ಸಂಬಂಧಗಳೆಂದರೆ ಹೆದರಿ ಓಡುವ ನನ್ನ ಮನಸ್ಸನ್ನು ಬದಲಿಸಿಕೊಳ್ಳುವುದು ಹೇಗೆ? ಯಾರಾದರೂ ಹತ್ತಿರ ಬಂದರೆ ನನಗೇಕೆ ಭಯ? -ಕಾಳಜಿ ಅಂಕಣ
Apr 17, 2024 08:20 PM IST
ಕಾಳಜಿ ಅಂಕಣ. ಡಾ ರೂಪಾ ರಾವ್
- ಡಾ ರೂಪಾ ರಾವ್: ಯಾರಾದರೂ ಹತ್ತಿರವಾಗುತ್ತಾರೆ ಎಂದರೇ ನನಗೆ ಭಯವಾಗುತ್ತೆ. ಯಾರೊಂದಿಗೂ ಬೆರೆಯಲು ಸಾಧ್ಯವಾಗುವುದಿಲ್ಲ ಎನ್ನುವುದು ಹಲವರ ಸಮಸ್ಯೆ. ತಮ್ಮ ಮನಸ್ಸಿನ ತೊಳಲಾಟವನ್ನು ಹಲವರು ಯಾರೊಂದಿಗೂ ಹೇಳಿಕೊಳ್ಳದೆ ಒಳಗೊಳಗೇ ನೋವು ತಿನ್ನುತ್ತಾರೆ. ಈ ಸಮಸ್ಯೆಗೆ ಏನು ಪರಿಹಾರ? -ಈ ಬಾರಿಯ ಕಾಳಜಿ ಅಂಕಣದಲ್ಲಿ ಉತ್ತರವಿದೆ.
ಪ್ರಶ್ನೆ: ನನ್ನದೊಂದು ಕೆಟ್ಟ ಗುಣವಿದೆ. ಯಾರಾದರೂ ನನಗೆ ಹತ್ತಿರವಾಗುತ್ತಿದ್ದಾರೆ ಎಂದು ಅನ್ನಿಸುತ್ತಿದ್ದ ಹಾಗೆಯೇ ಚಿಪ್ಪಿನಲ್ಲಿ ಅಡಗುವ ಆಮೆಯಂತೆ ಆಗ್ತೀನಿ. ಜೊತೆಯಲ್ಲಿದ್ದ ಕೆಲ ಸಮಯ ಅವರಿಗೆ ಕ್ಲೋಸ್ ಅನಿಸುವ ಹಾಗೆ ಇರುತ್ತೇನೆಯಾದರೂ ಮಾನಸಿಕವಾಗಿ ಅವರಿಂದ ಅಂತರ ಕಾಯ್ದುಕೊಂಡೇ ಇರುವೆ. ಅವರು ನನಗೆ ಅವಶ್ಯಕತೆಗಿಂತ ಹೆಚ್ಚು ಹತ್ತಿರ ಆಗುತ್ತಿದ್ದಾರೆ ಅನಿಸಿದಾಗ ಒಂದೊಂದೇ ಹೆಜ್ಜೆ ಹಿಂದೆ ಇಡುತ್ತಾ ಹೋಗುವೆ . ಬಂದವರು ನಿರಾಶೆಗೊಂಡು ಮರಳಿ ಹೋದಾಗ, ನನ್ನ ತಪ್ಪನ್ನು ನೆನೆದು ಬೇಸರಗೊಳ್ಳುವೆ. ನನ್ನ ಈ ಗುಣದಿಂದ ಯಾವ ಸಂಬಂಧವೂ ಬೆಳೆಯುತ್ತಿಲ್ಲ. ನಾನೇ ಒಂದು ದ್ವೀಪದಂತೆ ಆಗಿರುವೆ. ನಾನೇಕೆ ಹೀಗೆ ಮೇಡಂ? ದಯವಿಟ್ಟು ಸಹಾಯ ಮಾಡಿ. - ಹೆಸರು ಮತ್ತು ಊರು ಬೇಡ
ಉತ್ತರ: ಸಾಮಾನ್ಯವಾಗಿ ಒಬ್ಬ ವಯಸ್ಕ ವ್ಯಕ್ತಿಯ ಗುಣ, ವರ್ತನೆ ಹಾಗೂ ಸ್ವಭಾವಕ್ಕೆ ಅವರ ಬಾಲ್ಯದ ಕೊಡುಗೆ ಸಾಕಷ್ಟು ಇರುತ್ತದೆ. ಬಾಲ್ಯ ಅಂದರೆ ಹುಟ್ಟಿನಿಂದ ಹಿಡಿದು ಹರೆಯ ತಲುಪುವವರೆಗಿನ ಸಮಯದಲ್ಲಿ ನೋಡಿದ / ಅನುಭವಿಸಿದ ವಿಷಯಗಳು ಅನುಭವಗಳಾಗಿ ಮನುಷ್ಯರ ಸುಪ್ತ ಮನಸಲ್ಲಿ ಅಚ್ಚೊತ್ತಿರುತ್ತದೆ. ಒಬ್ಬ ವ್ಯಕ್ತಿಯ ನಡವಳಿಕೆಗೆ, ಗುಣಕ್ಕೆ ಇದು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಆದರೆ ಮೇಲಿನ ಪ್ರಶ್ನೆಗೆ ಉತ್ತರ ಇದಿಷ್ಟೇ ಅಲ್ಲ. ಸಂಬಂಧಿಸಿದವರೊಂದಿಗೆ ವಿವರವಾಗಿ ಮಾತನಾಡದೇ, ಕೇವಲ ಪ್ರಶ್ನೆ ಓದಿ ಸಮರ್ಪಕ ಹೇಳಲು ಆಗುವುದಿಲ್ಲ. ಆದರೆ ಈ ಪ್ರಶ್ನೆ ಅಥವಾ ಇಂಥ ಸಮಸ್ಯೆ ಹಲವರನ್ನು ಬಾಧಿಸುತ್ತಿರಬಹುದು. ಅಂಥವರಿಗೂ ತುಸು ನೆಮ್ಮದಿಯಾಗಬಹುದು ಎನ್ನುವ ಕಾರಣಕ್ಕೆ ಈ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುವೆ.
ಮೊದಲನೆಯ ಪ್ರಶ್ನೆ; ಸಂಬಂಧಗಳು ಹತ್ತಿರವಾದರೆ ನಾನೇಕೆ ದೂರ ಓಡುತ್ತೇನೆ?
ನಿಮ್ಮ ಈ ಪ್ರಶ್ನೆಯೇ ಕುತೂಹಲಕರವಾಗಿದೆ. ಸಂಬಂಧಗಳು ಹತ್ತಿರವಾಗುತ್ತಿರುವಂತೆಯೇ ದೂರವಾಗಿಬಿಡುತ್ತೀರಿ ಎನ್ನುವ ಸಂಗತಿ ನಿಮ್ಮ ಪ್ರಶ್ನೆಯಿಂದ ತಿಳಿಯುತ್ತದೆ. ನಿಮ್ಮದೇ ಮಾತಿನಲ್ಲಿ ಹೇಳುವುದಾದರೆ ಚಿಪ್ಪಿನಲ್ಲಿ ಅಡಗಿರುವ ಆಮೆಯಾಗುತ್ತೀರಿ. ನಿಮಗೆ ನೀವೇ ಇನ್ನೊಂದು ಪ್ರಶ್ನೆ ಕೇಳಿಕೊಳ್ಳಿ. ಆಮೆಯು ಯಾವಾಗ ಚಿಪ್ಪಿನಲ್ಲಿ ತಲೆ ಹುದುಗಿಸಿಕೊಳ್ಳುತ್ತದೆ? ಅದಕ್ಕೆ ಭಯವಾದಾಗ ತಾನೆ? ಆಮೆಗೆ ನಿಮ್ಮನ್ನು ನೀವು ಹೋಲಿಸಿಕೊಂಡಿದ್ದೀರಿ; ಅಂದರೆ ಸಂಬಂಧಗಳು ನಿಮ್ಮ ಸನಿಹಕ್ಕೆ ಬರುತ್ತಿದ್ದಂತೆಯೇ ನಿಮ್ಮ ಮನಸ್ಸು ಅದರಿಂದ ಯಾವದೋ ರೀತಿಯ ಅಪಾಯ ಉಂಟಾಗಬಹುದು ಎಂದು ಭಾವಿಸುತ್ತದೆ ಅಥವಾ ಊಹಿಸುತ್ತದೆ. ಹೀಗಾಗಿಯೇ ಚಿಪ್ಪಿನಲ್ಲಿ ತಲೆ ಇರಿಸಿಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಯತ್ನಿಸುತ್ತೀರಿ.
ಸಂಬಂಧಗಳಿಂದ ಎದುರಾಗುವ ಅಪಾಯ ಏನಿರಬಹುದು?
1) ಆ ಸಂಬಂಧದಿಂದ ತೊಂದರೆ ಆಗಬಹುದು.
2) ಸಂಬಂಧಗಳೆಂದರೇ ತೊಂದರೆ. ಸಂಬಂಧಗಳು ಹತ್ತಿರವಾದರೆ ಅವರು ನನಗೇನೋ ಅಪಾಯ ಮಾಡಬಹುದು
3) ಸಂಬಂಧಗಳು ಹತ್ತಿರವಾದರೆ ನನ್ನಿಂದ ಅವರಿಗೆ ಯಾವುದೋ ಅಪಾಯ ಆಗಬಹುದು. ಸಂಬಂಧಗಳ ನಿರ್ವಹಣೆಗೆ ಬೇಕಾದ ಬದ್ದತೆಯ ಭಯ ನನಗಿದೆ.
4) ಮೇಲಿನ ಯಾವುದೂ ಅಲ್ಲ. ಆದರೆ ಒಟ್ಟಿನಲ್ಲಿ ಸಂಬಂಧ ಹತ್ತಿರವಾದರೆ ನನಗೆ ಹಿಂಸೆ
ಮೊದಲ ಸನ್ನಿವೇಶವು ಒಂದು ಸಂಬಂಧದಿಂದ ತೊಂದರೆ ಅಥವಾ ಅಪಾಯ ಆಗಬಹುದು ಎಂದಾದರೆ ಅದು ಯಾವ ರೀತಿಯ ಅಪಾಯ ಎಂದು ಯೋಚಿಸಿ. ಎರಡನೆಯ ಕಾರಣ ಸಂಬಂಧಗಳಿಂದಲೇ ಅಪಾಯ ಎನ್ನುವುದು ನಿರ್ಧಾರಕ್ಕೆ ನಿಮ್ಮ ಮನಸ್ಸು ಬಂದಿದ್ದರೆ ಅಂಥ ಭಯಕ್ಕೆ ನಿಮ್ಮ ಹಿಂದಿನ ಅನುಭವವೇ ಕಾರಣವಾಗಿರುತ್ತದೆ. ಇದಕ್ಕೂ ಮುಂಚೆ ಯಾವುದೋ ಸಂಬಂಧದಲ್ಲಿ ಸಿಕ್ಕಿ, ಯಾರನ್ನಾದರೂ ನಂಬಿ ಮೋಸ ಹೋಗಿದ್ದರೆ ಅಥವಾ ಯಾವುದಾದರೂ ತೊಂದರೆಗೆ ಸಿಲುಕಿದ್ದರೆ, ಜನರ ಮೇಲೆ ಅಪನಂಬಿಕೆ ಇದ್ದರೆ, ಈ ರೀತಿ ಯಾರಾದರೂ ಹತ್ತಿರ ಆಗುವಾಗ ಭಯ ಆಗುತ್ತದೆ. ಮತ್ತೆ ಯಾವುದಾದರೂ ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತೇನೇನೋ ಎನ್ನುವ ಭಯ ಅದು.
ಈ ಕಾರಣವಾಗಿದ್ದರೆ ನೆನಪಿಡಿ; ನಾವು ಭೇಟಿಯಾಗುವ ಎಲ್ಲರಲ್ಲಿಯೂ ಒಳ್ಳೆಯತನದ ಜೊತೆಗೆ ಕೆಟ್ಟತನಗಳೂ ಇರುತ್ತವೆ. ಕೆಲವರು ಕೆಲವರಿಗೆ ಒಳ್ಳೆಯವರಾಗಿಯೂ ಇನ್ನೂ ಕೆಲವರಿಗೆ ಕೆಟ್ಟವರಾಗಿಯೂ ಇರಬಹುದು. ನಾವು ನಮ್ಮವರೆಂದು ಆರಿಸಿಕೊಳ್ಳುವ ಜನರು ಯಾವಾಗಲೂ ಒಳ್ಳೆಯವರಾಗಿಯೇ ಇರುತ್ತಾರೆ ಎಂದು ಹೇಳಲೂ ಸಾಧ್ಯವಿಲ್ಲ. ನಿರಂತರ ಬದಲಾವಣೆ ಮತ್ತು ವೈವಿಧ್ಯ ಜಗತ್ತಿನ ನಿಯಮ. ಹಾಗಾಗಿ ಪರಿಪೂರ್ಣರು ನಮಗೆ ಸಿಗುತ್ತಾರೆ ಎಂಬುದು ಸುಳ್ಳು ವೈವಿಧ್ಯದಲ್ಲಿಯೇ ನಮಗೆ ಯಾರು ಎಷ್ಟು ಹೊಂದಿಕೆಯಾಗುತ್ತಾರೆ ಎಂಬುದನ್ನು ನೋಡಿಕೊಳ್ಳುವುದು ಉತ್ತಮ.
ಅವರು ಹತ್ತಿರವಾದರೆ ನನ್ನಿಂದ ಅವರಿಗೆ ತೊಂದರೆಯಾಗಬಹುದು
'ಸಂಬಂಧಗಳು ಹತ್ತಿರವಾದರೇ ಅವರಿಗೇ ನನ್ನಿಂದ ತೊಂದರೆ ಆಗಬಹುದು' ಎನ್ನುವ ಭಯ ನಿಮ್ಮಲ್ಲಿ ಇದ್ದರೆ ಈ ಮುಂದಿನ ಸಾಲುಗಳನ್ನು ಓದಿಕೊಳ್ಳಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರದೇ ಇದ್ದಾಗ ಈ ರೀತಿಯ ಭಯ ಕಾಡುತ್ತದೆ. ಕೆಲವರಿಗೆ ಬದ್ಧತೆಯ (ಕಮಿಟ್‌ಮೆಂಟ್) ಭಯ ಇರುತ್ತದೆ. ಯಾವುದಾದರೂ ಸಂಬಂಧವನ್ನು ನಾನು ಒಪ್ಪಿಕೊಂಡರೆ ಅದಕ್ಕೆ ಬೇಕಾದ ಸಮಯ ಹಾಗೂ ಸಂಪನ್ಮೂಲ ಹೊಂದಿಸಲು ಸಾಧ್ಯವಾದೀತೆ ಎನ್ನುವ ಹಿಂಜರಿಕೆ ಇರುತ್ತದೆ. ಇಂಥ ಆತಂಕವೂ ಆಪ್ತರಾಗಬೇಕೆಂದು ಹತ್ತಿರಕ್ಕೆ ಬಂದವರನ್ನು ದೂರ ತಳ್ಳುವಂತೆ ಮಾಡುತ್ತದೆ. ನಿಕಟತೆ ಮೊದಮೊದಲಿಗೆ ಇಷ್ಟವಾದರೂ ಕಾಲಾನಂತರದಲ್ಲಿ ಅದು ಹೆಚ್ಚು ಸಮಯ ಬೇಡಬಹುದೇನೋ ಎಂಬ ಭಯ ಅದನ್ನು ದೂರ ಮಾಡುತ್ತದೆ.
ಮನುಷ್ಯರ ಅತಿ ದೊಡ್ಡ ಶತ್ರು ಎಂದರೆ ಅದೃಶ್ಯ ವಿಚಾರ ಹಾಗೂ ಭವಿಷ್ಯದ ಬಗೆಗಿನ ಭಯ ಹಾಗೂ ಆತಂಕ. ಇವೆರೆಡೂ ನಮ್ಮನ್ನು ವಿನಾ ಕಾರಣ ಅತಿಯಾಗಿ ಯೋಚಿಸಿ ಹೊಸ ವಿಚಾರಗಳು ಬದುಕಿಗೆ ಪ್ರವೇಶಿಸಲು ಅಡ್ಡಿಯುಂಟು ಮಾಡುತ್ತವೆ. ಇದನ್ನು ನೀವು ಜಯಿಸಬೇಕೆಂದರೆ ನಿಕಟತೆಗೆ ಒಗ್ಗಿಕೊಳ್ಳಿ. ಸಂಬಂಧ ಒಳ್ಳೆಯದಾದರೆ ಓಕೆ. ಇಲ್ಲ ಅಂದರೆ ಒಂದು ಹೊಸ ಅನುಭವವು ಒಂದೊಳ್ಳೆ ಪಾಠದ ಜೊತೆಗೆ ಸಿಗುತ್ತದೆ. ಸಂಬಂಧಗಳೊಂದಿಗೆ ಒಂದಿಷ್ಟು ದೂರ ಪ್ರಯಾಣ ಮಾಡಿ. ನೀವೊಮ್ಮೆ ಹಿಂದಿರುಗಿ ನೋಡಿದರೆ ಬದುಕು ಎನ್ನುವುದು ನೆನಪುಗಳ ಮೂಟೆ ಅಷ್ಟೇ. ಅದರಲ್ಲಿ ಈ ಅನುಭವವೂ ಸಹ ಒಂದು ನೆನಪಾಗಿ ಕೂರುತ್ತದೆ. ಕೂರಲಿ ಬಿಡಿ, ಅದಕ್ಕಾಗಿ ಸ್ಥಳ ಕೊಡಿ.
ಸಂಬಂಧ ಹತ್ತಿರವಾದರೆ ನನಗೆ ಹಿಂಸೆ
ನನ್ನ ಸಮಸ್ಯೆ ಮೇಲಿನ ಯಾವುದೂ ಅಲ್ಲ. ಆದರೆ ಒಟ್ಟಿನಲ್ಲಿ ಸಂಬಂಧ ಹತ್ತಿರವಾದರೆ ನನಗೆ ಹಿಂಸೆ ಎನ್ನುವುದು ಕೆಲವರ ಅಭಿಪ್ರಾಯವಾಗಿರುತ್ತದೆ. ಇದು ಸಾಮಾನ್ಯ ಜನರಿಗೆ ಒಂದು ರೀತಿಯ ಒಗಟು. ನನಗೆ ಯಾವುದೂ ಭಯವಿಲ್ಲ. ಆದರೆ ಸಂಬಂಧಗಳು ಹತ್ತಿರವಾದಂತೆ ನನಗೇನೋ ಹಿಂಸೆ , ಅಲ್ಲಿಂದ ಹೊರಬರಲು ಚಡಪಡಿಸುತ್ತೇನೆ ಎನ್ನುವ ತುಡಿತ. ಇರುತ್ತದೆ. ಇದಕ್ಕೆ ಸಾಮಾನ್ಯ ಕಾರಣ ಒಬ್ಬ ವ್ಯಕ್ತಿಯ ಬಾಲ್ಯ.
ಒಂದು ಮಗುವಿಗೆ ಬೇಕಾದ ಆಹಾರ, ವಸತಿ, ಬಟ್ಟೆ ಎಲ್ಲವೂ ಸಿಕ್ಕಿರುತ್ತದೆ, ಆದರೆ ಆ ಮಗುವಿಗೆ ಬೇಕಾದ ಸಮಯದಲ್ಲಿ ಪ್ರೀತಿ, ಕಾಳಜಿ, ಅಕ್ಕರೆ, ಮಮತೆ ಸಿಕ್ಕಿರುವುದಿಲ್ಲ. ಆಗ ತನಗೆ ಬೇಕಾದ ಭಾವನಾತ್ಮಕ ಅಗತ್ಯ ಹಾಗೂ ಆಸರೆಯನ್ನು ಆ ಮಗುವೇ ಮರೆತುಬಿಡುತ್ತದೆ. ಆದರೂ ಅದನ್ನು ದುಃಖ ಹಾಗೂ ಒಂಟಿತನ ಕಾಡುತ್ತಲೇ ಇರುತ್ತದೆ. ಒಂದು ಹಂತದಲ್ಲಿ ಈ ಮಗು ಪರಸ್ಪರ ಪ್ರೀತಿ, ಕಾಳಜಿಯ ನಿರಾಕರಣೆಯನ್ನೇ ಸಾಮಾನ್ಯ ನಡವಳಿಕೆ ಅಂದುಕೊಂಡುಬಿಡುತ್ತದೆ.
ಈ ಸಂಬಂಧದ ಶೈಲಿಯನ್ನು 'ಅವಾಯ್ಡೆನ್ಸ್ ಅಟ್ಯಾಚ್‌ಮೆಂಟ್ ಸ್ಟೈಲ್' (ಬಾಂಧವ್ಯ ನಿರಾಕರಣೆಯ ಶೈಲಿ) ಎಂದು ಕರೆಯುತ್ತೇವೆ. ಮಗುವು ಬೆಳೆದಂತೆ ಇದೇ ಶೈಲಿಯನ್ನು ಸಂಪ್ರೀತಿ, ಸ್ನೇಹ, ಸಂತೋಷದಂಥ ಇತರ ಬಾಂಧವ್ಯಗಳ ವಿಚಾರಗಳಲ್ಲಿಯೂ ರೂಢಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಇಂಥ ಸಮಸ್ಯೆ ಎದುರಿಸಿದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಸಂಬಂಧಗಳಿಂದ ಇಂಥವರು ದೂರ ಓಡುತ್ತಾರೆ.
ಇಂಥವರ ಬಾಲ್ಯ ಸಾಮಾನ್ಯವಾಗಿ ಹೀಗಿರುತ್ತದೆ
1) ಬಾಲ್ಯದಲ್ಲಿ ಪೋಷಕರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳು.
2) ಅಳಬೇಡ, ಅತ್ತರೆ ಹೊಡೆಯುತ್ತೇವೆ ಎಂದು ಗದರಿಸಿಕೊಂಡು ಬೆದರಿಕೆ ಹಾಕಿಸಿಕೊಂಡ ಮಕ್ಕಳು.
3) ತಮ್ಮ ಸಾಧನೆಗಳಿಗೆ ಪೋಷಕರಿಂದ ಸೂಕ್ತ ಪ್ರಶಂಸೆ ಸಿಗದವರು ಸಾಮಾನ್ಯವಾಗಿ ಹೀಗಾಗುತ್ತಾರೆ.
4) ಮಕ್ಕಳೆಂದರೆ ದೊಡ್ಡ ಹೊರೆ ಎಂದು ಭಾವಿಸಿಕೊಂಡ ಪೋಷಕರಿದ್ದರೆ ಮುಂದೆ ಬೆಳೆದ ಮೇಲೆ ಅಂಥವರ ಮಕ್ಕಳು ಹೀಗೆ ಸಂಬಂಧಗಳಿಗೆ ಹೆದರುತ್ತಾರೆ.
ದೊಡ್ಡವರಾದ ಮೇಲೆಯೂ ಕಾಡುವ ಬಾಲ್ಯದ ಸಮಸ್ಯೆಗಳು
ಬಾಲ್ಯದಲ್ಲಿ ಎದುರಿಸಿದ ಪರಿಸ್ಥಿತಿಗಳು ಮಕ್ಕಳ ಮನದಲ್ಲಿ ಆಳವಾಗಿ ಬೇರೂರುತ್ತವೆ. ಅವರು ದೊಡ್ಡವರಾದ ಮೇಲೆ ಇದರ ಪ್ರಭಾವ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂಥ ಮಕ್ಕಳು ದೊಡ್ಡವರಾದ ಮೇಲೆ ಆಗುವ ಮಾನಸಿಕ ಬದಲಾವಣೆಗಳು ಹೀಗಿರುತ್ತವೆ.
1) ನಿಶ್ಚಿತ ಸಂಬಂಧಗಳು ಏರ್ಪಡುವುದಿಲ್ಲ
2) ಯಾರಿಂದಲೂ ಇಂಥವರು ಸಹಾಯ ಬಯಸುವುದಿಲ್ಲ
3) ಸಂಗಾತಿ ತೋರಿಸುವ ಸಾಮಾನ್ಯ ಪ್ರೀತಿಯೂ ಇಂಥವರಿಗೆ ಅತಿ ಎನ್ನಿಸುತ್ತದೆ
4) ಸಂಬಂಧಗಳಲ್ಲಿ ಬದ್ದತೆ ಇರುವುದಿಲ್ಲ
5) ಅತಿಯಾದ ಸ್ವಾತಂತ್ರ್ಯ ಹಾಗೂ ನಿರಾವಲಂಬನೆಯನ್ನು (ಯಾರ ಮೇಲೆಯೂ ಅವಲಂಬನೆ ಆಗದಿರುವುದು) ಬಯಸುತ್ತಾರೆ
6) ಕಾಲಕ್ರಮೇಣ ಇಂಥವರಲ್ಲಿ ಖಿನ್ನತೆ ಅಥವಾ ಆವರಿಸಿಕೊಳ್ಳುತ್ತದೆ
ಸಂಬಂಧಗಳೆಂದರೆ ಹೆದರುವ ಮನಃಸ್ಥಿತಿಗೆ ಏನು ಪರಿಹಾರ?
ಸಂಬಂಧಗಳೆಂದರೆ ನಿಮಗೆ ಏಕೆ ಹೆದರಿಕೆ? ಈ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಸಂಬಂಧಗಳ ಬಗ್ಗೆ ನಿಮ್ಮ ಸುಪ್ತ ಮನಸ್ಸಿನಲ್ಲಿರುವ ಭಯವೇ? ಅನಿಸಿಕೆಯೇ? ನಂಬಿಕೆಯೇ ಎನ್ನುವುದನ್ನು ಹುಡುಕಿಕೊಳ್ಳಿ. ಅವುಗಳಿಗೆ ಪರ್ಯಾಯ ನಂಬಿಕೆ ಹಾಗೂ ಅನಿಸಿಕೆಗಳನ್ನು ಹುಟ್ಟುಹಾಕಿ. ಇದಕ್ಕೆ ನೀವು ನಿಮ್ಮ ಯೋಚನೆ, ಆಲೋಚನೆ ಹಾಗೂ ನಂಬಿಕೆಗಳ ಬಗ್ಗೆ 'ಮೈಂಡ್‌ಫುಲ್' (ಮುಕ್ತ ಮನಸ್ಸಿನಿಂದ) ಯೋಚಿಸಿ. ಇಂಥ ಒಂದೊಂದೇ ಆಲೋಚನೆಗಳನ್ನು ಬದಲಾಯಿಸಲು ಪ್ರಯತ್ನಿಸಿ. ಈ ಪ್ರಕ್ರಿಯೆಗೆ ನಿಮಗೆ ನುರಿತ ಮನಃಶಾಸ್ತ್ರರ (ಸೈಕಾಲಜಿಸ್ಟ್) ಸಹಾಯ ಬೇಕಾಗಬಹುದು. ನೀವು ನಿಮ್ಮ ಸಮೀಪದ ಯಾರನ್ನಾದರೂ ಸಂಪರ್ಕಿಸಿ ಇದರಿಂದ ಹೊರಗೆ ಬನ್ನಿ.
---
ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ನಿವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ 20ಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.