ಹೃದಯದ ಆರೋಗ್ಯದಿಂದ ತೂಕ ನಿರ್ವಹಣೆವರೆಗೆ: ರಾತ್ರಿಯ ಊಟ ಬೇಗ ಮಾಡುವುದರ ಆರೋಗ್ಯ ಪ್ರಯೋಜನಗಳಿವು
Oct 13, 2024 01:56 PM IST
ರಾತ್ರಿಯ ಊಟ ಬೇಗ ಮಾಡಿ ನೋಡಿ: ಹೃದಯದ ಆರೋಗ್ಯ, ಡಯಾಬಿಟಿಸ್, ಜೀರ್ಣಕ್ರಿಯೆ ಮುಂತಾದ ಆರೋಗ್ಯ ಸಮಸ್ಯೆಗೆ ಇದುವೇ ಪರಿಹಾರ
- ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳದ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಅದಕ್ಕೆ ಬದಲಾದ ಜೀವನಶೈಲಿಯೇ ಕಾರಣ ಎಂದು ಹೇಳಲಾಗುತ್ತಿದೆ. ಊಟ, ತಿಂಡಿ, ನಿದ್ದೆಯನ್ನು ಸಮಯಕ್ಕೆ ಸರಿಯಾಗಿ ಮಾಡದೇ ಇರುವುದೇ ಈ ಸಮಸ್ಯೆಗೆ ಬಹುಮುಖ್ಯ ಕಾರಣವಾಗಿದೆ. ರಾತ್ರಿಯ ಊಟವನ್ನು ಬೇಗ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಬಹಳಷ್ಟು ಸಮಸ್ಯೆಗಳು ದೂರವಾಗುತ್ತವೆ.
ಬೇಗ ಮಲಗು, ಬೇಗ ಏಳು ಇದು ಜನಪ್ರಿಯ ಗಾದೆಮಾತು. ಬೇಗ ನಿದ್ದೆ ಮಾಡಬೇಕೆಂದರೆ ಬೇಗ ಊಟ ಮಾಡಬೇಕು. ಅಂದಿನ ಕೆಲಸಗಳನ್ನು ಅದಷ್ಟು ಬೇಗ ಮುಗಿಸಬೇಕು ಎಂಬುದು ಇದರಲ್ಲಿ ಅಡಕವಾಗಿರುವ ಅರ್ಥವಾಗಿದೆ. ಆದರೆ ಬದಲಾದ ಜೀವನಶೈಲಿಯಿಂದ ಊಟ, ನಿದ್ದೆ ಎಲ್ಲವೂ ಬದಲಾಗಿದೆ. ರಾತ್ರಿಯ ಊಟ 10 ಗಂಟೆಯ ನಂತರ ಮಾಡಿ, ತಕ್ಷಣ ಮಲಗುವ ಅಭ್ಯಾಸ ರೂಢಿಸಿಕೊಂಡವರಿದ್ದಾರೆ. ಇದರಿಂದ ಜೀರ್ಣಕ್ರಿಯೆಗೆ ಅಡ್ಡಿಯುಂಟಾಗಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಕಾಣಬಹುದು. ಆಹಾರ ಪಚನವಾಗಲು ಸಮಯ ನೀಡದೇ ಇರುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್, ಅಸಮರ್ಪಕ ನಿದ್ದೆ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬೇಗ ಊಟ ಮಾಡಿದರೆ, ಪಚನಕ್ರಿಯೆಗೆ ಸಮಯ ನೀಡಿದಂತಾಗುತ್ತದೆ. ಅದು ಆಹಾರವನ್ನು ಸರಿಯಾಗಿ ಜೀರ್ಣಿಸಿ, ಹೆಚ್ಚುವರಿ ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ. ರಾತ್ರಿಯ ಊಟವನ್ನು ಬೇಗ ಮಾಡುವುದರಿಂದ ಸಿಗುವ ಪ್ರಯೋಜನಗಳು ಹೀಗಿವೆ.
ರಾತ್ರಿಯ ಊಟವನ್ನು ಬೇಗ ಮಾಡುವುದರಿಂದ ಸಿಗುವ ಪ್ರಯೋಜನಗಳು
ಜೀರ್ಣಕ್ರಿಯೆ ಸುಧಾರಿಸುತ್ತದೆ: ರಾತ್ರಿ ಬೇಗ ಊಟ ಮಾಡುವುದರಿಂದ ಮಲಗುವ ಮೊದಲೇ ಆಹಾರಗಳು ಪಚನವಾಗಲು ಸಾಕಷ್ಟು ಸಮಯ ದೊರೆಯುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಆಸಿಡ್ ರಿಫ್ಲೆಕ್ಸ್‌ನ ಸಾಧ್ಯತೆ ಕಡಿಮೆಯಾಗುತ್ತದೆ. ಅದೇ ಮಲಗುವ ಸ್ವಲ್ಪ ಸಮಯದ ಮೊದಲು ತಿನ್ನುವುದರಿಂದ ಈ ಸಮಸ್ಯೆಗಳು ಹೆಚ್ಚಾಗುತ್ತವೆ. ಮಲಗುವ ಮೊದಲು ಹೊಟ್ಟೆಯಲ್ಲಿನ ಆಹಾರ ಜೀರ್ಣವಾದಾಗ ಆಮ್ಲವು ಹಿಮ್ಮುಖವಾಗಿ ಚಲಿಸಿ ಅನ್ನನಾಳಕ್ಕೆ ಬರುವುದನ್ನು ತಡೆಯುತ್ತದೆ. ಇದರಿಂದ ಎದೆಯುರಿ ಸಮಸ್ಯೆ ಕಡಿಮೆಯಾಗುತ್ತದೆ.
ಗುಣಮಟ್ಟದ ನಿದ್ದೆ: ತಡರಾತ್ರಿ ಊಟ ಮಾಡುವುದರಿಂದ ನಿದ್ದೆಗೆ ಭಂಗ ತರಬಹುದು. ಹೇಗೆಂದರೆ ದೇಹದ ಪ್ರಮುಖ ಭಾಗವು ಆಹಾರವನ್ನು ಜೀರ್ಣಿಸುವ ಕ್ರಿಯೆ ನಡೆಸುತ್ತಿರುತ್ತದೆ. ಆ ಕ್ರಿಯೆಗೆ ಹೆಚ್ಚು ಒತ್ತು ನೀಡುವುದರಿಂದ ನಿದ್ದೆ ಅಥವಾ ವಿಶ್ರಾಂತಿಗೆ ಭಂಗ ತರುತ್ತದೆ. ರಾತ್ರಿಯ ಊಟವನ್ನು 7 ಗಂಟೆಗೆ ಮಾಡುವುದರಿಂದ ವಿಶ್ರಾಂತಿಯ ಸ್ಥಿತಿಯನ್ನು ತಲುಪಲು ಸಹಾಯ ಮಾಡುತ್ತದೆ. ಇದು ಅಡೆತಡೆಯಿಲ್ಲದ ಗಾಢ ನಿದ್ದೆಯನ್ನು ಉತ್ತೇಜಿಸುತ್ತದೆ. ಅಜೀರ್ಣ ಸಮಸ್ಯೆಗಳ ಸಾಧ್ಯತೆಯೂ ಕಡಿಮೆಯಾಗುತ್ತದೆ.
ತೂಕ ನಿರ್ವಹಣೆ: ಬೇಗ ಊಟ ಮಾಡುವುದು ತೂಕ ನಿರ್ವಹಣೆಗೆ ಸಹಕಾರಿಯಾಗಿದೆ. ಇದು ಹಸಿವು ಮತ್ತು ತಿನ್ನುವ ಕಡುಬಯಕೆಗಳನ್ನು ನಿಯಂತ್ರಿಸಲು ಸಹಾಯಮಾಡುತ್ತದೆ. ಬೇಗ ಊಟ ಮಾಡುವುದರಿಂದ ಕ್ಯಾಲೋರಿಗಳು ಕರಗಲು ಹೆಚ್ಚು ಸಮಯ ದೊರೆಯುತ್ತದೆ. ಆಹಾರಗಳ ಸೇವನೆಯ ನಡುವಿನ ಸಮಯ ಹೆಚ್ಚಿದ್ದರೆ ಕೊಬ್ಬು ಕರಗಿಸುವ ಪ್ರಕ್ರಿಯೆ ಹೆಚ್ಚುತ್ತದೆ. ವಿಶೇಷವಾಗಿ ನಿದ್ದೆಯ ಸಮಯದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ತಡರಾತ್ರಿ ಊಟ ಮಾಡುವುದು ತೂಕ ಹೆಚ್ಚಾಗುವಿಕೆಗೆ ಕಾರಣವಾಗಿದೆ ಎಂದು ಅಧ್ಯಯನಗಳು ತೋರಿಸಿವೆ.
ಚಯಾಪಚಯ ಕ್ರಿಯೆಯಲ್ಲಿ ಸುಧಾರಣೆ: ಚಯಾಪಚಯ ಕ್ರಿಯೆಯು ಸಿರ್ಕಾಡಿಯನ್ ರಿದಮ್ ಅನ್ನು ಅನುಸರಿಸುತ್ತದೆ. ರಾತ್ರಿಯ ಭೋಜನವನ್ನು 7 ಗಂಟೆಯ ಸಮಯದಲ್ಲಿ ಮಾಡುವುದರಿಂದ ನೈಸರ್ಗಿಕ ಚಯಾಪಚಯ ಕ್ರಿಯೆಗೆ ಹೊಂದಿಕೆಯಾಗುತ್ತದೆ. ಇದು ಕ್ಯಾಲೋರಿಗಳು ಸಮರ್ಪಕವಾಗಿ ಬರ್ನ್ ಆಗಲು ಅನುವು ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ದೇಹವು ಹೆಚ್ಚೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ಮೂಲಕ ಆರೋಗ್ಯ ಸುಧಾರಿಸುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ತಡರಾತ್ರಿ ಊಟ ಮಾಡುವುದರಿಂದ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಇದು ನಿದ್ದೆಗೆ ಅಡ್ಡಿಪಡಿಸುತ್ತದೆ. ಹಾಗಾಗಿ ಬೇಗ ಊಟ ಮಾಡುವುದು ದೇಹಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಮಯವನ್ನು ನೀಡುತ್ತದೆ. ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡುತ್ತದೆ. ರಾತ್ರಿಯಿಡೀ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸ್ಥಿರವಾಗಿರುವುದರಿಂದ ಮರುದಿನ ಉತ್ತಮ ಶಕ್ತಿ ಮತ್ತು ಮಾನಸಿಕ ಸ್ಥಿತಿ ಲಭಿಸುತ್ತದೆ.
ಹೃದಯದ ಆರೋಗ್ಯ: ತಡವಾಗಿ ಊಟ ಮಾಡುವುದರಿಂದ ಕೊಲೆಸ್ಟ್ರಾಲ್, ರಕ್ತದೊತ್ತಡ ಹಾಗೂ ಇನ್ನಿತರ ಹೃದಯದ ರಕ್ತನಾಳದ ಅಪಾಯಗಳು ಉಂಟಾಗಬಹುದು. ಬೇಗ ಊಟ ಮಾಡುವುದರಿಂದ ಜೀರ್ಣಕ್ರಿಯೆ ಬೇಗ ಆಗುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ತಡರಾತ್ರಿ ಊಟ ಮಾಡುವ ಜನರು ಹೆಚ್ಚಾಗಿ ಹೃದಯ ಸಂಬಂಧಿ ಖಾಯಿಲೆಗಳಿಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಏಕೆಂದರೆ ದೇಹವು ವಿಶ್ರಾಂತಿ ಪಡೆಯುತ್ತಿರುವಾಗ ಜೀರ್ಣಕ್ರಿಯೆ ಮಾಡಲು ಶ್ರಮಿಸುತ್ತದೆ.
ಶಕ್ತಿ ಒದಗಿಸುತ್ತದೆ: ಬೇಗ ಊಟ ಮಾಡುವುದರಿಂದ ಗ್ಲೈಕೊಜೆನ್ ಅನ್ನು ಪುನಃ ಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ವಿಶ್ರಾಂತಿ ಪಡೆಯಲು ಸಮಯವನ್ನು ನೀಡುತ್ತದೆ. ಇದು ಮರುದಿನ ಬೆಳಿಗ್ಗೆ ಎಚ್ಚರವಾದಾಗ ಆಯಾಸ ಮತ್ತು ಆಲಸ್ಯವನ್ನು ದೂರ ಮಾಡುತ್ತದೆ.
- ಹಾರ್ಮೋನ್ ಸಮತೋಲನ: ಲೆಪ್ಟಿನ್ ಮತ್ತು ಗ್ರೆಲಿನ್ ನಂತಹ ಹಾರ್ಮೋನುಗಳು ತಿನ್ನುವ ವೇಳಾಪಟ್ಟಿಯಿಂದ ಪ್ರಭಾವಿತವಾಗುತ್ತವೆ. ರಾತ್ರಿಯ ಊಟ ಬೇಗ ಮಾಡುವುದರಿಂದ ಈ ಹಾರ್ಮೋನ್‌ಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಾರ್ಮೋನ್‌ಗಳು ಸರಿಯಾಗಿದ್ದರೆ ಆಗಾಗ ಹಸಿವಿನ ಅನುಭವವನ್ನು ಕಡಿಮೆ ಮಾಡುತ್ತವೆ. ಇದು ಅತಿಯಾಗಿ ತಿನ್ನುವ ಅಥವಾ ಅನಾರೋಗ್ಯಕರ ತಿಂಡಿಗಳನ್ನು ತಿನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ತಪ್ಪನ್ನು ಎಂದಿಗೂ ಮಾಡಬೇಡಿ: ಇವು ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗಬಹುದು
ನಿಧಾನವಾಗಿ ತಿನ್ನುವುದನ್ನು ಉತ್ತೇಜಿಸುತ್ತದೆ: ಸಾಮಾನ್ಯವಾಗಿ ಊಟವನ್ನು ನಿಧಾನವಾಗಿ ಮಾಡಲು ಹೇಳಲಾಗುತ್ತದೆ. ಅದು ಹಸಿವು ಮತ್ತು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ರಾತ್ರಿಯ ಊಟವನ್ನು ಬೇಗ ಪ್ರಾರಂಭಿಸುವುದರಿಂದ ಊಟ ಮಾಡಲು ಸಾಕಷ್ಟು ಸಮಯ ದೊರೆಯುತ್ತದೆ. ಇದರಿಂದ ತೃಪ್ತಿ ದೊರೆಯುತ್ತದೆ. ಇದು ಆಹಾರ ಸೇವನೆಯ ಕಡುಬಯಕೆಗಳನ್ನು ನಿಯಂತ್ರಿಸುತ್ತದೆ.
ಆರೋಗ್ಯ ಸುಧಾರಿಸುತ್ತದೆ: ರಾತ್ರಿಯ ಊಟವನ್ನು ಬೇಗ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ಹೇಗೆಂದರೆ ಸರಿಯಾದ ಜೀವನಶೈಲಿ ಪಾಲಿಸಬಹುದಾಗಿದೆ. ಊಟ, ನಿದ್ದೆ, ವ್ಯಾಯಾಮಗಳಿಗೆ ಸಮಯ ದೊರೆಯುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವರ್ಧಿಸುತ್ತದೆ. ಸುಧಾರಿತ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ದೀರ್ಘಾಯುಷ್ಯ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.