logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಾವು ಮಾತ್ರವಲ್ಲ ಕಲ್ಲಂಗಡಿಯನ್ನೂ ರಾಸಾಯನಿಕ ಬಳಸಿಯೇ ಹಣ್ಣು ಮಾಡೋದು; ವೈರಲ್ ವಿಡಿಯೊದಲ್ಲಿದೆ ನಿಜಾಂಶ

ಮಾವು ಮಾತ್ರವಲ್ಲ ಕಲ್ಲಂಗಡಿಯನ್ನೂ ರಾಸಾಯನಿಕ ಬಳಸಿಯೇ ಹಣ್ಣು ಮಾಡೋದು; ವೈರಲ್ ವಿಡಿಯೊದಲ್ಲಿದೆ ನಿಜಾಂಶ

Reshma HT Kannada

May 25, 2024 04:52 PM IST

google News

ಮಾವು ಮಾತ್ರವಲ್ಲ ಕಲ್ಲಂಗಡಿಯನ್ನೂ ರಾಸಾಯನಿಕ ಬಳಸಿಯೇ ಹಣ್ಣು ಮಾಡೋದು; ವೈರಲ್ ವಿಡಿಯೊದಲ್ಲಿದೆ ನಿಜಾಂಶ

    • ಇತ್ತೀಚಿನ ದಿನಗಳಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ಕಲ್ಲಂಗಡಿ ಹಣ್ಣು ತಿನ್ನುತ್ತಾರೆ. ಡಯೆಟ್‌ ಮಾಡುವವರ ಲಿಸ್ಟ್‌ನಲ್ಲಿ ಕಲ್ಲಂಗಡಿ ಮೊದಲು ಸಾಲಿನಲ್ಲಿರುತ್ತದೆ. ಬಾಯಾರಿಕೆಯನ್ನು ತಣಿಸಿ, ಬಾಯಿಗೂ ರುಚಿ ಎನ್ನಿಸಿ, ತೂಕ ಇಳಿಯಲು ನೆರವಾಗುವ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಹಾನಿಕಾರಕ ಅಂದ್ರೆ ನೀವು ನಂಬ್ತೀರಾ? (ಬರಹ: ಭಾಗ್ಯ ದಿವಾಣ)
ಮಾವು ಮಾತ್ರವಲ್ಲ ಕಲ್ಲಂಗಡಿಯನ್ನೂ ರಾಸಾಯನಿಕ ಬಳಸಿಯೇ ಹಣ್ಣು ಮಾಡೋದು; ವೈರಲ್ ವಿಡಿಯೊದಲ್ಲಿದೆ ನಿಜಾಂಶ
ಮಾವು ಮಾತ್ರವಲ್ಲ ಕಲ್ಲಂಗಡಿಯನ್ನೂ ರಾಸಾಯನಿಕ ಬಳಸಿಯೇ ಹಣ್ಣು ಮಾಡೋದು; ವೈರಲ್ ವಿಡಿಯೊದಲ್ಲಿದೆ ನಿಜಾಂಶ

ಬೇಸಿಗೆ ಕಾಲದಲ್ಲಿ ಸುಡು ಬಿಸಿಲಿನ ಬೇಗೆಗೆ ಬಾಯಾರಿಕೆ, ದಣಿವು-ಬಳಲಿಕೆ ಸಾಮಾನ್ಯವಾಗಿ ನಮ್ಮ ಕಾಡುವ ಸಮಸ್ಯೆಗಳು. ಇದರಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳುವಲ್ಲಿ ಕಾಲಕಾಲಕ್ಕೆ ಲಭ್ಯವಾಗುವ ಹಣ್ಣುಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹೌದು, ಬೇಸಿಗೆ ಕಾಲದ ಹಣ್ಣುಗಳಾದ ಮಾವಿನಹಣ್ಣು ಮತ್ತು ಕಲ್ಲಂಗಡಿಯ ಸೇವನೆಯಿಂದ ತಾಪಮಾನ ಏರಿಕೆಯ ನಡುವೆಯೂ ಶರೀರಕ್ಕೆ ನೀರಿನ ಅಂಶವನ್ನು ಪೂರೈಸುವ ಮೂಲಕ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುತ್ತದೆ. ಆದರೆ ನೀವು ಸೇವಿಸುವ ಬೇಸಿಗೆಯ ಹಣ್ಣುಗಳು ರಾಸಾಯನಿಕಯುಕ್ತ ಹಾಗೂ ವಿಷಕಾರಿಯಾಗಿವೆ ಎಂದರೆ ನೀವು ನಂಬಲೇಬೇಕು. ಇದನ್ನು ತಿನ್ನುವುದರಿಂದ ದೇಹವು ಚುರುಕಾಗುವ ಬದಲು ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ.

ಸಾಮಾನ್ಯವಾಗಿ ಮಾವಿನಹಣ್ಣುಗಳು ವೇಗವಾಗಿ ಹಣ್ಣಾಗಲು ಕ್ಯಾಲ್ಸಿಯಂ ಕಾರ್ಬೈಡ್‌ ಬಳಸುವ ಬಗ್ಗೆ ಈಗಂತೂ ಎಲ್ಲರಿಗೂ ತಿಳಿದಿದೆ. ಆದರೆ ಕಲ್ಲಂಗಡಿಯನ್ನು ಸಿಹಿಗೊಳಿಸಲು ಮತ್ತು ಅದರ ತಿರುಳನ್ನು ದಟ್ಟನೆಯ ಕೆಂಪು ಬಣ್ಣಕ್ಕೆ ತರುವುದಕ್ಕಾಗಿ ರಾಸಾಯನಿಕಗಳನ್ನು ಚುಚ್ಚಲಾಗುತ್ತದೆ. ಹೌದು, ಕಲ್ಲಂಗಡಿಗೆ ಹೇಗೆ ಮತ್ತು ಯಾಕಾಗಿ ರಾಸಾಯನಿಕವನ್ನು ಇಂಜೆಕ್ಟ್‌ ಮಾಡಲಾಗುತ್ತದೆ ಎಂಬ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದಿ ಸೋಶಿಯಲ್ ಜಂಕ್ಷನ್‌ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಕ್ಲಿಪ್ ಈ ಪ್ರಯೋಗದ ಭಾಗವಾಗಿದ್ದು, ಕಲ್ಲಂಗಡಿಗೆ ರಾಸಾಯನಿಕಗಳನ್ನು ಚುಚ್ಚುತ್ತಿರುವುದನ್ನು ಪಾರದರ್ಶಕವಾಗಿ ತೋರಿಸುತ್ತದೆ.

ಯೂಟ್ಯೂಬ್‌ ಮಾತ್ರವಲ್ಲದೆ ಇಂದಿನ ಯುವಜನತೆಯ ನೆಚ್ಚಿನ ಇನ್‌ಸ್ಟಾಗ್ರಾಮ್‌ನಲ್ಲೂ ಕಲ್ಲಂಗಡಿ ಹಣ್ಣಿಗೆ ರಾಸಾಯನಿಕವನ್ನು ಚುಚ್ಚುವುದರಿಂದ ಆಗುವ ಅಡ್ಡಪರಿಣಾಮಗಳು, ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಬಹಿರಂಗಪಡಿಸುವ ಅನೇಕ ವಿಡಿಯೊ, ರೀಲ್ಸ್‌ಗಳು ಲಭ್ಯವಿದೆ. ಅಲ್ಲದೆ ರಾಸಾಯನಿಕ ಮುಕ್ತ ಕಲ್ಲಂಗಡಿಯನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಬೆಳಕನ್ನು ಚೆಲ್ಲುತ್ತವೆ.

ರಾಸಾಯನಿಕ ಇಂಜೆಕ್ಟ್‌ ಮಾಡಿರುವ ಹಣ್ಣು ಗುರುತಿಸುವುದು ಹೇಗೆ?

ಮೊದಲ ನೋಟದಲ್ಲಿ ಕಲ್ಲಂಗಡಿ ಹಣ್ಣುಗಳೆಲ್ಲವೂ ಒಂದೇ ರೀತಿ ಕಾಣಿಸುತ್ತವೆ. ಹೆಚ್ಚೆಂದರೆ ಗಾತ್ರ ಹಾಗೂ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದಷ್ಟೇ. ಆದರೆ ಸರಿಯಾಗಿ ಗಮನಿಸಿದ್ದೇ ಆದರೆ, ರಾಸಾಯನಿಕವಾಗಿ ಚುಚ್ಚುಮದ್ದಿನ ಕಲ್ಲಂಗಡಿಗಳನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ.

ಕಲ್ಲಂಗಡಿ ಹಣ್ಣನ್ನು ಖರೀದಿಸುವಾಗ ಸರಿಯಾಗಿ ಗಮನಿಸಿ. ಸ್ವಲ್ಪ ಬಿಳಿಯಾಗಿ, ಅಲ್ಲಲ್ಲಿ ಹಳದಿ ಚುಕ್ಕೆಗಳಿದ್ದರೆ, ಅದಕ್ಕೆ ಇಂಜೆಕ್ಷನ್ ಮಾಡಿರುವ ಸಾಧ್ಯತೆ ಇರುತ್ತದೆ. ಹಣ್ಣಿನ ಮೇಲೆ ಹಳದಿ ಬಣ್ಣದಲ್ಲಿದ್ದರೆ, ಅದನ್ನು ಉಪ್ಪು ನೀರಿನಿಂದ ಚೆನ್ನಾಗಿ ತೊಳೆದು ತಿನ್ನಲು ಸೂಚಿಸಲಾಗುತ್ತದೆ. ಕಲ್ಲಂಗಡಿ ಸಾಮಾನ್ಯಕ್ಕಿಂತ ಹೆಚ್ಚು ಕೆಂಪಾಗಿದ್ದು, ಅವುಗಳ ಮೇಲೆ ಎಲ್ಲಿಯಾದರೂ ರಂಧ್ರಗಳಿದ್ದರೆ ಅವುಗಳನ್ನು ಖರೀದಿಸಬೇಡಿ. ಅಂತಹ ಕಲ್ಲಂಗಡಿಗಳಿಗೆ ಇಂಜೆಕ್ಷನ್ ಮಾಡಿರಬಹುದು. ಇಂಜೆಕ್ಷನ್ ಮಾಡಿದ ಕಲ್ಲಂಗಡಿ ಕತ್ತರಿಸಿದಾಗ, ಹಣ್ಣಿನಲ್ಲಿ ಹೆಚ್ಚು ಬಿರುಕುಗಳು ಉಂಟಾಗುತ್ತವೆ. ಅಲ್ಲದೇ, ಆ ಕಲ್ಲಂಗಡಿ ತಿಂದರೆ, ನಾಲಿಗೆ ತುಂಬಾ ಕೆಂಪಾಗುತ್ತದೆ ಎನ್ನುತ್ತಾರೆ ತಜ್ಞರು.

ಅಷ್ಟಾಗಿಯೂ ನೀವು ಕೊಂಡುಕೊಂಡ ಕಲ್ಲಂಗಡಿಯ ಬಗ್ಗೆ ಅನುಮಾನ ಮೂಡಿದರೆ ಕಲ್ಲಂಗಡಿ ಹಣ್ಣು ಸಣ್ಣ ಭಾಗವಾಗಿ ಕತ್ತರಿಸಿ ಒಂದು ಗ್ಲಾಸ್ ನೀರಿನಲ್ಲಿ ಹಾಕಿ. ಅದು ಬಣ್ಣ ಬಿಟ್ಟು ನೀರು ಕೆಂಪಾದರೆ ಅದರಲ್ಲಿ ರಾಸಾಯನಿಕ ಮಿಶ್ರಣಗೊಂಡಿದೆ ಎಂದರ್ಥ. ಒಂದು ವೇಳೆ ನೀರು ಹಾಗೆಯೇ ಇದ್ದರೆ ಅದರಲ್ಲಿ ಬಣ್ಣವಿಲ್ಲ ನೈಸರ್ಗಿಕವಾಗಿ ಹಣ್ಣಾಗಿದೆ ಎಂದರ್ಥ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಏನು ಹೇಳುತ್ತದೆ?

ಕಲ್ಲಂಗಡಿಯಲ್ಲಿ ಎರಿಥ್ರೋಸಿನ್-ಬಿ ಎಂಬ ರಾಸಾಯನಿಕ ಬಣ್ಣ ಕಲಬೆರಕೆಯಾಗಿದೆಯೇ ಎಂದು ಪರಿಶೀಲಿಸಲು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸರಳ ಪರೀಕ್ಷೆಯನ್ನು ಶಿಫಾರಸು ಮಾಡಿದ್ದು, ಆ ಕುರಿತು ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಅದರಂತೆ ಕಲ್ಲಂಗಡಿ ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿಕೊಂಡು ಒಂದು ಸಣ್ಣ ಹತ್ತಿ ಉಂಡೆಯನ್ನು ತೆಗೆದುಕೊಂಡು ಕಲ್ಲಂಗಡಿ ಭಾಗವನ್ನು ಮೆಲ್ಲನೆ ಒರೆಸಿ ನೋಡಿ. ಹತ್ತಿಗೆ ಕೆಂಪನೆಯ ಬಣ್ಣ ಅಂಟಿಕೊಂಡರೆ ಅದರಲ್ಲಿ ಎರಿಥ್ರೋಸಿನ್ ಅಥವಾ ಇತರ ರಾಸಾಯನಿಕ ಬಣ್ಣಗಳಿವೆ ಎಂಬುದನ್ನು ವಿಡಿಯೊ ಮೂಲಕ ಚಿತ್ರೀಕರಿಸಿದ್ದಾರೆ.

ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ

ತಿಳಿದಿರುವ ಮಾರಾಟಗಾರರಿಂದ ಖರೀದಿಸಿ: ತಾಜಾ ಉತ್ಪನ್ನಗಳಿಗೆ ಆದ್ಯತೆ ನೀಡುವ ಮಾರಾಟಗಾರರಿಂದಲೇ ಹಣ್ಣುಗಳನ್ನು ಖರೀದಿಸಿ. ಈ ಮೊದಲೇ ನಿಮಗೆ ಮಾರಾಟಗಾರರು ಪರಿಚಿತರಾಗಿದ್ದರೆ ಹಣ್ಣುಗಳನ್ನು ಎಲ್ಲಿಂದ ತಂದಿರುವುದೆಂಬುದರ ಬಗ್ಗೆ ಮಾಹಿತಿ ತಿಳಿದು ಖರೀದಿ ಮಾಡಿದರೆ ಉತ್ತಮ.

ಸರಿಯಾಗಿ ಗಮನಿಸಿ ಆಯ್ಕೆ ಮಾಡಿಕೊಳ್ಳಿ: ನೈಸರ್ಗಿಕ ಬಣ್ಣವನ್ನು ಹೊಂದಿರುವ ಕಲ್ಲಂಗಡಿಯನ್ನೇ ಆಯ್ಕೆ ಮಾಡಿಕೊಳ್ಳಿ. ರಂದ್ರಗಳೋ ಇಲ್ಲವೇ ಮೇಲ್ಪದರವು ಬಿಳಿ ಪುಡಿ ಇರುವುದೋ ಇನ್ಯಾವುದೇ ರೀತಿಯ ಕಲ್ಲಂಗಡಿ ಹಣ್ಣುಗಳಿದ್ದರೆ, ಅವು ರಾಸಾಯನಿಕ ಚುಚ್ಚುಮದ್ದು ಹಾಕಿರುವುದೆಂಬುದನ್ನು ತಿಳಿಯಿರಿ.

ಹಸಿರು ಚುಕ್ಕೆಗಳಿವೆಯೇ ಎಂದು ಪರಿಶೀಲಿಸಿ: ಕಲ್ಲಂಗಡಿ ಕೆಳಭಾಗದಲ್ಲಿ ತಿಳಿ ಹಳದಿ ಅಥವಾ ಕಿತ್ತಳೆ ಬಣ್ಣದ ಚುಕ್ಕೆಯಿದೆಯೇ ಎಂಬುದನ್ನು ನೋಡಿ. ಹೀಗಿದ್ದರೆ ಬಳ್ಳಿಯಲ್ಲೇ ಪೂರ್ಣವಾಗಿ ಬಲಿತು ತೆಗೆದಿರುವ ಹಣ್ಣು ಎಂಬುದು ಖಚಿತ. ಆ ಭಾಗದಲ್ಲಿ ಬಿಳಿ ಅಥವಾ ಯಾವುದೇ ಗುರುತುಗಳು ಹೊಂದಿರದಿದ್ದರೆ ಅದು ಎಳೆಯ ಕಲ್ಲಂಗಡಿ, ಹಣ್ಣಾಗಲು, ಕೆಂಪನೆಯ ಬಣ್ಣ ಬರಲು ರಾಸಾಯನಿಕವನ್ನು ಬಳಸಲಾಗಿದೆಯೆಂಬುದು ಖಚಿತ.

ಬಿಸಿಲಿನ ತಾಪ ನೀಗಿಸಿಕೊಳ್ಳುವುದು, ತೂಕ ಇಳಿಕೆ ಮುಂತಾದ ಕಾರಣಗಳಿಂದ ಸರ್ವಕಾಲದಲ್ಲೂ ಸೇವನೆಗೆ ಲಭ್ಯವಿರುವ ಕಲ್ಲಂಗಡಿ ಹಣ್ಣು ತಿನ್ನುವ ನೈಸರ್ಗಿಕವಾಗಿ ಹಣ್ಣಾದರಷ್ಟೇ ಆರೋಗ್ಯಕ್ಕೆ ಉತ್ತಮ. ಆದರೆ ಕಡಿಮೆ ಬೆಲೆಗೆ ಸಿಕ್ಕಿತು, ಉಳಿದುದರ ಬಗ್ಗೆ ಚಿಂತೆ ಯಾಕೆ ಅಂದುಕೊಂಡರೆ ಆರೋಗ್ಯ ಸಮಸ್ಯೆ ಆದೀತು ಜೋಕೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ