ನಿಜ ಜ್ಞಾನಕ್ಕಿಂತ ಅತಿಯಾದ ಆತ್ಮವಿಶ್ವಾಸಕ್ಕೆ ಗೌರವ ಜಾಸ್ತಿ, ಓವರ್ ಕಾನ್ಫಿಡೆನ್ಸ್ ಹೊಂದುವ ಮುನ್ನ ಈ ವಿಚಾರ ನೆನಪಿರಲಿ; ರೂಪಾ ರಾವ್ ಬರಹ-mental health overconfidence is more respected than true knowledge remember this before get overconfidence rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಜ ಜ್ಞಾನಕ್ಕಿಂತ ಅತಿಯಾದ ಆತ್ಮವಿಶ್ವಾಸಕ್ಕೆ ಗೌರವ ಜಾಸ್ತಿ, ಓವರ್ ಕಾನ್ಫಿಡೆನ್ಸ್ ಹೊಂದುವ ಮುನ್ನ ಈ ವಿಚಾರ ನೆನಪಿರಲಿ; ರೂಪಾ ರಾವ್ ಬರಹ

ನಿಜ ಜ್ಞಾನಕ್ಕಿಂತ ಅತಿಯಾದ ಆತ್ಮವಿಶ್ವಾಸಕ್ಕೆ ಗೌರವ ಜಾಸ್ತಿ, ಓವರ್ ಕಾನ್ಫಿಡೆನ್ಸ್ ಹೊಂದುವ ಮುನ್ನ ಈ ವಿಚಾರ ನೆನಪಿರಲಿ; ರೂಪಾ ರಾವ್ ಬರಹ

ರೂಪಾ ರಾವ್ ಬರಹ: ಅತಿಯಾದ ಆತ್ಮವಿಶ್ವಾಸ ಒಳಿತಲ್ಲ ಎನ್ನುತ್ತಾರೆ, ಆದರೆ ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸದಿಂದಲೇ ಜನರು ಗೌರವ ಗಳಿಸುತ್ತಾರೆ. ಓವರ್‌ ಕಾನ್ಫಿಡೆನ್ಸ್ ಇರುವವರಿಗೆ ಸಮಾಜದಲ್ಲಿ ಗೌರವ ಜಾಸ್ತಿ, ಅಂಥವರು ಸುಲಭವಾಗಿ ಸ್ಥಾನಮಾನಗಳನ್ನು ಗಳಿಸುತ್ತಾರೆ. ಆದರೆ ಅತಿಯಾದ ಆತ್ಮವಿಶ್ವಾಸ ಹೊಂದುವ ಮುನ್ನ ಈ ವಿಚಾರಗಳನ್ನು ತಪ್ಪದೇ ನೆನಪಿಟ್ಟುಕೊಳ್ಳಬೇಕು.

ಓವರ್ ಕಾನ್ಫಿಡೆನ್ಸ್
ಓವರ್ ಕಾನ್ಫಿಡೆನ್ಸ್ (PC: Canva)

ಆತ್ಮವಿಶ್ವಾಸ ಇರಬೇಕು, ಆದ್ರೆ ಅತಿಯಾದ ಆತ್ಮವಿಶ್ವಾಸ ಎಂದಿಗೂ ಒಳಿತಲ್ಲ ಎಂದು ಹಲವರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಕೆಲವೊಮ್ಮೆ ನಿಜವಾದ ಜ್ಞಾನಕ್ಕಿಂತ ಅತಿಯಾದ ಆತ್ಮವಿಶ್ವಾಸ ಹೊಂದಿದವರೇ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ತಮಗೆ ಏನೂ ಗೊತ್ತಿಲ್ಲ ಅಂದ್ರು ಎಲ್ಲಾ ಗೊತ್ತು ಎನ್ನುವಂತಿರುವ ಜನರೇ ಜೀವನದಲ್ಲಿ ಹೆಚ್ಚು ಮುಂದೆ ಬರುತ್ತಾರೆ. ಜ್ಞಾನವಿದ್ದು ಆತ್ಮವಿಶ್ವಾಸ ಇಲ್ಲ ಎಂದರೇ ಮುಂದೆ ಬರಲು ಸಾಧ್ಯವಿಲ್ಲ. ಅತಿಯಾದ ಆತ್ಮವಿಶ್ವಾಸ ಹೊಂದಿರುವವರ ಗುಣ ಹೇಗಿರುತ್ತದೆ, ಅತಿಯಾದ ಆತ್ಮವಿಶ್ವಾಸ ಹೊಂದಿರುವವರ ಗುಣಗಳು, ಓವರ್ ಕಾನ್ಫಿಡೆನ್ಸ್ ಹೊಂದಿರುವವರು ನೆನಪಿಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರೂಪಾರಾವ್‌.

ರೂಪಾರಾವ್ ಬರಹವನ್ನು ನೀವೂ ಓದಿ

‘ಅತಿಯಾದ ಆತ್ಮವಿಶ್ವಾಸ, ನಿಜವಾದ ಜ್ಞಾನಕ್ಕಿಂತ ಹೆಚ್ಚಾಗಿ ಗೌರವ ಕೊಡಿಸಿಕೊಳ್ಳುತ್ತದೆ‘ ಬೆಂಜಮಿನ್ ಫ್ರಾಂಕ್ಲಿನ್.

ನಾವೆಲ್ಲಾ ಸಾಮಾನ್ಯವಾಗಿ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದೇ ಹೇಳಿರುತ್ತೇವೆ, ಕೇಳಿಕೊಂಡು ಬಂದಿರುತ್ತೇವೆ. ಉತ್ತರ ಕುಮಾರನ ಕಥೆಯನ್ನೋ ಅಥವಾ ಗ್ರೀಕ್‌ನ ಲೂಸಿಫರ್ ಕಥೆಯನ್ನೋ ಕೇಳಿದ್ದೇವೆ.

ಆದರೆ ಪ್ರಾಕ್ಟಿಕಲಿ ತಾವು ಮಾಡುವ ಕೆಲಸದಲ್ಲಿ ಅಂತಹ ಪರಿಣತಿ ಇಲ್ಲದಿದ್ದರೂ ತಮ್ಮ ಬಗೆಗೆ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುವವರಿಗೇ ಕೆಲಸ ಹಾಗೂ ಜೀವನದಲ್ಲಿ ಮುಂದೆ ಹೋಗುವ ಸನ್ನಿವೇಶ, ಪ್ರಮೋಶನ್‌ಗಳು, ಅವಕಾಶಗಳು ಹುಡುಕಿಕೊಂಡು ಬರುತ್ತವೆ.

‘ಅವನಿ/ಳಿಗೆ ಇದೆಲ್ಲಾ ಕೆಲಸ ಮಾಡಲು ಬರುವುದೇ ಇಲ್ಲ, ನಾನೇ ಹೇಳಿಕೊಟ್ಟಿದ್ದು. ಆದರೂ ನೋಡು ನನ್ನನ್ನು ಹಿಂದೆ ಹಾಕಿ ಕಾರ್ಪೋರೇಟ್ ಏಣಿಯಲ್ಲಿ/ ರಾಜಕೀಯದಲ್ಲಿ ಮೇಲೆ ಮೇಲೆ ಏರಿ ಹೋದ‘ ಎಂದು ನೀವೋ ಅಥವಾ ಇತರರು ಹೀಗೆ‌ ಅಂದುಕೊಂಡಿರಬಹುದು.

ಇದಕ್ಕೆ ಕಾರಣ ಆ ಜನರಿಗೆ ಇರುವ ತಮ್ಮ‌ ಬಗೆಗಿನ ಅತಿಯಾದ ಆತ್ಮವಿಶ್ವಾಸ ಮತ್ತು ನಾವು ಸಾಧಿಸಬಲ್ಲೆವು ಎಂಬ ಸ್ವಭ್ರಮೆ.

ಇದನ್ನು ಕ್ಯಾಮರೂನ್ ಆಂಡರ್ಸನ್ ಎನ್ನುವವರು 2012ರಲ್ಲಿ ಶುರು ಮಾಡಿದ ಸೈಕಾಲಜಿಕಲ್ ಆರು ಪ್ರಯೋಗಗಳ ಸರಣಿಯಲ್ಲಿ ದೃಢೀಕರಿಸಿದರು.

ಅತಿಯಾದ ಆತ್ಮವಿಶ್ವಾಸದ ಪ್ರಯೋಜನ 

* ಅತಿಯಾದ ಆತ್ಮವಿಶ್ವಾಸವು ಸಾಮಾಜಿಕ ಸ್ಥಾನಮಾನವನ್ನು ಪಡೆಯಲು ಜನರಿಗೆ ಸಹಾಯ ಮಾಡುತ್ತದೆ.

* ತಮ್ಮನ್ನು ಇತರರಿಗಿಂತ ಉತ್ತಮರು ಎಂದು ನಂಬಿದ ಜನರು, ಅಂತಹ ಪರಿಣತಿ ಹಾಗೂ ಅನುಭವ ಹೊಂದಿಲ್ಲದಿದ್ದರೂ ಸಹ, ಸಾಮಾಜಿಕ, ರಾಜಕೀಯ ಹಾಗು ಕಾರ್ಪೋರೇಟ್ ಏಣಿಯಲ್ಲಿ ಉನ್ನತ ಸ್ಥಾನ ಗಳಿಸಿಕೊಳ್ಳುತ್ತಾರೆ.

* ಆ ಉನ್ನತ ಸಾಮಾಜಿಕ ಸ್ಥಾನಮಾನವನ್ನು ಪಡೆಯುವ ಉದ್ದೇಶ ಇದ್ದುದರಿಂದಲೇ ಅವರು ಅತಿಯಾದ ಆತ್ಮವಿಶ್ವಾಸವನ್ನು ಹೊಂದುತ್ತಾರೆ.

ಇದರಿಂದ ಅದೆಷ್ಟೋ ನಾಯಕರು ಅಷ್ಟು ಸಮರ್ಥರಿಲ್ಲದಿದ್ದರೂ ಕೂಡ ಅತಿಯಾದ ಆತ್ಮವಿಶ್ವಾಸ ತೋರಿಸುವುದು ಏಕೆ ಎಂದು ಗೊತ್ತಾಗುತ್ತದೆ.

* ಕಾರ್ಪೋರೇಟ್‌ಗಳಲ್ಲಿ/ರಾಜಕೀಯದಲ್ಲಿ ಹಾಗೂ ಯಾವುದೇ ರಂಗದಲ್ಲಿಯೇ ಆಗಲಿ ಅವರ ಕಾರ್ಯದಕ್ಷತೆಗೆ ಅಷ್ಟಿಲ್ಲದಿದ್ದರೂ ತಾವು ಸಮರ್ಥರು ಎಂದು ತೋರಿಸಿಕೊಳ್ಳುವ ಜನರನ್ನು ಇತರರು ಸುಲಭವಾಗಿ ನಂಬಿಯೂ ಬಿಡುತ್ತಾರೆ.

ನೋಡಿ, ಬೇಕಾದರೆ ಜ್ಞಾನ ಪ್ರದರ್ಶನಕ್ಕೆ ಅವಕಾಶಗಳು ಕಡಿಮೆ ಆದರೆ ಆತ್ಮವಿಶ್ವಾಸವನ್ನು ಆಗಾಗ ಪ್ರದರ್ಶಿಸಲು ಯಥೇಚ್ಛವಾಗಿ ಅವಕಾಶಗಳು ಸಿಗುತ್ತಿರುತ್ತವೆ. ಎಮ್‌ಎಲ್‌ಎಮ್ (ಮಲ್ಟಿ ಲೆವೆಲ್ ಮಾರ್ಕೆಟಿಂಗ್) ನಲ್ಲಿ ಜನ ಬೇಸ್ತು ಬೀಳುವುದು ವೇದಿಕೆಯ ಮೇಲೆ ಮಾರಾಟಗಾರ ಲೀಡರ್‌ಗಳು ತೋರಿಸುವ ಅತೀವ ಆತ್ಮವಿಶ್ವಾಸವೇ ಕಾರಣ.

ಆತ್ಮವಿಶ್ವಾಸವನ್ನು ಪ್ರದರ್ಶಿಸುವವರಿಗೇ ಅತಿಯಾದ ಅವಕಾಶಗಳು ಸಿಗುತ್ತವೆ. ಪ್ರತಿಷ್ಠಿತ ಕಾಲೇಜೊಂದರಲ್ಲಿ ಕೆಲಸಕ್ಕಾಗಿ ಕ್ಯಾಂಪಸ್ ಇಂಟರ್ವ್ಯೂ ನಡೆದಿತ್ತು. ಅದರಲ್ಲಿ 6.5 ಸಿಜಿಪಿಎ ಇಂದ 9.5 ಸಿಜಿಪಿಏ ಇದ್ದ ವಿದ್ಯಾರ್ಥಿಗಳೂ ಸಂದರ್ಶನ ಅಟೆಂಡ್ ಮಾಡಿದರು. ಟೆಸ್ಟ್ ಎಲ್ಲಾ ಆಯಿತು. ಅದರಲ್ಲಿ ಜಾಸ್ತಿ ಮಾರ್ಕ್ಸ್ ಗಳಿಸಿದವ 9.0 ಸಿಜಿಪಿಎ ಇದ್ದವ ಆಯ್ಕೆ ಆಗಲಿಲ್ಲ ಆದರೆ ಏಳು ಸಿಜಿಪಿಎ ಇದ್ದವ ಟೆಸ್ಟಿನಲ್ಲಿ ಹಿಂದಿನವನಿಗಿಂತ ಕಡಿಮೆ ಅಂಕ ಗಳಿಸಿದರೂ ತನ್ನ ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಗಿಟ್ಟಿಸಿಕೊಂಡ. ಇದು ನಿಜವಾದ ಘಟನೆ.

ಅಷ್ಟೇ ಏಕೆ, ನನ್ನ ಜೊತೆ ಓದಿದವರು, ಕೆಲವರು ನನ್ನೊಡನೆಯೇ ಟ್ರೈನಿಂಗ್ ಅಟೆಂಡ್ ಮಾಡಿದವರಲ್ಲಿ ಕೆಲವರು ತಿಳುವಳಿಕೆಯಲ್ಲಿ, ಜ್ಞಾನದಲ್ಲಿ, ಓದಿನಲ್ಲಿ ಅಂಕದಲ್ಲಿ ನನಗಿಂತ ಕಡಿಮೆ‌ ಇದ್ದವರು ಅತ್ಯಂತ ಉನ್ನತ ಹುದ್ದೆ, ಅವಕಾಶಗಳನ್ನು ಗಳಿಸಿಕೊಂಡರು. ಅದಕ್ಕೆಲ್ಲಾ ಕಾರಣ ಮೊದಲನೆಯದು ಅವರ ಅತಿಯಾದ ಆತ್ಮವಿಶ್ವಾಸ ಎರಡನೆಯದು ಆ ಅತಿಯಾದ ಆತ್ಮವಿಶ್ವಾಸದ ಕಾರಣದಿಂದ ಅವರಗಳು ಮಾಡಿಕೊಂಡ ನೆಟ್ವರ್ಕ್.

* ನಿಜ ಹೇಳಬೇಕು ಅಂದರೆ ನಿಜವಾದ ಸಮರ್ಥ ಜನರಿಗೆ ಒಂದು ರೀತಿ ಅಹಂಭಾವ ಅಥವಾ ಹಿಂದೆ ನಿಲ್ಲುವ ಗುಣ ಇರುತ್ತದೆ. ತಾವಾಗಿಯೇ ಮುಂದೆ ಹೋಗುವ ಸ್ವಭಾವ ಬಹಳಷ್ಟು ಜನರಲ್ಲಿ ಕಡಿಮೆ ಇರುತ್ತದೆ. ಜನರೇ ತನ್ನನ್ನು ಗುರುತಿಸಲಿ ಎಂಬ ಭಾವವೋ ಅಥವಾ ತಾನಿನ್ನೂ ಕಲಿಯಬೇಕು‌ ಎಂಬ ನಿಲ್ಲದ ಓಟವೋ ಅವರು ತಮ್ಮ ಮಾರ್ಕೆಟಿಂಗ್ ಅನ್ನು ತಾವು ಮಾಡಿಕೊಳ್ಳಲಾರರು.

ಒಬ್ಬ ಬ್ರಾಂಡಿಂಗ್ ಮಾಡುವ ಎಕ್ಸೆಕ್ಯೂಟೀವ್ ಹೇಳಿದ್ದು ‘ನಿಮ್ಮ ಬಗ್ಗೆ ನೀವೇ‌ ಹೇಳಿಕೊಳ್ಳಲಾರಿರಿ‌ ಅಂದರೆ ಬೇರೆಯವರು ಹೇಗೆ ಅರಿಯುತ್ತಾರೆ‘ ಇದು ನಿಜವೂ ಕೂಡ.

ಆತ್ಮ ನಂಬಿಕೆಯ ಶಕ್ತಿ 

ಆತ್ಮವಿಶ್ವಾಸ ಅತಿಯಾಗಿಯೇ ಇರಲಿ, ಆದರೆ ಅದಕ್ಕೂ ಒಂದು ಶಕ್ತಿ ಇದೆ ರೀತಿ ನೀತಿ ಇದೆ. ಅದು ಹೀಗಿದ್ದರೆ ಮಾತ್ರ ಅತಿಯಾದ ಆತ್ಮವಿಶ್ವಾಸಿಗಳು ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಾರೆ, ಅವುಗಳು ಕೆಳಗಿವೆ

* ಅತಿಯಾದ ಆತ್ಮವಿಶ್ವಾಸದ ವ್ಯಕ್ತಿಗಳ ಅತಿಯಾದ ಆತ್ಮವಿಶ್ವಾಸ ಇತರರಿಗೆ ಬಡಾಯಿ ಎಂದೆನಿಸಬಾರದು ಇದು ಬಹಳ ಮುಖ್ಯವಾದ ಅಂಶ. ಅತಿಯಾದ ಆತ್ಮವಿಶ್ವಾಸ ಹೊಂದಿರುವುದು ಬೇರೆ ಇತರರ ಮುಂದೆ ಜಂಭ ಕೊಚ್ಚಿಕೊಳ್ಳುವುದು ಬೇರೆ.

* ಈ ಅತಿಯಾದ ಆತ್ಮವಿಶ್ವಾಸ ನಾರ್ಸಿಸಿಸ್ಟಿಕ್ ಮನೋಭಾವದಂತೆ ಕಂಡು ಬರಬಾರದು. ಯಾರಿಗೆ ಹೆಚ್ಚು ಆತ್ಮವಿಶ್ವಾಸ ಇರುತ್ತದೆಯೋ ಅವರು ಜನರನ್ನು ಓಲೈಸಿಕೊಂಡು ಅವರ ಪ್ರೀತಿಯನ್ನೂ ಗಳಿಸಿಕೊಂಡುಬಿಡುತ್ತಾರೆ .

* ಜಾಸ್ತಿ‌ ಸಮಯ‌ ಸಿಕ್ಕಾಗೆಲ್ಲಾ ಮಾತನಾಡುವುದು. ಆತ್ಮವಿಶ್ವಾಸದ ಟೋನ್ ಅನ್ನು ಬಳಸುವುದು. ಸಾಧ್ಯವಾದಷ್ಟು ಮಾಹಿತಿಗಳನ್ನು ಕೊಡುವುದು ಮತ್ತು ಪರಿಣಿತರಂತೆ ಸಹಾಯಕ್ಕೆ ಧಾವಿಸುವುದು. ಶಾಂತವಾಗಿ ಮತ್ತು ಆತಂಕಕ್ಕಳಗಾಗದೇ ವರ್ತಿಸುವುದು

* ಇನ್ನೊಂದು ಮುಖ್ಯವಾದ ಪಾಯಿಂಟ್ ಹೀಗೆ ಆತ್ಮವಿಶ್ವಾಸ ಹೊಂದಿರುವವರು ಎಲ್ಲರೂ ಬಳಿ ನಾನು ಎಕ್ಸಪರ್ಟ್‌ ಅದೂ‌ ಇದೂ‌ ಎಂದೆಲ್ಲಾ ಹೇಳಿಕೊಳ್ಳಲ್ಲ ಹಾಗೆಲ್ಲಾ ಹೇಳಿಕೊಂಡು ಇತರರಲ್ಲಿ ಅಸಹ್ಯ ಕಿರಿಕಿರಿ ತರುವುದಿಲ್ಲ ಬದಲಾಗಿ ತಮ್ಮ ನಡವಳಿಕೆಯಲ್ಲಿ ಸೂಕ್ಷ್ಮವಾಗಿ ತಮ್ಮ ವಿಶ್ವಾಸವನ್ನು ತೋರಿಸುತ್ತಾರೆ.

* ಕೊನೆಯದು ದೊಡ್ಡ ಸ್ಥಾನಮಾನ ಹೊಂದಲೇಬೇಕೆಂಬ ಹಂಬಲದ ಉದ್ದೇಶ ಹೆಚ್ಚು ಆತ್ಮವಿಶ್ವಾಸವನ್ನು ಉಂಟು ಮಾಡುತ್ತದೆ.

* ಆತ್ಮವಿಶ್ವಾಸದ ಬಗ್ಗೆ ಇತರರ ಗ್ರಹಿಕೆ ನಿಜವಾದ ಸಾಮರ್ಥ್ಯ ಇರುವವರನ್ನು ಕಡೆಗಣಿಸುತ್ತದೆಯಾ

* ಈ ಅಧ್ಯಯನದ ಪ್ರಕಾರ ಜನರು ತಮ್ಮನ್ನು ಆಳಲು ಅತಿಯಾದ ಆತ್ಮವಿಶ್ವಾಸ ಇರುವವರನ್ನು ಆರಿಸಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಉತ್ತಮ ಕೆಲಸವನ್ನು ಮಾಡಬಲ್ಲವರನ್ನು ನಿರ್ಲಕ್ಷಿಸುತ್ತಿದ್ದೇವೆಯೇ? ಈ ಉತ್ತರ ನಿಮಗೆ ಬಿಟ್ಟಿದ್ದು

* ಇನ್ನೊಂದು ಅಧ್ಯಯನದ ಪ್ರಕಾರ ಅತಿಯಾದ ಆತ್ಮವಿಶ್ವಾಸದ ಒಂದು ತೊಂದರೆ ಅಂದರೆ, ಇದು ಸರಿಯಾದ ಯೋಚನೆ ಇಲ್ಲದೆ ಮಾಡುವ ನಿರ್ಧಾರ ಮತ್ತು ಅತಿಯಾದ ಕಮಿಟ್ಮೆಂಟ್ ಕೊಡುವಂತೆ ಮಾಡುತ್ತದೆ.

* ಅತಿಯಾದ ಆತ್ಮವಿಶ್ವಾಸ ಇರುವ ನಾಯಕರು ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ಅಪಾಯಕಾರಿ ಅಥವಾ ಯೋಚಿಸದೇ ದುಡುಕು ನಿರ್ಧಾರ ಅಥವ ಆಯ್ಕೆಗಳನ್ನು ಮಾಡುತ್ತಾರೆ,

* ಇದು ದೀರ್ಘಾವಧಿಯಲ್ಲಿ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು, ಆದರೆ ಅದರಿಂದ ಮೊದ ಮೊದಲಲ್ಲಿ ಆದ ಸಾಮಾಜಿಕ ಲಾಭಗಳು ಈ ಪರಿಣಾಮಗಳನ್ನು ತಗ್ಗಿಸುತ್ತವೆ.

ಸೆಪ್ಟೆಂಬರ್ 23ರಂದು ರೂಪಾ ರಾವ್ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಹಲವರು ಈ ಪೋಸ್ಟ್ ನೋಡಿದ್ದು 88 ಮಂದಿ ಲೈಕ್ ಮಾಡಿದ್ದು, 42 ಮಂದಿ ಕಾಮೆಂಟ್ ಮಾಡಿದ್ದಾರೆ. 

ರೂಪಾರಾವ್ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ 

‘ನನಗೆ ಆತ್ಮವಿಶ್ವಾಸ ಕೂಡ ಸರಿಯಾಗಿ ತೋರಿಸಲಿಕ್ಕೆ ಬರೋದಿಲ್ಲ. ಅಲ್ಪ ಸ್ವಲ್ಪ ಗೊತ್ತಿದ್ದರೂ ಹೇಳ್ಬೇಕೋ, ಬೇಡವೋ ತಪ್ಪಾದ್ರೆ ಏನ್ಮಾಡೋದು ಅಂತ ಸಣ್ಣ ಭಯ ಇರುತ್ತೆ. ಈ ಅತೀ ಆತ್ಮ ವಿಶ್ವಾಸ ಇರುವವರನ್ನು ನೋಡಿದಾಗ ಇವರಿಗೆ ತುಂಬಾ ವಿಷಯ ಗೊತ್ತು ಅನ್ಕೊಂಡಿದ್ದೆ. ಅವರ ಮುಂದೆ ಕಿಳೀರಿಮೆ ಆಗ್ತಾ ಇತ್ತು. ಈಗ ಇವರ ನಿಜವಾದ ಬಂಡವಾಳ ಗೊತ್ತಾಯ್ತು‘ ಮಧುಸೂದನ್ ಆರ್‌ಬಿ ಕಾಮೆಂಟ್ ಮಾಡಿದ್ದಾರೆ. 

‘ಇಲ್ಲಿ ಅತಿ ಆತ್ಮ ವಿಶ್ವಾಸಕ್ಕೆ ಉದಾಹರಣೆ ಎಲ್ಲಿದೆ? ಇಬ್ಬರ ಮಧ್ಯೆಯ ತುಲನೆ ಅಸ್ವಾಭಾವಿಕವಾದುದು.... ಅಸಾಧ್ಯವಾದುದನ್ನು (ಸಾವಿರ ಕೇಜಿಯ ಬಂಡೆಯನ್ನು ಮುಷ್ಠಿಯಿಂದ ಗುದ್ದಿ ಒಡೆಯುತ್ತೇನೆ- ಸರಿಸುತ್ತೇನೆ ಅನ್ನುವಂತದ್ದು) ಮಾಡುತ್ತೇನೆ ಅನ್ನುವುದು ಅತಿ ಆತ್ಮವಿಶ್ವಾಸವೇ ಹೊರತು ಪಾಸಿಬಿಲಿಟಿ ಇರುವ ಏನನ್ನೇ ಆದರೂ ಮಾಡುತ್ತೇನೆನ್ನುವುದು ಆತ್ಮವಿಶ್ವಾಸವೇ‘ ದೇವಿ ಪುತ್ರನ್ ಕಾಮೆಂಟ್ ಮೂಲಕ ತಿಳಿಸಿದ್ದಾರೆ. 

mysore-dasara_Entry_Point