ಯಶಸ್ಸಿನ ಶಿಖರ ತಲುಪಲು ಸ್ವಯಂ ನಿಯಂತ್ರಣ ಮಾರ್ಗ: ಸಮಸ್ಯೆಗಳನ್ನು ಎದುರಿಸುವ ಮೊದಲು ಇದನ್ನು ಕಲಿತುಕೊಳ್ಳಿ
Oct 04, 2024 02:07 PM IST
ಯಶಸ್ಸಿನ ಶಿಖರ ತಲುಪಲು ಸ್ವಯಂ ನಿಯಂತ್ರಣ ಮಾರ್ಗ: ಸಮಸ್ಯೆಗಳನ್ನು ಎದುರಿಸುವ ಮೊದಲು ಇದನ್ನು ಕಲಿತುಕೊಳ್ಳಿ
- ಯಶಸ್ಸಿನ ಹಾದಿ ಸುಲಭವಾದದ್ದಲ್ಲ. ಅದಕ್ಕೆ ಸವಾಲುಗಳನ್ನು ಎದುರಿಸುವ ಛಲ, ಧೈರ್ಯ ಅಗತ್ಯವಾಗಿ ಬೇಕು. ಅಂದರೆ ಮಾತ್ರ ಯಶಸ್ಸು ಸಿದ್ಧಿಸುತ್ತದೆ. ಸುಲಭವಾಗಿ ಸವಾಲು ಎದುರಿಸಲು, ಯಶಸ್ಸು ಸಿಗಲು, ಸ್ವಯಂ ನಿಯಂತ್ರಣ ಸರಳ ಮಾರ್ಗವಾಗಿದೆ. ಸ್ವಯಂ ನಿಯಂತ್ರಣ ಸಾಧಿಸಲು ಇವುಗಳನ್ನು ಕಲಿತುಕೊಳ್ಳಿ.
ಇಂದಿನ ದಿನಗಳಲ್ಲಿ ಜಗತ್ತು ಅತಿ ವೇಗವಾಗಿ ಬೆಳೆಯುತ್ತಿದೆ. ಜೊತೆಗೆ ಒತ್ತಡ, ಗೊಂದಲಗಳು ಜನರನ್ನು ದಿನೇ ದಿನೇ ಕಾಡುತ್ತಿದೆ. ಅದರಿಂದಾಗಿ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವೆಂದರೆ ಸ್ವಯಂ ನಿಯಂತ್ರಣವನ್ನು ಹೊಂದುವುದಾಗಿದೆ. ಸ್ವಯಂ ನಿಯಂತ್ರಣದಿಂದ ವ್ಯಕ್ತಿಯು ಸುಲಭವಾಗಿ ತನಗೆ ಬೇಕಾದ ಆಯ್ಕೆಗಳನ್ನು ಆರಿಸಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ ಆಂತರಿಕವಾಗಿಯೂ ದೃಢತೆಯನ್ನು ತಂದುಕೊಡುತ್ತದೆ. ಆದರೂ ಆಧುನಿಕ ಯುಗದ ಸೋಷಿಯಲ್ ಮೀಡಿಯಾದಿಂದಾಗಿ ಚಂಚಲತೆ ಹಾಗೂ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಲ್ಲಿ ಎದುರಾಗುವ ದಿಢೀರ್ ಸಮಸ್ಯೆಗಳನ್ನು ಎದುರಿಸಲು ಹೆಣಗಾಡುವ ಪರಿಸ್ಥಿತಿ ಎದುರಾಗುತ್ತಿದೆ. ಅದು ಮಾನಸಿಕ ಕ್ಷೋಬೆಗೆ ಕಾರಣವಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಸ್ವಯಂ ನಿಯಂತ್ರಣ ಸಹಾಯ ಮಾಡುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿಡಲು, ಸಂಬಂಧಗಳನ್ನು ಸರಿದೂಗಿಸಿಕೊಂಡು ಹೋಗಲು ಹಾಗೂ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಸ್ವಯಂ ನಿಯಂತ್ರಣವು ನೆರವಾಗುತ್ತದೆ. ಹಾಗಾಗಿ ಇಂದಿನ ದಿನಗಳಲ್ಲಿ ಅಗತ್ಯವಾಗಿ ಬೇಕಾಗಿರುವ ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು, ಸಾಮರ್ಥ್ಯವನ್ನು ತೋರಿಸಲು, ಯಶಸ್ಸು ಸಾಧಿಸಲು ಸ್ವಯಂ ನಿಯಂತ್ರಣವನ್ನು ಕರಗತ ಮಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಒಮ್ಮೆ ಸ್ವಯಂ ನಿಯಂತ್ರಣ ಅಭ್ಯಾಸ ಮಾಡಕೊಂಡರೆ ಯಶಸ್ಸಿನ ಜೀವನ ನಿಮ್ಮದಾಗುತ್ತದೆ. ಸ್ವಯಂ ನಿಯಂತ್ರಣ ಸಾಧಿಸಲು ಬೇಕಾಗುವ ಸರಳ ಮಾರ್ಗೋಪಾಯಗಳು ಇಲ್ಲಿವೆ.
ಸ್ವಯಂ ನಿಯಂತ್ರಣಕ್ಕೆ ಸರಳ ಮಾರ್ಗೋಪಾಯಗಳು
ನಿಮ್ಮ ಸಮಸ್ಯೆಯನ್ನು ಮೊದಲು ಗುರುತಿಸಿ: ನೀವು ಯಾವ ವಿಷಯಕ್ಕೆ ಹೆಚ್ಚು ಗೊಂದಲಗೊಳ್ಳುತ್ತಿರಿ ಹಾಗೂ ಯಾವುದು ನಿಮ್ಮ ದೌರ್ಬಲ್ಯ ಎಂಬುದನ್ನು ಗುರುತಿಸುವುದು ಮೊದಲ ಹೆಜ್ಜೆಯಾಗಿದೆ. ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಭಾವೋದ್ವೇಗಕ್ಕೆ ಒಳಗಾಗುವ ಸಂದರ್ಭಗಳನ್ನು ನಿಭಾಯಿಸಲು ನಿಮ್ಮನ್ನು ನೀವು ಸ್ವಯಂ ನಿಯಂತ್ರಿಸಿಕೊಳ್ಳುವುದು ಮುಖ್ಯವಾಗಿದೆ. ಹಾಗಾದಾಗ ನೀವು ಸಮಸ್ಯೆಯ ಮೂಲ ಅರಿಯಲು ಸಾಧ್ಯ ಹಾಗೂ ಅದರಿಂದ ಹೊರಬರುವ ಮಾರ್ಗ ಕಂಡುಹಿಡಿಯಲೂ ಸಾಧ್ಯವಾಗುತ್ತದೆ. ಹಾಗಾಗಿ ನಿಮ್ಮ ಸಮಸ್ಯೆಗಳೇನು ಎಂಬುದನ್ನು ಗುರುತಿಸುವುದೇ ಮೊದಲ ಕೆಲಸವಾಗಿದೆ.
ಯೋಚಿಸಿ ಮುಂದುವರಿಯಿರಿ: ಯಾವುದೇ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮೊದಲು ಯೋಚಿಸುವುದನ್ನು ರೂಢಿಸಿಕೊಳ್ಳಿ. ಆ ಅಭ್ಯಾಸವು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ. ಸವಾಲುಗಳಿಗೆ ಯೋಚಿಸಿದೇ ತಕ್ಷಣ ಪ್ರತಿಕ್ರಿಯಿಸುವುದನ್ನು ಅದು ತಡೆಯುತ್ತದೆ. ಅದರ ಪರಿಣಾಮವಾಗಿ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ತೀರ್ಮಾನ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಕಠಿಣ ಪರಿಸ್ಥಿತಿಗಳಿಗೆ ಉತ್ತರಿಸಬೇಕಾದಾಗ ಸ್ವಲ್ಪ ಸಮಯ ತೆಗೆದುಕೊಳ್ಳಿ. ತಾರ್ಕಿಕವಾಗಿ ಯೋಚಿಸಿ, ಬೇಕಿದ್ದರೆ ಹಿರಿಯರ ಸಲಹೆ ತೆಗೆದುಕೊಳ್ಳಿ. ಈ ಶಿಸ್ತನ್ನು ರೂಢಿಸಿಕೊಳ್ಳುವುದರಿಂದ ನಿಮ್ಮ ಯೋಚನಾ ಲಹರಿ ಹೆಚ್ಚುತ್ತದೆ.
ಸ್ಪಷ್ಟವಾದ ಗುರಿಯಿರಲಿ: ಸ್ಪಷ್ಟ ಗುರಿಗಳನ್ನು ಹಾಕಿಕೊಳ್ಳಿ. ಅದಕ್ಕೆ ಬೇಕಾದ ಪ್ರಯತ್ನ ಮಾಡಿ. ನಿಮ್ಮ ಉದ್ದೇಶಗಳ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಅದು ನಿಮಗೆ ಸ್ವಯಂ ನಿಯಂತ್ರಣವನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಸಾಧನೆ ಮಾಡಬೇಕಾಗಿರುವುದು ಏನು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಅದಕ್ಕೆ ಪ್ರಥಮ ಆದ್ಯತೆ ನೀಡಿ. ಕ್ರಿಯಾಶೀಲರಾಗಿ ಯೋಜನೆಯನ್ನು ಸಿದ್ಧಪಡಿಸಿ. ಹೀಗೆ ಮಾಡುವುದರಿಂದ ನಿಮ್ಮ ಸಾಧನೆಯ ಛಲ ಹೆಚ್ಚುತ್ತದೆ. ಜೊತೆಗೆ ಪ್ರೇರಣೆಯೂ ಸಿಗುತ್ತದೆ. ಅದು ನಿಮಗೆ ನಿಮ್ಮ ಗುರಿ ತಲುಪಲು ಸುಲಭದ ಮಾರ್ಗವನ್ನು ನೀಡುತ್ತದೆ.
ಶಿಸ್ತಿನಿಂದ ದಿನ ಪ್ರಾರಂಭಿಸಿ: ಪ್ರತಿದಿನವನ್ನು ಸುಂದರವಾಗಿ ಪ್ರಾರಂಭಿಸುವುದು ಬಹಳ ಅಗತ್ಯ. ಸಕಾರಾತ್ಮಕ ಅಭ್ಯಾಸಗಳಿಂದ ದಿನವನ್ನು ಪ್ರಾರಂಭಿಸಿ. ಉತ್ತಮ ದಿನಚರಿಯನ್ನು ರೂಢಿಸಿಕೊಳ್ಳುವುದು ಸ್ವಯಂ ನಿಯಂತ್ರಣ ಸಾಧಿಸಲು ಇಡುವ ಮೊದಲ ಹೆಜ್ಜೆಯಾಗಿದೆ. ಬೆಳಿಗ್ಗೆ ಮಾಡುವ ಧ್ಯಾನ, ವ್ಯಾಯಾಮಗಳು ಜೀವನದಲ್ಲಿ ಶಿಸ್ತು ಮತ್ತು ಮಾನಸಿಕ ದೃಢತೆ ಸಾಧಿಸಲು ನೆರವಾಗುತ್ತದೆ. ಈ ಆರೋಗ್ಯಕರ ಅಭ್ಯಾಸಗಳಿಂದ ಸ್ವಯಂ ನಿಯಂತ್ರಣ ಸಾಧಿಸಲು ನೆರವಾಗುತ್ತವೆ. ಧನಾತ್ಮಕ ಹಾಗೂ ರಚನಾತ್ಮಕವಾಗಿ ಯೋಚಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು.
ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳಿ: ಪ್ರತಿದಿನ ನೀವೇನು ಮಾಡಿದಿರಿ ಎಂಬುದನ್ನು ನೀವೇ ವಿಶ್ಲೇಷಿಸಿಕೊಳ್ಳಿ. ಅದು ನಿಮ್ಮ ಆಲೋಚನೆ, ಭಾವನೆ ಮತ್ತು ಕೆಲಸಗಳ ಬಗ್ಗೆ ತಿಳಿಸುತ್ತದೆ. ಅದರ ಮೂಲಕ ಸ್ವಯಂ ನಿಯಂತ್ರಣವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಪ್ರತಿದಿನ ನೀವು ಮಾಡುವ ಸ್ವಯಂ ವಿಶ್ಲೇಷಣೆ ನಿಮಗೆ ಅನುಭವವನ್ನು ನೀಡುತ್ತದೆ ಮತ್ತು ನಿಮ್ಮಲ್ಲಿರುವ ಕೊರತೆ ಹಾಗೂ ಪ್ರಗತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಸುಧಾರಣೆ ಮಾಡಿಕೊಳ್ಳಬೇಕಾದ ವಿಷಯಗಳ ಬಗ್ಗೆ ಸ್ಪಷ್ಟ ಅರಿವು ಮೂಡಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಅದೇ ರೀತಿಯ ಸಮಸ್ಯೆ ಅಥವಾ ಸಂದರ್ಭಗಳು ಬಂದಾಗ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸ್ವಯಂ ವಿಶ್ಲೇಷಣೆ ಬಹಳ ಮಹತ್ವದ್ದಾಗಿದೆ.