ಕನ್ನಡ ಸುದ್ದಿ  /  Lifestyle  /  Relationship Tips Husband Wife Relationship How To Handle Wife Facing Many Physical And Mental Issues Compatibility Dmg

Relationship: ಸಂಬಂಧವನ್ನು ಬಿಟ್ಟು ಬಿಡುವುದು ಸುಲಭ, ಕಟ್ಟುವುದೇ ಕಷ್ಟ; ಸಹನೆ ಕೂಡ ಪ್ರೀತಿಯ ಒಂದು ಅಭಿವ್ಯಕ್ತಿ -ಯುವ ಮನ

‘ಬಿಟ್ಟು ಬಾಳುವುದು ಸುಲಭ; ಹೊಂದಾಣಿಕೆಯೇ ಕಷ್ಟ’ ದಾಂಪತ್ಯದ ಸವಾಲು ಇರುವುದು ಸಂಬಂಧವನ್ನು ಉಳಿಸಿಕೊಳ್ಳುವುದರಲ್ಲಿ. ಯಾವುದೇ ಸಂಬಂಧವು ದೀರ್ಘಾವಧಿ ಉಳಿಯಲು ಪ್ರೀತಿ, ವಿಶ್ವಾಸಗಳ ಜೊತೆಗೆ ತಾಳ್ಮೆ, ತ್ಯಾಗಗಳೂ ಬೇಕು. ಈ ದಂಪತಿಯ ಸಮಸ್ಯೆ ವಿಭಿನ್ನವಾದುದು. ಈ ಸಮಸ್ಯೆಗೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ರೂಪಾ ರಾವ್ ಕೊಟ್ಟಿರುವ ಉತ್ತರವೂ ವಿಶಿಷ್ಟವಾಗಿದೆ.

ಹೊಂದಾಣಿಕೆಗೆ ತ್ಯಾಗ, ಸಹನೆ ಸಹ ಬೇಕು. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್
ಹೊಂದಾಣಿಕೆಗೆ ತ್ಯಾಗ, ಸಹನೆ ಸಹ ಬೇಕು. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್

ಪ್ರಶ್ನೆ: ನಮ್ಮ ಮದುವೆಯಾಗಿ 10 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ನನ್ನ ಹೆಂಡತಿಗೆ ಅಲ್ಸರ್ ಆಗಿ ಸುಮಾರು 3 ವರ್ಷಗಳೇ ಆಯ್ತು. ನಮ್ಮಿಬ್ಬರ ನಡುವೆ ಈಗ ದೈಹಿಕ ಸಂಪರ್ಕವೂ ಇಲ್ಲ. ನಾನು ಅವಳನ್ನು ಪ್ರೀತಿಸ್ತೇನೆ, ಚೆನ್ನಾಗಿ ನೋಡಿಕೊಳ್ತಿದ್ದೇನೆ. ಅವಳಿಗೋ ವಿಪರೀತ ಸಿಟ್ಟು, ಮುಂಗೋಪ ಜಾಸ್ತಿ. ಆದರೆ ಮನಸ್ಸು ಒಳ್ಳೆಯದು. ಅವಳು ಸಿಟ್ಟು ಬಿಡದೆ ಆರೋಗ್ಯ ಸುಧಾರಿಸಲ್ಲ ಅಂತ ಡಾಕ್ಟರ್ ಹೇಳ್ತಾರೆ. ಇವಳಿಗೆ ಎಷ್ಟು ಹೇಳಿದರೂ ರೇಗೋದು ಬಿಡಲ್ಲ, ಸಣ್ಣಪುಟ್ಟದ್ದಕ್ಕೆ ಸಿಟ್ಟು ಮಾಡಿಕೊಂಡು ಕೂಗಾಡ್ತಾಳೆ, ಆಮೇಲೆ ಅವಳಿಗೆ ಮೈಯೆಲ್ಲಾ ನಡುಕ ಬರುತ್ತೆ, ಸುಧಾರಿಸಲು ವಾರಗಟ್ಟಲೆ ಬೇಕಾಗುತ್ತೆ. ನನ್ನ ಕೆಲವು ಸಂಬಂಧಿಕರು, "ಇವಳು ಬದಲಾಗೋ ಪೈಕಿ ಅಲ್ಲ, ಈ ವಯಸ್ಸಲ್ಲಿ ಅಲ್ಲದಿದ್ರೆ ಇನ್ಯಾವಾಗ ಸುಖಪಡ್ತೀಯಾ? ಇವಳನ್ನು ಬಿಟ್ಟುಬಿಡು, ಇನ್ನೊಂದು ಮದುವೆಯಾಗು" ಅಂತ ಹೇಳ್ತಾರೆ. ಒಂದೊಂದು ಸಲ ಹೌದಲ್ವಾ ಅನ್ನಿಸಿಬಿಡುತ್ತೆ. ಆಮೇಲೆ ಮಕ್ಕಳ ಮುಖ ನೋಡಿ ಸುಮ್ಮನಾಗ್ತೀನಿ. ದಿನದಿಂದ ನನಗೂ ಇವಳ ಮೇಲೆ ಪ್ರೀತಿ ಕಡಿಮೆಯಾಗ್ತಿದೆ ಅನ್ನಿಸುತ್ತೆ. ಇವಳು ಯಾಕೆ ಬದಲಾಗಲ್ಲ ಮೇಡಂ, ನನ್ನ ಕಷ್ಟ ಇವಳಿಗೆ ಅರ್ಥವಾಗಲ್ವಾ? ಸಿಟ್ಟು ಬಿಡೋದು ಅಷ್ಟೊಂದು ಕಷ್ಟವಾ? ಸಿಟ್ಟು ಮಾಡಿಕೊಂಡು ಏನು ಸಾಧಿಸ್ತಾಳೆ ಅಂತ್ಲೇ ಗೊತ್ತಾಗ್ತಿಲ್ಲ. ಇವಳನ್ನು ಬಿಟ್ಟು ಇನ್ನೊಂದು ಮದುವೆಯಾಗೋದು ಒಳ್ಳೇದು ಅಂತ ನಿಮಗೂ ಅನ್ನಿಸುತ್ತಾ? - ಹೆಸರು ಬೇಡ, ಊರು: ಹುಬ್ಬಳ್ಳಿ

ಉತ್ತರ: ಈ ಪ್ರಶ್ನೆಯನ್ನು ಎಳೆಎಳೆಯಾಗಿ ಬಿಡಿಸಿ ನೋಡೋಣ. 'ಅಲ್ಸರ್' (ಹುಣ್ಣು) ಯಾವ ರೀತಿಯದ್ದು ಮತ್ತು ಈಗಲೂ ಇದೆಯಾ ಎನ್ನುವುದು ನಿಮ್ಮ ಪ್ರಶ್ನೆಯಲ್ಲಿ ಸ್ಪಷ್ಟವಾಗಿ ತಿಳಿಯುವುದಿಲ್ಲ. ನಿಮ್ಮಿಬ್ಬರ ನಡುವೆ ದೈಹಿಕ ಸಂಪರ್ಕ ಆಗದಿರಲು ಏನು ಕಾರಣ‌ ಎನ್ನುವುದೂ ತಿಳಿಯುವುದಿಲ್ಲ. ಹಾಗಾಗಿ ಸದ್ಯಕ್ಕೆ ಅವರ ಕೋಪ ಒಂದೇ ಸಮಸ್ಯೆಗಳಿಗೆ ಕಾರಣವೆಂದು ತಿಳಿದು ಈ ಉತ್ತರ. ಸಮಾಧಾನವಾಗಿ ಪೂರ್ತಿ ಓದಿ. ಮೇಲಿನ ನಿಮ್ಮ ವಿವರಣೆಯಿಂದ ತಿಳಿಯುವುದೆಂದರೆ ನಿಮ್ಮ ಹೆಂಡತಿಗೆ‌ ಬೇಕಾದುದು ಮಾನಸಿಕ ಚಿಕಿತ್ಸೆ. ಒಂದೊಳ್ಳೆ ಮಾನಸಿಕ ತಜ್ಞರ ಬಳಿ ಕರೆದೊಯ್ಯಿರಿ, ಅವರು ಕೆಲವು ಪ್ರಶ್ನೆಗಳ ಮೂಲಕ ಈ ಕೋಪಾವೇಶಕ್ಕೆ‌ ಕಾರಣ‌ ಏನು ಎಂದು ತಿಳಿದು ಅಗತ್ಯವಿದ್ದರೆ ಸೂಕ್ತ ವೈದ್ಯರ ಬಳಿ ಕಳಿಸುತ್ತಾರೆ.

ನಿಮ್ಮ ಹೆಂಡತಿಯ ಕೋಪ ಯಾವಾಗಿನಿಂದ ಶುರುವಾಗಿದೆ?

ಮೊದಲಿನಿಂದಲೂ ಅವರಿಗೆ ಕೋಪ ಇದ್ದರೆ ಅವರು ಕೋಪದ ನಿರ್ವಹಣೆ ಕಲಿಯಬೇಕು. ಕೋಪದ ನಿರ್ವಹಣೆಯ ಬಗ್ಗೆ ಕೊನೆಯಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದೇನೆ. ಒಂದು ವೇಳೆ ಕೋಪವು ಅನಾರೋಗ್ಯದ ನಂತರ ಶುರುವಾಗಿದ್ದರೆ ಯಾವುದೋ ಚಿಂತೆ, ಗಾಬರಿ, ಭಯ, ಎಚ್ಚರಿಕೆಯು ಅವರನ್ನು ಹಾಗೆ ಮಾರ್ಪಡಿಸಿರಬೇಕು. ಅದಕ್ಕೆ ಮಾನಸಿಕ ತಜ್ಞರನ್ನು ಭೇಟಿಯಾಗಲೇಬೇಕು.

ಇದರ ಜೊತೆಗೆ ನಿಮ್ಮ ಪ್ರಯತ್ನ ಹಾಗೂ ಸಹನೆಯೂ ಬೇಕು. ನಿಮ್ಮ ಪ್ರಯತ್ನದಿಂದಲೂ ಅವರನ್ನು ಬದಲಿಸುವ ಸಂಭವನೀಯತೆ ಇದೆ. ಆದರೆ ಬದಲಾವಣೆಗೆ ಅವರೂ ಸಹ ಮನಸ್ಸು ಮಾಡಬೇಕಷ್ಟೇ. ತನ್ನಲ್ಲಿ ಈ ರೀತಿ ಮಾನಸಿಕ ಅಸ್ತವ್ಯಸ್ತತೆ ಇದೆ ಹಾಗೂ ಇದರಿಂದ ತನ್ನ ಕುಟುಂಬಕ್ಕೆ ತೊಂದರೆ ಆಗುತ್ತಿದೆ ಇದನ್ನು ಬದಲಿಸಿಕೊಳ್ಳಬೇಕು ಎಂಬ ಮನಸ್ಸು ಅವರಿಗೆ ಬಂದರೆ ನಿಮ್ಮ ಕುಟುಂಬ‌ ಉಳಿಯುತ್ತದೆ (ಸೂಕ್ತ ಚಿಕಿತ್ಸೆಯ ಮೂಲಕ).

ಆದರೆ ಅದಕ್ಕೆ ಅವರು ತಯಾರಿಲ್ಲವೆಂದರೆ ಏನೂ‌ ಮಾಡಲು ಸಾಧ್ಯವಿಲ್ಲ. ಪ್ರೀತಿ ಎಂಬುದು ಕಾಳಜಿ, ಸಂತೋಷ ಕೊಡುವುದರ ಜೊತೆಗೆ‌ ಸಹನೆ, ತಾಳ್ಮೆ ಹಾಗೂ ಜವಾಬ್ದಾರಿಯನ್ನೂ ಬೇಡುತ್ತದೆ. ಅದು ಎರಡೂ ಕಡೆಯಿಂದ. ಈಗ ಅದರ ಪರೀಕ್ಷೆಯ ಸಮಯ; ನೀವು ನಿಮ್ಮ ಹೆಂಡತಿಯನ್ನು ಎಷ್ಟು ಹಂತದವರೆಗೆ ಪ್ರೀತಿಸಬಲ್ಲಿರಿ, ಅವರು ಎಷ್ಟರಮಟ್ಟಿಗೆ ಬದಲಾಗಬಲ್ಲರು ಎಂಬುದು ಈಗ ಗೊತ್ತಾಗುತ್ತದೆ.

ಒಂದು ಪ್ರಯೋಗದ ಕಥೆ‌ ನೆನಪಿಗೆ ಬರುತ್ತಿದೆ. ಒಂದು ತಾಯಿ ಕೋತಿಯನ್ನು ಅದರ ಮರಿಯ ಜೊತೆಗೆ ಒಂದು ತೊಟ್ಟಿಯಲ್ಲಿ ಹಾಕಿ, ನೀರು‌ ತುಂಬಲಾರಂಭಿಸಿದರು. ಆ ತಾಯಿ ಮೊದಲು ಮರಿಯನ್ನು ಎತ್ತಿ ಮಡಿಲಿಗೆ ಹಾಕಿಕೊಂಡಿತು, ಅಲ್ಲಿಯವರೆಗೆ ನೀರು ತುಂಬಿದರು , ಈಗ‌ ಆ ಮಗುವನ್ನು ಎದೆಗಪ್ಪಿಕೊಂಡಿತು. ಎದೆಯಮಟ್ಟಕ್ಕೆ ನೀರು ಬಂತು, ಆ ನಂತರ ಮಗುವನ್ನು ತಲೆಯ‌ಮೇಲೆ ಇಟ್ಟುಕೊಂಡಿತು. ಈಗ ಅದರ ತಲೆಯವರೆಗೆ ಬಂದಾಗ ತಾಯಿ ಕೋತಿ ತಬ್ಬಿಬ್ಬಾಯಿತು. ಕೊನೆಗೆ ಏನನ್ನಿಸಿತೋ ತನ್ನ ಮರಿಯನ್ನು ಕೆಳಗೆ ಹಾಕಿ ಅದರ ಮೇಲೆ ನಿಂತು ತನ್ನನ್ನು ತಾನು ಬಚಾವು ಮಾಡಿಕೊಂಡಿತು. ಇದನ್ನು ಸಹನೆಯ ಮಟ್ಟ (level of tolerance) ಎಂದು ಕರೆಯುತ್ತೇವೆ, ಒಬ್ಬೊಬ್ಬರಿಗೆ ಒಂದೊಂದು ಮಟ್ಟ ಇರುತ್ತದೆ. ನಿಮ್ಮ ಸಹನೆಯ ಮಟ್ಟ ಎಷ್ಟಿದೆ ನೋಡಿ.

ಒಂದು ಮಾತು ನೆನಪಿಟ್ಟುಕೊಳ್ಳಿ. ಸಂಬಂಧವನ್ನು ಬಿಟ್ಟು ಬಿಡುವುದು ಸುಲಭ, ಕಟ್ಟುವುದೇ ಕಷ್ಟ‌. ಈ ಸಂಬಂಧಕ್ಕೆ ನೀವು ಎಷ್ಟು ವರ್ಷಗಳ ಇನ್ವೆಸ್ಟ್ ಮಾಡಿದ್ದೀರಿ, ಇದರಿಂದ ನೀವೇನು ಕಳೆದುಕೊಳ್ಳುತ್ತೀರಿ ಎಲ್ಲವನ್ನೂ ಮತ್ತೇ ಮೊದಲಿನಿಂದ ಕಟ್ಟಲು ಆಗುತ್ತದೆಯೇ? ಮಕ್ಕಳ ಕಥೆ ಏನು? ಈ ವಿಷಯಗಳ ಬಗ್ಗೆಯೂ ಯೋಚಿಸಿ.

ದಾಂಪತ್ಯದಲ್ಲಿ ದೈಹಿಕ ಸಂಬಂಧವೂ ಮುಖ್ಯ. ಅದೂ ನಿಮ್ಮ ಮದುವೆಯಾಗಿ ಇನ್ನೂ ಹತ್ತು ವರ್ಷಗಳಾಗಿವೆ. ಹಾಗಾಗಿ ಇದರ ಬಗ್ಗೆ ಒಮ್ಮೆ ಸಂಬಂಧಪಟ್ಟ ಲೈಂಗಿಕ ತಜ್ಞರಲ್ಲಿ ಕರೆದೊಯ್ಯಬೇಕಾಗಬಹುದು. ಈ ಸಂಬಂಧ ಉಳಿಸಿಕೊಳ್ಳಲು ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಆ ತ್ಯಾಗದ ಬೆಲೆ ಎಷ್ಟಿದೆ ನೋಡಿ. ಒಂದು ವೇಳೆ ನಿಮ್ಮ ಮಡದಿಯಿಂದ ನಿಮ್ಮಿಡೀ ಜೀವನಕ್ಕೋ ಅಥವಾ ಮಕ್ಕಳ ಬದುಕಿಗೆ ಹಾನಿ ಆಗುವಂತಿದ್ದರೆ ಆ ತ್ಯಾಗದ ಹೊದಿಕೆ ತೆಗೆಯಬೇಕಾಗುತ್ತದೆ. ಈಗ ನಿರ್ಧಾರ ನಿಮ್ಮದು‌.

ಕೋಪದ ನಿರ್ವಹಣೆಗೆ ಹೀಗೆ ಪ್ರಯತ್ನಿಸಿ

ಈ ಉತ್ತರ ನಿಮ್ಮ ಮಡದಿಗೆ ಸಂಬಂಧಿಸಿದ್ದು. ಇದು‌ ಇಲ್ಲಿ ಬರೆದಷ್ಟು ಸುಲಭವಲ್ಲ ಆದರೆ ಸತತ ಪ್ರಯತ್ನದಿಂದ ಸಾಧ್ಯವಿದೆ. ಮೊದಲ ಒಂದು ವಾರ ಅಥವಾ ಎರಡು ವಾರ ದೀರ್ಘ ಉಸಿರಾಟದ ಅಭ್ಯಾಸ ಮಾಡಲಿ. ಎರಡು, ಮೂರನೆಯ ವಾರದಿಂದ ಕೋಪದ ಸಮಯದಲ್ಲಿ ಅವರ ದೇಹದಲ್ಲಿ ಆಗುವ ಬದಲಾವಣೆಗಳನ್ನೂ ಗಮನಿಸಲು‌ ಹೇಳಿ. ಅದನ್ನು ಬರೆದಿಡಲಿ. ನಾಲ್ಕು ವಾರ ಆದಮೇಲೆ ಕೋಪದ ಸಮಯ ಬಂದಾಗ ಆ ಸೂಚನೆಗಳನ್ನು ಗಮನಿಸಿ. ಅದರ ಬದಲು ಹೇಗೆ ವರ್ತಿಸಬೇಕು ಎಂಬುದನ್ನು ಅಭ್ಯಾಸ ಮಾಡಲಿ. ನಂತರ ಈ ಅಭ್ಯಾಸವನ್ನು ಪ್ರಾಯೋಗಿಕವಾಗಿ ಬಳಸಲಿ. ನಿಮ್ಮ ಕುಟುಂಬಕ್ಕೆ ನನ್ನ ಶುಭ ಹಾರೈಕೆಗಳು.

---

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990