logo
ಕನ್ನಡ ಸುದ್ದಿ  /  ಜೀವನಶೈಲಿ  /  ಅತಿಯಾದ ಚಳಿಯ ನಡುವೆ ಏರಿಕೆಯಾಗುತ್ತಿದೆ ಟಾನ್ಸಿಲ್‌ ಪ್ರಕರಣಗಳು; ನಿರ್ಲಕ್ಷ್ಯ ಮಾಡದಿರಿ, ಹೀಗಿರಲಿ ಮುನ್ನೆಚ್ಚರಿಕೆ

ಅತಿಯಾದ ಚಳಿಯ ನಡುವೆ ಏರಿಕೆಯಾಗುತ್ತಿದೆ ಟಾನ್ಸಿಲ್‌ ಪ್ರಕರಣಗಳು; ನಿರ್ಲಕ್ಷ್ಯ ಮಾಡದಿರಿ, ಹೀಗಿರಲಿ ಮುನ್ನೆಚ್ಚರಿಕೆ

Reshma HT Kannada

Dec 24, 2024 07:05 AM IST

google News

ಟಾನ್ಸಿಲ್‌ ಸಮಸ್ಯೆ

    • ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಯ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರು ಸೇರಿ ಹಲವು ಕಡೆ ತಾಪಮಾನ ಕುಸಿದಿದೆ. ಅತಿಯಾದ ಚಳಿಯು ಟಾನ್ಸಿಲ್ ಅಥವಾ ಗಲಗ್ರಂಥಿಯ ಉರಿಯೂತದ ಸಮಸ್ಯೆಗೆ ಕಾರಣವಾಗಿದೆ. ಟಾನ್ಸಿಲ್‌ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಟಾನ್ಸಿಲ್‌ನ ಲಕ್ಷಣಗಳೇನು, ಮುನ್ನೆಚ್ಚರಿಕೆ ಹೇಗೆ ಎಂಬ ವಿವರ ಇಲ್ಲಿದೆ.
ಟಾನ್ಸಿಲ್‌ ಸಮಸ್ಯೆ
ಟಾನ್ಸಿಲ್‌ ಸಮಸ್ಯೆ (PC: Canva)

ರಾಜ್ಯದಲ್ಲಿ ಚಳಿಯ ಪ್ರಭಾವ ಜೋರಿದೆ. ಅತಿಯಾದ ಚಳಿಯು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಬೆಂಗಳೂರು ಸೇರಿದಂತೆ ವಿಜಯಪುರ, ಕಲಬುರಗಿ, ಬೀದರ್‌ನಂತಹ ಕಡೆ ತಾಪಮಾನ ಕುಸಿದಿದ್ದು ಹಲವು ಆರೋಗ್ಯಗಳನ್ನು ತಂದೊಡ್ಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿದ ಚಳಿಯ ಪ್ರಮಾಣದಿಂದ ಟಾನ್ಸಿಲ್‌ ಅಥವಾ ಗಲಗ್ರಂಥಿಯ ಉರಿಯೂತ ಸಮಸ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ದಿನಕ್ಕೆ 4, 5 ಮಂದಿ ಟಾನ್ಸಿಲ್ ಸಮಸ್ಯೆಯ ಕಾರಣದಿಂದ ವೈದ್ಯರ ಬಳಿಗೆ ಬರುತ್ತಿದ್ದಾರೆ.

ಚಳಿಗಾಲದಲ್ಲಿ ಟಾನ್ಸಿಲ್‌ನಂತಹ ಸಮಸ್ಯೆ ಏರಿಕೆಯಾಗಲು ಪ್ರಮುಖ ಕಾರಣ ಕಾಲೋಚಿತ ಬದಲಾವಣೆ ಮತ್ತು ಉಸಿರಾಟದ ಸೋಂಕು. ಸಾಮಾನ್ಯ ಶೀತ ಹಾಗೂ ಇನ್ಫ್ಲುಯೆಂಜಾ ವೈರಸ್‌ಗಳು ತಂಪಾದ ವಾತಾವರಣದಲ್ಲಿ ಹೆಚ್ಚು ಬೆಳೆಯುತ್ತವೆ. ಇದೀಗ ಚಳಿ ಹೆಚ್ಚಿದ್ದು ಗಂಟಲು ನೋವು, ಗಂಟಲು ಊದಿಕೊಳ್ಳುವಂತಹ ಟಾನ್ಸಿಲ್‌ ಸಮಸ್ಯೆಗೆ ಕಾರಣವಾಗುತ್ತಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಚಳಿಗಾಲದಲ್ಲಿ ಟಾನ್ಸಿಲ್‌ ಪ್ರಕರಣಗಳಲ್ಲಿ ಶೇ 15 ರಿಂದ 20 ರಷ್ಟು ಪ್ರಮಾಣ ಏರಿಕೆಯಾಗಿದೆ. ಕಳೆದ ವರ್ಷ ದಿನಕ್ಕೆ ಟಾನ್ಸಿಲ್‌ ಕಾರಣದಿಂದ ಇಬ್ಬರು, ಮೂವರು ಬರುತ್ತಿದ್ದರೆ ಈ ವರ್ಷ ನಾಲ್ಕರಿಂದ 5 ಜನ ಬರುತ್ತಿದ್ದಾರೆ ಎಂದು ಟೈಮ್‌ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ರೋಹಿತ್ ಉದಯ ಪ್ರಸಾದ್‌.

ಟಾನ್ಸಿಲ್ ಹೆಚ್ಚಲು ಕಾರಣ

ಟಾನ್ಸಿಲ್ ಪ್ರಕರಣಗಳಲ್ಲಿ ಏರಿಕೆಯಾಗಲು ಪ್ರಮುಖ ಕಾರಣ ಅತಿಯಾದ ಚಳಿ ಎನ್ನುತ್ತಾರೆ ವೈದ್ಯರು. ಮೊದಲೇ ಹೇಳಿದಂತೆ ಹೆಚ್ಚಿದ ಚಳಿಯ ಪ್ರಮಾಣವು ಉಸಿರಾಟದ ಸೋಂಕುಗಳ ಹೆಚ್ಚಳ, ರೋಗನಿರೋಧಕ ಶಕ್ತಿ ದುರ್ಬಲವಾಗುವುದು, ಶುಷ್ಕ ಗಾಳಿ ಕಾರಣ ಎಂದು ಅವರು ಹೇಳುತ್ತಾರೆ. ಜನಜಂಗುಳಿ ಹೆಚ್ಚಿರುವ ಒಳಾಂಗಣ ಸ್ಥಳಗಳು, ಧೂಳು, ಅಲರ್ಜಿ ಹಾಗೂ ಗಾಳಿಯಲ್ಲಿರುವ ಉದ್ರೇಕಕಾರಿ ಅಂಶಗಳು ಜನರಲ್ಲಿ ಈ ಸಮಸ್ಯೆ ಹೆಚ್ಚಲು ಕಾರಣವಾಗುತ್ತಿದೆ. ಇದರೊಂದಿಗೆ ತಣ್ಣನೆಯ ಆಹಾರ ಸೇವಿಸುವುದು ಟಾನ್ಸಿಲ್ ಸಮಸ್ಯೆಗೆ ಕಾರಣ.

ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆಯ ಇಎನ್‌ಟಿ ಸ್ಪೆಷಲಿಸ್ಟ್‌ ಡಾ. ಶಮಾ ಶೆಟ್ಟಿ ಅವರ ಪ್ರಕಾರ ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 30 ರಷ್ಟು ಟಾನ್ಸಿಲ್‌ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಜನವರಿಯಲ್ಲಿ ಇದರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮಾಲಿನ್ಯ ಹೆಚ್ಚಾಗುತ್ತಿದೆ. ಕಾರ್ಖಾನೆಗಳ ಹೊಗೆ ಹಾಗೂ ವಾಹನಗಳಿಂದ ಹೊರ ಬರುವ ಹೊಗೆಯು ಉಸಿರಾಟದ ಸೋಂಕು ಹೆಚ್ಚು ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಮನೆ ಒಳಗೆ ಬೆಚ್ಚಗಿರುವುದು ಹಾಗೂ ಹೊರಗಡೆ ಶೀತ ವಾತಾವರಣ ಇದು ಕೂಡ ಗಂಟಲು ಕೆರಳಲು ಕಾರಣವಾಗುತ್ತಿದೆ.

ನಿರ್ಲಕ್ಷ್ಯ ಮಾಡದಿರಿ, ತಜ್ಞರನ್ನು ಭೇಟಿ ಮಾಡಿ

ಡಾ. ರೋಹಿತ್ ಅವರ ಪ್ರಕಾರ ಗಂಟಲಿನಲ್ಲಿ ಬಾವು, ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣದಂತಹ ತೊಂದರೆ ಎದುರಾದರೆ ಕೂಡಲೇ ಇಎನ್‌ಟಿ ತಜ್ಞರನ್ನು ಭೇಟಿ ಮಾಡಬೇಕು. ಇದರಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯ ಎನ್ನುತ್ತಾರೆ.

ಮಕ್ಕಳಲ್ಲೂ ಹೆಚ್ಚುತ್ತಿದೆ ಟಾನ್ಸಿಲ್ ಸಮಸ್ಯೆ

ಟಾನ್ಸಿಲ್ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಹೆಚ್ಚುತ್ತಿದೆ. ಮಕ್ಕಳಲ್ಲೂ ದಿನಕ್ಕೆ ಮೂರರಿಂದ ನಾಲ್ಕು ಪ್ರಕರಣಗಳು ಬರುತ್ತಿವೆ. ಶಾಲೆಗಳು ಹಾಗೂ ಡೇಕೇರ್‌ನಂತಹ ಕಿಕ್ಕಿರಿದ ಸ್ಥಳಗಳು ರೋಗಾಣು ಸುಲಭವಾಗಿ ಹರಡಲು ಕಾರಣವಾಗುತ್ತವೆ. ಇದರೊಂದಿಗೆ ಸರಿಯಾದ ಪೋಷಣೆ ಇಲ್ಲದೇ ಇರುವುದು, ನಿದ್ದೆಯ ಕೊರತೆ ರೋಗನಿರೋಧಕ ಶಕ್ತಿ ಕುಂಠಿತವಾಗಲು ಕಾರಣವಾಗುತ್ತಿದೆ.

ಟಾನ್ಸಿಲ್ ಬಾರದಂತೆ ಮುನ್ನೆಚ್ಚರಿಕೆ ಹೇಗೆ?

ಮುಂದಿನ ದಿನಗಳಲ್ಲಿ ಟಾನ್ಸಿಲ್ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ವೈದ್ಯರ ಪ್ರಕಾರ ಪದೇ ಪದೇ ಬದಲಾಗುವ ಹವಾಮಾನವು ಟಾನ್ಸಿಲ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೊರಗಡೆ ಕಾರ್ಯಕ್ರಮಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸಿ. ದೇಹವನ್ನು ಬೆಚ್ಚಗಿರಿಸಿ. ದೇಹ ಬೆಚ್ಚಗಾಗಿಸುವ ಬಟ್ಟೆಗಳನ್ನು ಧರಿಸಿ. ತಂಪಾದ ಹಾಗೂ ಮಸಾಲೆಯುಕ್ತ ಆಹಾರಗಳ ಸೇವನೆಯನ್ನು ತಪ್ಪಿಸಿ. ಸೂಪ್‌ಗಳಂತಹ ಬೆಚ್ಚಗಿನ ದ್ರವಾಹಾರ ಹೆಚ್ಚು ಸೇವಿಸಿ. ಹೊರಗಡೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ. ಇದರೊಂದಿಗೆ ಮನೆ, ಶಾಲೆ ಹಾಗೂ ಕಚೇರಿಯಲ್ಲಿ ಉತ್ತಮ ನೈಮರ್ಲ್ಯ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಕೂಡ ಗಲಗ್ರಂಥಿಯ ಉರಿಯೂತಕ್ಕೆ ಕಾರಣವಾಗಿದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ