ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಇಂಟರ್‌ಮಿಟೆಂಟ್‌ ಎಕ್ಸ್‌ಪ್ಲೋಸಿವ್‌ ಡಿಸಾರ್ಡರ್‌? ವರ್ತನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸ್ವಭಾವಕ್ಕೆ ಕಾರಣವಿದು - ಕಾಳಜಿ ಅಂಕಣ

ಏನಿದು ಇಂಟರ್‌ಮಿಟೆಂಟ್‌ ಎಕ್ಸ್‌ಪ್ಲೋಸಿವ್‌ ಡಿಸಾರ್ಡರ್‌? ವರ್ತನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸ್ವಭಾವಕ್ಕೆ ಕಾರಣವಿದು - ಕಾಳಜಿ ಅಂಕಣ

ಕೆಲವೊಮ್ಮೆ ನಮ್ಮ ವರ್ತನೆಗಳ ಮೇಲೆ ನಮಗೆ ಹಿಡಿತವೇ ಇರುವುದಿಲ್ಲ. ಇದ್ದಕ್ಕಿದ್ದಂತೆ ಕೋಪ ಬರುವುದು, ಧ್ವನಿ ಏರುವುದು, ವರ್ತನೆಯ ಮೇಲೆ ನಿಯಂತ್ರಣ ತಪ್ಪಿ ಅಪರಾಧಗಳು ನಡೆದು ಬಿಡುವ ಸಾಧ್ಯತೆಯೂ ಇದೆ. ಮನುಷ್ಯನಲ್ಲಿನ ಈ ಆಕ್ರಮಣಕಾರಿ ನಡವಳಿಕೆಗೆ ಕಾರಣವೇನು, ಇದರ ಪರಿಹಾರದ ಬಗ್ಗೆ ತಿಳಿಸಿದ್ದಾರೆ ಆಪ್ತಸಮಾಲೋಚಕಿ ಡಾ. ರೂಪಾ ರಾವ್.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ: ನಮಸ್ತೆ ಮೇಡಂ, ಮೊನ್ನೆ ನೀವು ದರ್ಶನ್ ಅವರ ಬಗ್ಗೆ ಪ್ಯಾನೆಲ್ ಡಿಸ್ಕಶನ್ ಮಾಡುವಾಗ ಇಂಟರ್‌ಮಿಟೆಂಟ್‌ ಎಕ್ಸ್‌ಪ್ಲೋಸಿವ್‌ ಡಿಸಾರ್ಡರ್‌ ಹೆಸರು ಹೇಳಿದ್ರಿ. ನನಗೂ ಹೀಗೆ ಆಗಾಗ ಇದ್ದಕ್ಕಿದ್ದಂತೆ ಕೋಪ ಬರುವುದು, ಜೋರು ದನಿ ಆಗಿಹೋಗುವುದು‌, ನನ್ನ ವರ್ತನೆಯ ಮೇಲೆ ಕಂಟ್ರೋಲ್ ಇಲ್ಲದ ಹಾಗೇ ಆಗಿ ಹೋಗುತ್ತದೆ. ನನಗೂ ಇಂಥದ್ದೇನಾದರೂ ಸಮಸ್ಯೆ ಇದೆಯಾ ಎಂದ ಸಂಶಯ ಶುರುವಾಗಿದೆ. ದಯವಿಟ್ಟು ಈ ಬಗ್ಗೆ ಇನ್ನಷ್ಟು ಮಾಹಿತಿ ಕೊಡಿ.‌ ಹಾಗೆಯೇ ಈ ಸಮಸ್ಯೆಗೆ ಪರಿಹಾರವೇನು ಎಂಬುದನ್ನೂ ತಿಳಿಸಿ.

ಮನೋಹರ್‌, ರಾಮನಗರ

ಉತ್ತರ: ಮೊದಲಿಗೆ ಮುಕ್ತವಾಗಿ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು. ನಾನೀಗ ಈ ವರ್ತನೆಗಳನ್ನು ನೀವು ಇಲ್ಲಿ ಉಲ್ಲೇಖಿಸಿದ ಸೆಲೆಬ್ರಿಟಿ (ದರ್ಶನ್‌) ಅವರಿಗೇ ಎಂದು ನಿಖರವಾಗಿ ಹೇಳಲಾರೆ. ಆದರೂ ಅವರ ಕೆಲವು ವರ್ತನೆಗಳನ್ನು ಇಲ್ಲಿ ವಿಶ್ಲೇಷಿಸೋಣ.

ಟ್ರೆಂಡಿಂಗ್​ ಸುದ್ದಿ

ಮೊದಲಿಗೆ ಇಂಟರ್‌ಮಿಟೆಂಟ್‌ ಎಕ್ಸ್‌ಪ್ಲೋಸಿವ್‌ ಡಿಸಾರ್ಡರ್‌ ಅಂದರೆ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ಮನಸಿನ ಸ್ಥಿತಿ.‌ ಇದರ ಮುಖ್ಯ ಲಕ್ಷಣಗಳನ್ನು ಸಾರ್ವಜನಿಕವಾಗಿ ಗೊತ್ತಿರುವ ಆ ನಟರ ಕೆಲವು ವರ್ತನೆಗಳ‌ ಮೂಲಕವೇ ಹೇಳುತ್ತೇನೆ.

ಆ ನಟರ ಮೊದಲ ಅಗ್ರೆಸೀವ್ ವರ್ತನೆ ಅವರ ಹೆಂಡತಿಯ ಮೇಲೆ 2011 ರಲ್ಲಿ ದಾಖಲಾಗಿದೆ. ಆ ಸಮಯದಲ್ಲಿ ಹೆಂಡತಿ ತಲೆಗೆ ಗಾಯಗಳಾಗುವಷ್ಟರ ಮಟ್ಟಿಗೆ ಹೊಡೆದಿದ್ದರು‌. ಇದು ಒಬ್ಬ ಮನುಷ್ಯ ಕೋಪದ ಎಲ್ಲೆ ಮೀರಿ ಕ್ರೋಧಕ್ಕೆ ತಿರುಗುವಾಗಿನ ಸನ್ನಿವೇಶ. ಈ ಮನಸ್ಥಿತಿಯ ಲಕ್ಷಣ ಅಗ್ರೆಶನ್‌. ಹೊಡೆಯುವುದು, ನಿಂದಿಸುವುದು, ಬೈಗುಳ, ದೈಹಿಕ ಅಥವಾ ಮಾನಸಿಕ ಹಲ್ಲೆ ಹಾಗೂ ಎದುರಿರುವ ವಸ್ತುಗಳನ್ನು ಹಾಳು ಮಾಡುವುದು.

ಎರಡನೆಯದು‌ ಇಂಪಲ್ಸೀವ್ ನೆಸ್ ಅಥವಾ ದುಡುಕು ಬುದ್ದಿ. ಈ ಖ್ಯಾತ ನಟರ ಕುರಿತ ಇನ್ನೊಂದಷ್ಟು ಪ್ರಕರಣಗಳನ್ನು ನೋಡಿದರೆ ಅದೃಷ್ಟದೇವತೆಯ ಬಗ್ಗೆ ವಿವಾದಾತ್ಮಕವಾಗಿ ಮಾತಾಡಿದ್ದರು. ಅವಳನ್ನು ಬಟ್ಟೆ ಬಿಚ್ಚಿಸಿ ಬೆಡ್‌ರೂಮ್‌ನಲ್ಲಿ ಕೂರಿಸಬೇಕೆಂಬ ಮಾತು ಅದೂ ಸಾರ್ವಜನಿಕವಾಗಿ ಹೇಳಿದ್ದು ಹಾಗೆಯೆ ತಗಡೇ ಎಂದು ಯಾರನ್ನೋ ಕರೆದದ್ದು. ಸಾಮಾನ್ಯವಾಗಿ ನಾವು ಏನೋ ಹೇಳಬೇಕು ಎಂದುಕೊಂಡಿದ್ದರೂ ಎದುರಿರುವವರು ಯಾರು, ಇದು ಎಲ್ಲೆಲ್ಲಿ ತಲುಪುತ್ತದೆ, ಯಾರಿಗೆ ಹರ್ಟ್ ಮಾಡಬಹುದು ಎಂದೆಲ್ಲಾ ಯೋಚನೆ ಮಾಡಿ ಮಾತಾಡುತ್ತೇವೆ.

ಆದರೆ ಈ ಇಂಪಲ್ಸೀವ್ ಕಂಟ್ರೋಲ್ ಇರದವರಿಗೆ ದುಡುಕಿನಲ್ಲಿ ಏನು ಬೇಕಾದರೂ ಮಾಡಿಬಿಡುವ /ಹೇಳಿಬಿಡುವ ಮನೋಭಾವ.

ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಹುಡುಕುತ್ತೇವೆ, ಸಿಡುಕುತ್ತೇವೆ ಆದರೆ ಈ ಮನೋಭಾವ ಹೆಚ್ಚಾಗಿ ಯಾವಾಗ ಎಂದರೆ ಆಗ ಹುಡುಕುವುದು, ಎದುರಾಳಿ ಅಂತ ಕಂಡ ಕಂಡವರ ಮೇಲೆಲ್ಲಾ ಸಿಡುಕಿನಿಂದ ಬೈಯ್ಯುವುದು, ಹೊಡೆಯಲು ಮುಂದಾಗುವುದು ಇವುಗಳು ಮೂರನೆಯ ಲಕ್ಷಣ.

ಈ ಮೇಲಿನ ಎಲ್ಲಾ ಕ್ರೋಧಕ್ಕೆ, ದುಡುಕುವಿಕೆಗೆ ಇತರರಿಗೆ ತೀರಾ ಚಿಕ್ಕದಾಗಿ ಕಾಣುವ ವಿಷಯವೂ ಇವರಿಗೆ ಕ್ರೋಧ ತರಿಸಬಹುದು.‌

ಈ ಸಮಸ್ಯೆ ಇರುವವರಿಗೆ ಭಾವನೆಗಳನ್ನು ಸರಿಯಾಗಿ ನಿರ್ವಹಿಸಲು ಬರುವುದಿಲ್ಲ. ತಮ್ಮ ಈ ಮೇಲಿನ ಕಾರಣಗಳಿಂದ ಸಂಬಂಧಗಳಲ್ಲಿ ಆಗಾಗ ಸಮಸ್ಯೆ, ಸಾಮಾಜಿಕ ಬದುಕಿನಲ್ಲಿ ಕೆಟ್ಟ ಹೆಸರು, ಕಾನೂನಾತ್ಮಕ ತೊಂದರೆಗಳು ಇವರಿಗೆ ಸರ್ವೇ ಸಾಮಾನ್ಯ.

ಇಂಟರ್‌ಮಿಟೆಂಟ್‌ ಎಕ್ಸ್‌ಪ್ಲೋಸಿವ್‌ ಡಿಸಾರ್ಡರ್‌ಗೆ ಕಾರಣವೇನು?

* ಅವರ ವಂಶವಾಹಿ

* ಅವರ ನರವ್ಯೂಹ ರಚನೆಯಲ್ಲಿ ತೊಂದರೆ

* ಯಾವುದೋ ದೊಡ್ಡ ಹಾಗೂ‌ ಕೆಟ್ಟ ಸನ್ನಿವೇಶದ ಕಾರಣದಿಂದ ಆದ ಮಾನಸಿಕ ಬದಲಾವಣೆ.

ಇದಕ್ಕೆ ಪರಿಹಾರ

ಒಳ್ಳೆಯ ಮಾನಸಿಕ ಚಿಕಿತ್ಸಕರ ಮತ್ತು ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುವುದೊಂದೇ ಇವರಿಗಿರುವ ದಾರಿ. ಮಾನಸಿಕ ತಜ್ಞರು‌ ಸಿಬಿಟಿ ಮೂಲಕ ಹಾಗು ಮನೋವೈದ್ಯರು ಕೆಲವೊಂದು ಔಷಧಿಗಳ ಮೂಲಕ ಪರಿಹಾರ ಕೊಡಬಹುದು.

 

ಡಾ. ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990