ಕನ್ನಡ ಸುದ್ದಿ  /  ಜೀವನಶೈಲಿ  /  ಹೆಂಡತಿ ಸದಾ ಮಲಗಿರ್ತಾಳೆ, ವಿಪರೀತ ತಿನ್ನುತ್ತಾಳೆ, ಆದರೂ ಸುಸ್ತು ಅಂತಾನೇ ಇರ್ತಾಳೆ, ಇದೇನು ರೋಗ ಇವಳದು? ಸಾಕಾಗಿದೆ ನನಗೆ -ಕಾಳಜಿ ಅಂಕಣ

ಹೆಂಡತಿ ಸದಾ ಮಲಗಿರ್ತಾಳೆ, ವಿಪರೀತ ತಿನ್ನುತ್ತಾಳೆ, ಆದರೂ ಸುಸ್ತು ಅಂತಾನೇ ಇರ್ತಾಳೆ, ಇದೇನು ರೋಗ ಇವಳದು? ಸಾಕಾಗಿದೆ ನನಗೆ -ಕಾಳಜಿ ಅಂಕಣ

ಸಂಗಾತಿಗೆ ದೈಹಿಕ ಅಥವಾ ಮಾನಸಿಕ ಸಮಸ್ಯೆ ಎದುರಾದಾಗ ಜೊತೆಗಿದ್ದು ಭರವಸೆ ತುಂಬಬೇಕು. ವಿಚ್ಛೇದನ (ಡೈವೋರ್ಸ್) ಎಲ್ಲ ಸಂದರ್ಭದಲ್ಲೂ ಪರಿಹಾರವಲ್ಲ. ಗೃಹಿಣಿಯರನ್ನು ಕಾಡುವ ಅತಿನಿದ್ರೆ, ಸುಸ್ತು, ಅತಿಯಾಗಿ ತಿನ್ನುವ ವರ್ತನೆಗಳ ಹಿಂದೆ ಮಾನಸಿಕ ಸಮಸ್ಯೆಗಳು ಇರಬಹುದು. ಸೂಕ್ತ ಪರಿಹಾರ ಸಿಕ್ಕರೆ ಸುಮಧುರ ದಾಂಪತ್ಯ ಸಾಧ್ಯ. (ಬರಹ: ಡಾ ರೂಪಾ ರಾವ್)

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ: ನನ್ನ ಹೆಂಡತಿ ಕುಂಭಕರ್ಣನ ಹಾಗೇ ಮಲಗಿರ್ತಾಳೆ. ಬಕಾಸುರನ ಹಾಗೆ ತಿಂತಾಳೆ. ಆದರೆ ಯಾವ ಕೆಲಸವನ್ನೂ ಸರಿಯಾಗಿ ಮಾಡಲ್ಲ. ಅಡುಗೇಲಿ ಉಪ್ಪಿರಲ್ಲ, ಇಲ್ಲ ಖಾರ ಜಾಸ್ತಿ. ಯಾವಾಗಲೂ ಕಣ್ಣೀರು, ಗೊಳೋ ಅನ್ನುತ್ತಿರುತ್ತಾಳೆ. ಇಲ್ಲವೇ ಸಿಟ್ಟಿನಲ್ಲಿ ಸಿಡಿಮಿಡಿ. ಅದೇನು ಗೋಳೋ ಅವಳದ್ದು. ಈಗ ಕೌನ್ಸೆಲಿಂಗ್‌ಗೆ ಕರೆದುಕೊಂಡು ಹೋಗು ಅನ್ನುವ ನಾಟಕ ಬೇರೆ ಮಾಡುತ್ತಿದ್ದಾಳೆ. ಮುಂದೆ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸಿಬಿಡ್ತಾಳೆ ಅನಿಸುತ್ತೆ. ನನಗಂತೂ ಯಾಕಾದರೂ ಇವಳನ್ನು ಕಟ್ಟಿಕೊಂಡೆನೋ ಅನಿಸುತ್ತಿದೆ. ನಿಜ ಹೇಳಿ ಮೇಡಂ, ಮನಸ್ಸು ಕೆಟ್ಟು ಹೋಗುತ್ತೆ ಅನ್ನುವುದು ನಿಜವಾ? ಮನಸು ಕೆಟ್ಟು ಹೋದರೆ ದೇಹವೂ ಕೆಡುತ್ತಾ? ನನಗೆ ಇದರಿಂದ ಮುಕ್ತಿ ಹೇಗೆ? ಈ ಮನಸು ಅನ್ನೋದನ್ನ ಯಾಕೆ ಬದಲಾಯಿಸಿಕೊಂಡು ಸರಿಯಾಗಿರಲು ಸಾಧ್ಯವಿಲ್ಲ. ದೇಹಕ್ಕೆ ತೊಂದರೆ ಅಂತ ಒಪ್ಪಬಹುದು. ಆದರೆ ಮನಸು ಊನ ಅಂದರೆ; ನನಗಂತೂ ಒಪ್ಪಲು ಆಗುತ್ತಿಲ್ಲ. ನಾನು ವಿಚ್ಚೇದನ ತೆಗೆದುಕೊಳ್ಳುವ ಹಂತದಲ್ಲಿದ್ದೇನೆ. ಈ ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. -ಹೆಸರು ಮತ್ತು ಊರು ಬೇಡ

ಉತ್ತರ: ಮೊದಲಿಗೆ ನಿಮ್ಮ ವಿಚ್ಛೇದನದ ನಿರ್ಧಾರವನ್ನು ತಡೆಹಿಡಿದಿದ್ದಕ್ಕೆ ಧನ್ಯವಾದಗಳು. ಈಗ ನಿಮ್ಮ ಮಾತುಗಳನ್ನು ಒಂದೊಂದಾಗಿ ನೋಡೋಣ. ಮಾನಸಿಕ ಸಮಸ್ಯೆಗೂ ದೈಹಿಕ ಬದಲಾವಣೆಗೂ ನೇರ ಸಂಬಂಧವಿದೆಯೇ ಎನ್ನುವುದು ನಿಮ್ಮ ಪ್ರಶ್ನೆ. ಇದಕ್ಕೆ ನನ್ನ ಉತ್ತರ, 'ಹೌದು ಪರಸ್ಪರ ಸಂಬಂಧ ಇದೆ'. ನಿಮ್ಮ ಪತ್ನಿ ಅತಿ ನಿದ್ರೆ, ಊಟ, ಕಣ್ಣೀರು ಇವೆಲ್ಲಾ ಬೇಕೆಂದೇ ಮಾಡುತ್ತಿಲ್ಲ. ಅದರ ಹಿಂದೊಂದು ಹಳೆಯ ನೋವಿರಬಹುದು, ಚಿಕ್ಕವಯಸ್ಸಿನ ಭಯವಿರಬಹುದು, ಯಾವುದೋ ಘಟನೆ ಮನಸ್ಸನ್ನು ಬದಲಾಯಿಸಿರಬಹುದು, ಅಥವಾ ಹುಟ್ಟಿನಿಂದಲೇ ಅವರ ನ್ಯೂರಲ್ ವೈರಿಂಗ್ (ನರಮಂಡಲ) ಆ ರೀತಿಯಲ್ಲಿ ಇರಬಹುದು.

ಮೇಲಿನ ಎಲ್ಲ ಕಾರಣಗಳು ಅವರ ದೇಹದಲ್ಲಿ, ಇನ್ನೂ ನಿಖರವಾಗಿ ಹೇಳಬೇಕೆಂದರೆ ಅವರ ಮಿದುಳಿನಲ್ಲಿ ಬದಲಾವಣೆ ತಂದಿರಬಹುದು. ಈಗ ಗೊತ್ತಾಯಿತಲ್ಲ ದೇಹಕ್ಕೆ ತೊಂದರೆ ಆದರೆ ನಮಗೆ ಹೇಗೆ ದೇಹದಲ್ಲಿ ನೋವಿನ ಮೂಲಕ ಸೂಚನೆ ಸಿಗುತ್ತದೆಯೋ ಹಾಗೆ, ಯಾವುದೋ ಘಟನೆ ನಮ್ಮ ಮೆದುಳಿನ ನರವ್ಯೂಹದ ರಚನೆಯಲ್ಲಿ ಬದಲಾವಣೆ ತಂದು ವರ್ತನೆ ಹಾಗು ಯೋಚನೆ ಹಾಗು ಭಾವನೆಗಳನ್ನು ತೋರ್ಪಡಿಸುವ ಧಾಟಿಯಲ್ಲಿ ಬದಲಾವಣೆಯ ಮೂಲಕ ಸೂಚನೆ ಕೊಡುತ್ತದೆ.

ಟ್ರೆಂಡಿಂಗ್​ ಸುದ್ದಿ

ದೇಹ-ಮನಸ್ಸುಗಳ ಬೆಸುಗೆ

ಮಾನಸಿಕ ಆರೋಗ್ಯ ಸಮಸ್ಯೆಗಳು ಜೈವಿಕ, ಹಾರ್ಮೋನ್ ಮತ್ತು ನ್ಯೂರಾನ್‌ಗಳ ಸಂಕೀರ್ಣ ಕ್ರಿಯೆಗಳ ಮೂಲಕ ದೈಹಿಕ ಆರೋಗ್ಯದೊಂದಿಗೆ ಒಂದಕ್ಕೊಂದು ನೇರ ಸಂಬಂಧ ಹೊಂದಿವೆ. ಖಿನ್ನತೆ, ಆತಂಕ ಮತ್ತು ಒತ್ತಡದಂತಹ ಮಾನಸಿಕ ಆರೋಗ್ಯ ಪರಿಸ್ಥಿತಿಗಳು ದೈಹಿಕವಾಗಿ ನೇರ ಪರಿಣಾಮ ತರುತ್ತವೆ. ಹೀಗಾಗಿ ದೈಹಿಕವಾಗಿ ನಿಯಮಿತ ಕೆಲಸ ಮತ್ತು ವರ್ತನೆಗಳ (ಹೆಚ್ಚು ಊಟ, ನಿದ್ದೆ, ಅಳು ಮುಂತಾದವುಗಳ) ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.

ಹಾರ್ಮೋನ್ ಬದಲಾವಣೆಗಳು ಮತ್ತು ಮಿದುಳಿನ ನ್ಯೂರಲ್ ಪ್ಯಾಟರ್ನ್‌ಗಳು, ದೇಹದಲ್ಲಿ ನ್ಯೂರೋಟ್ರಾನ್ಸ್ಮಿಟ್ಟರ್ ಎಲ್ಲವೂ ಸೇರಿ ಮನುಷ್ಯನ ಮನಸ್ಥಿತಿ, ಒತ್ತಡದ ಪ್ರತಿಕ್ರಿಯೆ ಮತ್ತು ಒಟ್ಟಾರೆ ಮಾನಸಿಕ ಆರೋಗ್ಯವನ್ನು ನಿಯಂತ್ರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಕೆಲವು ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾದಾಗ, ಮಿದುಳಿನ ನ್ಯೂರಾನ್‌ಗಳ ಮಾದರಿಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ಇವು ಮಾನಸಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ.

ಈಗ ಮೂರು ಪ್ರಮುಖ ಮಾನಸಿಕ ಅನಾರೋಗ್ಯಗಳು ಹಾಗು ಅವುಗಳು ದೈಹಿಕ ಆರೋಗ್ಯ ಮತ್ತು ವರ್ತನೆಗಳ ಜೊತೆ ಹೇಗೆ ಹೆಣೆದುಕೊಂಡಿವೆ ನೋಡೋಣ.

1) ಖಿನ್ನತೆ (Depression): ಖಿನ್ನತೆಯು ಸಾಮಾನ್ಯವಾಗಿ ಸೆರೊಟೋನಿನ್, ಡೋಪಮೈನ್ ಮತ್ತು ನೊರ್ಪೈನ್ಫ್ರಿನ್‌ನಂಥ ಹಾರ್ಮೋನ್‌ಗಳ ಅಸಮತೋಲನದಿಂದ ಬರುತ್ತದೆ. ಈ ರಾಸಾಯನಿಕಗಳು ವ್ಯಕ್ತಿಯ ಮೂಡ್ ನಿಯಂತ್ರಿಸುತ್ತವೆ. ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಬದಲಾವಣೆಗಳು ಈ ಅಸಮತೋಲನವನ್ನು ಉಲ್ಬಣಗೊಳಿಸಬಹುದು.

ಉದಾಹರಣೆಗೆ: ದೀರ್ಘಕಾಲದ ಒತ್ತಡವು ಕಾರ್ಟಿಸೋಲ್‌ನ ವೈಪರಿತ್ಯಗಳಿಗೆ ಕಾರಣವಾಗಬಹುದು. ಇದರಿಂದ ಹಿಪೊಕ್ಯಾಂಪಸ್‌ (ಹೊಸ ನೆನಪುಗಳು ಮತ್ತು ಭಾವನಾತ್ಮಕ ನಿಯಂತ್ರಣಗಳಿಗೆ ಸಂಬಂಧಪಟ್ಟ ಮಿದುಳಿನ ಒಂದು ಭಾಗ) ಗಾತ್ರ ಇಳಿಕೆಯಾಗಬಹುದು. ಇದರಿಂದ ನಿರಂತರ ದುಃಖ, ಆಯಾಸ, ಗೊಂದಲ ಮತ್ತು ಯಾವುದನ್ನೂ ಅರ್ಥ ಮಾಡಿಕೊಳ್ಳಲಾಗದ ದೌರ್ಬಲ್ಯಗಳು ಖಿನ್ನತೆಯ ಲಕ್ಷಣಗಳಿಗೆ ಕಾರಣವಾಗಬಹುದು.

ಸೆರೊಟೋನಿನ್ ಮತ್ತು ಡೋಪಮೈನ್‌ ಹಾರ್ಮೋನ್‌ಗಳ ಮಟ್ಟದಲ್ಲಿ ಕುಸಿತವು ಸಾಮಾನ್ಯವಾಗಿ ಖಿನ್ನತೆಯಿರುವ ಜನರಲ್ಲಿ ಕಂಡುಬರುತ್ತದೆ.

2) ಆಂಕ್ಸೈಟಿ ಅಸ್ವಸ್ಥತೆಗಳು: ಅತಿಯಾದ ಆತಂಕ ಮತ್ತು ಭಯದ ಗುಣಲಕ್ಷಣಗಳಿಗೆ ಮಿದುಳಿನ ಲಿಂಬಿಕ್ ವ್ಯವಸ್ಥೆಯ (ಲಿಂಬಿಕ್ ವ್ಯವಸ್ಥೆಯು ಭಾವನೆಗಳು, ಮೆಮೋರಿ ಮತ್ತು ನಡವಳಿಕೆಯನ್ನು ನಿಯಂತ್ರಿಸುವ ಮೆದುಳಿನೊಂದು ಭಾಗಗಳ ಗುಂಪು) ಅಸ್ತವ್ಯಸ್ತತೆ ಕಾರಣ. ಇದು ಭಾವನೆಗಳನ್ನು ಮತ್ತು 'ಹೋರಾಡು ಅಥವಾ ಹೊರಡು' (ಫ್ಲೈಟ್ ಆರ್ ಫೈಟ್) ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.

ಅಡ್ರಿನಾಲಿನ್ ಮತ್ತು ನೊರಾಡ್ರಿನಾಲಿನ್ (ದೇಹದ ಒತ್ತಡಕ್ಕೆ ಸಂಬಂಧಪಟ್ಟವುಗಳು) ಹಾರ್ಮೋನುಗಳ ಮಟ್ಟದಲ್ಲಿ ಆಗುವ ಬದಲಾವಣೆಗಳು ಈ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಈ ಹಾರ್ಮೋನುಗಳ ಅಸಮತೋಲನವು GABA. (ಗಾಮಾ-ಅಮಿನೊ ಬ್ಯುಟರಿಕ್ ಆಮ್ಲ ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುವ ನ್ಯೂರೋಟ್ರಾನ್ಸ್ಭಿಟ್ಟರ್) ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸ ಉಂಟು ಮಾಡುತ್ತವೆ. ಹೀಗೆ ಅತಿಯಾದ ಮಾನಸಿಕ ಒತ್ತಡವು ಹೆಚ್ಚಿದ ಆತಂಕದ ಮಟ್ಟಗಳಿಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಹೃದಯ ಬಡಿತದಲ್ಲಿ ಏರುಪೇರೆ, ಬೆವರುವಿಕೆ ಮತ್ತು ಅತಿ ಜಾಗರೂಕತೆಯಂತಹ ಲಕ್ಷಣಗಳು ಕಂಡುಬರುತ್ತವೆ.

3) ಮಾನಸಿಕ ಒತ್ತಡದಿಂದ ಹಾನಿ (ಸ್ಟ್ರೆಸ್): ಒತ್ತಡವು ಕ್ಲಿಷ್ಟ ಹಾಗೂ ಸವಾಲಿನ ಸಂದರ್ಭಗಳಲ್ಲಿ ದೇಹವು ಕೊಡುವ ಸಹಜ ಪ್ರತಿಕ್ರಿಯೆ. ಆದರೆ ದೀರ್ಘಕಾಲದ ಮಾನಸಿಕ ಒತ್ತಡವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕಾರ್ಟಿಸೋಲ್ ಬಿಡುಗಡೆಯ ಮೂಲಕ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ದೇಹದ ಪ್ರತಿರಕ್ಷಣಾ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ಮತ್ತು ಖಿನ್ನತೆ, ಆತಂಕದಂಥ ಮಾನಸಿಕ ಆರೋಗ್ಯ ಅಸ್ವಸ್ಥತೆ ಹೆಚ್ಚಾಗಲು ಕಾರಣವಾಗುತ್ತದೆ.

3) ಮಿದುಳಿನ ಮೇಲೆ ಪರಿಣಾಮ: ದೀರ್ಘಕಾಲದ ಒತ್ತಡವು ಮಿದುಳಿನಲ್ಲಿ ಭಾವನಾತ್ಮಕ ನಿಯಂತ್ರಣ ಮತ್ತು ಕ್ಲಿಷ್ಟ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಡಿಮೆಗೊಳಿಸಬಹುದು.

ಈ ಮೂರು ಅಂಶಗಳನ್ನು ಓದಿದ ಮೇಲೆ ನಮ್ಮ ದೇಹದ ಪ್ರತಿಯೊಂದೂ ಭಾಗವೂ ಮಾನಸಿಕ ಆರೊಗ್ಯದಲ್ಲಿ ತಮ್ಮದೇ ಆದ ಪಾತ್ರ ಹೊಂದಿರುವುದು ಮನವರಿಕೆಯಾಗುತ್ತದೆ. ದೇ ಹ ಮತ್ತು ಮನಸ್ಸು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಹಾಗಾಗಿ ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯ ಕೂಡ ಮುಖ್ಯ ಎನ್ನುವುದನ್ನು ನೆನಪಿಡಿ. ನಿಮ್ಮ ಪ್ರಶ್ನೆಯಲ್ಲಿ ಪ್ರಸ್ತಾಪಿಸಿರುವ ಬಕಾಸುರ, ಕುಂಭಕರ್ಣರಿಗೂ ಯಾವುದೋ ಮಾನಸಿಕ ಅನಾರೋಗ್ಯವಿತ್ತು ಎನಿಸುತ್ತದೆ. ಅವರಿಗೂ ಸರಿಯಾದ ಸಮಯದಲ್ಲಿ ಆರೈಕೆ, ಮಾರ್ಗದರ್ಶನ ಸಿಕ್ಕಿದ್ದಿದ್ದರೆ ಅವರು ಜನಕಂಟಕರಾಗಿ ಬದಲಾಗುತ್ತಿರಲಿಲ್ಲವೇನೋ, ಅಲ್ಲವೇ?

ಈಗ ನಿಮ್ಮ ಸಂಗಾತಿಯ ಮಾನಸಿಕ ಸಮಸ್ಯೆ ಪರಾಮರ್ಶಿಸೋಣ

ಅತಿಯಾಗಿ ತಿನ್ನುವುದು, ಹೆಚ್ಚು ನಿದ್ದೆ ಮಾಡುವುದು, ಯಾವುದೇ ಕಾರಣವಿಲ್ಲದೆ ಅಳುವುದು ಮತ್ತು ನಿರಂತರ ದುಃಖವು ನಾಟಕವೇ ಆಗಿರಬೇಕಿಲ್ಲ. ಇವು ಖಿನ್ನತೆ, ಆತಂಕ ಅಥವಾ ದೀರ್ಘಕಾಲದ ಒತ್ತಡದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿದ್ದಿರಬಹುದು ಎಂಬುದನ್ನು ಅವರು ಪತಿಯಾಗಿ ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ನಡವಳಿಕೆಗಳು ಮೇಲೆ ಹೇಳಿದಂತೆ ಹಾರ್ಮೋನುಗಳ ಅಸಮತೋಲನ ಮತ್ತು ಮೆದುಳಿನ ನ್ಯೂಟ್ರಾನ್ ಪ್ಯಾಟರ್ನ್ ಬದಲಾವಣೆಗಳಿಂದ ಉಂಟಾಗಿರಬಹುದು. ಇಂಥ ರೋಗಲಕ್ಷಣಗಳನ್ನು ಸಹಾನುಭೂತಿ ಮತ್ತು ಮಾನವೀಯತೆಯಿಂದ ನೋಡಬೇಕು. ಪತಿಯಾಗಿ ಅದು ನಿಮ್ಮ ಕರ್ತವ್ಯವೂ ಹೌದು.

ಅಕಸ್ಮಾತ್ ನಿಮಗೇ ಯಾವುದಾದರೂ ದೈಹಿಕ ತೊಂದರೆ ಬಂದು, ನಿಮ್ಮ ಪತ್ನಿ ನಿಮಗೆ ವಿಚ್ಛೇದನ ಕೊಟ್ಟಿದ್ದರೆ ನೀವು ಸಹಿಸುತ್ತಿದ್ದೀರಾ? ಅವರ ಮನಸಿಗೆ ಚಿಕಿತ್ಸೆ ಬೇಕಿದೆ. ಅದಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ, ಕಾಳಜಿ ಮತ್ತು ಅರ್ಥ ಮಾಡಿಕೊಳ್ಳುವ ಸಾಂಗತ್ಯ ಬೇಕಿದೆ. ಅದನ್ನು ಮೊದಲು ಕೊಡಿ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೊದಲೇ ಆಗದು ಎಂದು ಕೈ ಚೆಲ್ಲಿ ಕೂರಬೇಡಿ. ಮೊದಲು ಅವರೊಂದಿಗೆ ಮಾತನಾಡಿ ಅವರು ಕೇಳಿದಂತೆ ಕೌನ್ಸೆಲಿಂಗ್‌ಗೆ ಕರೆದುಕೊಂಡು ಹೋಗಿ. ಅಲ್ಲಿ ಚಿಕಿತ್ಸೆ ಕೊಡಿಸಿ, ಅವರು ಗುಣಮುಖರಾದ ಮೇಲೆ ನಿಮ್ಮ ನಿರ್ಧಾರ ತೆಗೆದುಕೊಳ್ಳಿ.

ಸಾಂಗ್ಯವು ಅಗತ್ಯವಾಗಿ ಬೇಕಾದ ಸಮಯದಲ್ಲಿ ಜೊತೆಗೆ ಇರುವುದೇ ನಿಜವಾದ ಸಂಬಂಧ. ಹಾಗೆ ಮಾಡದಿದ್ದರೆ ಅದು ಅವಕಾಶವಾದಿತನವಾಗುತ್ತದೆ. ಆದ್ದರಿಂದ ಮೊದಲು ಅವರಿಗೆ ಬೇಕಾದ ಸಹಾಯ ಒದಗಿಸಿ. ನಿಮ್ಮದು ಅವಕಾಶವಾದಿತನವಲ್ಲ ಎಂಬುದನ್ನು ನಿಮಗೆ ನೀವೇ ನಿರೂಪಿಸಿಕೊಳ್ಳಿ.

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990