logo
ಕನ್ನಡ ಸುದ್ದಿ  /  ಜೀವನಶೈಲಿ  /  ವೃತ್ತಿ ಬದುಕಿನ ಒತ್ತಡ ನಿರ್ವಹಿಸುವುದು ಹೇಗೆ? ಕೆಲಸದ ಒತ್ತಡದಿಂದ ಹೊರಬರಲು ಇಲ್ಲಿದೆ 8 ಸರಳ ಸೂತ್ರಗಳು – ಮನದ ಮಾತು ಅಂಕಣ

ವೃತ್ತಿ ಬದುಕಿನ ಒತ್ತಡ ನಿರ್ವಹಿಸುವುದು ಹೇಗೆ? ಕೆಲಸದ ಒತ್ತಡದಿಂದ ಹೊರಬರಲು ಇಲ್ಲಿದೆ 8 ಸರಳ ಸೂತ್ರಗಳು – ಮನದ ಮಾತು ಅಂಕಣ

Reshma HT Kannada

Oct 18, 2024 09:15 AM IST

google News

ಮನದ ಮಾತು: ಭವ್ಯಾ ವಿಶ್ವನಾಥ್‌

    • ಇತ್ತೀಚಿನ ದಿನಗಳಲ್ಲಿ ವೃತ್ತಿ ಜೀವನದ ಒತ್ತಡವು ಹಲವು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅತಿಯಾದ ಕೆಲಸದ ಒತ್ತಡವು ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಯ ಜೊತೆಗೆ ಹೃದಯಾಘಾತದ ಮೂಲಕ ಪ್ರಾಣಕ್ಕೂ ಕಂಟಕವಾಗುತ್ತಿದೆ. ಕೆಲಸದ ಒತ್ತಡವನ್ನು ನಿಭಾಯಿಸಲು ಇರುವ ಕೆಲವು ಸರಳ ಸೂತ್ರಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್‌.
ಮನದ ಮಾತು: ಭವ್ಯಾ ವಿಶ್ವನಾಥ್‌
ಮನದ ಮಾತು: ಭವ್ಯಾ ವಿಶ್ವನಾಥ್‌

‘ವರ್ಕ್ ಸ್ಟ್ರೆಸ್‌‘ ಇತ್ತೀಚಿನ ದಿನಗಳಲ್ಲಿ ಹೆಚ್ಚು ಭಯ ಹುಟ್ಟಿಸುತ್ತಿರುವ ಪದ ಇದಾಗಿದೆ. ಕೆಲಸದ ಒತ್ತಡವು ನಮ್ಮಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತಿದೆ. ಇದರಿಂದ ಮಾನಸಿಕ ಸಮಸ್ಯೆಗಳಷ್ಟೇ ಅಲ್ಲ ಜೀವನಶೈಲಿಗೆ ಸಂಬಂಧಿಸಿದ ದೈಹಿಕ ಸಮಸ್ಯೆಗಳು ಎದುರಾಗುತ್ತಿವೆ. ಹಲವರು ಕೆಲಸದ ಒತ್ತಡದಿಂದ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒತ್ತಡ ನಿರ್ವಹಣೆಯ ಮಾರ್ಗವನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಕೆಲಸದಲ್ಲಿನ ಒತ್ತಡವನ್ನು ನಿರ್ವಹಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

“ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ॥ ಮಾ ಕರ್ಮಫಲಹೇತುರ್ಭೂರ ಮಾ ತೇ ಸನ್ಗೋಸ್ತ್ವಕರ್ಮಣಿ” -

ಅನುವಾದ: ನಿರ್ದಿಷ್ಟ ಫಲಿತಾಂಶವನ್ನು ನಿರೀಕ್ಷಿಸಿ ಕರ್ತವ್ಯದಲ್ಲಿ ತೊಡಗುವವರು ನಿರೀಕ್ಷಿತ ಫಲ ದೊರೆಯದೇ ಹೋದಾಗ ವ್ಯಾಕುಲರಾಗುತ್ತಾರೆ. ಇದನ್ನು ನಿವಾರಿಸಿಕೊಳ್ಳಲು ನಿರ್ದಿಷ್ಟ ಬಗೆಯ ಫಲವನ್ನು ನಿರೀಕ್ಷಿಸದೆ ಕರ್ತವ್ಯ ನಿರ್ವಹಣೆಯನ್ನಷ್ಟೇ ಮುಖ್ಯವಾಗಿ ಪರಿಗಣಿಸಬೇಕು‘ ಎಂದು ಹೇಳಬಹುದು. ವೃತ್ತಿಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮೇಲಿನ ಭಗವದ್ಗೀತೆಯ ಸಾಲುಗಳು ಬಹಳ ಉಪಯುಕ್ತವಾಗಿದೆ.

ನಮ್ಮ ವೃತ್ತಿಜೀವನದಲ್ಲಿ ಬಹಳ ಸಲ ನಾವು ಮಾಡುವ ಕೆಲಸ ಕಾರ್ಯಗಳಿಗಿಂತ, ಅವುಗಳ ಫಲಿತಾಂಶದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುತ್ತೇವೆ. ನಾನು ವಿಫಲನಾದರೆ? ಅಯ್ಯೋ ಹಾಗೆ ಆಗಿಬಿಟ್ಟರೆ? ಫಲಿತಾಂಶ ನಾನು ಅಂದುಕೊಂಡಂತೆ ಆಗದಿದ್ದರೆ? ಬೇರೆಯವರಿಗೆ ನನ್ನ ಕೆಲಸ ಇಷ್ಟವಾಗದಿದ್ದರೆ? ಅಥವಾ ಅತಿಯಾದ ಅಪೇಕ್ಷೆಗಳಲ್ಲಿ ಕಳೆದು ಹೋಗುವುದು, ‘ಫಲಿತಾಂಶ ನಾನು ಅಂದುಕೊಂಡಂತೆ ಬಂದರೆ ಹೇಗೆ ಆಚರಿಸಬೇಕು? ನಾನು ಎಷ್ಟು ಹೆಮ್ಮೆ ಪಡುತ್ತೀನಿ, ಎಲ್ಲರೂ ನನ್ನನ್ನು ಎಷ್ಟು ಮೆಚ್ಚಬಹುದು? ಪ್ರಶಂಸಿಸಬಹುದು? ಹೀಗೆ ನಾನಾ ತರಹದ ಫಲಗಳ ಬಗ್ಗೆ ವಿಪರೀತ ಯೋಚಿಸಿ, ನಿರ್ದಿಷ್ಟವಾದ ಫಲಗಳನ್ನು ನಿರೀಕ್ಷಿಸಿ, ಫಲಗಳು ದೊರೆಯದೇ ಇದ್ದಾಗ ದುಃಖಕ್ಕೆ ಈಡಾಗಬಹುದು. ಹೀಗೆ ಅನೇಕ ರೀತಿಯ ಆಲೋಚನೆಯ ಸುಳಿಯಲ್ಲಿ ಸಿಕ್ಕಿ ವಿಪರೀತವಾದ ಚಿಂತೆಗೆ ಒಳಗಾಗುತ್ತೇವೆ. ಇದರಿಂದಾಗಿ ನಾವು ಮಾಡುತ್ತಿರುವ ಕೆಲಸದ ಕಡೆ ಹೆಚ್ಚು ಗಮನ ಮತ್ತು ಏಕಾಗ್ರತೆ ಮೂಡುವುದಿಲ್ಲ, ಬದಲು ಫಲಿತಾಂಶ ಅಥವಾ ಇತರೆ ಆಗುಹೋಗುಗಳ ಮೇಲೆ ಇರುತ್ತದೆ. ಫಲಿತಾಂಶವಾಗಲಿ, ಇತರೆ ಪರಿಣಾಮಗಳ ಬಗ್ಗೆ ಹೆಚ್ಚು ಆಲೋಚಿಸಿದರೆ ಮಾಡಬೇಕಾದ ಕೆಲಸ ಕೆಡುತ್ತದೆ ಅಥವಾ ಅದರ ಗುಣಮಟ್ಟ ಉತ್ತಮವಾಗಿರುವುದಿಲ್ಲ.

ಇಂತಹ ಮನೋವೃತ್ತಿಯಿಂದ ನಿವಾರಣೆಗೊಂಡು ಕರ್ತವ್ಯ ನಿರ್ವಹಣೆಗೆ ಹೆಚ್ಚು ಒತ್ತುಕೊಟ್ಟು, ಕೆಲಸದಲ್ಲಿ ಸಂಪೂಣ೯ವಾಗಿ ತೊಡಗಿಸಿಕೊಂಡರೆ ಕೆಲಸದ ಗುಣಮಟ್ಟ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಫಲಗಳ ಅಪೇಕ್ಷೆಯಿಂದ ಹೊರಬಂದು (detach from results), ಕರ್ತವ್ಯ ನಿರ್ವಹರಣೆಗೆ (focus on the process) ಹೆಚ್ಚು ಗಮನಕೊಟ್ಟು ಕೆಲಸ ಮಾಡಿ.

ಕಳೆದ ವಾರ ಆಚರಿಸಿದ ‘ವಿಶ್ವ ಮಾನಸಿಕ ಆರೋಗ್ಯ‘ ದಿನದ ಥೀಮ್‌ ‘ವೃತ್ತಿ ಜೀವನದ ಮಾನಸಿಕ ಆರೋಗ್ಯ‘ ಎಂಬುದಾಗಿತ್ತು. ವೃತ್ತಿ ಜೀವನದಲ್ಲಿ ವಿಪರೀತವಾದ ಸ್ಪರ್ಧೆ, ಕೃತಕ ಹಾಗೂ ಅವಾಸ್ತವಿಕ ನಿರೀಕ್ಷೆಗಳು ಕೂಡಿದ್ದು ಬಹುತೇಕ ಜನರು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಗಳಿಂದ ಬಳಲುತ್ತಿದ್ದಾರೆ. ಇದರ ಪರಿಣಾಮವಾಗಿ ಡಯಾಬಿಟಿಸ್, ಬಿಪಿ, ಥೈರಾಯಿಡ್,

ಹೃದಘಾಯಾತಗಳಂತಹ ದೈಹಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಬರೀ ವೃತ್ತಿಯಲ್ಲಿಯೇ ಅಲ್ಲ, ವೈಯಕ್ತಿಕ ಬದುಕಿನಲ್ಲಿಯೂ ಸಹ ಜೀವನಶೈಲಿಯು ವೇಗ (fast) ಮತ್ತು ತ್ವರಿತ (instant) ಮತ್ತು ಸ್ಪರ್ಧಾತ್ಮಕವಾಗಿದ್ದು ಮಾನಸಿಕ ಒತ್ತಡವು ವಿಪರೀತ ಹೆಚ್ಚಾಗುತ್ತಿದೆ.

ಮಾನಸಿಕ ಒತ್ತಡದ ಲಕ್ಷಣಗಳು

ನಿದ್ರಾಹೀನತೆ, ಅತಿಯಾದ ಆಹಾರ ಸೇವನೆ, ಅತಿಯಾದ ಕೋಪ, ಕಿರಿಕಿರಿ, ಮರೆಗುಳಿತನ, ಭಯ ಮತ್ತು ಆತಂಕ, ವ್ಯಸನಗಳು ಕಂಡು ಬರುತ್ತವೆ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ 

ಉದ್ಯೋಗದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಳಿದ ಈ ಕೆಳಗಿನ ಅಂಶಗಳನ್ನು ಅರಿಯಿರಿ 

1. ನಿಮ್ಮ ನಿಯಂತ್ರಣದಲ್ಲಿ ಇರುವುದನ್ನು ಮಾತ್ರ ನಿಯಂತ್ರಿಸಿ: ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ ಮಾಡುವ ಕೆಲಸ ಕಾರ್ಯಗಳನ್ನು ಶ್ರದ್ಧೆ ಮತ್ತು ನಿಷ್ಟೆಯಿಂದ ಮಾಡಿದರೆ ಒಳಿತು, ನಿಮ್ಮಆಲೋಚನೆಗಳು, ಭಾವನೆಗಳು, ಕರ್ತವ್ಯ ಪಾಲನೆ ಮತ್ತು ಪ್ರಯತ್ನ ಸಂಪೂರ್ಣವಾಗಿ ನಿಮ್ಮ ಕೈಯಲ್ಲಿ ಇರುತ್ತದೆ, ಆದ್ದರಿಂದ ಇದರಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಿ. ಫಲಿತಾಂಶವೇನಾಗಬಹುದು, ಇದರ ಕುರಿತು ಬೇರೆಯವರು ಏನು ಅಭಿಪ್ರಾಯ ಪಡುತ್ತಾರೆಂದು ಚಿಂತೆ ಮಾಡಬೇಡಿ. ಯಾಕೆಂದರೆ ಇದು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ.

2. ನಿಮ್ಮ ಆಸಕ್ತಿ ಮತ್ತು ಪ್ರತಿಭೆ: ನೀವು ಆಯ್ಕೆ ಮಾಡಿಕೊಂಡಿರುವ ಉದ್ಯೋಗವು ನಿಮ್ಮ ಆಸಕ್ತಿ ಮತ್ತು ಪ್ರತಿಭೆಯ ಅನುಸಾರವಾಗಿದ್ದರೆ, ಉದ್ಯೋಗದಲ್ಲಿ ಬರುವಂತಹ ಸವಾಲುಗಳು, ಒತ್ತಡಗಳು ನಿಮಗೆ ಹೆಚ್ಚು ಬಾಧಿಸುವುದಿಲ್ಲ. ಇವುಗಳನ್ನು ಎದುರಿಸುವ ಸಾಮಥ್ಯ೯ ಹಾಗೂ ಇಚ್ಛಾಶಕ್ತಿ ಹೊಂದಿರುತ್ತೀರಿ. ಒಂದು ಪಕ್ಷ ನಿಮ್ಮ ಬಯಕೆ ಮತ್ತು ಪ್ರತಿಭೆಯ ವಿರುದ್ಧವಾಗಿ ನಿಮ್ಮ ವೃತ್ತಿಯು ಆಯ್ಕೆಯಾಗಿದ್ದರೆ ಒತ್ತಡಗಳನ್ನು ಎದುರಿಸುವುದು ಹೆಚ್ಚು ಕಿರಿಕಿರಿ ಮತ್ತು ಕಷ್ಟಕರವಾಗಿರುತ್ತದೆ. ಸಾಧ್ಯವಿದ್ದರೆ ನಿಮಗೆ ಇಷ್ಟವಾದ, ಪ್ರತಿಭೆಗೆ ಅನುಗುಣವಾಗುವ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಿ. ಸಾಧ್ಯವಾಗದೇ ಇದ್ದಲ್ಲಿ ಸಧ್ಯದ ಪರಿಸ್ಥಿಯನ್ನು ಒಪ್ಪಿಕೊಂಡು ಬೇಕಾದ ಕೌಶಲಗಳನ್ನು ಬೆಳೆಸಿಕೊಂಡು ಪರಿಣಾಮಕಾರಿಯಾಗಿ ನಿಭಾಯಿಸಿ.

3. ಜವಾಬ್ಧಾರಿ ಮತ್ತು ನಿರೀಕ್ಷೆಗಳ ಮನನ: ಪ್ರತಿಯೊಂದು ಕ್ಷೇತ್ರದ ವೃತ್ತಿಯಲ್ಲಿ ಅದರದೇ ಆದ ಜವಾಬ್ಧಾರಿ ಮತ್ತು ಸವಾಲುಗಳಿರುವುದು ಸ್ವಾಭಾವಿಕ. ಇವುಗಳನ್ನು ಪೂರೈಸಲೇಬೇಕು ಎಂಬ ನಿರೀಕ್ಷೆಯಿರುವುದನ್ನು ಸಹ ಅಲ್ಲಗಳೆಯಲು ಸಾಧ್ಯವಿಲ್ಲ. ಇವುಗಳಿಂದ ಒತ್ತಡ ಉದ್ಭವವಾಗುವುದು ಸಹ ನಿರಂತರ. ಇಂತಹ ಸಂದರ್ಭದಲ್ಲಿ ವೃತ್ತಿಯು ಅನಿವಾರ್ಯವೆಂದು ಒಪ್ಪಿಕೊಂಡು, ಬೇಕಾದ ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡು, ಸಂಪನ್ಮೂಲಗಳನ್ನು ಬಳಸಿಕೊಂಡು ಒತ್ತಡವನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಚಾಕಚಕ್ಯತೆಯಿಂದ ನಿಭಾಯಿಸುವ ಕಲೆಯನ್ನು ಬೆಳೆಸಿಕೊಳ್ಳುವುದೇ ನಿಜವಾದ ಪರಿಶ್ರಮ ಮತ್ತು ಬುದ್ಧಿವಂತಿಕೆ.

4. ಪ್ರಾಮಾಣಿಕವಾದ ಪ್ರಶಂಸೆ ನೀಡುವ ಅಭ್ಯಾಸವಿರಲಿ: ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ, ಶ್ರಮ, ಪ್ರಯತ್ನ, ಕೊಡುಗೆಯನ್ನು ಗುರುತಿಸಿ ಪ್ರಶಂಸೆ ನೀಡುವ ಅಭ್ಯಾಸ ಮಾಡಿದರೆ ಪರಸ್ಪರ ಸಂಬಂಧಗಳು ಸುಧಾರಿಸುತ್ತವೆ. ಬೇರೆಯವರು ಸಹ ನಿಮ್ಮ ಗುಣವನ್ನು ಕಲಿಯುವ ಸಾಧ್ಯತೆ ಹೆಚ್ಚಿದ್ದು, ನಿಮ್ಮ ಸಾಧನೆ ಕೊಡುಗೆಯನ್ನು ಪ್ರಶಂಸಿಸುತ್ತಾರೆ. ಉದ್ಯೋಗದಲ್ಲಿ ವಿಪರೀತವಾಗಿ ಇನ್ನೊಬ್ಬರನ್ನು ಆಡಿಕೆೊಳ್ಳುವುದು, ಅಣಕಿಸುವುದು, ನಿಂದಿಸುವುದು ಅಥವಾ ಗುಂಪುಗಾರಿಕೆ ಮಾಡಿದಾಗ ವಾತಾವರಣ ಹಾಳಾಗಿ ಮನಸ್ಸಿನ ನೆಮ್ಮದಿ ಕೆಡುತ್ತದೆ.

ಅಸಮಾಧಾನ, ಕೋಪಕ್ಕೆ ಈಡಾಗುತ್ತೀರ ಮತ್ತು ಅನಗತ್ಯ ಮನಸ್ಥಾಪಗಳು ಉಂಟಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಸಹೋದ್ಯೋಗಿಗಳ ಸ್ವಭಾವ, ಪರಿಸ್ಥಿತಿಯನ್ನು ಜಡ್ಜ್ ಮಾಡುವ ಬದಲು ಸಹಾನುಭೂತಿ ತೋರಿಸಿ ಮತ್ತು ಅಗತ್ಯ ಬಿದ್ದಾಗ ಪ್ರಾಮಾಣಿಕವಾದ ಪ್ರಶಂಸೆ ನೀಡಿ

5. ಸ್ವಯಂ ಕಾಳಜಿ: ನಮ್ಮ ಬದುಕಿನ ಅತಿ ಮಹತ್ವದ ಅಂಶವೆಂದರೆ ‘ಸ್ವ ಅರಿವು ಮತ್ತು ಸ್ವ ಕಾಳಜಿ‘. ನಮ್ಮನ್ನು ನಾವು ಅರಿತು, ನಮ್ಮ ಕಾಳಜಿಯನ್ನು ತೆಗೆದುಕೊಳ್ಳುವುದು. ನಮ್ಮ ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ಧಾರಿ ಎನ್ನುವುದನ್ನು ಅರಿತುಕೊಳ್ಳಬೇಕು. ಸ್ವಯಂ ಕಾಳಜಿ ತೆಗೆದುಕೊಳ್ಳುವುದು ಸ್ವಾರ್ಥವಲ್ಲ, ಇದು ಅಗತ್ಯ. ಬದುಕಿನ ಏರಿಳಿತಗಳನ್ನು ಯಶಸ್ವಿಯಾಗಿ ನಿಭಾಯಿಸಬೇಕೆಂದರೆ ಮೊದಲು ನಮ್ಮ ದೇಹ ಮತ್ತು ಮನಸ್ಸು ಉತ್ತಮ ಸ್ಥಿತಿಯಲ್ಲಿರಬೇಕು. ಇಲ್ಲವಾದರೆ ನಾವು ಪರಿಸ್ಥಿತಿಗಳನ್ನು ಎದುರಿಸುವಲ್ಲಿ ವಿಫಲರೂ, ದುಃಖಿಗಳಾಗುತ್ತೇವೆ. ಆದ್ದರಿಂದ ಪ್ರತಿನಿತ್ಯ ದೈಹಿಕ ವ್ಯಾಯಾಮ ಮತ್ತು ಪ್ರಾಣಾಯಾಮವನ್ನು ತಪ್ಪದೇ ಅಭ್ಯಾಸ ಮಾಡಬೇಕು ಮತ್ತು ಪ್ರಾಣಾಯಾಮ ಮಾಡುವುದರಿಂದ ಉದ್ವೇಗ, ಆತಂಕ, ಒತ್ತಡಗಳನ್ನು ನಿಯಂತ್ರಣ ಮಾಡಬಹುದು.

6. ಒಳ್ಳೆಯ ಹವ್ಯಾಸಗಳು: ನಮ್ಮ ಹವ್ಯಾಸಗಳು ನಮ್ಮ ವ್ಯಕ್ತಿತ್ವ ಮತ್ತು ಪ್ರತಿಭೆಯನ್ನು ತೋರಿಸುತ್ತವೆ. ನಾವು ಭವಿಷ್ಯದಲ್ಲಿ ಏನಾಗುತ್ತೇವೆಯೆಂದು ಸಹ ಗೊತ್ತು ಮಾಡಿಕೊಡುತ್ತವೆ. ಆದ್ದರಿಂದ ನಿಮ್ಮ ಹವ್ಯಾಸಗಳೇ ಏನೇನಿವೆ ಎಂದು ಪರೀಶೀಲಿಸಿ. ಕೆಲಸದ ವೇಳೆಯಲ್ಲಿ ಹವ್ಯಾಸಗಳು ಆರೋಗ್ಯಕರವಾಗಿಯೂ ಮತ್ತು ಆನಾರೋಗ್ಯಕರವಾಗಿಯೂ ಇರಬಹುದು.

ಮನರಂಜನೆ ಹಾಗೂ ಒತ್ತಡ ನೀಗಿಸಿಕೊಳ್ಳುವ ಕಾರಣಕ್ಕೆ ಸದಾ ಮೊಬೈಲ್, ಸಾಮಾಜಿಕ ಜಾಲಾತಾಣಗಳಲ್ಲಿ ವಿಪರೀತವಾಗಿ ತೊಡಗಿಸಿಕೊಳ್ಳುವುದು, ಧೂಮಪಾನ ಮತ್ತು ಮದ್ಯ ಸೇವನೆಗಳ ಅಭ್ಯಾಸ ಮಾಡಿಕೊಳ್ಳುವುದು ಆನಾರೋಗ್ಯಕರ ಹವ್ಯಾಸವಾಗಿ ಪರಿವರ್ತನೆಯಾಗುತ್ತದೆ. ಸಹೋದ್ಯೋಗಿಗಳೊಂದಿಗೆ ಅನಗತ್ಯ ಹರಟೆ ಹೊಡೆಯುವುದು, ಆಡಿಕೊಳ್ಳುವುದು, ಪದೇ ಪದೇ ಆನ್‌ಲೈನ್ ಶಾಪಿಂಗ್ ಮಾಡುವುದರಿಂದ ಸಮಸ್ಯೆಗಳು ಬದಲಾಗುವುದಿಲ್ಲ ಬದಲು ಸಮಸ್ಯೆಗಳು ಹೆಚ್ಚಾಗುತ್ತವೆ. ಒತ್ತಡ ಮತ್ತು ಬೇಸರ ನೀಗಿಸಲು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡರೆ ಸಮಸ್ಯೆಗಳಿಂದಾಗುವ ಒತ್ತಡವನ್ನು ನಿವಾರಿಸಬಹುದು.

ಹವ್ಯಾಸ: ಒಂದು ಹವ್ಯಾಸ ಹಣ ಸಂಪಾದಿಸಲು, ಇನ್ನೊಂದು ನಿಮ್ಮನ್ನು ಒಳ್ಳೆಯ ಆರೋಗ್ಯ/ಆಕಾರದಲ್ಲಿಡಲು ಮತ್ತು ಮತ್ತೊಂದು ಸೃಜನಶೀಲರಾಗಿರಲು

7. ಸ್ಕ್ರೀನ್ ಸಮಯದ ಮೇಲೆ ನಿಗವಿರಲಿ: ಕಚೇರಿಯಲ್ಲಿ ಬೇಸರ, ಒತ್ತಡ ಮತ್ತು ಆತಂಕ ಹೆಚ್ಚಿದಾಗ ಬದಲಾವಣೆ ಬೇಕೆಂದು ಅಥವಾ ಸಮಯ ನೀಗಿಸಲು ಮೊಬೈಲ್, ಟಿವಿಗಳಿಗೆ ಮಿತಿಮೀರಿ ಮೊರೆ ಹೋಗಬೇಡಿ. ಇದರಿಂದ ನಿಮ್ಮ ಸಮಸ್ಯೆಗೆ ನಿಜವಾಗಿಯೂ ಪರಿಹಾರ ಸಿಗುವುದಿಲ್ಲ, ಆದರೆ ಇನ್ನೂ ಹೆಚ್ಚಿನ ಸಮಸ್ಯೆಗಳು ಉದ್ಭವವಾಗುತ್ತವೆ.

ಚಟವಾಗಿ ಬೆಳೆಯುತ್ತದೆಯೇ ಹೊರತು, ಬೆಳವಣಿಗೆ ಆಗುವುದಿಲ್ಲ. ನೋಡಿದಾಗ ಸಿಗುವ ಮನರಂಜನೆ, ಖುಷಿ ನೋಡಿದಾದ ಮೇಲೆ ಇರುವುದಿಲ್ಲ. ಬದಲಿಗೆ ಕಿರಿಕಿರಿ, ಕೋಪ, ಅಸಮಾಧಾನ, ಸಮಯ ವ್ಯರ್ಥ ಮಾಡಿದ ಪಾಪಪ್ರಜ್ಞೆ ಕಾಡುತ್ತದೆ.

ಸತತವಾಗಿ ನೋಡುವುದರಿಂದ ನಿಮ್ಮ ಕೆಲಸದ ಗುಣಮಟ್ಟವು ಹಾಳಾಗುತ್ತದೆ, ಕೆಲಸದ ಮೇಲೆ ನಿಗಾ ಇರುವುದಿಲ್ಲ. ಅನೇಕ ರೀತಿಯ ದೈಹಿಕ ಕಾಯಿಲೆಗಳು ಸಹ ಉದ್ಭವವಾಗುವುದುಂಟು.

ಆದ್ದರಿಂದ ಕೆಲಸದ ವೇಳೆಯಲ್ಲಿ ಮಿತಿ ಮೀರಿ ನೋಡದೆ ನಿಗದಿತ ವೇಳೆಯಲ್ಲಿ ಸಮಯ ನಿಗದಿಪಡಿಸಿ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

8. ಆಪ್ತ ಸಮಾಲೋಚಕರ ಸಹಾಯ: ಕೊನೆಯದಾಗಿ, ವೃತ್ತಿ ಬದುಕಿನ ಒತ್ತಡ ನಿಮ್ಮ ಕಾರ್ಯನಿರ್ವಹಣೆ ಹಾಗೂ ಬೆಳವಣಿಗೆಯನ್ನು ಕುಂಠಿತ ಮಾಡುತ್ತಿದ್ದು, ವೈಯಕ್ತಿಕ ಬದುಕು, ದೈಹಿಕ ಮತ್ತು ಮಾನಸಿಕ ಆರೋಗ್ಯ ಮೇಲೆಯೂ ಸಹ ಪ್ರಬಲವಾದ ಪರಿಣಾಮ ಬೀರುತ್ತಿದ್ದು, ದಿನಚರಿ ನಿವ೯ಹಣೆಯನ್ನು ಅಡ್ಡಿ ಮಾಡುತ್ತಿದ್ದರೆ ಕೂಡಲೇ ಆಪ್ತಸಮಾಲೋಚಕರನ್ನು ಸಂಪರ್ಕಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಿ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ