ಚಳಿಗಾಲದಲ್ಲಿ ಮೂತ್ರನಾಳದ ಸೋಂಕಿನ ಸಮಸ್ಯೆ ಹೆಚ್ಚಲು ಕಾರಣವೇನು, ನಿವಾರಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆ
ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳಲ್ಲಿ ಮೂತ್ರನಾಳದ ಸೋಂಕು ಕೂಡ ಒಂದು. ಶೀತ ವಾತಾವರಣದಲ್ಲಿ ಮೂತ್ರನಾಳದ ಸೋಂಕು ಹೆಚ್ಚಲು ಕಾರಣವೇನು, ಇದಕ್ಕೆ ಪರಿಹಾರವೇನು, ಮೂತ್ರನಾಳ ಸೋಂಕನ್ನು ತಡೆಯುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಡಾ. ಆನಂದ ಪಾಟೀಲ್ ಅವರು ನೀಡಿದ ಉತ್ತರ ಇಲ್ಲಿದೆ.
ಯುಟಿಐ ಅಥವಾ ಮೂತ್ರನಾಳದ ಸೋಂಕು ಹೆಚ್ಚಾಗಿ ಹೆಣ್ಣುಮಕ್ಕಳನ್ನು ಬಾಧಿಸುವ ಸಮಸ್ಯೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾವು ಮೂತ್ರನಾಳವನ್ನು ಪ್ರವೇಶಿಸಿ ಮೂತ್ರಕೋಶದ ಮೂಲಕ ಹರಡಲು ಪ್ರಾರಂಭಿಸಿದಾಗ ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ. ಈ ಸಮಸ್ಯೆಯು ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಹಾಗಾದರೆ ಚಳಿಗಾಲದಲ್ಲಿ ಮೂತ್ರನಾಳದ ಸೋಂಕಿನ ಸಮಸ್ಯೆ ಹೆಚ್ಚಲು ಕಾರಣವೇನು ಎಂಬ ಪ್ರಶ್ನೆ ನಿಮ್ಮಲ್ಲೂ ಇದ್ದರೆ ಇಲ್ಲಿದೆ ಉತ್ತರ. ಅದಕ್ಕೂ ಮೊದಲು ಯುಟಿಐ ಎಂದರೇನು ನೋಡೋಣ.
ಯುಟಿಐ ಎಂದರೆ...
ಯುಟಿಐ ಎಂದರೆ ಮೂತ್ರನಾಳ, ಮೂತ್ರಪಿಂಡ ಅಥವಾ ಮೂತ್ರಕೋಶದ ಯಾವುದೇ ಭಾಗದಲ್ಲಿ ಅಥವಾ ಕಿಡ್ನಿಗಳಲ್ಲಿ ಆಗುವ ಸೋಂಕಿಗೆ ನಾವು ಯುಟಿಐ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇಕೊಲಾ ಎಂಬ ಬ್ಯಾಕ್ಟೀರಿಯಾದಿಂದ ಯುಟಿಐ ಸಮಸ್ಯೆ ಕಾಣಿಸುತ್ತದೆ.
ಚಳಿಗಾಲದಲ್ಲಿ ಯುಟಿಐ ಹೆಚ್ಚು ಕಾಣಿಸಲು ಕಾರಣ
- ಚಳಿಗಾಲದಲ್ಲಿ ಯುಟಿಐ ಹೆಚ್ಚು ಕಾಣಿಸಲು ಹಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದದ್ದು ಡೀಹೈಡ್ರೇಷನ್ ಅಥವಾ ನಿರ್ಜಲೀಕರಣ. ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ, ನಾವು ನೀರು ಕುಡಿಯುವುದು ಕಡಿಮೆ. ಇದರಿಂದ ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ. ಮೂತ್ರದ ಪ್ರಮಾಣ ಕಡಿಮೆಯಾಗುವುದರಿಂದ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚು.
- ಚಳಿಗಾಲದಲ್ಲಿ ಹೆಚ್ಚಾಗಿ ಬಿಗಿ ಬಟ್ಟೆಗಳನ್ನು ಧರಿಸುತ್ತೇವೆ. ಇದರಿಂದ ತೇವಾಂಶ ಹೆಚ್ಚಬಹುದು, ಮಾತ್ರವಲ್ಲ ಆ ಜಾಗದಲ್ಲಿ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗುವುದರಿಂದ ಸೋಂಕಿನ ಅಪಾಯ ಹೆಚ್ಚು.
- ಮೂತ್ರನಾಳದ ಸೋಂಕಿಗೆ ಇನ್ನೊಂದು ಕಾರಣ ಮೂತ್ರ ಮಾಡುವುದನ್ನು ವಿಳಂಬ ಮಾಡುವುದು.
ಇದನ್ನೂ ಓದಿ: Women Health: ಮಹಿಳೆಯರಲ್ಲಿ ಕಂಡುಬರುವ ಮೂತ್ರನಾಳದ ಸೋಂಕನ್ನು ತಡೆಗಟ್ಟಲು ಇಲ್ಲಿವೆ ಒಂದಿಷ್ಟು ಉಪಯುಕ್ತ ಸಲಹೆಗಳು
ಮೂತ್ರನಾಳದ ಸೋಂಕಿನ ಲಕ್ಷಣಗಳು
ಮೂತ್ರನಾಳದ ಸೋಂಕಿನ ಲಕ್ಷಣಗಳಲ್ಲಿ ಪ್ರಮುಖವಾದದ್ದು ಉರಿಮೂತ್ರ. ಮೂತ್ರ ಮಾಡುವಾಗ ಉರಿ ಕಾಣಿಸುವುದು. ಮೂತ್ರ ಮಾಡುವ ಜಾಗದಲ್ಲಿ ನೋವು ಉಂಟಾಗುವುದು. ಪದೇ ಪದೇ ಮೂತ್ರ ಮಾಡಬೇಕು ಅನ್ನಿಸುವುದು. ಮೂತ್ರನಾಳದ ಸೋಂಕು ಅತಿಯಾದರೆ ಜ್ವರ ಬರುವುದು, ಬೆನ್ನುನೋವು, ಮೂತ್ರದಲ್ಲಿ ದುರ್ವಾಸನೆ ಬರುವುದು ಇಂತಹ ಸಮಸ್ಯೆಗಳು ಕೂಡ ಕಾಣಿಸಬಹುದು. ಈ ರೀತಿಯ ಲಕ್ಷಣಗಳ ಕಾಣಿಸಿದರೆ ನೀವು ವೈದ್ಯರನ್ನು ಸಂಪರ್ಕಿಸಬೇಕು. ಮೂತ್ರನಾಳದ ಸೋಂಕು ಹಾಗೆ ಬಿಡುವುದು ಅಪಾಯಕಾರಿ.
ಚಳಿಗಾಲದಲ್ಲಿ ಯುಟಿಐ ತಡೆಗಟ್ಟುವುದು ಹೇಗೆ?
- ಹೆಚ್ಚು ಹೆಚ್ಚು ನೀರು ಕುಡಿಯುವ ಮೂಲಕ ದೇಹದಲ್ಲಿ ತೇವಾಂಶ ಹೆಚ್ಚಿಸಿಕೊಳ್ಳುವುದರ ಮೂಲಕ ಯುಟಿಐ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಿದೆ. ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ತಪ್ಪದೇ ಕುಡಿಯಬೇಕು.
- ಚಳಿಗಾಲ ಎಂಬ ಕಾರಣಕ್ಕೆ ಅತಿ ಬಿಗಿಯಾದ ಬಟ್ಟೆ ಧರಿಸದಿರಿ. ಸಡಿಲವಾದ ಕಾಟನ್ ಬಟ್ಟೆ ಧರಿಸುವುದು ಯುಟಿಐ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವ ಮಾರ್ಗವಾಗಿದೆ.
- ಸ್ವಚ್ಛತೆ ಕಾಪಾಡಿಕೊಳ್ಳುವುದು ಕೂಡ ಮೂತ್ರನಾಳದ ಸೋಂಕು ತಡೆಯುವ ವಿಧಾನವಾಗಿದೆ. ಅದರಲ್ಲೂ ಮಹಿಳೆಯರು ಮೂತ್ರ ಮಾಡಿದ ಯೋನಿ ಭಾಗವನ್ನು ಚೆನ್ನಾಗಿ ಸ್ವಚ್ಛ ಮಾಡಬೇಕು ಹಾಗೂ ಒಣಗಿದಂತೆ ಇಡಬೇಕು.
ಇದನ್ನೂ ಓದಿ: ಮೂತ್ರನಾಳದ ಸೋಂಕು ತಡೆಯಲು ಟಿಪ್ಸ್
ವಯಸ್ಸಾದವರಲ್ಲಿ ಯುಟಿಐಗೆ ಕಾರಣ
ವಯಸ್ಸಾದವರಲ್ಲಿ ಯುಟಿಐ ಸಮಸ್ಯೆಗೆ ಪ್ರಮುಖ ಕಾರಣ ಮಲ ಗಟ್ಟಿಯಾಗುವುದು. ಆ ಕಾರಣಕ್ಕೆ ಮಲ ಗಟ್ಟಿಯಾಗದೇ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನೀವು ಸೊಪ್ಪು, ತರಕಾರಿ ಸೇರಿದಂತೆ ನಾರಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.
ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಚಳಿಗಾಲದಲ್ಲಿ ಎದುರಾಗುವ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರೊಂದಿಗೆ ಹೆಚ್ಚು ನೀರು ಕುಡಿಯುವುದು ಮೂತ್ರನಾಳದ ಸೋಂಕಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉತ್ತಮ ವಿಧಾನವಾಗಿದೆ.