logo
ಕನ್ನಡ ಸುದ್ದಿ  /  ಜೀವನಶೈಲಿ  /  ಖಾಲಿ ಹೊಟ್ಟೆಯಲ್ಲಿ ಈ ತಪ್ಪುಗಳನ್ನ ಎಂದಿಗೂ ಮಾಡದಿರಿ; ಇವು ನಿಮ್ಮ ಆರೋಗ್ಯ, ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಚ್ಚರ

ಖಾಲಿ ಹೊಟ್ಟೆಯಲ್ಲಿ ಈ ತಪ್ಪುಗಳನ್ನ ಎಂದಿಗೂ ಮಾಡದಿರಿ; ಇವು ನಿಮ್ಮ ಆರೋಗ್ಯ, ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಚ್ಚರ

Reshma HT Kannada

Oct 12, 2024 07:13 AM IST

google News

ಖಾಲಿ ಹೊಟ್ಟೆಯಲ್ಲಿ ಮಾಡಬಾರದಂತಹ ತಪ್ಪುಗಳು

    • ಖಾಲಿ ಹೊಟ್ಟೆಯಲ್ಲಿದ್ದಾಗ ನಮಗೆ ಅರಿವಾಗದಂತೆ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದರೆ ಇದು ಕೇವಲ ಬೆಳಗಿನ ಖಾಲಿ ಹೊಟ್ಟೆಗೆ ಸಂಬಂಧಿಸಿದ್ದಲ್ಲ. ಒಟ್ಟಾರೆ ದಿನದಲ್ಲಿ ಹೊಟ್ಟೆ ಖಾಲಿ ಇದ್ದಾಗ ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು, ಇದರಿಂದ ಏನು ಪರಿಣಾಮ ಆಗುತ್ತೆ ಎಂಬ ವಿವರ ಇಲ್ಲಿದೆ.
ಖಾಲಿ ಹೊಟ್ಟೆಯಲ್ಲಿ ಮಾಡಬಾರದಂತಹ ತಪ್ಪುಗಳು
ಖಾಲಿ ಹೊಟ್ಟೆಯಲ್ಲಿ ಮಾಡಬಾರದಂತಹ ತಪ್ಪುಗಳು (PC: Canva)

ಹೊಟ್ಟೆ ಖಾಲಿ ಇದೆ ಎಂದಾಗ ಮನಸ್ಸು ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸಬಾರದು, ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಖಾಲಿ ಹೊಟ್ಟೆ ಎಂಬುದು ಬೆಳಗಿನ ಹೊತ್ತಿಗೆ ಮಾತ್ರವಲ್ಲ, ದಿನದ ಯಾವುದೇ ಸಮಯದಲ್ಲೂ ಹೊಟ್ಟೆ ಖಾಲಿ ಇದ್ದಾಗ ಈ ಕೆಲಸಗಳನ್ನು ಮಾಡಬಾರದು. ಇದರಿಂದ ದೈಹಿಕ ಆರೋಗ್ಯ ಸೇರಿದಂತೆ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಬಹುದು. ಖಾಲಿ ಹೊಟ್ಟೆಯಲ್ಲಿ ನೀವು ಮಾಡುವ ಈ ಕೆಲಸಗಳು ಆರೋಗ್ಯದ ಜೊತೆ ನಿಮ್ಮ ನೆಮ್ಮದಿಯನ್ನೂ ಕಸಿಯಬಹುದು.

ಊರಿಯೂತದ ಔಷಧಿಗಳನ್ನು ಸೇವಿಸದಿರಿ

ಆ್ಯಂಟಿ ಇನ್ಫ್ಲಾಮೆಟರಿ ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಒಂದು ವೇಳೆ ಸೇವಿಸಲೇಬೇಕಾದ ಸಂದರ್ಭ ಬಂದರೆ ವೈದ್ಯರ ಸಲಹೆ ಪಡೆಯಲು ಮರೆಯದಿರಿ. ಖಾಲಿ ಹೊಟ್ಟೆಯಲ್ಲಿ ಉರಿಯೂತದ ಔಷಧಿ ಸೇವಿಸುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ

ಮಲಗುವ ಮುನ್ನ ಹೊಟ್ಟೆ ಬಿರಿಯುವಂತೆ ತಿನ್ನಬಾರದು ‌ಎಂದು ಹೇಳಲಾಗುತ್ತದೆ. ಆದರೆ ಖಾಲಿಹೊಟ್ಟೆಯಲ್ಲಿ ಮಲಗುವುದು ಕೂಡ ಅಪಾಯ. ನಿಮ್ಮ ದಿನದ ಕೊನೆಯ ಊಟ ಅಂದರೆ ರಾತ್ರಿ ಊಟಕ್ಕೂ ಮಲಗುವುದರ ನಡುವೆ 2 ರಿಂದ 3 ಗಂಟೆ ಅಂತರ ಇರಬೇಕು. ಆದರೆ ಮಲಗುವ ಮುನ್ನ ಒಂದು ಸೇಬುಹಣ್ಣು ಅಥವಾ ಒಂದು ಲೋಟ ಹಾಲು ಕುಡಿದು ಮಲಗಬೇಕು. ಖಾಲಿ ಹೊಟ್ಟೆಯಲ್ಲಿ ಮಲಗುವುದು ಸರಿಯಲ್ಲ.

ಮದ್ಯಪಾನ ಮಾಡುವುದು

ಹೊಟ್ಟೆ ಖಾಲಿ ಇದ್ದಾಗ ಮದ್ಯಪಾನ ಮಾಡುವುದು ಸರಿಯಲ್ಲ. ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ನಿಮಗೆ ಹೆಚ್ಚು ಹಾನಿ ಮಾಡುತ್ತದೆ ಏಕೆಂದರೆ ನಿಮ್ಮ ದೇಹದಲ್ಲಿ ಆಲ್ಕೋಹಾಲ್ ಹೀರಿಕೊಳ್ಳುವಿಕೆಯ ಪ್ರಮಾಣವು ಅಧಿಕವಾಗಿರುತ್ತದೆ. ಇದು ನಿಮ್ಮ ಹೃದಯ, ಯಕೃತ್ತು ಮತ್ತು ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ.

ನಿರ್ಧಾರ ತೆಗೆದುಕೊಳ್ಳುವುದು

ಮೊದಲೇ ಹೇಳಿದಂತೆ ಖಾಲಿ ಹೊಟ್ಟೆ‌ ಇದ್ದಾಗ ಮೆದುಳು ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಯಾವುದೇ ನಿರ್ಧಾರವನ್ನು ಎಂದಿಗೂ ಮಾಡಬೇಡಿ. ಖಾಲಿ ಹೊಟ್ಟೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಕಾರ್ಯಕ್ಷಮತೆಯನ್ನು ಬದಲಾಯಿಸಬಹುದು ಮತ್ತು ನಂತರ ನೀವು ವಿಷಾದವನ್ನು ಅನುಭವಿಸಬಹುದು.

ತೀವ್ರವಾದ ವ್ಯಾಯಾಮ

ಹೊಟ್ಟೆ ಖಾಲಿ ಇದ್ದಾಗ ಅತಿಯಾಗಿ ವ್ಯಾಯಾಮ ಮಾಡುವುದು ಕೂಡ ತಪ್ಪು. ಇದು ನಿಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು ಮತ್ತು ದೇಹದಲ್ಲಿ ಶಕ್ತಿಯ ಪ್ರಮಾಣ ಕಡಿಮೆ ಇರುವ ಕಾರಣಕ್ಕೆ ಕಠಿಣ ವ್ಯಾಯಾಮ ಅಥವಾ ವರ್ಕೌಟ್ ಮಾಡಲು ನಿಮಗೆ ಸಾಧ್ಯವಾಗದೇ ಇರಬಹುದು. ಹಾಗಾಗಿ, ಜಿಮ್‌ಗೆ ಹೋಗುವ ಮೊದಲು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಉತ್ತಮ.

ವಾದ ಮಾಡಬೇಡಿ

ಹಸಿವಾದಾಗ ಮನಸ್ಸು ಕೆರಳುತ್ತದೆ. ಅಂತಹ ಸಮಯದಲ್ಲಿ ವಾದ ಮಾಡುವುದು ತಪ್ಪು. ಇದು ನಿಮ್ಮ ಮನಸ್ಸಿನಲ್ಲಿ ಹಸ್ತಕ್ಷೇಪ ಮಾಡಬಹುದು ಮತ್ತು ವಿಷಯಗಳನ್ನು ಇನ್ನಷ್ಟು ಹದಗೆಡಿಸಬಹುದು. ಖಾಲಿ ಹೊಟ್ಟೆಯಲ್ಲಿ ವಾದ ಮಾಡುವುದು ವಿಕೋಪಕ್ಕೆ ತಿರುಗಬಹುದು ಹಾಗೂ ಇದು ಖಂಡಿತ ಪರಿಸ್ಥಿತಿಯನ್ನು ಹದಗೆಡಿಸುತ್ತದೆ.

ದಿನಸಿ ತರಲು ಹೋಗಬೇಡಿ

ಇದೇನಪ್ಪಾ ದಿನಸಿ ತರುವುದಕ್ಕೂ ಖಾಲಿ ಹೊಟ್ಟೆಗೂ ಏನು ಸಂಬಂಧ ಎಂದುಕೊಳ್ಳಬೇಡಿ. ಖಂಡಿತ ಸಂಬಂಧ ಇದೆ. ಖಾಲಿ ಹೊಟ್ಟೆಯಲ್ಲಿ ದಿನಸಿಗಾಗಿ ಶಾಪಿಂಗ್ ಮಾಡುವುದು ದೊಡ್ಡ ತಪ್ಪು. ನಿಮಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ಖರೀದಿಸಲು ನೀವು ಯೋಚಿಸುತ್ತೀರಿ. ಆರೋಗ್ಯಕರವಾದವುಗಳಿಗಿಂತ ಅನಾರೋಗ್ಯಕರ ತಿಂಡಿಗಳನ್ನು ಆಯ್ಕೆ ಮಾಡುತ್ತೀರಿ. ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳನ್ನೇ ಹೆಚ್ಚು ಸೇವಿಸುತ್ತೀರಿ.

ಚೂಯಿಂಗ್‌ ಗಮ್ ತಿನ್ನುವುದು

ಹೊಟ್ಟೆ ಖಾಲಿ ಇದ್ದಾಗ ಚೂಯಿಂಗ್ ಗಮ್ ತಿನ್ನುವುದು ಕೂಡ ಆರೋಗ್ಯ ಕೆಡಲು ಕಾರಣವಾಗುತ್ತದೆ. ಇದು ಹೊಟ್ಟೆಯಲ್ಲಿ ಉರಿಯೂತಕ್ಕೆ ಕಾರಣವಾಗಬಹುದು.

ಎಂದಿಗೂ ಕಾಫಿ ಕುಡಿಯಬೇಡಿ

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಸೂಕ್ತವಲ್ಲ. ಇದು ಎದೆ ಉರಿಯನ್ನು ಉಂಟುಮಾಡುವುದು ಮಾತ್ರವಲ್ಲದೆ ಜೀರ್ಣಕಾರಿ ಸಮಸ್ಯೆಗಳಿಗೂ ಕಾರಣವಾಗಬಹುದು. ಹಲವರು ಒಂದು ಕಪ್‌ ಕಾಫಿ ಕುಡಿದು ನಂತರ ಉಪಾಹಾರ ಸೇವಿಸುವುದಿಲ್ಲ. ಇದು ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ.

ಇದರ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಧೂಮಪಾನ ಮಾಡುವುದು, ಸಿಟ್ರಸ್ ಅಂಶ ಇರುವ ಹಣ್ಣುಗಳನ್ನು ತಿನ್ನುವುದು, ಅತಿಯಾದ ಎಣ್ಣೆ ಅಂಶ ಇರುವ ಪದಾರ್ಥಗಳನ್ನು ಸೇವಿಸುವುದು ಕೂಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಈ ಮೇಲೆ ಹೇಳಿದ ವಿಷಯಗಳು ನಿಮಗೆ ಸಾಮಾನ್ಯ ಸಂಗತಿ ಎನ್ನಿಸಿದರೂ ಕೂಡ ಇದು ಇದನ್ನು ನಿರ್ಲಕ್ಷ್ಯ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಚ್ಚರ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ