಿದ್ದರೆ ನೇರವಾಗಿ ಹೀಗೆ ಕೇಳಬಹುದು ‘ನೀವು ಇವತ್ತುಸ್ವಲ್ಪ ಅಪ್‌ಸೆಟ್ ಆದ ಹಾಗಿದೆ ಅಥವಾ ಬಳಲಿದ ಹಾಗಿದೆ ಅಂತ ಅನಿಸುತ್ತಿದೆ -ನಿಮಗೆ ಏನಾದರೂ ನೆರವು ಬೇಕಾದಲ್ಲಿ, ನನಗೆ ಹೇಳಲು ದಯವಿಟ್ಟು ಯಾವುದೇ ಸಂಕೋಚ ಬೇಡ‘ ಅವರು ನಿಮ್ಮಲ್ಲಿ ಹೇಳಿಕೊಳ್ಳಬಹುದು ಅನಿಸಿದರೆ, ಅವರಿಗೆ ಹಂಚಿಕೊಳ್ಳುವ ಸ್ವಾತಂತ್ರ್ಯ ನೀಡಿ.
4. ನೀವಾಗಿಯೇ ಗೆಸ್ ಮಾಡಿ ನೇರವಾಗಿ ನೀವು ಋತುಚಕ್ರದ ಅವಧಿಯಲ್ಲಿದ್ದೀರಾ ಅಂತ ಕೇಳುವುದು ಸಮಂಜಸವಾಗಲಾರದು. ಅವರಿಗೆ ಹಂಚಿಕೊಳ್ಳುವ ಸ್ಪೇಸ್ ಕೊಟ್ಟರೆ ಸಾಕು.
ಮ್ಯಾನೇಜರ್ ಅಥವಾ ಬಾಸ್ ಆಗಿ, ಈ ಸನ್ನಿವೇಶಗಳನ್ನು ತಿಳುವಳಿಕೆ ಮತ್ತು ಸಹಾನುಭೂತಿಗಳೊಂದಿಗೆ ಅಪ್ರೋಚ್ ಮಾಡುವುದು ಬಹಳ ಮುಖ್ಯ. ಇಲ್ಲಿ ಕೆಲವು ಟಿಪ್ಸ್ ಇದೆ.
1. ಮುಕ್ತ ವಾತಾವರಣವನ್ನು ರಚಿಸಿ. ನಿಮ್ಮ ಟೀಮ್‌ನಲ್ಲಿ ಮುಕ್ತ ಸಂವಹನವನ್ನು ಪ್ರೋತ್ಸಾಹಿಸಿ. ಆದ್ದರಿಂದ ನಿಮ್ಮ ಸಹೋದ್ಯೋಗಿಗಳು ತಮ್ಮ ಮೂಡ್ ಸರಿ ಇಲ್ಲವಾದಲ್ಲಿ ಅದನ್ನು ಹಂಚಿಕೊಳ್ಳಲು ಮುಂದಾಗಬಹುದು.
2. ಅರ್ಥ ಮಾಡಿಕೊಂಡು ಕೊಂಚ ಹೊಂದಿಕೊಳ್ಳಿ: ಈ ಪಿರಿಯಡ್ಸ್ ಸಮಯಗಳಲ್ಲಿ ಸಹಕಾರ ಮತ್ತು ಕೊಂಚ ಆರಾಮದಾಯಕ ಕೆಲಸ ನೀಡಿ. ಉದಾಹರಣೆಗೆ, ಒಂದು ವಿರಾಮ ತೆಗೆದುಕೊಳ್ಳಲು ಕೊಠಡಿ ನೀಡಬಹುದು, ಶಾಂತವಾದ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶ ನೀಡುವುದು ಅಥವಾ ಅವರಿಗೆ ಸ್ವಲ್ಪ ಸಮಯವನ್ನು ನೀಡುವುದು.
3. ಈ ಸನ್ನಿವೇಶದಲ್ಲಿ ನಡೆದ ವಿವರಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಯಾರಾದರೂ ತಮ್ಮ ಋತುಚಕ್ರದ ಸಮಯದಲ್ಲಿ ಭಿನ್ನ ಸ್ವಭಾವದಿಂದ ವರ್ತಿಸಿದರೆ, ಅದು ನಿಮ್ಮ ಬಗ್ಗೆ ಅಥವಾ ಕೆಲಸದ ಬಗೆಗಿನ ಅಸಮಾಧಾನ ಅಲ್ಲ ಎಂದು ತಿಳಿಯಿರಿ . ಅದು ಕೇವಲ ಹಾರ್ಮೋನುಗಳ ಏರಿಳಿತಗಳಾಗಿರಬಹುದು.
4. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಅಥವಾ ಮಾನಸಿಕ ಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುವ ರಿಲ್ಯಾಕ್ಸೇಶನ್, ಮೈಂಡ್‌ಫುಲ್‌ನೆಸ್ ಅಥವಾ ದೈಹಿಕ ಚಟುವಟಿಕೆಯಂತಹ ಆರೋಗ್ಯಕರ ನಿಭಾಯಿಸುವುದಕ್ಕೆ ತರಬೇತಿ ಶಿಬಿರವನ್ನು ಕೆಲಸದ ಸ್ಥಳದಲ್ಲಿ ಏರ್ಪಡಿಸಿ.
ಮೇಲೆ ಹೇಳಿದವುಗಳು ಆರೋಗ್ಯಕರ ಮತ್ತು ಪರಸ್ಪರರಿಗೆ ಸಹಾಯ ಮತ್ತು ಸಹಕಾರ ಕೊಡುವಂತಹ ಕಾರ್ಯ ಸ್ಥಳದ ವಾತಾವರಣವನ್ನು ಬೆಳೆಸುತ್ತದೆ, ಅಲ್ಲಿ ಪ್ರತಿಯೊಬ್ಬರೂ ವಿಶೇಷವಾಗಿ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಯ ಸಮಯದಲ್ಲಿ ಪರಸ್ಪರ ಗೌರವ ಕೊಟ್ಟು ಅರ್ಥಮಾಡಿಕೊಳ್ಳುತ್ತಾರೆ.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990