ಚಳಿ ಜೋರು ಅಂತ ಬೆಳಿಗ್ಗೆ ಎದ್ದಾಕ್ಷಣ ಟೀ ಕುಡಿತೀರಾ; ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಚಹಾ ಕುಡಿಯೋದು ಎಷ್ಟು ಅಪಾಯ ನೋಡಿ
Nov 22, 2024 07:03 AM IST
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಾರದು ಏಕೆ
- ಬೆಳಿಗ್ಗೆ ಎದ್ದಾಕ್ಷಣ ಟೀ ಕುಡಿಯುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಅದರಲ್ಲೂ ಚಳಿಗಾಲ ಅಂದ್ರೆ ಕೇಳಬೇಕಾ, ದೇಹ ಬೆಚ್ಚಗಿರುತ್ತೆ ಅಂತ ಬಿಸಿ ಬಿಸಿ ಟೀ ಕುಡಿತಾರೆ. ಆದರೆ ನಮ್ಮ ಬೆಳಗಿನ ಮೊದಲ ಎಂದಿಗೂ ಹಾಲು ಹಾಕಿದ ಟೀ ಆಗಿರಬಾರದು ಎನ್ನುತ್ತಾರೆ ತಜ್ಞರು. ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಚಹಾ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ನೋಡಿ.
ನಮ್ಮಲ್ಲಿ ಹಲವರು ಟೀ ಪ್ರಿಯರು. ದಿನದಲ್ಲಿ ಊಟ ಮಾಡದೇ ಬೇಕಾದ್ರೂ ಇರ್ತಾರೆ ಆದ್ರೆ ಟೀ ಕುಡಿಯದೇ ಇರುವುದು. ಅದ್ರಲ್ಲೂ ಈಗಂತೂ ಚಳಿಗಾಲ. ತಣ್ಣನೆಯ ವಾತಾವರಣದಲ್ಲಿ ಬಿಸಿ ಬಿಸಿ ಟೀ ಕುಡಿದ್ರೆ ಚೆನ್ನಾಗಿರುತ್ತೆ ಅಂತ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಹಲವು ಬಾರಿ ಟೀ ಕುಡಿಯುತ್ತಾರೆ. ನೀವು ಕೂಡ ಟೀ ಪ್ರಿಯರಾಗಿದ್ರೆ ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು.
ಬೆಳಿಗ್ಗೆ ಎದ್ದಾಕ್ಷಣ ನಮ್ಮ ಮೊದಲ ಆಹಾರ ಎಂದಿಗೂ ಹಾಲು ಹಾಕಿದ ಟೀ ಆಗಿರಬಾರದು. ಹಾಲು ಹಾಕಿದ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಚಹಾವು ಉತ್ಕರ್ಷಣ ನಿರೋಧಕ ಹಾಗೂ ಹಾಲಿನಿಂದ ದೇಹಕ್ಕೆ ಕ್ಯಾಲ್ಸಿಯಂ ಸಿಗುತ್ತದೆ ಯಾರಾದರೂ ಈ ಎರಡನ್ನೂ ಸಂಯೋಜಿಸುವುದರಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಅದರಲ್ಲೂ ಹೆಚ್ಚು ಹಾಲು ಹಾಗೂ ಸಕ್ಕರೆ ಹಾಕಿ ಚಹಾ ತಯಾರಿಸಿದರೆ ಅದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತೊಂದರೆ ಖಚಿತ. ಹಾಗಾದರೆ ನಮ್ಮ ಬೆಳಗಿನ ಮೊದಲ ಆಹಾರ ಅಥವಾ ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಟೀ ಕುಡಿಯಬಾರದು ಎನ್ನುವುದಕ್ಕೆ ಕಾರಣವೇನು ನೋಡಿ.
ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ
ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಇದರಿಂದ ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರದ ಸಮಸ್ಯೆ ಉಂಟಾಗಬಹುದು. ಚಹಾದಲ್ಲಿರುವ ಕೆಫೀನ್ ಮತ್ತು ಹಾಲಿನಲ್ಲಿರುವ ಲ್ಯಾಕ್ಟೋಸ್ ಆಮ್ಲ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಅಸ್ವಸ್ಥತೆಯನ್ನು ಉಂಟುಮಾಡಬಹುದು.
ಕಬ್ಬಿಣಾಂಶ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ
ಚಹಾದಲ್ಲಿ ಟ್ಯಾನಿನ್ ಅಂಶವಿರುತ್ತದೆ. ಇದು ಆಹಾರದಲ್ಲಿರುವ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಬೆಳಿಗ್ಗೆ ಎದ್ದಾಕ್ಷಣ ಮೊದಲ ಆಹಾರವಾಗಿ ಚಹಾ ಕುಡಿಯುವುದರಿಂದ ದೇಹವು ಆಹಾರದ ಸೇವಿಸಿದ ನಂತರ ಪೋಷಕಾಂಶಗಳನ್ನು ಹೀರಿಕೊಳ್ಳಲು ಅದರಲ್ಲೂ ಮುಖ್ಯವಾಗಲು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
ವಾಕರಿಕೆ ಸಮಸ್ಯೆ
ಬೆಳಿಗ್ಗೆ ಮೊದಲ ಆಹಾರವಾಗಿ ಅಂದರೆ ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಚಹಾ ಕುಡಿಯುವುದರಿಂದ ಕೆಲವರಿಗೆ ವಾಕರಿಕೆ ಬರಬಹುದು. ಚಹಾದಲ್ಲಿರುವ ಟ್ಯಾನಿನ್ ಮತ್ತು ಕೆಫಿನ್ ಹೊಟ್ಟೆಯ ಒಳಪದರವನ್ನು ಅಸಮಾಧಾನಗೊಳಿಸಬಹುದು. ಇದರಿಂದ ನಿಮಗೆ ಒಂದು ರೀತಿ ವಾಕರಿಕೆಯ ಅನುಭವವಾಗಬಹುದು.
ಆ್ಯಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ
ಚಹಾದಲ್ಲಿರುವ ಕೆಫಿನ್ ಮತ್ತು ಟ್ಯಾನಿನ್ ಅಂಶಗಳು ಹೊಟ್ಟೆಯ ಆ್ಯಸಿಡಿಟಿ ಹೆಚ್ಚಿಸಬಹುದು. ಇದರಿಂದ ಆ್ಯಸಿಡ್ ರಿಫ್ಲಕ್ಸ್ ಮತ್ತು ಎದೆಯುರಿಯಂತಹ ಸಮಸ್ಯೆಗಳು ಎದುರಾಗಬಹುದು.
ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ
ಕಾರ್ಟಿಸೋಲ್ ಒತ್ತಡದ ಹಾರ್ಮೋನ್ ಆಗಿದೆ. ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಕಾರ್ಟಿಸೋಲ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಚಹಾದಲ್ಲಿರುವ ಕೆಫಿನ್ ಅಂಶ ಕಾರ್ಟಿಸೋಲ್ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ. ದಿನದ ಆರಂಭದಲ್ಲಿ ಕಾರ್ಟಿಸೋಲ್ ಮಟ್ಟ ಏರಿಕೆಯಾಗುವುದು ಆತಂಕ, ನಡುಗುವುದು ಹಾಗೂ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು.
ಪೋಷಕಾಂಶ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ
ಹಾಲಿನಿಂದ ಮಾಡಿದ ಚಹಾವು ಕ್ಯಾಲ್ಸಿಯ, ಮೆಗ್ನೀಶಿಯಂನಂತಹ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಇದನ್ನು ಮೊದಲ ಆಹಾರವಾಗಿ ಸೇವಿಸುವುದರಿಂದ ಊಟದ ನಂತರ ಸಿಗಬೇಕಾದ ಪೋಷಕಾಂಶ ದೇಹಕ್ಕೆ ಸಿಗದೇ ಇರಬಹುದು.
ಅಡಿಕ್ಷನ್
ಚಹಾ ಕುಡಿಯುವುದು ಒಂದು ರೀತಿಯ ವ್ಯಸನ ಎಂದರೂ ತಪ್ಪಾಗಲಿಕ್ಕಿಲ್ಲ. ಹಲವರಿಗೆ ಚಹಾ ಕುಡಿದಿಲ್ಲ ಎಂದರೆ ಹುಚ್ಚು ಹಿಡಿದಂತಾಗುವ ಭಾವನೆ ಮೂಡುತ್ತದೆ. ಬೆಳಿಗ್ಗೆ ಹಾಲು ಚಹಾವನ್ನು ನಿಯಮಿತವಾಗಿ ಕುಡಿಯುವುದು ಕೆಫೀನ್ ಅವಲಂಬನೆಗೆ ಕಾರಣವಾಗಬಹುದು. ಅಭ್ಯಾಸವನ್ನು ಬಿಟ್ಟುಬಿಟ್ಟರೆ ಇದು ತಲೆನೋವು, ಕಿರಿಕಿರಿ ಅಥವಾ ಆಯಾಸಕ್ಕೆ ಕಾರಣವಾಗಬಹುದು.
ತೂಕ ಏರಿಕೆಯನ್ನು ಉತ್ತೇಜಿಸಬಹುದು
ಚಹಾಕ್ಕೆ ಸಕ್ಕರೆ ಮತ್ತು ಪೂರ್ಣ ಕೊಬ್ಬಿನ ಹಾಲನ್ನು ಸೇರಿಸುವುದರಿಂದ ಕ್ಯಾಲೋರಿ ಅಂಶವನ್ನು ಹೆಚ್ಚಿಸುತ್ತದೆ. ಇದು ಕಾಲಾನಂತರದಲ್ಲಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಬೆಳಿಗ್ಗೆ ಮೊದಲ ಆಹಾರವಾಗಿ ಚಹಾ ಕುಡಿಯುವುದರಿಂದ ಚಯಾಪಚಯ ನಿಧಾನವಾಗಬಹುದು.
ನೈಸರ್ಗಿಕ ನಿರ್ವಿಶೀಕರಣವನ್ನು ಅಡ್ಡಿಪಡಿಸುತ್ತದೆ
ಬೆಳಗಿನ ಹೊತ್ತು ನಮ್ಮ ದೇಹವು ನೈಸರ್ಗಿಕವಾಗಿ ನಿರ್ವಿಷಗೊಳುತ್ತದೆ. ಹಾಲಿನ ಚಹಾ ಕುಡಿಯುವುದು ನೈಸರ್ಗಿಕ ನಿರ್ವಿಷವಾಗುವುದಕ್ಕೆ ಅಡ್ಡಿಯಾಗಬಹುದು. ವಿಶೇಷವಾಗಿ ಸಕ್ಕರೆ ಮತ್ತು ಕೆಫೀನ್ ಸಂಸ್ಕರಣೆಯೊಂದಿಗೆ ಯಕೃತ್ತಿನ ಮೇಲೆ ಹೊರೆಯಾಗುವುದು. ಇದರಿಂದ ದೇಹ ನಿರ್ವಿಷಗೊಳ್ಳದೇ ಸಮಸ್ಯೆಗಳು ಎದುರಾಗಬಹುದು.
ನಿರ್ಜಲೀಕರಣ
ಚಹಾವು ತಕ್ಕಮಟ್ಟಿಗೆ ಮೂತ್ರವರ್ಧಕವಾಗಿದೆ. ಅಂದರೆ ಇದು ದೇಹದಲ್ಲಿ ನೀರಿನಾಂಶ ನಷ್ಟವನ್ನು ಉತ್ತೇಜಿಸುತ್ತದೆ. ಸಾಕಷ್ಟು ನೀರು ಕುಡಿಯದೇ ಬೆಳಿಗ್ಗೆದ್ದು ಹಾಲು ಹಾಕಿದ ಚಹಾ ಕುಡಿಯುವುದರಿಂದ ಡೀಹೈಡ್ರೇಷನ್ ಅಥವಾ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ದಿನವಿಡೀ ಶಕ್ತಿಯ ಮಟ್ಟವನ್ನು ಉತ್ತೇಜಿಸುತ್ತದೆ.
ನೋಡಿದ್ರಲ್ಲ ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಚಹಾ ಕುಡಿಯಯವುದರಿಂದ ಎಷ್ಟೆಲ್ಲಾ ಸಮಸ್ಯೆಗಳಾಗುತ್ತವೆ. ಆ ಕಾರಣಕ್ಕೆ ನೀವು ಚಳಿ ಅಂತ ಸಿಕ್ಕಾಪಟ್ಟೆ ಚಹಾ ಕುಡಿಬೇಡಿ. ಅದರಲ್ಲೂ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸ ಇದ್ದರೆ ಇಂದೇ ಬಿಟ್ಟು ಬಿಡಿ.
(ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿ ಹಾಗೂ ಅಂತರ್ಜಾಲದಲ್ಲಿರುವ ಸಿಕ್ಕಿರುವ ಮಾಹಿತಿಯನ್ನು ಆಧರಿಸಿದ ಬರಹವಾಗಿದೆ. ಈ ಕುರಿತ ಹೆಚ್ಚಿನ ಹಾಗೂ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)