Relationship: ಸಂಗಾತಿಗಳ ನಡುವಿನ ಸುಮಧುರ ಬಾಂಧವ್ಯಕ್ಕೆ ಅಡ್ಡಿಯಾಗುತ್ತಿದೆ ಸಾಮಾಜಿಕ ಜಾಲತಾಣಗಳು; ಬಳಕೆ ಮಿತಿಯನ್ನು ಮೀರದಿರಿ
ಹೋಲಿಕೆ, ಹೊಟ್ಟೆಕಿಚ್ಚು, ಸಂವಹನದ ಕೊರತೆ… ಹೀಗೆ ಸಾಮಾಜಿಕ ಜಾಲತಾಣಗಳು ಜೋಡಿಗಳಿಬ್ಬರ ರೊಮ್ಯಾಂಟಿಕ್ ಸಂಬಂಧಕ್ಕೆ ಹಲವು ರೀತಿಯಲ್ಲಿ ಅಡ್ಡಿ ಪಡಿಸುತ್ತಿದೆ. ಅಲ್ಲದೆ ಇದು ಸಂಬಂಧದ ಕೊಂಡಿ ಕಳಚಲು ಕಾರಣವಾಗುತ್ತಿದೆ. ಹಾಗಾದರೆ ಸಂಬಂಧದ ಮೇಲೆ ಸಾಮಾಜಿಕ ಜಾಲತಾಣಗಳು ಯಾವೆಲ್ಲಾ ರೀತಿಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಬೀರುತ್ತಿದೆ ಗೊತ್ತಾ?
ಮಧುರ ಬಾಂಧವ್ಯದ ಸುಮಧುರ ಸಂಬಂಧವು ಪ್ರತಿಯೊಬ್ಬರ ಜೀವನದ ಅತ್ಯಂತ ಸುಂದರವಾದ ಅಂಶ. ಪ್ರೇಮಿಗಳ ನಡುವೆ ನಂಬಿಕೆಯೇ ಸೇತುವೆ. ಒಮ್ಮೆ ಆ ಸೇತುವೆಯಲ್ಲಿ ಬಿರುಕು ಮೂಡಿದರೆ ಅದನ್ನು ಸರಿಪಡಿಸುವುದು ಕಷ್ಟವಾಗಬಹುದು. ಸಂಬಂಧದಲ್ಲಿನ ಏರುಪೇರು ವ್ಯಕ್ತಿಗಳ ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಹುದು.
ಇಂದು ಸಾಮಾಜಿಕ ಮಾಧ್ಯಮ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವೊಂದು ಸಂಬಂಧಗಳು ಹುಟ್ಟಲು ಇವೂ ಕಾರಣವಾಗುತ್ತವೆ. ಅಲ್ಲದೆ ನಾವು ನಮ್ಮ ವೈಯಕ್ತಿಕ ಬದುಕಿನ ಹಲವು ಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಂಚಿಕೊಳ್ಳುವ ಅಂಶಗಳು ನಮ್ಮ ಸಂಬಂಧವನ್ನು ಕೆಡಿಸಲು ಕಾರಣವಾಗಬಹುದು ಎಂಬ ಅಂಶವನ್ನು ತಳ್ಳಿ ಹಾಕುವಂತಿಲ್ಲ. ಪ್ರಪೋಸಲ್‌ಗಳು, ಆನಿವರ್ಸರಿ ಶುಭಾಶಯಗಳು, ಕೆಲವೊಮ್ಮೆ ಬ್ರೇಕಪ್ ವಿಷಯಗಳು ತಿಳಿಯವುದು ಸಾಮಾಜಿಕ ಜಾಲತಾಣಗಳ ಮೂಲಕವೇ ಎನ್ನುವುದನ್ನು ತೆಗೆದು ಹಾಕುವಂತಿಲ್ಲ.
ಇತ್ತೀಚೆಗೆ ಸಾಮಾಜಿಕ ಜಾಲತಾಣದೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಸಂಗಾತಿಗಳ ನಡುವೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಉದಾಹರಣೆಗೆ ಇತರ ದಂಪತಿಗಳು ನಮ್ಮ ಜೀವನವನ್ನು ಹೇಗೆ ಪ್ರೀತಿಸುತ್ತಾರೆ, ತಮ್ಮ ಸಂಗಾತಿಯ ಬಗ್ಗೆ ಸಾರ್ವಜನಿಕವಾಗಿ ಯಾವ ರೀತಿ ಪ್ರೀತಿ, ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂಬೆಲ್ಲಾ ಹೋಲಿಕೆಗಳು ಇದರಿಂದ ಆರಂಭವಾಗುತ್ತದೆ. ಆದರೆ ಈ ಹೋಲಿಕೆಗಳು ಕೆಲವೊಂದು ಸಂಬಂಧ ಕೆಡಲು ಕಾರಣವಾಗಬಹುದು. ಇದರೊಂದಿಗೆ ಅಪನಂಬಿಕೆ, ಅಸಮಾಧಾನ, ಅಸುರಕ್ಷತೆಯೂ ಸಂಬಂಧ ಕೆಡಲು ಕಾರಣವಾಗುತ್ತಿದೆ.
ಹಾಗಾದರೆ ರೊಮ್ಯಾಂಟಿಕ್ ಸಂಬಂಧದ ಮೇಲೆ ಸಾಮಾಜಿಕ ಜಾಲತಾಣಗಳ ಯಾವ ರೀತಿ ಧನಾತ್ಮಕ ಪರಿಣಾಮ ಬೀರುತ್ತಿವೆ ನೋಡಿ
ಆಂಟಾಲಜಿಸ್ಟ್, ಮಾನಸಿಕ ಆರೋಗ್ಯ ಮತ್ತು ರಿಲೇಷನ್‌ಶಿಪ್ ಎಕ್ಸ್‌ಫರ್ಟ್ ಆಶ್ಮೀನ್ ಮುಂಜಾಲ್ ಹಿಂದೂಸ್ತಾನ್ ಟೈಮ್ಸ್ ಲೆಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಸಾಮಾಜಿಕ ಜಾಲತಾಣಗಳು ಸಂಬಂಧದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬ ಅಂಶವನ್ನು ತಿಳಿಸಿದ್ದಾರೆ.
ಹೊಟ್ಟೆಕಿಚ್ಚು ಮತ್ತು ಅಸುರಕ್ಷತೆ
ಸಾಮಾಜಿಕ ಜಾಲತಾಣಗಳು ಇತರ ಬದುಕಿನ ಮೇಲೆ ಹಿಡಿರುವ ಕನ್ನಡಿಯಂತೆ, ಇದು ಸಂಬಂಧ ಮೇಲೂ ಕನ್ನಡಿ ಹಿಡಿದು ನಮಗೆ ತೋರಿಸುತ್ತದೆ. ಇದರೊಂದಿಗೆ ನಿಮ್ಮ ಸಂಗಾತಿ ಸಾಮಾಜಿಕ ಜಾಲತಾಣಗಳ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸುವುದು, ಆನ್‌ಲೈನ್ ಚಾಟಿಂಗ್ ನಡೆಸುವುದು, ಬೇರೆ ವ್ಯಕ್ತಿಗಳಿಗೆ ಅವರು ಇಷ್ಟವಾಗುವುದು, ಇದು ನಿಮ್ಮಲ್ಲಿ ಹೊಟ್ಟೆಕಿಚ್ಚು ಹಾಗೂ ಅಸುರಕ್ಷತೆಯ ಭಾವ ಮೂಡಲು ಕಾರಣವಾಗಬಹುದು.
ಪ್ರೈವೇಸಿ ಕೊರತೆ
ಸಾಮಾಜಿಕ ಜಾಲತಾಣವು ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಅನುಭವಗಳನ್ನು ಹಂಚಿಕೊಳ್ಳಲು ಪ್ರೇರೇಪಿಸಬಹುದು. ಆದರೆ ಈ ರೀತಿ ಹಂಚಿಕೊಳ್ಳುವುದರಿಂದ ಸಾಕಷ್ಟು ಜನಕ್ಕೆ ನಿಮ್ಮ ವೈಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಸಂಗಾತಿಗಳಿಬ್ಬರ ನಡುವಿನ ಖಾಸಗಿ ವಿಷಯಗಳು ಅಥವಾ ನಿಕಟ ಕ್ಷಣಗಳು ಅಜಾಗರೂಕತೆಯಿಂದ ಹಂಚಿಕೊಳ್ಳಬಹುದು. ಈ ಗೌಪ್ಯತೆಯ ಕೊರತೆಯು ನಂಬಿಕೆಯ ಉಲ್ಲಂಘನೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು.
ಸಂವಹನ ತೊಂದರೆ
ಆನ್‌ಲೈನ್ ಸಂವಹನವು ಮುಖಾಮುಖಿ ಸಂವಹನಕ್ಕಿಂತ ಭಿನ್ನವಾಗಿರುತ್ತದೆ. ಇವು ಮುಖಾಮುಖಿ ಸಂವಹನದಷ್ಟು ಸೂಕ್ಷ್ಮವಾಗಿರುವುದಿಲ್ಲ. ಇದು ಬೇಗನೆ ತಪ್ಪು ತಿಳುವಳಿಕೆ ಉಂಟಾಗಲು ಕಾರಣವಾಗಬಹುದು. ನಿಮ್ಮ ಸಂದೇಶಗಳ ಧಾಟಿ, ಉದ್ದೇಶ ಹಾಗೂ ಭಾವನೆಗಳ ಪ್ರಸ್ತಾಪವು ತಪ್ಪು ಅರ್ಥಗಳಿಗೆ ಕಾರಣವಾಗಬಹುದು. ಅನಗತ್ಯ ಘರ್ಷಣೆ ಹಾಗೂ ಭಾವನೆಗಳಿಗೆ ನೋವು ಮಾಡಲು ಇದು ಕಾರಣವಾಗಬಹುದು.
ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಳ್ಳುವುದು
ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಸಮಯ ವ್ಯಯಿಸಿವುದು ನಿಮ್ಮ ವೈಯಕ್ತಿಕ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಗಾತಿಗೆ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವುದು ಸಹ್ಯವಾಗದೇ ಇರಬಹುದು. ಇದು ನೀವು ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂಬ ಭಾವನೆ ಮೂಡಿಸಲು ಕಾರಣವಾಗಬಹುದು. ನೀವು ಅವರೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಿಲ್ಲ ಎಂಬ ಭಾವನೆಗೂ ಕಾರಣವಾಗಬಹುದು. ಇದು ಒಟ್ಟಾರೆ ಸಂಗಾತಿಗಳಿಬ್ಬರ ನಡುವಿನ ಸಂಬಂಧ ಹದಗೆಡಲು ಪ್ರಮುಖ ಅಂಶವಾಗಬಹುದು.
ದಾಂಪತ್ಯ ದ್ರೋಹ
ಸಾಮಾಜಿಕ ಮಾಧ್ಯಮಗಳು ಭಾವನಾತ್ಮಕ ಹಾಗೂ ದೈಹಿಕ ದಾಂಪತ್ಯ ದ್ರೋಹಕ್ಕೆ ಅವಕಾಶ ಒದಗಿಸಿಕೊಡಬಹುದು. ಸಾಮಾಜಿಕ ಜಾಲತಾಣಗಳ ಮೂಲಕ ಇತರರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಹಾಗೂ ಆನ್‌ಲೈನ್ ಮೂಲಕ ಸಂವಹನ ನಡೆಸಲು ಪ್ರೇರೇಪಿಸಬಹುದು. ಕೆಲವೊಮ್ಮೆ ಅರ್ಥವಿಲ್ಲದ ಸಂಬಂಧಗಳು ಹುಟ್ಟಲು ಇದು ವೇದಿಕೆಯಾಗಬಹುದು, ಅಲ್ಲದೆ ನಿಮ್ಮ ಸುಮಧುರ ಸಂಬಂಧಕ್ಕೆ ಇದು ಹುಳಿ ಹಿಂಡಿಬಹುದು.
ಹೋಲಿಕೆ ಮತ್ತು ಅತೃಪ್ತಿ
ಸಾಮಾಜಿಕ ಜಾಲತಾಣಗಳು ಜನರ ಗೌಪ್ಯತೆಯನ್ನು ಜಗತ್ತಿಗೆ ಸಾರುವ ಕೆಲಸವನ್ನು ಮಾಡುವುದೇ ಹೆಚ್ಚು. ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಬದುಕನ್ನು ಅದರಲ್ಲಿರುವ ವ್ಯಕ್ತಿಗಳ ಬದುಕಿಗೆ ಹೋಲಿಸಿಕೊಳ್ಳುವುದು, ಅವಾಸ್ತವಿಕ ನಿರೀಕ್ಷೆಗಳು ಸಂಬಂಧವನ್ನು ಕೆಡಿಸುವುದು ಮಾತ್ರವಲ್ಲ, ಅತೃಪ್ತಿ ಮತ್ತು ನಿರಾಶೆಯ ಭಾವನೆಗಳು ಉಂಟಾಗಲು ಕಾರಣವಾಗುತ್ತವೆ.
ಸಂಬಂಧಗಳ ಮೇಲೆ ಸಾಮಾಜಿಕ ಜಾಲತಾಣಗಳ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಮುಕ್ತ ಸಂವಹನ, ನಂಬಿಕೆ ಹಾಗೂ ಇತಿಮಿತಿಗಳು ಬಹಳ ಮುಖ್ಯವಾಗುತ್ತದೆ. ಸಂಗಾತಿಗಳು ಸಾಮಾಜಿಕ ಮಾಧ್ಯಮ ಬಳಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸ್ಥಾಪಿಸಿಬೇಕು. ಅವರ ಕಾಳಜಿಗಳನ್ನು ಚರ್ಚಿಸಬೇಕು. ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಿ. ಗುಣಮಟ್ಟದ ಸಮಯ, ಗೌರವ, ನಂಬಿಕೆ, ಕೃತಜ್ಞತೆ, ಪರಿಣಾಮಕಾರಿ ಸಂವಹನ, ಈ ಅಂಶಗಳನ್ನು ಗಮನಿಸುವುದು ಮುಖ್ಯವಾಗುತ್ತದೆʼ ಎನ್ನುತ್ತಾರೆ ಆಶ್ಮೀನ್ ಮುಂಜಾಲ್.
ವಿಭಾಗ