logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಾಗುವ ವಿಚಾರದಲ್ಲಿ ತೊಂದರೆ ಎದುರಿಸ್ತಾ ಇದೀರಾ? ಅನಿಯಮಿತ ಮುಟ್ಟು ಫಲವಂತಿಕೆ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ತಿಳಿಯಿರಿ

ಮಕ್ಕಳಾಗುವ ವಿಚಾರದಲ್ಲಿ ತೊಂದರೆ ಎದುರಿಸ್ತಾ ಇದೀರಾ? ಅನಿಯಮಿತ ಮುಟ್ಟು ಫಲವಂತಿಕೆ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ತಿಳಿಯಿರಿ

Reshma HT Kannada

Jul 18, 2024 11:37 AM IST

google News

ಮಕ್ಕಳಾಗುವ ವಿಚಾರದಲ್ಲಿ ತೊಂದರೆ ಎದುರಿಸ್ತಾ ಇದೀರಾ? ಅನಿಯಮಿತ ಮುಟ್ಟು ಫಲವಂತಿಕೆ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ತಿಳಿಯಿರಿ

    • ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಮುಟ್ಟಿನ ಸಮಸ್ಯೆಯೂ ಒಂದು. ಇದರಿಂದ ಅವರು ಸಾಕಷ್ಟು ಇನ್ನಿತರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮದುವೆಯಾದ ಬಳಿಕ ಮಕ್ಕಳಾಗುವುದಕ್ಕೂ ಇದರಿಂದ ತೊಂದರೆ ಉಂಟಾಗುತ್ತಿದೆ. ಅನಿಯಮಿತ ಮುಟ್ಟಿನ ಬಗ್ಗೆ ಹೆಣ್ಣುಮಕ್ಕಳು, ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ.
ಮಕ್ಕಳಾಗುವ ವಿಚಾರದಲ್ಲಿ ತೊಂದರೆ ಎದುರಿಸ್ತಾ ಇದೀರಾ? ಅನಿಯಮಿತ ಮುಟ್ಟು ಫಲವಂತಿಕೆ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ತಿಳಿಯಿರಿ
ಮಕ್ಕಳಾಗುವ ವಿಚಾರದಲ್ಲಿ ತೊಂದರೆ ಎದುರಿಸ್ತಾ ಇದೀರಾ? ಅನಿಯಮಿತ ಮುಟ್ಟು ಫಲವಂತಿಕೆ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ತಿಳಿಯಿರಿ

ಮುಟ್ಟು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಬರುವ ಸಹಜ ಪ್ರಕ್ರಿಯೆ. ಆದರೆ ಮುಟ್ಟಿನಲ್ಲಿ ಎದುರಾಗುವ ಸಮಸ್ಯೆಗಳು ಜೀವನದಲ್ಲಿ ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಋತುಚಕ್ರ 21 ರಿಂದ 35 ದಿನಗಳ ಒಳಗೆ ಬರುತ್ತದೆ. ಅದಕ್ಕೆ ವ್ಯತಿರಿಕ್ತವಾಗಿದ್ದರೆ ಅದನ್ನು ಅನಿಯಮಿತ ಮುಟ್ಟು ಎಂದು ಹೇಳಬಹುದು. ಈ ಅನಿಯಮಿತ ಮುಟ್ಟಿಗೆ ಅಂಡೋತ್ಪತ್ತಿಯ ಕೊರತೆ ಅಥವಾ ಅಂಡೋತ್ಪತ್ತಿ ಆಗದೇ ಇರುವುದು ಕಾರಣವಾಗುತ್ತದೆ. ಬಹುತೇಕ ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆ ಹೊಂದಿರುತ್ತಾರೆ. ಫರ್ಟಿಲಿಟಿ ಅಥವಾ ಫಲವಂತಿಕೆ ವಿಚಾರದಲ್ಲೂ ಅನಿಯಮಿತ ಮುಟ್ಟಿನಿಂದ ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿನ ಯುವಜನರು ಮಕ್ಕಳಾಗುವ ವಿಚಾರದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಗರ್ಭಿಣಿಯಾಗಲು ಬಯಸುವ ಮಹಿಳೆಯರು ಫಲವಂತಿಕೆ ಮೇಲೆ ಅನಿಯಮಿತ ಋತುಚಕ್ರದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಅನಿಯಮಿತ ಮುಟ್ಟನ್ನು ಅರ್ಥ ಮಾಡಿಕೊಳ್ಳಿ

ಎಲ್ಲಕ್ಕಿಂತ ಮೊದಲಿಗೆ ಅನಿಯಮಿತ ಮುಟ್ಟು ಎಂದು ಯಾವಾಗ ಪರಿಗಣಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಋತುಚಕ್ರದ ಅವಧಿಯು ತಿಂಗಳಿಂದ ತಿಂಗಳಿಗೆ ಗಣನೀಯವಾಗಿ ಏರಿಳಿತಗೊಂಡರೆ, ಮುಟ್ಟು ಆಗಾಗ್ಗೆ ಮುಂಚಿತವಾಗಿ ಆಗುತ್ತಿದ್ದರೆ ಅಥವಾ ತಡವಾಗಿ ಆಗುತ್ತಿದ್ದರೆ ಅಥವಾ ಮುಟ್ಟು ಸಂಪೂರ್ಣವಾಗಿ ಆಗುತ್ತಿಲ್ಲ ಎಂದಾದಲ್ಲಿ ಅದನ್ನೆಲ್ಲಾ ಅನಿಯಮಿತ ಮುಟ್ಟು ಎಂದು ಪರಿಗಣಿಸಬಹುದು. ಯಾವಾಗಲೋ ಒಮ್ಮೆ ಮುಟ್ಟು ಅನಿಯಮಿತವಾಗಿದ್ದರೆ ಅದು ಸಹಜ ಎಂದರ್ಥ ಮತ್ತು ಸಾಮಾನ್ಯವಾಗಿ ಆಗ ತೊಂದರೆ ಏನೂ ಇರುವುದಿಲ್ಲ. ಒಂದು ವೇಳೆ ದೀರ್ಘಕಾಲದ ಅನಿಯಮಿತ ಮುಟ್ಟು ಇದ್ದರೆ ಅದು ಫಲವಂತಿಕೆಯ ಮೇಲೆ ಪರಿಣಾಮ ಬೀರಬಹುದಾದ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ.

ಅನಿಯಮಿತ ಮುಟ್ಟಿಗೆ ಸಾಮಾನ್ಯ ಕಾರಣಗಳು

ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌: ಪಿಸಿಓಎಸ್ ಅನಿಯಮಿತ ಮುಟ್ಟಿಗೆ ಇರುವ ಪ್ರಚಲಿತವಾದ ಕಾರಣಗಳಲ್ಲಿ ಒಂದಾಗಿದೆ. ಪಿಸಿಓಎಸ್ ಹಾರ್ಮೋನ್‌ ಏರುಪೇರಿನಿಂದ ಉಂಟಾಗುವ ಸ್ಥಿತಿಯಾಗಿದ್ದು, ಅಂಡಾಶಯದಲ್ಲಿ ಹಲವು ಸಣ್ಣ ಚೀಲಗಳು ಹುಟ್ಟಿಕೊಂಡಿರುತ್ತವೆ. ಅದರಿಂದಾಗಿ ಅಂಡಾಣುಗಳು ಉತ್ಪತ್ತಿಯಾಗುವ (ಅಂಡೋತ್ಪತ್ತಿ) ಕ್ರಿಯೆ ಮತ್ತು ಬಿಡುಗಡೆಯಾಗುವ ಕ್ರಿಯೆಗೆ ಅಡ್ಡಿಯಾಗುತ್ತಿರುತ್ತದೆ. ಇದು ಅನಿಯಮಿತ ಅಥವಾ ವಿಸ್ತೃತ ಋತುಚಕ್ರಕ್ಕೆ ಕಾರಣವಾಗಬಹುದಾಗಿದೆ ಮತ್ತು ಪುರುಷ ಹಾರ್ಮೋನುಗಳ (ಆಂಡ್ರೋಜೆನ್) ಮಟ್ಟವನ್ನು ಹೆಚ್ಚಿಸಬಹುದಾಗಿದೆ. ಈ ಹಾರ್ಮೋನ್ ಅಸಮತೋಲನದಿಂದಾಗಿ ಅಂಡೋತ್ಪತ್ತಿ ಕ್ರಿಯೆಗೆ ಅಡ್ಡಿಯಾಗುತ್ತದೆ. ಅದರಿಂದ ಗರ್ಭಧಾರಣೆ ಹೆಚ್ಚು ಕಷ್ಟಕರವಾಗುತ್ತದೆ.

ಥೈರಾಯ್ಡ್‌: ಅನಿಯಮಿತ ಮುಟ್ಟಿಗೆ ಮತ್ತೊಂದು ಕಾರಣವೆಂದರೆ ಥೈರಾಯ್ಡ್ ಅಪಸಾಮಾನ್ಯ ಕ್ರಿಯೆ ಅಂದ್ರೆ ಥೈರಾಯ್ಡ್ ಡಿಸ್‌ಫಂಕ್ಷನ್. ಹೈಪರ್ ಥೈರಾಯ್ಡಿಸಮ್ (ಥೈರಾಯ್ಡ್ ಅತಿಕ್ರಿಯಾಶೀಲತೆ) ಮತ್ತು ಹೈಪೋಥೈರಾಯ್ಡಿಸಮ್ (ಕಡಿಮೆ ಕ್ರಿಯಾಶೀಲವಾಗಿರುವ ಥೈರಾಯ್ಡ್) ಈ ಎರಡೂ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು. ಥೈರಾಯ್ಡ್ ಗ್ರಂಥಿಯು ಚಯಾಪಚಯ ಮತ್ತು ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಅಸಮತೋಲನದಿಂದ ಅಂಡೋತ್ಪತ್ತಿ ಕಾರ್ಯ ಬದಲಾಗಬಹುದು, ಅನಿಯಮಿತ ಮುಟ್ಟು ಉಂಟಾಗಬಹುದು ಮತ್ತು ಗರ್ಭಪಾತದ ಪ್ರಮಾಣ ಹೆಚ್ಚಬಹುದು.

ಹೈಪರ್ ಪ್ರೊಲ್ಯಾಕ್ಟಿನೇಮಿಯಾ: ದೇಹವು ಹೆಚ್ಚು ಪ್ರೊಲ್ಯಾಕ್ಟಿನ್ ಹಾರ್ಮೋನ್ ಮಟ್ಟವನ್ನು ಉತ್ಪಾದಿಸುವ ಸ್ಥಿತಿಯನ್ನು ಹೈಪರ್ ಪ್ರೊಲ್ಯಾಕ್ಟಿನೇಮಿಯಾ ಎಂದು ಕರೆಯಲಾಗುತ್ತದೆ. ಅದರಿಂದಲೂ ಅಂಡೋತ್ಪತ್ತಿಗೆ ಅಡ್ಡಿಯಾಗುತ್ತದೆ.

ಅತಿಯಾದ ಒತ್ತಡ: ಒತ್ತಡವು ಅನಿಯಮಿತ ಮುಟ್ಟಿಗೆ ಮತ್ತೊಂದು ಕಾರಣ ಆಗಬಹುದು. ದೀರ್ಘಕಾಲದ ಒತ್ತಡದಿಂದ ಋತುಚಕ್ರಕ್ಕೆ ಸಂಬಂಧಿಸಿದ ಹಾರ್ಮೋನ್ ಸಂಕೇತಗಳನ್ನು ನಿಯಂತ್ರಿಸುವ ಮೆದುಳಿನ ಪ್ರದೇಶವಾದ ಹೈಪೋಥಲಾಮಸ್ ಮೇಲೆ ಪರಿಣಾಮ ಉಂಟಾಗುತ್ತದೆ. ದೇಹವು ಒತ್ತಡದಲ್ಲಿದ್ದಾಗ ಅದು ಹೆಚ್ಚು ಕಾರ್ಟಿಸೋಲ್ ಅನ್ನು ಉತ್ಪಾದಿಸುತ್ತದೆ, ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ ಮತ್ತು ಋತುಚಕ್ರಕ್ಕೆ ಅಡ್ಡಿ ಉಂಟು ಮಾಡುತ್ತದೆ.

ಕೊಬ್ಬಿನಾಂಶದ ಕೊರತೆ: ಋತುಚಕ್ರದ ಅಸಹಜತೆಗಳು ಮಹಿಳೆಯ ದೇಹದ ತೂಕದ ಏರಿಳಿತಗಳಿಂದ ಕೂಡ ಉಂಟಾಗಬಹುದು. ವಿಪರೀತ ತೂಕ ಹೆಚ್ಚಳ ಅಥವಾ ವಿಪರೀತ ತೂಕ ನಷ್ಟ ಮತ್ತು ಅತಿಯಾದ ದೈಹಿಕ ಚಟುವಟಿಕೆಯಿಂದ ಕೂಡ ಅಸಹಜ ಮುಟ್ಟು ಎದುರಿಸುವ ಸಾಧ್ಯತೆ ಇರುತ್ತದೆ. ದೇಹದ ಕೊಬ್ಬಿನ ಮಟ್ಟವು ಋತುಚಕ್ರವನ್ನು ನಿಯಂತ್ರಿಸಲು ಅವಶ್ಯವಾಗಿ ಬೇಕಾಗಿರುವ ಈಸ್ಟ್ರೊಜೆನ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ದೇಹದ ಕೊಬ್ಬು ಕಡಿಮೆ ಇದ್ದರೆ ಈಸ್ಟ್ರೊಜೆನ್ ಮಟ್ಟವೂ ಕಡಿಮೆ ಆಗಬಹುದು. ದೇಹದ ಕೊಬ್ಬಿನಾಂಶ ಹೆಚ್ಚಿದ್ದರೆ ಅದರಿಂದ ಈಸ್ಟ್ರೊಜೆನ್ ಜಾಸ್ತಿ ಇರುತ್ತದೆ. ಇವೆರಡೂ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು ಮತ್ತು ಮಹಿಳೆಯ ಫಲವತ್ತತೆಗೆ ಅಡ್ಡಿಯಾಗಬಹುದಾಗಿದೆ.

ಎಂಡೊಮೆಟ್ರಿಯೊಸಿಸ್: ಅನಿಯಮಿತ ಮುಟ್ಟು ಅನ್ನುವುದು ಇತರ ಆರೋಗ್ಯ ಸಮಸ್ಯೆಗಳ ಸಂಕೇತವೂ ಆಗಿರಬಹುದು. ಉದಾಹರಣೆಗೆ ಪ್ರೈಮರಿ ಒವೇರಿಯನ್ ಇನ್ ಸಫಿಷಿಯೆನ್ಸ್ ಅಥವಾ ಎಂಡೊಮೆಟ್ರಿಯೊಸಿಸ್ ಎಂಬೆರಡು ಸ್ಥಿತಿಗಳು ಫರ್ಟಿಲಿಟಿ ಅಥವಾ ಫಲವತ್ತತೆ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಎಂಡೊಮೆಟ್ರಿಯೊಸಿಸ್ ಅನ್ನುವುದು ಗರ್ಭಾಶಯದ ಹೊರಗೆ ಗರ್ಭಾಶಯದ ಅಂಗಾಂಶದ ಬೆಳವಣಿಗೆ ಉಂಟಾಗುವ ಸ್ಥಿತಿ ಆಗಿದ್ದು, ಅದು ಅಂಡೋತ್ಪತ್ತಿ, ಫಲೀಕರಣ ಮತ್ತು ಇಂಪ್ಲಾಂಟೇಷನ್ ಕ್ರಿಯೆಗೆ ಅಡ್ಡಿ ಪಡಿಸುತ್ತದೆ. ಪ್ರೈಮರಿ ಒವೇರಿಯನ್ ಇನ್ ಸಫಿಷಿಯೆನ್ಸ್ ಅಥವಾ ಪ್ರಾಥಮಿಕ ಅಂಡಾಶಯದ ಕೊರತೆಯು ಒಂದು ಸಾಮಾನ್ಯ ಸಮಸ್ಯೆ ಆಗಿದ್ದು, ಈ ಸಮಸ್ಯೆ ಇರುವವರು 40 ವರ್ಷಕ್ಕಿಂತ ಮೊದಲೇ ಅಂಡಾಶಯದ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಅನಿಯಮಿತ ಅಥವಾ ಸಾಂದರ್ಭಿಕ ಋತುಚಕ್ರ ಉಂಟಾಗಬಹುದಾಗಿದೆ. ಇನ್ನು ಅನಿಯಮಿತ ಮುಟ್ಟಿಗೆ ಇರುವ ಇತರ ಕಾರಣಗಳೆಂದರೆ ಈಟಿಂಗ್ ಡಿಸಾರ್ಡರ್‌ಗಳು ಮತ್ತು ಗಡ್ಡೆಗಳು.

ಫಲವತ್ತತೆ ಮೇಲೆ ಉಂಟಾಗುವ ಪರಿಣಾಮಗಳು

ಅಂತಿಮವಾಗಿ ಹೇಳುವುದಾದರೆ ಅನಿಯಮಿತ ಮುಟ್ಟು ಫಲವತ್ತತೆಯನ್ನು ದುರ್ಬಲಗೊಳಿಸುವ ಇನ್ನಿತರ ಆರೋಗ್ಯ ಸಮಸ್ಯೆಗಳನ್ನೂ ಸೂಚಿಸುತ್ತದೆ. ಪಿಸಿಓಎಸ್, ಥೈರಾಯ್ಡ್ ಸಮಸ್ಯೆಗಳು, ಒತ್ತಡ ಮತ್ತು ತೂಕ ಬದಲಾವಣೆಯಂತಹ ಪರಿಸ್ಥಿತಿಗಳು ಅನಿಯಮಿತ ಮುಟ್ಟಿಗೆ ಪ್ರಮುಖ ಕಾರಣಗಳಾಗಿವೆ. ಗಮನಿಸಬೇಕಾದ ವಿಚಾರವೆಂದರೆ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಪರಿಹರಿಸಲು ಋತುಚಕ್ರದ ಅಸಹಜತೆಗಳ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳುವುದು ಅವಶ್ಯವಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಹೊಂದಿರುವ ಮಹಿಳೆಯರು ಅದಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ಗೊತ್ತು ಮಾಡಿಕೊಳ್ಳಲು ಮತ್ತು ಅದರ ಪರಿಹಾರಕ್ಕೆ ಸಂಬಂಧಿತ ಚಿಕಿತ್ಸೆಯನ್ನು ಆರಿಸಲು ವೈದ್ಯಕೀಯ ಸಹಾಯವನ್ನು ಪಡೆಯಬೇಕು. ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಹೊಂದಿರುವ ಅನೇಕ ಮಹಿಳೆಯರು ಸೂಕ್ತವಾದ ನೆರವು ಮತ್ತು ಚಿಕಿತ್ಸೆ ಪಡೆಯುವುದರ ಮೂಲಕ ತಾಯಿಯಾಗುವ ಅವರ ಬಯಕೆ ತೀರಿಸಿಕೊಳ್ಳಬಹುದು.

ಫರ್ಟಿಲಿಟಿ ಔಷಧಿಗಳು, ಜೀವನಶೈಲಿಯ ಬದಲಾವಣೆ (ಉದಾಹರಣೆಗೆ ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳುವುದು) ಮತ್ತು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ಎಆರ್‌ಟಿ) ಮೊರೆ ಹೋಗುವ ಮೂಲಕ ಗರ್ಭಧಾರಣೆ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬಹುದು.

(ಲೇಖನ: ಡಾ. ರಜಿತಾ ಯರ್ಲಗಡ್ಡ, ಫರ್ಟಿಲಿಟಿ ಕನ್ಸಲ್ಟೆಂಟ್, ನೋವಾ ಐವಿಎಫ್ ಫರ್ಟಿಲಿಟಿ, ಆರ್‌ಆರ್ ನಗರ, ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ