ಮಧ್ಯರಾತ್ರಿ 12 ಆದ್ರೂ ಸೋಷಿಯಲ್ ಮಿಡಿಯಾ ಸ್ಕ್ರೋಲ್ ಮಾಡೋರ ಲಿಸ್ಟ್ ಅಲ್ಲಿ ನೀವು ಇದೀರಾ, ಹಾಗಿದ್ರೆ ನಿಮಗಿದು ತಿಳಿದಿರಲೇಬೇಕು
Jun 06, 2024 09:26 PM IST
ಮಧ್ಯರಾತ್ರಿ 12 ಆದ್ರೂ ಸೋಷಿಯಲ್ ಮಿಡಿಯಾ ಸ್ಕ್ರೋಲ್ ಮಾಡೋರ ಲಿಸ್ಟ್ ಅಲ್ಲಿ ನೀವು ಇದೀರಾ, ಹಾಗಿದ್ರೆ ನಿಮಗಿದು ತಿಳಿದಿರಲೇಬೇಕು
- ಸಾಮಾಜಿಕ ಜಾಲತಾಣ ನಮ್ಮ ಬದುಕಿನ ಭಾಗವಾಗಿರುವುದು ಸುಳ್ಳಲ್ಲ. ನಮ್ಮ ದಿನದ ಬಿಡುವಿನ ಸಮಯದಲ್ಲೆಲ್ಲಾ ನಾವು ಸೋಷಿಯಲ್ ಮಿಡಿಯಾ ಸ್ಕ್ರೋಲ್ ಮಾಡುತ್ತೇವೆ. ಹಲವರಿಗೆ ರಾತ್ರಿ 12 ಗಂಟೆ ಸೋಷಿಯಲ್ ಮಿಡಿಯಾ ಬಳಸುವ ಅಭ್ಯಾಸವಿದೆ. ಆ ಲಿಸ್ಟ್‌ನಲ್ಲಿ ನೀವು ಇದ್ರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು. (ಬರಹ: ಪ್ರಿಯಾಂಕ ಗೌಡ)
ಇಂದು ಬಹುತೇಕ ಮಂದಿ ಸಾಮಾಜಿಕ ಮಾಧ್ಯಮಕ್ಕೆ ಜೋತು ಬಿದ್ದಿದ್ದಾರೆ. ಬೆಳಗ್ಗೆ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣವನ್ನು ನೋಡುತ್ತಾ ಎದ್ದರೆ, ರಾತ್ರಿ ಮಲಗುವಾಗಲೂ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಮಲಗುತ್ತಾರೆ. ಆದರೆ, ಇದರಿಂದ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ತಡರಾತ್ರಿವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಜೋತು ಬೀಳುತ್ತಾರೆ. ಇದರಿಂದ ಆರೋಗ್ಯ ಮತ್ತು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯು ಆತಂಕ, ಖಿನ್ನತೆ ಮತ್ತು ಒತ್ತಡ ಉಂಟಾಗಬಹುದು.
ಸಾಮಾಜಿಕ ಮಾಧ್ಯಮವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ನಿಮ್ಮ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮ ಹೇಗೆಲ್ಲಾ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ..
1. ನೀಲಿ ಬೆಳಕಿನ ಹೊರಸೂಸುವಿಕೆ
ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ನೀಲಿ ಬೆಳಕನ್ನು ಹೊರಸೂಸುತ್ತವೆ. ಇದು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಇದು ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಬೇಗ ನಿದ್ದೆ ಬರುವುದಿಲ್ಲ. ಒಟ್ಟಾರೆ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ.
2. ಭಾವನಾತ್ಮಕ ಪ್ರಚೋದನೆ
ಸಾಮಾಜಿಕ ಮಾಧ್ಯಮವು ಬಲವಾದ ಭಾವನಾತ್ಮಕ ಪ್ರತಿಕ್ರಿಯೆಗಳನ್ನು (ಉತ್ಸಾಹ, ಕೋಪ, ಆತಂಕ ಅಥವಾ ದುಃಖ) ಉಂಟುಮಾಡಬಹುದು. ಭಾವನೆಗಳ ಒತ್ತಡವನ್ನು ಹೆಚ್ಚಿಸಬಹುದು. ವಿಶ್ರಾಂತಿ ಪಡೆಯಲು ಕಷ್ಟವಾಗಬಹುದು. ಇದು ನಿದ್ದೆಯ ತೊಂದರೆಗಳಿಗೆ ಕಾರಣವಾಗುತ್ತದೆ.
3. ಸಾಮಾಜಿಕ ಸಂವಹನ
ಸಾಮಾಜಿಕ ಮಾಧ್ಯಮದಲ್ಲಿ ಸಂಭಾಷಣೆಗಳು ಅಥವಾ ಚರ್ಚೆಗಳಲ್ಲಿ ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬಹುದು. ಸಂವಾದಾತ್ಮಕ ಚಟುವಟಿಕೆಗಳು ನಿದ್ದೆಯ ಪ್ರಾರಂಭವನ್ನು ವಿಳಂಬಗೊಳಿಸಬಹುದು. ಇದು ಒಟ್ಟಾರೆ ನಿದ್ದೆಯ ಗುಣಮಟ್ಟವನ್ನು ಕಡಿಮೆ ಮಾಡಬಹುದು. ಸಾಮಾಜಿಕ ಮಾಧ್ಯಮ ಬಳಕೆಗಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡಿ. ಮಲಗುವ ಸಮಯದ ಹತ್ತಿರ ಬರುತ್ತಿದ್ದಂತೆ ಚರ್ಚೆಯಲ್ಲಿ ತೊಡಗುವುದನ್ನು ತಪ್ಪಿಸಿ, ಸಾಮಾಜಿಕ ಜಾಲತಾಣ ಬಂದ್ ಮಾಡಿ.
4. ಆತಂಕ
ಸಾಮಾಜಿಕ ಮಾಧ್ಯಮವನ್ನು ನಿರಂತರವಾಗಿ ಪರಿಶೀಲಿಸುವುದು, ನವೀಕರಣ ಮಾಡುವುದರಿಂದ ಏನಾದರೂ ಘಟನೆಗಳು ಅಥವಾ ಮಾಹಿತಿಯನ್ನು ಕಳೆದುಕೊಂಡಿರುವ ಬಗ್ಗೆ ಆತಂಕವನ್ನು ಉಂಟುಮಾಡಬಹುದು. ಇದರಿಂದ ವಿಶ್ರಾಂತಿ ಪಡೆಯಲು ಮತ್ತು ನಿದ್ರಿಸಲು ಕಷ್ಟವಾಗಬಹುದು. ಜಾಲತಾಣ ನವೀಕರಿಸಿದ್ದರೆ ಅದನ್ನು ಪರಿಶೀಲಿಸಲು ಆಗಾಗ್ಗೆ ಎಚ್ಚರಗೊಳ್ಳುವುದು ನಿದ್ದೆಗೆ ಅಡ್ಡಿಪಡಿಸಬಹುದು.
5. ನಕಾರಾತ್ಮಕ ವಿಷಯಕ್ಕೆ ಒಡ್ಡಿಕೊಳ್ಳುವುದು
ಸಾಮಾಜಿಕ ಮಾಧ್ಯಮದಲ್ಲಿ ಏನಾದರೂ ಪೋಸ್ಟ್ ಹಾಕಿದ್ದರೆ, ಅದಕ್ಕೆ ನಕಾರಾತ್ಮಕ ಕಾಮೆಂಟ್‌ಗಳು ಬಂದಿದ್ದರೆ ಮನಸ್ಸಿಗೆ ಬೇಸರವುಂಟಾಗಬಹುದು. ಇದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ನಕಾರಾತ್ಮಕ ಭಾವನೆಗಳು ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಇದು ಕೂಡ ನಿದ್ದೆಗೆ ತೊಂದರೆಯಾಗುತ್ತದೆ. ಹೀಗಾಗಿ ಮಲಗುವ ಮುನ್ನ ವಿಶ್ರಾಂತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
6. ದೈಹಿಕ ಅಸ್ವಸ್ಥತೆ
ಸಾಮಾಜಿಕ ಜಾಲತಾಣ ನೋಡುತ್ತಾ ಮೊಬೈಲ್ ಅನ್ನು ದೀರ್ಘಾವಧಿ ಬಳಸುವುದು ಕಣ್ಣಿನ ಆಯಾಸ, ತಲೆನೋವು ಅಥವಾ ಕುತ್ತಿಗೆ ನೋವಿನಂತಹ ದೈಹಿಕ ಅಸ್ವಸ್ಥತೆಗೆ ಕಾರಣವಾಗಬಹುದು. ದೈಹಿಕ ಅಸ್ವಸ್ಥತೆಯು ನಿದ್ರಿಸಲು ಕಷ್ಟವಾಗಬಹುದು.
7. ಅನಿಯಮಿತ ನಿದ್ರೆ ವೇಳಾಪಟ್ಟಿ
ತಡರಾತ್ರಿಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆಯು ಉದ್ದೇಶಕ್ಕಿಂತ ತಡವಾಗಿ ಮಲಗಲು ಕಾರಣವಾಗಬಹುದು. ಇದರಿಂದ ನಿಮ್ಮ ನೈಸರ್ಗಿಕ ನಿದ್ರೆ ಚಕ್ರವನ್ನು ಅಡ್ಡಿಪಡಿಸುತ್ತದೆ. ಅನಿಯಮಿತ ನಿದ್ರೆಯ ವೇಳಾಪಟ್ಟಿಗಳು ಕಳಪೆ ನಿದ್ರೆಯ ಗುಣಮಟ್ಟಕ್ಕೆ ಕಾರಣವಾಗಬಹುದು.
8. ನಿದ್ರಾಹೀನತೆ
ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವ ಸಮಯವನ್ನು ನಿದ್ರೆಗಾಗಿ ಲಭ್ಯವಿರುವ ಸಮಯಕ್ಕೆ ಕಡಿತಗೊಳಿಸಬಹುದು. ನಿದ್ದೆಯ ಅವಧಿ ಕಡಿಮೆಯಾದರೆ ನಿದ್ರಾಹೀನತೆಗೆ ಕಾರಣವಾಗಬಹುದು. ಮೊಬೈಲ್ ಇಂಟರ್ನೆಟ್ ಆನ್‌ನಲ್ಲಿದ್ದರೆ ಸಾಮಾಜಿಕ ಮಾಧ್ಯಮದಿಂದ ಅಧಿಸೂಚನೆಗಳು ಮತ್ತು ಎಚ್ಚರಿಕೆಗಳು ನಿಮ್ಮನ್ನು ಎಚ್ಚರಗೊಳಿಸಬಹುದು ಅಥವಾ ನಿಮ್ಮ ನಿದ್ದೆಗೆ ಭಂಗ ತರಬಹುದು. ಇದು ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
ಯುವಜನತೆ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ದಿನಗಳೆಯುತ್ತಿರುವುದು ಕಳವಳಕಾರಿಯಾಗಿದೆ. ಇಂದಿನ ಜೀವನಶೈಲಿ, ಆಹಾರ ಪದ್ಧತಿಯಿಂದ ಅನೇಕ ಕಾಯಿಲೆಗಳು ವಕ್ಕರಿಸಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲೇ ಜೋತು ಬೀಳುವುದರಿಂದ ನಿದ್ದೆಗೆ ತೊಂದರೆಯುಂಟು ಮಾಡುತ್ತದೆ. ಈ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮ ನಿದ್ದೆಯ ಗುಣಮಟ್ಟ ಮತ್ತು ಒಟ್ಟಾರೆ ಆರೋಗ್ಯವನ್ನು ನೀವು ಸುಧಾರಿಸಬಹುದು.