ಕನ್ನಡ ಸುದ್ದಿ  /  ಜೀವನಶೈಲಿ  /  ಮಾರುಕಟ್ಟೆಯಲ್ಲಿ ಸಿಗುವ ಮಾವಿನಹಣ್ಣನ್ನು ಕಣ್ಮುಚ್ಚಿ ಖರೀದಿಸಿ ತಿನ್ನುತ್ತಿದ್ದೀರಾ? ಗಂಭೀರ ಸಮಸ್ಯೆ ಎದುರಾಗಬಹುದು ಎಚ್ಚರ

ಮಾರುಕಟ್ಟೆಯಲ್ಲಿ ಸಿಗುವ ಮಾವಿನಹಣ್ಣನ್ನು ಕಣ್ಮುಚ್ಚಿ ಖರೀದಿಸಿ ತಿನ್ನುತ್ತಿದ್ದೀರಾ? ಗಂಭೀರ ಸಮಸ್ಯೆ ಎದುರಾಗಬಹುದು ಎಚ್ಚರ

ಮಾವಿನಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮಾವಿನಹಣ್ಣುಗಳನ್ನು ಕೃತಕವಾಗಿ ಮಾಗಿಸಲಾಗುತ್ತದೆ ಹಾಗೂ ಇದಕ್ಕಾಗಿ ನಿಷೇಧಿತ ರಾಸಾಯನಿಕಗಳ ಬಳಕೆ ಮಾಡಲಾಗುತ್ತದೆ. ಈ ಬಗ್ಗೆ ಎಫ್‌ಎಸ್‌ಎಸ್‌ಎಐ (FSSAI) ಗಂಭೀರ ಎಚ್ಚರಿಕೆ ನೀಡಿದೆ.

ಮಾರುಕಟ್ಟೆಯಲ್ಲಿ ಸಿಗುವ ಮಾವನ್ನು ಕಣ್ಮುಚ್ಚಿ ಖರೀದಿಸಿ ತಿನ್ನುತ್ತಿದ್ದೀರಾ? ಗಂಭೀರ ಸಮಸ್ಯೆ ಎದುರಾಗಬಹುದು ಎಚ್ಚರ
ಮಾರುಕಟ್ಟೆಯಲ್ಲಿ ಸಿಗುವ ಮಾವನ್ನು ಕಣ್ಮುಚ್ಚಿ ಖರೀದಿಸಿ ತಿನ್ನುತ್ತಿದ್ದೀರಾ? ಗಂಭೀರ ಸಮಸ್ಯೆ ಎದುರಾಗಬಹುದು ಎಚ್ಚರ

ಈಗಂತೂ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ಸಹ ತರಹೇವಾರಿ ಮಾವಿನಹಣ್ಣುಗಳು ಕಣ್ಣಿಗೆ ಬೀಳುತ್ತವೆ. ಅವುಗಳ ಅಂದ ಗಾತ್ರವನ್ನು ನೋಡಿಯೇ ನಾವು ಎಷ್ಟು ಹಣ ಕೊಟ್ಟಾದರೂ ಖರೀದಿಸಿ ಅದನ್ನು ಮನೆಗೆ ತಂದು ಸವಿಯುತ್ತೇವೆ. ಆದರೆ ಈ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಮಾವಿನ ಹಣ್ಣುಗಳ ಪೈಕಿ ಬಹುತೇಕ ಮಾವಿನ ಹಣ್ಣುಗಳನ್ನು ಮಾಗಿಸಲು ರಾಸಾಯನಿಕವಾದ ಕ್ಯಾಲ್ಸಿಯಂ ಕಾರ್ಬೈಡ್‌ ಅನ್ನು ಬಳಸಲಾಗುತ್ತದೆ. ಆದರೆ ಇದರ ಬಳಕೆ ಅಪಾಯಕಾರಿ ಎಂದು FSSAI ಸೂಚನೆ ನೀಡಿದೆ. ಈ ಸಂಬಂಧ ಅಧಿಕೃತ ಹೇಳಿಕೆ ಹೊರಡಿಸಿರುವ FSSAI (ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ) ಮಾವಿನ ಹಣ್ಣುಗಳನ್ನು ಕೃತಕವಾಗಿ ಪಕ್ವಗೊಳಿಸಲು ಕ್ಯಾಲ್ಸಿಯಂ ಕಾರ್ಬೈಡ್‌ಗಳನ್ನು ಬಳಕೆ ಮಾಡದಂತೆ ಕಟ್ಟುನಿಟ್ಟಾದ ಸೂಚನೆ ಹೊರಡಿಸಿದೆ.

ಟ್ರೆಂಡಿಂಗ್​ ಸುದ್ದಿ

FSSAI 2006ರ FSSAI ಆಕ್ಟ್ ಹಾಗೂ ಅದರ ಅಡಿಯಲ್ಲಿ ರಚಿಸಲಾದ ವಿವಿಧ ನಿಯಮಗಳ ಪ್ರಕಾರ ಕಾನೂನುಬಾಹಿರವಾಗಿ ಈ ರಾಸಾಯನಿಕಗಳನ್ನು ಬಳಕೆ ಮಾಡಿ ಮಾವಿನಕಾಯಿಯನ್ನು ಹಣ್ಣು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಿದೆ.

ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು

ಮಾವಿನ ಹಣ್ಣುಗಳನ್ನು ಕೃತಕವಾಗಿ ಪಕ್ವಗೊಳಿಸಲು ಸಾಮಾನ್ಯವಾಗಿ ಬಳಸುವ ಕ್ಯಾಲ್ಸಿಯಂ ಕಾರ್ಬೈಡ್, ಆರ್ಸೆನಿಕ್ ಹಾಗೂ ಫಾಸ್ಟರಸ್‌ನಂತಹ ಹಾನಿಕಾರಕ ಅಂಶಗಳನ್ನು ಹೊಂದಿರುವ ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಮಸಾಲಾ ಎಂದು ಕರೆಯಲ್ಪಡುವ ಈ ಪದಾರ್ಥಗಳು ಆಗಾಗ ಬಾಯಾರಿಕೆ, ತಲೆ ತಿರುಗುವುದು, ಕಿರಿಕಿರಿ, ದೌರ್ಬಲ್ಯ, ವಾಂತಿ ಹಾಗೂ ಚರ್ಮದ ಹುಣ್ಣುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು FSSAI ಎಚ್ಚರಿಕೆ ನೀಡಿದೆ.

ಕ್ಯಾಲ್ಸಿಯಂ ಕಾರ್ಬೈಡ್‌ಗಳನ್ನು ಮಾವಿನಹಣ್ಣಿಗೆ ಅನ್ವಯಿಸುವ ಸಂದರ್ಭದಲ್ಲಿ ಈ ರಾಸಾಯನಿಕದೊಂದಿಗೆ ನೇರ ಸಂಪರ್ಕ ಹೊಂದುವ ಸಾಧ್ಯತೆ ಕೂಡ ಇರುತ್ತದೆ. ಇದು ಇಂಥ ಕಾರ್ಯವನ್ನು ಮಾಡುವ ಸಿಬ್ಬಂದಿಗೂ ಅಪಾಯಕಾರಿ ಎಂದು FSSAI ಹೇಳುತ್ತದೆ.

ನಿಯಮ ಏನು ಹೇಳುತ್ತೆ?

ಈ ಎಲ್ಲಾ ಅಪಾಯಗಳನ್ನು ತಡೆಯುವ ಕಾರಣದಿಂದಾಗಿ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ನಿಯಂತ್ರಣ ನಿಯಮ 2011ರ ಅಡಿಯಲ್ಲಿ ಯಾವುದೇ ಹಣ್ಣುಗಳನ್ನು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿತ್ತು. ಯಾವುದೇ ವ್ಯಕ್ತಿಯು ಯಾವುದೇ ಕಾರಣಕ್ಕೂ ಈ ರೀತಿಯ ವಿಧಾನದಲ್ಲಿ ಪಕ್ವಗೊಂಡ ಹಣ್ಣುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾದ ಆದೇಶ ಹೊರಡಿಸಲಾಗಿದೆ.

ಬೆಳೆಯ ವೈವಿದ್ಯತೆ ಹಾಗೂ ಪಕ್ವತೆಯ ಆಧಾರದಲ್ಲಿ 100ppm ವರೆಗಿನ ಸಾಂದ್ರತೆಯಲ್ಲಿ ಎಥಲೀನ್ ಅನಿಲವನ್ನು ಬಳಕೆ ಮಾಡಬಹುದಾಗಿದೆ. ಎಥಲೀನ್ ಅನಿಲವು ಹಣ್ಣುಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಹಾರ್ಮೋನ್ಸ್, ರಾಸಾಯನಿಕ ಹಾಗೂ ಜೀವರಾಸಾಯನಿಕಗಳನ್ನು ನಿಯಂತ್ರಿಸುವ ಮೂಲಕ ಅವುಗಳನ್ನು ಪಕ್ವಗೊಳಿಸುವ ಕ್ರಿಯೆಯಲ್ಲಿ ಸಹಾಯ ಮಾಡುತ್ತವೆ.

ಇದು ಮಾತ್ರವಲ್ಲದೇ, ಕೇಂದ್ರೀಯ ಕೀಟನಾಶಕ ಮಂಡಳಿ ಹಾಗೂ ನೋಂದಣಿ ಸಮಿತಿಯು ಮಾವು ಹಾಗೂ ಇತರೆ ಹಣ್ಣುಗಳ ಮಾಗುವಿಕೆಗೆ ಎಥೆಫೋನ್ 39 ಪ್ರತಿಶತ SL ಬಳಕೆಗೆ ಅನುಮೋದನೆ ನೀಡಿದೆ.

ಹಾಗಾಗಿ ನೀವು ಮಾರುಕಟ್ಟೆ ಮಾವಿನಹಣ್ಣಿನ ಖರೀದಿ ತಂದ ಮೇಲೆ ಅಥವಾ ಖರೀದಿಸುವ ಸಮಯದಲ್ಲಿ ಪರೀಕ್ಷೆ ಮಾಡಿಸಿ ನಂತರ ಖರೀದಿ ಮಾಡುವುದು ಉತ್ತಮ. ಮಾವು ತಿನ್ನುವ ಭರದಲ್ಲಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳದಿರಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)