Monday Blues: ಏನಿದು ಮಂಡೇ ಬ್ಲೂಸ್, ಸೋಮವಾರ ಬಂದರೆ ಇನ್ನಿಲ್ಲದಂತೆ ಕಾಡುವ ಬೇಸರ, ನಿರುತ್ಸಾಹಕ್ಕೆ ಇದುವೇ ಮದ್ದು – ಮನದ ಮಾತು
How to Beat Monday Blues: ಸೋಮವಾರ ಬಂತೆಂದರೆ ಹಲವರನ್ನು ಇನ್ನಿಲ್ಲದ ಬೇಸರ, ನಿರುತ್ಸಾಹ, ಕಿರಿಕಿರಿ ಕಾಡುತ್ತದೆ. ಅದಕ್ಕೆ ಕಾರಣವೇನು ಎಂಬುದು ಕೂಡ ತಿಳಿಯುವುದಿಲ್ಲ. ಮನಃಶಾಸ್ತ್ರದಲ್ಲಿ ಇದಕ್ಕೆ ಮಂಡೇ ಬ್ಲೂಸ್ ಎನ್ನುತ್ತಾರೆ. ಹಾಗಾದರೆ ಏನಿದು ಮಂಡೇ ಬ್ಲೂಸ್, ಇದರಿಂದ ಹೊರ ಬಂದು ಸೋಮವಾರವನ್ನು ಕ್ರಿಯಾಶೀಲವಾಗಿಸಿಕೊಳ್ಳುವುದು ಹೇಗೆ ನೋಡಿ.
ಪ್ರಶ್ನೆ: ಶನಿವಾರ, ಭಾನುವಾರ ಸಖತ್ ಆಕ್ಟಿವ್ ಆಗಿ, ಖುಷಿಯಾಗಿ ಇರುವ ನಾನು ಸೋಮವಾರ ಬಂತೆಂದರೆ ಮಂಕಾಗುತ್ತೇನೆ. ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಒಂದು ರೀತಿಯ ಬೇಸರ ಕಾಡುತ್ತದೆ. ಮನಸ್ಸಿಗೆ ಕಿರಿಕಿರಿ, ತಳಮಳ ಉಂಟಾಗುತ್ತದೆ. ಸೋಮವಾರ ಕಾಡುವ ಈ ನಿರುತ್ಸಾಹಕ್ಕೆ ಕಾರಣವೇನು, ಸೋಮವಾರ ಬಂತೆಂದರೆ ಹೀಗೇಕೆ ಮೇಡಂ?
ಮಧು, ತುಮಕೂರು
ಉತ್ತರ: ಸೋಮವಾರ ಬಂತೆಂದರೆ ಹಲವರನ್ನು ನಿರುತ್ಸಾಹ, ಬೇಸರ ಕಾಡುತ್ತದೆ. ಅಲ್ಲದೇ ಮಾನಸಿಕ ಕಿರಿಕಿರಿ, ಆತಂಕ, ಬುದ್ಧಿ ಮಂಕಾಗುವುದು, ಅಸಹನೆ, ಅಸಹಾಯಕತನ ಇವು ನಿಮ್ಮನ್ನು ಜಡ ಹಿಡಿದವರಂತೆ ಮಾಡಬಹುದು. ಇಂತಹ ಮನೋವೃತ್ತಿಯನ್ನು ಮನಃಶಾಸ್ತ್ರದಲ್ಲಿ ಮಂಡೇ ಬ್ಲೂಸ್ (Monday blues)ಎನ್ನುತ್ತಾರೆ . ಇದು ಕ್ಷಣಿಕ ಮನಃಸ್ಥಿತಿಯಾದರೂ ನಿರತವಾಗಿ, ಶಾಶ್ವತವಾಗಿ ಬೆಳೆದರೆ, ಕೆಲಸ ಕಾರ್ಯಗಳಲ್ಲಿ ತಡೆಗಳಾಗಿ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚು. ಪ್ರತಿ ಸೋಮವಾರದ ಪ್ರಾರಂಭವು ಅಹಿತಕರವಾಗಿದ್ದು ದಿನಚರಿ ಹಾಗೂ ಕೆಲಸ ಕಾರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀಳಬಹುದು. ಸಾಧ್ಯವಾದಷ್ಟು ಇಂತಹ ಮನಸ್ಥಿತಿಯಿಂದ ಹೊರಬಂದರೆ ಬರೀ ಸೋಮವಾರವಲ್ಲ, ಯಾವ ದಿನ ಬಂದರೂ ಹಾಯಾಗಿ ಉಲ್ಲಾಸದಿಂದ ಇರಬಹುದು. ಹಾಗದರೆ ಇದರಿಂದ ಹೊರಬರುವುದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮಂಡೇ ಬ್ಲೂಸ್ ದೂರಾಗಿಸುವ ತಂತ್ರಗಳು
1. ಧ್ಯಾನ, ಯೋಗ, ವ್ಯಾಯಾಮ: ವಾರದ ಪ್ರಾರಂಭದಲ್ಲಿ ಪ್ರಾಣಾಯಾಮ, ಯೋಗ ಮುಂತಾದ ಚಟುವಟಿಕೆಗಳನ್ನು ಮಾಡಿದಾಗ ಮನಸ್ಸಿಗೆ ಫ್ರೆಶ್ ಎನ್ನಿಸುವುದು ಮಾತ್ರವಲ್ಲದೇ, ಸಾಕಷ್ಟು ಪಾಸಿಟಿವ್ ಎನರ್ಜಿ ಸಿಗುತ್ತದೆ. ಮಂಕುತನ, ಆಲಸ್ಯ, ನಿರುತ್ಸಾಹವೆಲ್ಲವೂ ಮಾಯವಾಗುತ್ತವೆ. ಉಸಿರಾಟದ ಮೇಲೆ ಗಮನ ಹರಿಸಿ ಪ್ರಾಣಾಯಾಮ ಮಾಡಿದಾಗ ಆತಂಕ, ಚಿಂತೆ ಶಮನವಾಗುವುದಲ್ಲದೇ ಮನಸ್ಸು ನಿರಾಳವಾಗುತ್ತದೆ.ಬಳಿಕ ದಿನಚರಿಯೂ ಉತ್ತಮವಾಗುತ್ತದೆ.
2. ಪೂರ್ವಾಗ್ರಹ ಪೀಡಿತ ನಂಬಿಕೆಯನ್ನು ಬದಲಾಯಿಸಿ (pre-set belief): ಸೋಮವಾರಗಳ ಬಗ್ಗೆ ನೀವು ಹೇಗೆ ಯೋಚಿಸುತ್ತೀರಿ ಎಂಬುದನ್ನು ಗಮನಿಸಿ. ಅವುಗಳನ್ನು ನಿಮ್ಮ ವಾರಾಂತ್ಯದ ಅಂತ್ಯವೆಂದು ನೋಡುವ ಬದಲು, ಅವುಗಳನ್ನು ಹೊಸ ಆರಂಭವಾಗಿ ಪರಿಗಣಿಸಿ. ಹೊಸ ಗುರಿಗಳನ್ನು ಹೊಂದಿಸಲು ಮತ್ತು ನಿಮ್ಮ ಯೋಜನೆಗಳಲ್ಲಿ ಪ್ರಗತಿ ಸಾಧಿಸಲು ಇದನ್ನು ಅವಕಾಶ ಎಂದುಕೊಳ್ಳಿ.
3. ಯೋಜನೆ (Planning): ವಾರಂತ್ಯದಲ್ಲಿ ಅಂದರೆ ಶುಕ್ರವಾರ ಅಥವಾ ಶನಿವಾರದಂದೇ ಮುಂಬರುವ ಸೋಮವಾರದ ದಿನಚರಿಯನ್ನು ಪ್ಲಾನ್ ಮಾಡಿ. ವಾರದ ಪ್ರಾರಂಭದ ದಿನದಂದು ಹೆಚ್ಚಿನ ಒತ್ತಡವಿಲ್ಲದ, ಕಷ್ಟಕರವಿಲ್ಲದ ಶೆಡ್ಯೂಲ್ ಹಾಕಿಕೊಳ್ಳಿ. ಸ್ವಲ್ಪ ಬಿಡುವಿನ ವೇಳೆಯನ್ನು ಸಹ ಸೇರಿಸಿ. ಹೀಗೆ ಮೊದಲೇ ಪ್ಲಾನ್ ಮಾಡುವುದರಿಂದ ಮಾನಸಿಕ ಸಿದ್ಧತೆಯೂ ಕೂಡ ಆಗಿ, ಸೋಮವಾರದ ಸವಾಲುಗಳನ್ನು ಮೊದಲೆೇ ನಿರೀಕ್ಷೀಸಿ, ಸುಲಭವಾಗಿ ನಿಭಾಯಿಸಬಹುದು. ಆತಂಕ ದುಗುಡವೂ ಕೂಡ ದೂರವಾಗುತ್ತದೆ.
4. ಘೋಷವಾಕ್ಯಗಳು: ಒಂದು ನೀವು ಮಂಡೇ ಬ್ಲೂಸ್ ಎನ್ನುವ ಮನಸ್ಥಿತಿಗೆ ನಿರಂತರವಾಗಿ ತುತ್ತಾಗಿದ್ದರೆ, ಮೇಲಿನ ಎಲ್ಲಾ ಅಂಶಗಳೊಂದಿಗೆ ಕೆಲವು ಘೋಷವಾಕ್ಯಗಳನ್ನು ನಿಮಗೆ ನೀವೇ ಹೇಳಿಕೊಳ್ಳಿ. ಈ ಘೋಷವಾಕ್ಯಗಳನ್ನು ಪ್ರತಿನಿತ್ಯ ಅಥವಾ ವಾರಂತ್ಯದ ಮುಂಜಾನೆ ಎದ್ದ ತಕ್ಷಣ ಮತ್ತು ಮಲಗುವ ಮುನ್ನ ಅಭ್ಯಾಸ ಮಾಡಿ. ಕೆಲವು ಘೋಷವಾಕ್ಯಗಳು ಹೀಗಿವೆ: 'ನಾನು ಸೋಮವಾರವನ್ನು ಆನಂದದಿಂದಲೂ ಮತ್ತು ಉತ್ಸಾಹದಿಂದಲೂ ಸ್ವಾಗತಿಸುತ್ತೇನೆ‘, ‘ಸೋಮವಾರದ ಕುರಿತು ಸಾಕಷ್ಟು ಯೋಜನೆಗಳು ಮಾಡಿಕೊಂಡಿದ್ದೇನೆ, ಹಾಗಾಗಿ ನನ್ನ ಎಲ್ಲಾ ಕರ್ತವ್ಯಗಳು ಮತ್ತು ಜವಾಬ್ಧಾರಿಯನ್ನು ಸುಲಭವಾಗಿ ಮತ್ತು ಯಶಸ್ವಿಯಾಗಿ ನಿಭಾಯಿಸುತ್ತೇನೆ‘.
5. ಗುರಿ ಮತ್ತು ಕರ್ತವ್ಯಗಳು: ಪ್ರತಿಯೊಬ್ಬರಿಗೂ ವೈಯಕ್ತಿಕ ಅಥವಾ ವೃತ್ತಿ ಬದುಕಿನಲ್ಲಿ ಅನೇಕ ಗುರಿಗಳಿರುತ್ತವೆ. ಅವುಗಳನ್ನು ಪೂರೈಸಿಕೊಳ್ಳಲು ಸತತವಾಗಿ ಹೋರಾಟ ಮಾಡುತ್ತಿರುತ್ತಾರೆ. ಈ ಒಂದು ಹೋರಾಟದ ನಡುವೆ ವಾರಾತ್ಯದ ವಿಶ್ರಾಂತಿ ಮತ್ತು ಮನರಂಜನೆಯ ಅಗತ್ಯವಿರುತ್ತದೆ. ಆದರೆ ಇದು ಒಂದು ಪುಟ್ಟ ವಿರಾಮದಂತಿರಬೇಕು, ಸಿನಿಮಾ ಮಧ್ಯದಲ್ಲಿ ವಿರಾಮವಿದ್ದು ಪುನಃ ಸಿನಿಮಾ ಮುಂದುವರಿಯುವ ಹಾಗೆ. ವಾರಂತ್ಯದ ವಿಶ್ರಾಂತಿ ಮನರಂಜನೆ ಬಹುಕಾಲ ಮುಂದುವರೆಯಲಿ ಎಂದು ಅಪೇಕ್ಷೆ ಪಟ್ಟರೆ ನಮ್ಮ ಉಳಿದ ಕರ್ತವ್ಯಗಳು, ಜವಾಬ್ದಾರಿಗಳು, ಗುರಿಗಳು, ಉದ್ದೇಶಗಳು ಅಪೂರ್ಣವಾಗುತ್ತವೆ. ಅಪೂರ್ಣವಾದರೇ ಇದಕ್ಕೂ ಸಹ ನರಳುತ್ತೇವೆ. ಹಾಗಾಗಿ, ಸೋಮವಾರವು ನಮ್ಮೆಲ್ಲರ ಕರ್ತವ್ಯ, ಗುರಿಗಳನ್ನು ಪೂರೈಸಿಕೊಳ್ಳುವ ಹಾದಿಯ ಮೊದಲ ಮೆಟ್ಟಿಲು. ಇದನ್ನು ಉತ್ಸಾಹದಿಂದ ಸಂತೋಷವಾಗಿ ಬರಮಾಡಿಕೊಂಡರೆ ವಾರದ ಉಳಿದ ದಿನಗಳೂ ಸಹಿತ ಸುಗುಮವಾಗುರುತ್ತವೆ. ಆದ್ದರಿಂದ ಮಂಡೇ ಬ್ಲೂಸ್ ಎನ್ನುವುದು ನಮ್ಮ ಆಯ್ಕೆ, ಇದನ್ನು ಬದಲು ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಹ್ಯಾಪಿ ಮಂಡೇ !