ನಿಮ್ಮದು ವಿಳಂಬ ಪ್ರವೃತ್ತಿನಾ? ಯಾವುದೇ ಕೆಲಸವನ್ನಾದ್ರೂ ನಾಳೆ ಮಾಡಿದ್ರಾಯ್ತು ಎಂಬ ಆಲಸಿ ಮನೋಭಾವದಿಂದ ಹೊರ ಬರೋದು ಹೇಗೆ– ಮನದ ಮಾತು-mental health what is procrastination reasons for procrastination and how to over come from this rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮದು ವಿಳಂಬ ಪ್ರವೃತ್ತಿನಾ? ಯಾವುದೇ ಕೆಲಸವನ್ನಾದ್ರೂ ನಾಳೆ ಮಾಡಿದ್ರಾಯ್ತು ಎಂಬ ಆಲಸಿ ಮನೋಭಾವದಿಂದ ಹೊರ ಬರೋದು ಹೇಗೆ– ಮನದ ಮಾತು

ನಿಮ್ಮದು ವಿಳಂಬ ಪ್ರವೃತ್ತಿನಾ? ಯಾವುದೇ ಕೆಲಸವನ್ನಾದ್ರೂ ನಾಳೆ ಮಾಡಿದ್ರಾಯ್ತು ಎಂಬ ಆಲಸಿ ಮನೋಭಾವದಿಂದ ಹೊರ ಬರೋದು ಹೇಗೆ– ಮನದ ಮಾತು

ಕೆಲವರಿಗೆ ಯಾವುದೇ ಕೆಲಸವನ್ನಾದ್ರೂ ನಾಳೆಗೆ ಮುಂದೂಡುವ ಅಭ್ಯಾಸ. ಎಷ್ಟೇ ಪ್ರಮುಖವಾದ ಕೆಲಸವಾದ್ರೂ ನಾಳೆ ಮಾಡಿದ್ರಾಯ್ತು ಎನ್ನುವ ಮನೋಭಾವ. ಅಂಥವರು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವ ರೂಢಿ ಮಾಡಿಕೊಂಡಿರುತ್ತಾರೆ, ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಅಂತಹ ಪ್ರವೃತ್ತಿಯಿಂದ ಹೊರ ಬರುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ ಭವ್ಯಾ ವಿಶ್ವನಾಥ್‌.

ವಿಳಂಬ ಪ್ರವೃತ್ತಿ ಹೊರ ಬರುವುದು ಹೇಗೆ? (ಸಾಂಕೇತಿಕ ಚಿತ್ರ)
ವಿಳಂಬ ಪ್ರವೃತ್ತಿ ಹೊರ ಬರುವುದು ಹೇಗೆ? (ಸಾಂಕೇತಿಕ ಚಿತ್ರ) (PC: Canva)

ಕೆಲವರಿಗೆ ಏನನ್ನಾದರೂ ಮಾಡಬೇಕಾದಾಗ ಅಥವಾ ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಬೇಕೆಂದರೆ ಆ ಕೆಲಸವನ್ನು ಮುಂದೂಡುವ ಚಟವಿರುತ್ತದೆ. ಈಗ ಬೇಡ ಆಮೇಲೆ, ಇವತ್ತು ಬೇಡ ನಾಳೆ, ನಾಳೆ ಬೇಡ ನಾಡಿದ್ದು ಹೀಗೆ ಯೋಜನೆಯಲ್ಲಿದ್ದ ಆ ಕ್ಷಣ ಅಥವಾ ಆ ದಿನ ಬಂದ ಕೂಡಲೇ ಮುಂದೂಡುವುದೊಂದೇ ಉದ್ದೇಶವಾಗಿರುತ್ತದೆ. ಇದರ ಪರಿಣಾಮ ಏನೆಂದು ತಿಳಿದಿದ್ದರೂ ಸಹ, ಕೊನೆಯ ಗಳಿಗೆಯ ತನಕ ಮುಂದೂಡುವುದು,

ಇಂಥ ಮನೋಭಾವ ಇರುವವರು ಡೆಡ್‌ಲೈನ್ ಅಥವಾ ಗಡುವನ್ನು ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ, ಪರಿಗಣಿಸದರೂ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸವೆನ್ನುವಂತೆ ಕೆೊನೆ ಗಳಿಗೆಯಲ್ಲಿ ಸಿದ್ಧತೆ ನಡೆಸುವುದು ಸಾಮಾನ್ಯ. ಇಷ್ಟರ ಮಟ್ಟಿಗೆ ಆಲಸ್ಯ, ನಿರಾಸಕ್ತಿ, ಬೇಸರ ಆ ಗಳಿಗೆಯಲ್ಲಿ ಮನಸ್ಸನ್ನು ಆವರಿಸುತ್ತದೆ.

ಇಂಥ ಒಂದು ಮನಸ್ಥಿಗೆ ‘ವಿಳಂಬ ಪ್ರಕೃತಿ’ ಎಂದು ಕರೆಯಲಾಗುತ್ತದೆ. ಅನಗತ್ಯವಾಗಿ ಮಾಡುವ ಕೆಲಸ ಕಾರ್ಯಗಳನ್ನು ವಿಳಂಬಿಸುವುದು, ಸಮಯವನ್ನು ಹಾಳು ಮಾಡುವುದು ಮತ್ತು ಸಮಯದ ಬೆಲೆ ಅರಿಯದೆ ಇರುವುದೇ ಇದಕ್ಕೆ ಮೂಲ ಕಾರಣವೂ ಹೌದು.

ಹಾಗಾದರೆ, ವಿಳಂಬ ಮಾಡುವ ಮನಸ್ಥಿಗೆ ಪ್ರಮುಖ ಕಾರಣಗಳೇನು ಮತ್ತು ಪರಿಹಾರಗಳೇನೆಂದು ತಿಳಿದುಕೊಂಡು, ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ.

ವಿಳಂಬ ಪ್ರವೃತ್ತಿಗೆ ಕಾರಣಗಳು

* ಏನು ಮಾಡಬೇಕೆಂದು ತಿಳಿಯದೇ ಇರುವುದು

* ಹೇಗೆ ಮಾಡಬೇಕೆಂದು ತಿಳಿಯದೇ ಇರುವುದು

* ಮಾಡಲು ಬಯಸದೇ ಇರುವುದು

* ಮಾಡಲೇ ಬೇಕೆಂದು ದೃಢ ಸಂಕಲ್ಪ ಇರದೇ ಇರುವುದು

* ಸರಿಯಾದ ಮಾಹಿತಿಯ ಕೊರತೆಯಿರುವುದು

* ಕೊನೆಯ ನಿಮಿಷಕ್ಕಾಗಿ ಕಾಯುವ ಅಭ್ಯಾಸವಿರುವುದು

* ನಾನು ಒತ್ತಡದಲ್ಲಿ ಹೆಚ್ಚು ಕೆಲಸ ಮಾಡುತ್ತೇನೆ ಎನ್ನುವ ನಂಬಿಕೆ

* ನಾನು ಅದನ್ನು ಕೊನೆಯ ನಿಮಿಷದಲ್ಲಿ ಮುಗಿಸಬಲ್ಲೇ ಎನ್ನುವ ನಂಬಿಕೆ

* ಆರಂಭದ ಕೊರತೆ (starting trouble)

* ಮಾಡಬೇಕಾದ ಕೆಲಸವು ಮನಸ್ಸಿಗೆ ಮುದ, ಸಂತೋಷ ಮತ್ತು ಮನರಂಜನೆ ನೀಡದೇ ಇರುವುದು ಸಹ ಮುಂದೂಡುವುದಕ್ಕೆ ಕಾರಣವಿರಬಹುದು.

ವಿಳಂಬ ಪ್ರವೃತ್ತಿ ಬಗೆಹರಿಸಿಕೊಳ್ಳುವ ರೀತಿ

ಯಾವುದೇ ಒಂದು ಚಟ ಅಥವಾ ಅಭ್ಯಾಸ ಒಮ್ಮೆಲೆ ಸಂಭವಿಸುವುದಿಲ್ಲ. ಹನಿಹನಿಗೂಡಿದರೆ ಹಳ್ಳವೆನ್ನುವಂತೆ ಪ್ರತಿಯೊಂದು ಸಣ್ಣ ಕ್ಷಣಗಳು, ಪ್ರತಿಯೊಂದು ಸಲ ನಾವು ಮಾಡಿರುವಂತಹ, ತೊಡಗಿಸಿಕೊಳ್ಳುವಂತಹ ಸಣ್ಣ ಅಭ್ಯಾಸಗಳು ಚಟವಾಗಿ/ ಹವ್ಯಾಸವಾಗಿ ರೂಪುಗೊಂಡಿರುತ್ತವೆ ಮತ್ತು ಸಾಕಷ್ಟು ಸಮಯವನ್ನೂ ಸಹ ತೆಗೆದುಕೊಂಡಿರುತ್ತದೆ. ಆದ್ದರಿಂದ ಈ ಚಟಗಳಿಂದ ಹೊರಬರುವುದಕ್ಕೂ ಸಹ ಸಾಕಷ್ಟು ಸಮಯದ ಅಗತ್ಯವಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಧಿಡೀರೆಂದು ಹೊರಬರುವುದಕ್ಕೆ ಕಷ್ಟವಾಗಬಹುದು.

1. ಸಣ್ಣ ಹೆಜ್ಜೆ ಇರಿಸಿ (Take baby steps) - ಮನಸ್ಸಿಗೆ ಒತ್ತಡ ಹೆಚ್ಚಾಗದಂತೆ, ಹೆಚ್ಚು ಇರುಸು ಮುರುಸಾಗದಂತೆ ಚಿಕ್ಕ ಹೆಜ್ಜೆ ತೆಗೆದುಕೊಳ್ಳಿ. ದೊಡ್ಡ ಯೋಜನೆಯನ್ನು ವಿಂಗಡಿಸಿಕೊಳ್ಳಿ.

2. ಗಮನ ಬೇರೆ ಕಡೆಗೆ ಸೆಳೆಯುವ ವಸ್ತುಗಳಿಂದ ದೂರ ಇರಿ (Distractions): ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣ, ಫುಡ್, ಶಾಪಿಂಗ್ ಆ್ಯಪ್‌ಗಳು ಮುಂತಾದವುಗಳನ್ನು ಮಿತಗೊಳಿಸಿ ಮತ್ತು ನೀವು ಕೆಲಸ ಮಾಡಬೇಕಾದ ಸಮಯದಲ್ಲಿ ಸಾಧ್ಯವಾದಷ್ಟು ಇವುಗಳಿಂದ ದೂರವಿರಿ.

3. ಮಾಡಬೇಕಿರುವ ಕೆಲಸಗಳ ಪಟ್ಟಿ ಮಾಡಿ (to do list): ಆದ್ಯತೆಯ ಅನುಸಾರ ನಿಮ್ಮ ಗುರಿಗಳನ್ನು, ಚಟುವಟಿಕೆಗಳನ್ನು ಪಟ್ಟಿ ಮಾಡಿ ಮತ್ತು ಪ್ರತಿಯೊಂದು ವಿಷಯಕ್ಕೆ ಸಮಯ ನಿಗದಿ ಮಾಡಿ ಮತ್ತು ಗಡುವನ್ನು ಪಾಲಿಸಲು ಯತ್ನಿಸಿ.

4. ಎಚ್ಚರಿಕೆ ಚಿಹ್ನೆಗಳನ್ನು (warning signs) ಗಮನಿಸಿ - ವಿಳಂಬ ಪ್ರಕೃತಿಯ ಆಲೋಚನೆಗಳನ್ನು ಗಮನಿಸಿ. ಇನ್ನೇನು ಕೆಲಸ ಆರಂಭಿಸಬೇಕು, ಆ ದಿನ ಸಂಭವಿಸುತ್ತಲಿದೆ ಅನ್ನುವ ವೇಳೆಯಲ್ಲಿ ಮುಂದೂಡುವ ಆಲೋಚನೆಗಳು ವಿಪರೀತವಾಗಿ ಉದ್ಭವಿಸುತ್ತದೆ. ಮುಂದೂಡಲು ಕಾರಣಗಳನ್ನು ಹುಡುಕುವುದು, ಕಿರಿಕಿರಿ ಅಥವ ಮೂಡ್ ಆಫ್ ಆಗುವುದು ಹೀಗೆ ಕೆಲವು ಎಚ್ಚರಿಕೆಯ ಚಿಹ್ನೆಗಳು ಕಾಣಿಸುತ್ತವೆ. ಇವುಗಳನ್ನು ಅರಿತು ನಿಯಂತ್ರಿಸಬೇಕು.

5. ನಿಮ್ಮ ಬಯಕೆಯೇ, ಅನಿರ್ವಾಯತೆಯೇ ಅಥವಾ ಬಲವಂತವೇ: ನೀವು ಮಾಡಬೇಕಾದ ಕಾರ್ಯವು ನಿಮಗಿಷ್ಟವಾಗಿದ್ದೇ (ಹವ್ಯಾಸ, ಸ್ವಂತ ಅಭಿರುಚಿಗಳು) ಅಥವಾ ಮಾಡಲೇಬೇಕಾದ ಅನಿವಾರ್ಯ ‌ವೇ (ಕೌಟುಂಬಿಕ, ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ವಿಷಯಗಳು) ಅಥವಾ ಇನ್ನೊಬ್ಬರ ಬಲವಂತದಿಂದ ಮಾಡಬೇಕಾಗಿರುವುದೇ ಯೋಚಿಸಿ. ಇದರ ಅನುಸಾರವಾಗಿ ಆದ್ಯತೆ ಮತ್ತು ಯೋಜನೆ ಹಾಕಿಕೊಳ್ಳಿ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

mysore-dasara_Entry_Point