ಅಶ್ಲೀಲ ಚಿತ್ರ ನೋಡುವ ಚಟಕ್ಕೆ ಮುರಿದು ಬೀಳುತ್ತಿವೆ ಮದುವೆಗಳು, ಬೆತ್ತಲೆ ದೇಹಗಳ ವಿಡಿಯೊ ನೋಡುವ ವ್ಯಸನಕ್ಕೆ ಏನು ಪರಿಹಾರ? -ಕಾಳಜಿ ಅಂಕಣ
ಡಾ ರೂಪಾ ರಾವ್ ಬರಹ: ಯಾವುದೇ ಆಗಲಿ ನಮಗೆ ಕೂಡಲೇ ಖುಷಿ ಕೊಡುತ್ತದೆ ಎಂದರೆ ಅದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಕೊಡುತ್ತದೆ ಎಂದೇ ಅರ್ಥ. ಅಶ್ಲೀಲ ಚಿತ್ರಗಳ ವೀಕ್ಷಣೆಯು ಯಾರದೇ ಬದುಕಿನಲ್ಲಿ ಉಪ್ಪಿನಕಾಯಿಯಷ್ಟು ಇದ್ದರೆ ಅದು ಸಹನೀಯ. ಅದೇ ಊಟದಂತೆ ಆದರೆ ದೇಹ-ಮನಸು ಎಲ್ಲವೂ ಹಾಳಾಗುತ್ತದೆ.
ಪ್ರಶ್ನೆ: ನಮಸ್ಕಾರ ಮೇಡಂ. ನನ್ನ ಮಕ್ಕಳ ಬಗ್ಗೆ ಪ್ರಶ್ನೆ ಕೇಳಬೇಕಿತ್ತು. ಇತ್ತೀಚೆಗೆ ನನ್ನ ಮಗ ರೂಮ್ ಬಿಟ್ಟು ಹೊರಗೇ ಬರುವುದಿಲ್ಲ. ಏನೋ ಒಂದು ಥರದ ನಾಚಿಕೆ, ಹಿಂಜರಿಕೆ ಹೆಚ್ಚಾಗಿದೆ. ಮನೆಗೆ ಯಾರು ಬಂದರೂ ಮುಖಕೊಟ್ಟು ಮಾತನಾಡುವುದಿಲ್ಲ. ಸಂಬಂಧಿಕ ಹೆಣ್ಮಕ್ಕಳು ಬಂದರೂ ಇವನ ದೃಷ್ಟಿ ಸರಿಯಾಗಿಲ್ಲ ಎಂದು ಅಮ್ಮನಾದ ನನಗೇ ಅನ್ನಿಸುವಂತೆ ಇದೆ. ಈಗಲೇ ಇವನನ್ನು ತಿದ್ದದಿದ್ದರೆ ಮುಂದೆ ಅನಾಹುತವಾಗಬಹುದು ಎನ್ನುವ ಭಯ ನನಗೆ. ದಯವಿಟ್ಟು ಮಾರ್ಗದರ್ಶನ ಮಾಡಿ. - ಹೆಸರು ಮತ್ತು ಊರು ಬೇಡ
ಉತ್ತರ: ನಿಮ್ಮ ಪ್ರಶ್ನೆ ಚೆನ್ನಾಗಿದೆ. ನಿಮ್ಮ ಮಗನ ಬಗ್ಗೆ ನಿಮಗಿರುವ ಪ್ರೀತಿ, ಕಳಕಳಿ ಮತ್ತು ಕಾಳಜಿಗಳು ಅರ್ಥವಾಗುತ್ತವೆ. ಮಗನನ್ನು ತಿದ್ದಬೇಕು ಎನ್ನುವ ನಿಮ್ಮ ನಿರ್ಧಾರವೂ ಶ್ಲಾಘನೀಯ. ಇಲ್ಲಿರುವ ಉತ್ತರ ಪೂರ್ತಿ ಓದಿ, ಅರ್ಥ ಮಾಡಿಕೊಳ್ಳಿ. ಅನಿವಾರ್ಯವಿದ್ದಲ್ಲಿ ಹತ್ತಿರದ ಆಪ್ತಸಮಾಲೋಚಕರ ಸಲಹೆ ಪಡೆಯಲು ಹಿಂಜರಿಯಬೇಡಿ. ಪಾರ್ನ್ ಎಂದು ಕರೆಯುವ ಲೈಂಗಿಕ ಪ್ರಚೋದನಕಾರಿ ವಿಡಿಯೊ, ಚಿತ್ರಗಳನ್ನು ನೋಡುವುದು ಹಲವರಿಗೆ ಇತ್ತೀಚೆಗೆ ಒಂದು ವ್ಯಸನವೇ ಆಗಿದೆ. ಪಾರ್ನ್ ಚಾಟ್, ಪಾರ್ನ್ ವೀಕ್ಷಣೆಯ ಅಡಿಕ್ಷನ್ ಇದೀಗ ಜನರನ್ನು ಕಾಡುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಆಗಿ ಹೋಗಿದೆ. ಇದಕ್ಕೆ ಗಂಡು-ಹೆಣ್ಣು ಎನ್ನುವ ಭೇದವೂ ಇಲ್ಲ, ವಯಸ್ಸಿನ ಭೇದವೂ ಇಲ್ಲ.
ಬಹಳ ಜನ ಈ ಅಡಿಕ್ಷನ್ ಕಡಿಮೆ ಮಾಡಿಕೊಳ್ಳಲು ಸಲಹೆ ಕೇಳುತ್ತಾರೆ. ನೀವು ಕೇಳಿರುವ ಪ್ರಶ್ನೆಯೂ ಇದೇ ವಿಷಯಕ್ಕೆ ಸಂಬಂಧಿಸಿದ್ದು ಎಂದು ಮೇಲ್ನೋಟಕ್ಕೇ ಅನ್ನಿಸುತ್ತದೆ. ಹೀಗಾಗಿ ಸಾರ್ವತ್ರಿಕವಾಗಿ ಉಪಯೋಗಕ್ಕೆ ಬರುವ ಸಲಹೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ನಾವು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಚಟಗಳು ಇದ್ದಕ್ಕಿದ್ದಂತೆ ಮೂಡಿರುವುದಿಲ್ಲ. ಮೊದಲು ಕುತೂಹಲ ನಂತರ ಆಸೆ, ಆಮೇಲೆ ಹಂಬಲ ಉಂಟಾಗುತ್ತದೆ. ಇದು ಮುಂದಿನ ಹಂತವೇ ಗೀಳು ಅಥವಾ ಚಟ ಅಥವಾ ವ್ಯಸನ. ಇವೆಲ್ಲವೂ ಒಂದು ಪದರದ ಮೇಲೆ ಮತ್ತೊಂದು ಪದರಗಳಂತೆ ನಿಧಾನವಾಗಿ ರಚನೆ ಆಗುತ್ತಿರುತ್ತವೆ.
ಇವುಗಳನ್ನು ಹಾಗೆಯೇ ಅಂದರೆ ಪದರ ಪದರವಾಗಿಯೇ ಬಿಡಿಸಬೇಕು. ಹತ್ತಾರು ವರ್ಷಗಳ ಚಟವನ್ನು ಒಂದು ಸಲಹೆಯ ಮೂಲಕ ನಿವಾರಿಸಲು ಆಗುವುದಿಲ್ಲ. ಅಥವಾ ಅಂಥ ಚಟ ಹತ್ತಿಸಿಕೊಂಡಿರುವವರೂ ಒಮ್ಮೆಲೆ ಬದಲಾಗಲು ಆಗುವುದೂ ಇಲ್ಲ. ನಿರಂತರ ಪ್ರಯತ್ನವಿದ್ದರೆ ಖಂಡಿತ ಈ ವ್ಯಸನದಿಂದ ಮುಕ್ತರಾಗಬಹುದು.
ಅಶ್ಲೀಲ ಚಿತ್ರ / ವಿಡಿಯೊಗಳ ವೀಕ್ಷಣೆಯ ವ್ಯಸನದ ಸಮಸ್ಯೆ ಅಗಾಧ
1) ಆನ್‌ಲೈನ್ ಪ್ರಪಂಚದಲ್ಲಿ ಅಶ್ಲೀಲ ಚಿತ್ರ / ವಿಡಿಯೊ ವೀಕ್ಷಕರ ಪಾಲು ಶೇ 30.
2) ಶೇ 60 ರಷ್ಟು ಯುವಜನ ಇಂಥ ಚಿತ್ರ / ವಿಡಿಯೊ ನೋಡುತ್ತಾರೆ. ಈ ಪೈಕಿಯೂ ಶೇ 74 ಅವರ ಫೋನಿನ ಮೂಲಕವೇ ನೋಡುತ್ತಾರೆ.
3) ಈ ಮೇಲಿನವರಲ್ಲಿ ಪ್ರತಿ ನೂರಕ್ಕೆ ಇಬ್ಬರು ತಾವು ಇಂಥ ಚಿತ್ರ / ವಿಡಿಯೊಗಳನ್ನು ನೋಡಲೇಬೇಕೆಂಬ ವ್ಯಸನದ (ಚಟ) ದಾಸರಾಗಿರುವುದಾಗಿ (ಅಡಿಕ್ಟ್) ಹೇಳಿಕೊಂಡಿದ್ದಾರೆ.
4) ಪ್ರಪಂಚದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಒಂದು ಅಶ್ಲೀಲ ಚಲನಚಿತ್ರವನ್ನು ತಯಾರಿಸಲಾಗುತ್ತದೆ.
5) ಪ್ರತಿ ಸೆಕೆಂಡಿಗೆ 30,000 ಜನರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ.
6) ಅಶ್ಲೀಲ ಚಿತ್ರಗಳನ್ನು ನೋಡುವ ಚಟ ಅಂಟಿಸಿಕೊಂಡವರು ಮದುವೆಯಾದ ಸಂಗಾತಿಗೆ ದ್ರೋಹ ಮಾಡುವ ಸಾಧ್ಯತೆ ಶೇ 300 ರಷ್ಟು ಇರುತ್ತದೆ.
7) ಅಶ್ಲೀಲ ಚಿತ್ರ / ವಿಡಿಯೊ ನೋಡುವ ಗೀಳು ಬೆಳೆಸಿಕೊಂಡ ಶೇ 40 ರಷ್ಟು ಲೈಂಗಿಕ ವ್ಯಸನಿಗಳು ತಮ್ಮ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ.
ವ್ಯಸನ (ಅಡಿಕ್ಷನ್) ಎಂದರೆ ಏನು?
ಒಂದು ಅಭ್ಯಾಸವು ನಮಗೆ ಅಪಾಯ ಉಂಟು ಮಾಡುತ್ತದೆ ಎಂದು ಗೊತ್ತಿದ್ದೂ ಮತ್ತು ಅದರಿಂದ ಆಗುವ ವ್ಯತಿರಿಕ್ತ ಪರಿಣಾಮಗಳನ್ನು ಅರ್ಥ ಮಾಡಿಕೊಂಡೂ ಆ ಅಭ್ಯಾಸವನ್ನು ಬಿಡಲು ಅಥವಾ ಅದರ ಕಡುಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದ, ನಿರಂತರವಾಗಿ ಸ್ವಯಂನಾಶದ ಕ್ರಿಯೆಯನ್ನು ಮುಂದುವರಿಸುವ ಅನಿವಾರ್ಯತೆಯ ಸುಳಿಯೇ ಅನಿವಾರ್ಯತೆ. ಸುಲಭ ಮಾತಿನಲ್ಲಿ ಹೇಳಬೇಕೆಂದರೆ ಯಾವುದೇ ಅಭ್ಯಾಸವನ್ನು ನಾವು ನಿಯಂತ್ರಿಸುವ ಬದಲು, ಅದು ನಮ್ಮನ್ನು ನಿಯಂತ್ರಿಸಿದರೆ ಅದು ಅಡಿಕ್ಷನ್ ಎನ್ನಿಸಿಕೊಳ್ಳುತ್ತದೆ. ಮಾದಕ ವಸ್ತುಗಳ ವ್ಯಸನದ ರೀತಿಯಲ್ಲಿ ಲೈಂಗಿಕ ನಡವಳಿಕೆಯ ವ್ಯಸನಗಳು ಸಹ ಮಾದಕ ವ್ಯಸನಗಳಷ್ಟೇ ಅಪಾಯಕಾರಿ ಹಾಗೂ ನಿಜವಾದದ್ದು.
ಅಶ್ಲೀಲ ಚಿತ್ರ / ವಿಡಿಯೊ ನೋಡಬೇಕು ಎನ್ನುವ ವ್ಯಸನದಿಂದ ಆಂಥ ಸುಖ ಇನ್ನೂ ಬೇಕುಬೇಕೆನ್ನುವ ಪ್ರೇರಣೆ ಮತ್ತು ಹಂಬಲವು ನಮ್ಮ ಮೆದುಳಿನ ನ್ಯೂರೋ ಕೆಮಿಕಲ್ ಆದ ಡೋಪಮೈನ್‌ನಿಂದ ಉಂಟಾಗುತ್ತದೆ. ನಾನಿದನ್ನು ಡೋಪಾಮೈನ್ ಚಕ್ರವ್ಯೂಹ ಅಂತಲೇ ಎಂದೇ ಕರೆಯಬಯಸುವೆ.
ಡೋಪಾಮೈನ್ ಚಕ್ರವ್ಯೂಹದ ಮುಖ್ಯ ಲಕ್ಷಣಗಳು
1) ಅಶ್ಲೀಲ ಚಿತ್ರ / ವಿಡಿಯೊ ವೀಕ್ಷಣೆಯನ್ನು ಬಿಡಲು ಮಾಡುವ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅದನ್ನು ತೊರೆಯುವುದು ತುಂಬಾ ಕಷ್ಟ.
2) ತಮ್ಮ ಅಡಿಕ್ಷನ್ ಕೀಳರಿಮೆ, ಕೋಪ, ಕಿರಿಕಿರಿ, ಅಪರಾಧಿ ಪ್ರಜ್ಞೆ
3) ಇದರಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿದೂ ಸಹ ಅಶ್ಲೀಲ ಚಿತ್ರ / ವಿಡಿಯೊಗಳನ್ನು ನೋಡುವುದು
4) ನೋಡಬೇಕೆನ್ನುವ ಬಯಕೆಯನ್ನು ನಿಯಂತ್ರಿಸಲು ಯತ್ನಿಸಿದರೆ ಮಾನಸಿಕ ಒತ್ತಡ ಮತ್ತು ಆತಂಕದ ಮಟ್ಟ ಹೆಚ್ಚಾಗುವುದು
5) ವಿಪರೀತ ಮುಷ್ಟಿ ಮೈಥುನ / ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಅದರಿಂದಲೂ ಇಂಥವರಿಗೆ ತೃಪ್ತಿ ಸಿಗುವುದಿಲ್ಲ
6) ಆತ್ಮವಿಶ್ವಾಸದ ಕೊರತೆ, ಆತಂಕ, ಖಿನ್ನತೆ ಪದೇಪದೆ ಕಾಡುತ್ತದೆ
7) ಮಲಬದ್ಧತೆ ಮತ್ತು ಅದರಿಂದ ಉಂಟಾಗುವ ಇತರ ಅನಾರೋಗ್ಯಗಳು ಕಾಡುತ್ತವೆ
8) ಲೈಂಗಿಕ ಆದ್ಯತೆಗಳಲ್ಲಿ ಬದಲಾವಣೆ. ಸಂಗಾತಿಯ ಲೈಂಗಿಕ ದೃಷ್ಟಿಕೋನವನ್ನು ಪ್ರಶ್ನಿಸುವುದು. ಅಸಹಜ ಲೈಂಗಿಕ ಕ್ರಿಯೆಗಳ ಬಯಕೆ ಮತ್ತು ಅಂಥವುಗಳಲ್ಲಿ ಆಸಕ್ತಿ
9) ಸಂಬಂಧಗಳಲ್ಲಿ, ಮದುವೆಯಲ್ಲಿ ವೈಫಲ್ಯ. ಅಪಾಯಕಾರಿ ಲೈಂಗಿಕ ನಡವಳಿಕೆಯಿಂದ ಸಮಾಜಕ್ಕೂ ಕಂಟಕ ಆಗಬಹುದು.
ಅಶ್ಲೀಲ ಚಿತ್ರ / ವಿಡಿಯೊ ನೋಡುವ ವ್ಯಸನಕ್ಕೆ ಮೂರು ಹಂತಗಳಿವೆ
1) ಪ್ರಚೋದಕ (ಟ್ರಿಗರ್): ಅಶ್ಲೀಲ ದೃಶ್ಯವನ್ನು ನೋಡುವ ಬಯಕೆಯನ್ನು ಉಂಟು ಮಾಡುವ ಯಾವುದೇ ಆಗಲಿ ಅದು ಪ್ರಚೋದಕ. ಅದು ಯುವತಿಯೊಬ್ಬಳು ಸ್ಪೋರ್ಟ್ಸ್ ಬ್ರಾ ಧರಿಸಿ ಜಾಗಿಂಗ್ ಮಾಡುವುದನ್ನು ನೋಡುವುದು ಆಗಿರಬಹುದು, ಟಿವಿ ಅಥವಾ ಮೊಬೈಲಿನಲ್ಲಿ ಪ್ರಚೋದನಕಾರಿ ಚಿತ್ರಗಳನ್ನು ನೋಡಿದಾಗ ಅಥವಾ ಯಾವುದೇ ಕಠಿಣವಾದ ವ್ಯಾಯಾಮವನ್ನು ಮುಗಿಸಿದಾಗ ಇದ್ದಕ್ಕಿದ್ದಂತೆ ಟೆಸ್ಟೋಸ್ಟೆರಾನ್ ತೀವ್ರವಾಗಿ ಸ್ರವಿಸಬಹುದು.
2) ಆಲೋಚನೆ: ಮನಸ್ಸಿಗೆ ಪ್ರಚೋದನೆ ಸಿಕ್ಕ ನಂತರದ ಮುಂದಿನ ಹಂತ ಆಲೋಚನೆ. ನಿಮ್ಮ ಮಿದುಳಿನಲ್ಲಿ ಅಶ್ಲೀಲ ಚಿತ್ರ / ವಿಡಿಯೊ ನೋಡಬೇಕು ಎನ್ನುವ ಸ್ವಿಚ್ ಆನ್ ಆದ ತಕ್ಷಣ ಈಗ ಯಾವುದಾದರೂ ಪಾರ್ನ್ ವೀಕ್ಷಿಸೋಣ ಎಂದು ಮನಸಿಗೆ ಹಂಬಲ ಅಥವಾ ಕಡುಬಯಕೆ ಬರಲು ಆರಂಭಿಸುತ್ತದೆ. ತಡೆಯಲು ಯತ್ನಿಸಿದಷ್ಟೂ ಆ ಹಂಬಲ ಜಾಸ್ತಿ ಆಗುತ್ತಾ ಹೋಗುತ್ತದೆ.
3) ಮುಷ್ಟಿ ಮೈಥುನ: ಈ ಹಂಬಲದ ಮುಂದಿನ ಹಂತವೇ ಪಾರ್ನ್ ಹುಡುಕಿ ನೋಡುವುದು ಇದು ಸಾಮಾನ್ಯವಾಗಿ ಹಸ್ತ / ಮುಷ್ಟಿ ಮೈಥುನದಲ್ಲಿ ಕೊನೆಗೊಳ್ಳುತ್ತದೆ.
ವ್ಯಸನದಿಂದ ಹೊರಬರಲು ಆಗುವುದೇ ಇಲ್ಲವೇ
ಅಸಭ್ಯ ಚಿತ್ರ / ವಿಡಿಯೊಗಳನ್ನು ನೋಡಬೇಕು ಎನ್ನುವ ವ್ಯಸನ ಕಾಡುತ್ತಿರುವವರಿಗೆ ಬಿಡುಗಡೆಗೆ ಮಾರ್ಗವೇ ಇಲ್ಲವೇ? ಈ ಪ್ರಶ್ನೆಗೆ ಹೌದು, ಬಿಡುಗಡೆಯ ಮಾರ್ಗ ಇದೆ ಎಂದೇ ನಾನು ಉತ್ತರಿಸುತ್ತೇನೆ. ಪರಿಹಾರಕ್ಕಾಗಿ ಹಂಬಲಿಸುವವರು ಈ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು.
1) ವ್ಯಸನದಿಂದ ಹೊರಗೆ ಬರಲು ಇಚ್ಛಿಸುವವರು ಮೊದಲು ಮೇಲಿನ ಸೈಕಲ್ ಅರಿತುಕೊಳ್ಳಬೇಕು.
2) ನಿಧಾನವಾಗಿ ಆ ಟ್ರಿಗರ್‌ನಿಂದ ಉಂಟಾಗುವ ಕಡುಬಯಕೆಯನ್ನು ಕೊಂಚ ಕಾಲ ಅಂದರೆ ಐದು ನಿಮಿಷ ಅಥವಾ ಹತ್ತು ನಿಮಿಷ ಮುಂದೂಡಬೇಕು.
3) ಬದಲಾಗಬೇಕು ಎಂದು ಹಂಬಲಿಸುವವರು ಫೋನಿನಲ್ಲಿರುವ ಹಿಸ್ಟರಿ ಮತ್ತು ಅಂಥ ಡೇಟಾ ಡಿಲೀಟ್ ಮಾಡಬೇಕು.
4) ಕೆಲವೊಂದು ಧ್ಯಾನ ಮತ್ತು ರಿಲ್ಯಾಕ್ಸೇಶನ್ ತಂತ್ರಗಳು ವ್ಯಸನದಿಂದ ಹೊರಗೆ ಬರಲು ಸಹಾಯ ಮಾಡಬಹುದು.
5) ಯೋಗಾಭ್ಯಾಸದಿಂದಲೂ ಸಹಾಯವಾಗುತ್ತದೆ.
6) ಈ ಎಲ್ಲ ಪ್ರಯತ್ನಗಳಿಂದಲೂ ಸಹಾಯ ಆಗವಾಗದಿದ್ದರೆ ಮನಃಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳಿ
ಹದಿಹರೆಯದವರು ಮತ್ತು ಪೋಷಕರಿಗೆ ತಿಳಿದಿರಬೇಕಾದ ಅಂಶಗಳಿವು
1) ನಿಮ್ಮ ಮಕ್ಕಳ ಮೊಬೈಲಿಗೆ ಪೇರೇಂಟಿಂಗ್ ಗೈಡ್ ಅಫ್ ಹಾಕಿ
2) ಮಕ್ಕಳ ಸ್ವಭಾವವನ್ನು ಹತ್ತಿರದಿಂದ ಗಮನಿಸಿ. ಅವರು ಯಾರೊಡನೆಯೂ ಮಾತಾಡದೇ ಇರುವುದು, ಒಂಟಿಯಾಗಿರಬಯಸುವುದು, ಅವರಲ್ಲಿ ಇದ್ದಕ್ಕಿದ್ದಂತೆ ಮೂಡ್ ಬದಲಾವಣೆ, ಖಿನ್ನತೆ, ಅಳು ಅಥವಾ ಕಿರಿಕಿರಿಯ ಸ್ವಭಾವ ಕಂಡು ಬಂದರೆ ಎಚ್ಚರವಹಿಸಿ.
3) ಅವರ ಗೆಳೆಯ, ಗೆಳತಿಯರು, ಆನ್‌ಲೈನ್ ಪರಿಚಿತರನ್ನು ಗುರುತು ಮಾಡಿಕೊಳ್ಳಿ
4) ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮಕ್ಕಳಿಗೆ ಕೊಡುವುದಾದರೆ ಅದರಲ್ಲಿ ಯಾವುದೇ ಲೈಂಗಿಕ ಚಿತ್ರ ವಿಡಿಯೊಗಳು, ಆಡಿಯೊ ಇಲ್ಲದಂತೆ ಡಿಲೀಟ್ ಮಾಡಿ.
5) ಮುಖ್ಯವಾಗಿ ನೀವು ಇಂಥ ವ್ಯಸನದಿಂದ ದೂರ ಇರಿ. ಮಕ್ಕಳು ಹೇಳಿ ಕಲಿಯುವುದಿಲ್ಲ, ಪೋಷಕರನ್ನು ಗಮನಿಸಿ ಕಲಿಯುವುದೇ ಹೆಚ್ಚು. ಈ ಎಚ್ಚರ ಪೋಷಕರಲ್ಲಿ ಸದಾ ಇರಬೇಕು.
ಅತಿಯಾದ ಯಾವುದೇ ಆಗಲಿ ಅದು ವಿಷವೇ
ಯಾವುದೇ ಆಗಲಿ ನಮಗೆ ಕೂಡಲೇ ಖುಷಿ ಕೊಡುತ್ತದೆ ಎಂದರೆ ಅದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಕೊಡುತ್ತದೆ ಎಂದೇ ಅರ್ಥ. ಅಶ್ಲೀಲ ಚಿತ್ರಗಳ ವೀಕ್ಷಣೆಯು ಯಾರದೇ ಬದುಕಿನಲ್ಲಿ ಉಪ್ಪಿನಕಾಯಿಯಷ್ಟು ಇದ್ದರೆ ಅದು ಸಹನೀಯ. ಅದೇ ಊಟದಂತೆ ಆದರೆ ದೇಹ-ಮನಸು ಎಲ್ಲವೂ ಹಾಳಾಗುತ್ತದೆ.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990