ಕಟ್ಟಿಕೊಂಡ ಗಂಡನನ್ನೇ ವಿಲನ್ ಆಗಿಸಿ, ಸಿಂಪಥಿ ಗಿಟ್ಟಿಸಿಕೊಳುವ ಹೆಣ್ಣುಮಕ್ಕಳ ವಿಚಿತ್ರ ಮನೋಭಾವದ ಬಗ್ಗೆ ನಿಮಗೂ ತಿಳಿದಿರಲಿ – ಕಾಳಜಿ ಅಂಕಣ
ನಮ್ಮ ಸಮಾಜ ಎಂದಿಗೂ ಹೆಣ್ಣಿನ ಪರ, ಹೆಣ್ಣಿನ ಕಣ್ಣೀರಿಗೆ ಕರಗದವರಿಲ್ಲ. ಹಾಗಂತ ಎಲ್ಲಾ ಹೆಣ್ಣುಮಕ್ಕಳ ಕಣ್ಣೀರಿನ ಹಿಂದೆ ನೋವಿನ ಕಥೆ ಇರುವುದಿಲ್ಲ. ಕಟ್ಟಿಕೊಂಡ ಗಂಡನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ತನ್ನ ಬಗ್ಗೆ ಸಿಂಪಥಿ ಗಿಟ್ಟಿಸಿಕೊಳ್ಳಲು ಯತ್ನಿಸುವ ಮನೋಭಾವದವರೂ ಇಲ್ಲಿದ್ದಾರೆ. ಇಂತಹವರನ್ನು ಸ್ತ್ರೀ ನಾರ್ಸಿಸಿಸ್ಟ್‌ಗಳು ಎನ್ನುತ್ತಾರೆ.
ಪ್ರಶ್ನೆ: ಸಮಾಜದಲ್ಲಿರುವ ಎಲ್ಲಾ ಹೆಣ್ಣುಮಕ್ಕಳ ಕಣ್ಣೀರಿನ ಹಿಂದೆ ನಿಜಕ್ಕೂ ನೋವಿರುತ್ತಾ, ಕಟ್ಟಿಕೊಂಡ ಗಂಡನ ಮೋಸ ಇರುತ್ತಾ, ಕೆಲವು ಹೆಣ್ಣುಮಕ್ಕಳು ತಮ್ಮದೇ ತಪ್ಪಿದ್ದರೂ ಗಂಡನನ್ನು ವಿಲನ್ ಆಗಿಸುವ ಪ್ರಯತ್ನ ಮಾಡುವುದೇಕೆ, ಇದರಿಂದ ಸಿಂಪಥಿ ಗಿಟ್ಟಿಸಿಕೊಳ್ಳುವ ಅವರ ವರ್ತನೆಗೆ ಹೆಸರೇನು, ಈ ಮನೋಭಾವದಿಂದ ಅವರನ್ನ ಹೊರ ತರುವುದು ಹೇಗೆ?
ಊರು, ಹೆಸರು ಬೇಡ
ಉತ್ತರ: ನಮ್ಮ ಸಮಾಜದಲ್ಲಿ, ಮಹಿಳೆಯ ಕಣ್ಣೀರಿನ ಕಥೆಯನ್ನು ನಂಬುವುದು ಬಹಳ ಸುಲಭ. ನಾವು ಮಹಿಳೆಯರನ್ನು ಯಾವುದೇ ಕೌಟುಂಬಿಕ ವ್ಯವಸ್ಥೆಯಲ್ಲಿ ಬಲಿಪಶುಗಳಾಗಿದ್ದಾರೆ ಎಂದರೆ ಅದನ್ನು ನಂಬಿ ಬಿಡಲು ಅಂತರ್ಗತವಾಗಿ ಸಿದ್ದವಾಗಿರುತ್ತೇವೆ. ಹೆಂಗಸರು ಈ ನಂಬಿಕೆಯನ್ನು ದುರುಪಯೋಗ ಮಾಡುವ ಸಾಧ್ಯತೆಯ ಬಗ್ಗೆ ಯೋಚಿಸಲೂ ಬಿಡುವುದಿಲ್ಲ ಈ ಅಂತರ್ಗತ ನಂಬಿಕೆ.
ದಾಂಪತ್ಯ ಸಮಾಲೋಚನೆಗಾಗಿ ಒಬ್ಬರು ಆನ್‌ಲೈನ್ ಮೂಲಕ ಕಾಂಟ್ಯಾಕ್ಟ ಮಾಡಿದ್ದರು. ಆಕೆ ಉತ್ತರ ಭಾರತ ಮೂಲದವರು. ಆಕೆ ತನ್ನ ಮನೆಯಲ್ಲಿ ಆಗುತ್ತಿರುವ ಕೌಟುಂಬಿಕ ಹಿಂಸೆಯ ಬಗ್ಗೆ ವಿವರಿಸಿದಳು. ತನಗೆ ಮನೆಯಲ್ಲಿ ಯಾವುದೇ ಸ್ವಾತಂತ್ರ್ಯವಿಲ್ಲ, ನನ್ನ ಗಂಡ ಫೋನ್ ಸಹ ಚೆಕ್ ಮಾಡುತ್ತಾನೆ, ನನ್ನ ಮಾತನ್ನು ಕೇಳಲು ಯಾರೂ ಇಲ್ಲ, ಹೇಳುತ್ತಾ ಹೇಳುತ್ತಾ ಕೊನೆಯಿಲ್ಲದ ಕಣ್ಣೀರು. ಮನೆಯಲ್ಲಿ ಸದಾ ಗಲಾಟೆ, ಜಗಳ ಇತ್ಯಾದಿ. ಅವಳು ತನ್ನ ಕಥೆಗಳನ್ನು ವಿವರಿಸುವಾಗ, ಏನೋ ಸರಿಯಾಗಿಲ್ಲ ಎಂದೆನಿಸುತ್ತಿತ್ತು. ತನ್ನ ಗಂಡನ ಮೇಲೆ ಒಂದೊಂದಾಗಿ ಆಪಾದನೆ ಈ ಮಾಡುವಾಗ ರೆಡ್ ಫ್ಲಾಗ್ ಅನ್ನುತ್ತಾರಲ್ಲ ಆ ರೀತಿ ಮಾತಾಡುತ್ತಿದ್ದಳು.
ಒಂದಿಷ್ಟು ರೆಡ್ ಫ್ಲಾಗ್ ಮಾತುಗಳು
* ನಾನು ಏನೇ ಮಾಡಿದರೂ ಅವನು ಎಂದಿಗೂ ನನ್ನನ್ನು ಸಪೋರ್ಟ್ ಮಾಡಲ್ಲ, ನಾನು ಅವನ ಮಟ್ಟಿಗೆ ಅಸ್ತಿತ್ವದಲ್ಲೇ ಇಲ್ಲ ಅನ್ನೋ ಹಾಗಿದೆ.
* ನಾನು ಅವನ ಸುತ್ತಲೂ ಮೊಟ್ಟೆಯ ಚಿಪ್ಪಿನ ಮೇಲೆ ನಡೆಯೋ ಹಾಗಿರುತ್ತದೆ. ಪ್ರತಿಯೊಂದನ್ನೂ ಗಮನಿಸಿಸುತ್ತಿರುವ ಹಾಗೆ. ಅವನಿಗೆ ಗೊತ್ತಾಗದೇ ನಾನು ಏನನ್ನೂ ಹೇಳಲು ಅಥವಾ ಮಾಡಲು ಸಾಧ್ಯ ಆಗುತ್ತಿಲ್ಲ.
* ನನ್ನನ್ನು ಅವರು ತುಂಬಾ ನಿಯಂತ್ರಿಸುತ್ತಿದ್ದಾರೆ, ನಾನು ಸಣ್ಣ ನಿರ್ಧಾರಗಳನ್ನು ಸಹ ಮಾಡಲು ಸಾಧ್ಯವಿಲ್ಲ.
* ನಾನು ಏನೇ ಮಾಡಿದ್ರೂ ಅದು ಅವನಿಗೆ ಸಾಲಲ್ಲ. ಏನಾದರೂ ಸಾಧಿಸಲು ಗೋಳು ಹಾಕಿಕೊಳ್ಳುತ್ತಾನೆ.
* ಅವನು ಯಾವಾಗಲೂ ತನ್ನ ಸ್ವಂತ ಕೆಲಸದಲ್ಲಿ ತುಂಬಾ ನಿರತನಾಗಿರುತ್ತಾನೆ, ಈ ಸಂಬಂಧದಲ್ಲಿ ನಾನು ತುಂಬಾ ಒಂಟಿಯಾಗಿದ್ದೇನೆ.
* ಆತ ತುಂಬಾ ಪೊಸೆಸ್ಸಿವ್. ನನ್ನನ್ನು ತುಂಬಾ ಪ್ರೀತಿಸುತ್ತೇನೆ, ಆದರೆ ನನಗೆ ಸ್ವಾತಂತ್ರ್ಯವೇ ಕೊಡುತ್ತಿಲ್ಲ.
ಮೇಲಿನ ಎಲ್ಲಾ ವಾಕ್ಯಗಳು ದ್ವಂದ್ವ ಭಾವದ್ದಾಗಿತ್ತು.
ಸ್ತ್ರೀ ನಾರ್ಸಿಸಿಸ್ಟ್‌ಗಳು ಎಂದರೆ ಯಾರು?
ನಾನು ಕೊನೆಗೆ ಅವಳ ಗಂಡನ ಜೊತೆ, ಅವನ ಅಮ್ಮ, ನಂತರ ಅವಳ ತಂದೆ ಹಾಗೂ ಅಕ್ಕ ಇವರೆಲ್ಲರ ಜೊತೆ ಮಾತಾಡಿದಾಗ ನನ್ನ ಇನ್ಸ್ಟಿಂಕ್ಟ್ ದೃಢವಾಯಿತು. ಅವಳು ತನ್ನ ಕಥೆಯಿಂದ ನನ್ನನ್ನು ಮ್ಯಾನಿಪ್ಯುಲೇಟ್ ಮಾಡಿ ಸಿಂಪತಿ ಗಿಟ್ಟಿಸಿಕೊಂಡು ಗಂಡನನ್ನು ತನಗೆ ತಕ್ಕಂತೆ ಬದಲಾಯಿಸಿಕೊಳ್ಳುವ ಆಲೋಚನೆಯಲ್ಲಿ ನನ್ನನ್ನು ಭೇಟಿ ಆಗಿದ್ದು. ಇದು ಹೆಣ್ಣಿನಲ್ಲಿ ಕಂಡು ಬರುವ ಸಂಪೂರ್ಣ ನಾರ್ಸಿಸಿಸ್ಟಿಕ್ ವ್ಯಕ್ತಿತ್ವ. ಇವರನ್ನು ಸ್ತ್ರೀ ನಾರ್ಸಸಿಸ್ಟ್ಗಳು ಎಂದೇ ಕರೆಯೋಣ. ಇವರು ಸ್ತ್ರೀ ನಾರ್ಸಿಸಿಸ್ಟ್‌ಗಳು. ನಾನು ಮೇಲೆ ಹೇಳಿದ ಸಮಾಜದ ಹೆಣ್ಣು ಪರ ಸಹಾನುಭೂತಿಯನ್ನು ದುರುಪಯೋಗ ಮಾಡಿಕೊಳ್ಳುವುದು ಹೀಗೆ.
ಮುಚ್ಚಿದ ಬಾಗಿಲಿನ ಹಿಂದೆ ನಾಕು ಗೋಡೆಯ ಒಳಗೆ ತಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿಯೋ ಇಲ್ಲ ದೈಹಿಕವಾಗಿಯೋ ಹಿಂಸಿಸುತ್ತಿರುತ್ತಾರೆ. ಆದರೆ ಹೊರಗೆ ವಿಕ್ಟಿಮ್ ಆಗಿ ನಟಿಸುತ್ತಾರೆ. ಮೇಲೆ ಹೇಳಿದ ಘಟನೆಯಲ್ಲಿ ಗಂಡನ ಇಡಿ ಕುಟುಂಬವನ್ನು ಆಕೆ ಪೊಲೀಸ್ ಸ್ಟೇಷನ್‌ಗೆ ಎಳೆದಿದ್ದುದಷ್ಟೇ ಅಲ್ಲ, ಗಂಡನ ಇಡಿ ಸಂಪಾದನೆ ಅವಳ ಕೈಗೆ ಬರುವುದಾದರೆ ಮಾತ್ರ ಕೇಸ್ ಹಿಂತೆಗೆದುಕೊಳ್ಳುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಳು.
ಸಂಗಾತಿಯ ಒಳ್ಳೆಯತನದ ದುರುಪಯೋಗ ಎರಡೂ ಕಡೆಯಿಂದ ಆಗಬಹುದು ಎಂಬುದನ್ನು ನಾವು ಮರೆತುಬಿಡುತ್ತೇವೆ . ಮೇಲೆ ಹೇಳಿದ ಮನೆಯವರು ಬಹಳ ಹೆದರಿಕೆ ಉಳ್ಳವರು. ಈತ ಪಾಪ ಪುಣ್ಯ, ಹೆಣ್ಣು ಕಣ್ಣೀರು ಹಾಕಿದರೆ ಶಾಪ ಕೊಟ್ಟರೆ ಎಂಬ ರೀತಿ ಭಯ ಉಳ್ಳವನು. ಕಂಪನಿಯಲ್ಲಿ ಅತ್ಯಂತ ಉನ್ನತ ಪೋಸ್ಟ್ ಅತ್ಯುತ್ತುಮ ಸಂಬಳ ಎಲ್ಲಾ ಇದ್ದೂ ಆತ ಅಮ್ಮಾವ್ರ ಗಂಡನಲ್ಲ ಗುಲಾಮನಾಗಲೂ ತಯಾರಿದ್ದ . ಅಷ್ಟೊಂದು ಪ್ರೀತಿಸುತ್ತಿದ್ದ ಅವನನ್ನು ಬಗೆಬಗೆಯಾಗಿ ಗೋಳು ಹಾಕಿಕೊಳ್ಳುತ್ತಿದ್ಧಳು ಅವಳು. ಕಾರಣ ಆಕೆ ನಾರ್ಸಿಸಿಸ್ಟ್.
ಸ್ತ್ರೀ ನಾರ್ಸಿಸಿಸ್ಟ್‌ಗಳು ಸಂಗಾತಿಯನ್ನು ಶೋಷಿಸುವ 5 ಬಗೆ
ಸ್ತ್ರೀ ನಾರ್ಸಿಸಿಸ್ಟ್‌ಗಳು ತಮ್ಮ ಸಂಗಾತಿಯನ್ನ ಶೋಷಿಸುವ ಐದು ಬಗೆಗಳನ್ನು ನಾನು ಬರೆಯುವೆ.
ನನಗೆ ಗೊತ್ತು ಕೆಲವು ಸ್ತ್ರೀಪರ ಜನರು ನನ್ನನ್ನು ಬಯಾಸ್ಢ್ ಅನ್ನಬಹುದು. ಏಕೆಂದರೆ ನಾ ಹೇಳುವ ಈ ಕೆಳಗಿನ ವಿಷಯಗಳು ಸಾಮಾನ್ಯವಾಗಿ ತಪ್ಪಾಗಿಯೇ ಕಾಣಿಸುವುದಿಲ್ಲ ಆದರೆ ಆಳವಾಗಿ ನೋಡಿದಾಗ ಮಾತ್ರ ಗೊತ್ತಾಗುವ ಸಂಗತಿ ಇದು.
ಇಂತಹ ಸಂಬಂಧದೊಳಗೆ ಗಂಡ ಸತತವಾಗಿ ಹಾನಿಗೊಳಗಾಗುತ್ತಿರುತ್ತಾನೆ.
1. ಬೌಂಡರಿಗಳನ್ನು ತನ್ನ ಸುತ್ತಲೂ ಎಳೆಯುವುದು: ಸ್ತ್ರೀ ನಾರ್ಸಿಸಿಸ್ಟ್‌ಗಳು, ಎರಡು ಅಲಗಿನ ಕತ್ತಿಯಂತೆ ಯಾವ ಕಡೆ ಬಂದರೂ ಯುದ್ದಕ್ಕೆ ತಯಾರಾಗಿರುತ್ತಾರೆ, ಗಂಡನಿಗೆ ಪ್ರವೇಶವಿಲ್ಲದ ಗೋಡೆಗಳನ್ನು ತಮ್ಮ ಸುತ್ತ ಕೋಟೆಯಂತೆ ಕಟ್ಟಿಕೊಂಡಿರುತ್ತಾರೆ. ಆದರೆ ತಮ್ಮ ಸಂಗಾತಿಯ ಬೌಂಡರಿಯೊಳಗೆ ಮಾತ್ರ ನೇರ ತಡೆ ಇಲ್ಲದ ಪ್ರವೇಶ ಬಯಸುತ್ತಾರೆ.
‘ತನ್ನ ಗಂಡನ ಎಲ್ಲಾ ಟೆಕ್ಸ್ಟ್ ಮತ್ತು ಇಮೇಲ್‌ಗಳನ್ನೂ ನಾನು ನೋಡಬೇಕು, ಆದರೆ ಅವನು ಅದೇ ಪಾರದರ್ಶಕತೆಯನ್ನು ಬಯಸಿದರೆ ಫೋನ್ ಲಾಕ್ ಮಾಡಿ ಇಡುವಂತಹದ್ದು, ಅವು ಯಾಕೆ ಎಂದು ಕೇಳಿದರೆ ಪ್ರೈವೆಸಿ ಇಲ್ಲ, ನನ್ನ ಮೇಲೆ ಅನುಮಾನ‘ ಎಂದೆಲ್ಲಾ ಶುರು ಮಾಡುತ್ತಾಳೆ.
2. ಗ್ಯಾಸ್‌ಲೈಟಿಂಗ್: ಸ್ತ್ರೀ ನಾರ್ಸಿಸಿಸ್ಟ್ ತನ್ನ ಗಂಡನನ್ನು ಸದಾ ತನ್ನ ಮೇಲೆಯೇ ಅನುಮಾನ ಬರುವ ಹಾಗೆ ಅಥವಾ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳದ ಹಾಗೆ ವಾಸ್ತವವನ್ನು ಮ್ಯಾನಿಪ್ಯುಲೇಟ್ ಮಾಡುತ್ತಿರುತ್ತಾಳೆ.
ಉದಾಹರಣೆಗೆ, ಅವಳು ಆಗಾಗ ಕಮಿಟ್‌ಮೆಂಟ್ ಅನ್ನು ಮುರಿಯುವ ಬಗ್ಗೆ ಮಾತಾಡಿದಾಗ, ಅವಳು ಹೀಗೆ ಹೇಳಬಹುದು: ‘ನೀವು ಸುಮ್ಮನೆ ಕಲ್ಪಿಸಿಕೊಳ್ಳುತ್ತಿರಬೇಕು; ನಾನು ಅದನ್ನು ಯಾವತ್ತಿಗೂ ಕಮಿಟ್ ಮಾಡಲಿಲ್ಲ‘ ಅವರ ಮಾತುಗಳು ಹೇಗಿರುತ್ತೆ ಅಂದರೆ ಗಂಡ ತನ್ನ ನೆನಪನ್ನು ತಾನೇ ಅನುಮಾನಿಸಿಕೊಳ್ಳಬೇಕು ಹಾಗೆ.
3. ಓಪನ್‌ನೆಸ್ ಎಂಬ ನಟನೆ: ಆರಂಭದಲ್ಲಿ, ಅವಳು ತನ್ನ ಸಂಗಾತಿಯೊಂದಿಗೆ ತನ್ನೆಲ್ಲಾ ವಿಷಯ ಹಾಗೂ ಸಂಗತಿಗಳನ್ನು ತೆರೆದುಕೊಳ್ಳುವಂತೆ ನಟಿಸುತ್ತಾಳೆ. ತನ್ನ ಭಯ, ಅಭದ್ರತೆ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ. ಆದರೆ ಸಂಗಾತಿಯೂ ಅವಳಂತೆ ಎಲ್ಲವನ್ನೂ ಹೇಳಿಕೊಂಡ ನಂತರ ಅವಳತ್ತ ದೌರ್ಬಲ್ಯವನ್ನು ಬಾಣವಾಗಿ ತಿರುಗಿಸುತ್ತಾಳೆ. ಉದಾಹರಣೆಗೆ, ತನ್ನ ಸಂಗಾತಿಗೆ ತಿರಸ್ಕಾರದ ಭಯ ಅಥವಾ ಬಿಟ್ಟು ಹೋಗುವ ಭಯ ಇದೆ ಎಂದು ತಿಳಿದ ನಂತರ, ಅವಳು ಪ್ರತಿ ವಾದದ ಸಮಯದಲ್ಲಿ ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಬೆದರಿಕೆ ಹಾಕಬಹುದು, ಅವಳು ಗಂಡನನ್ನು ಕಂಟ್ರೋಲ್ ಮಾಡಬೇಕೆಂದಾಗೆಲ್ಲಾ ಅವನ ಈ ಭಯವನ್ನು ಕವಚದಂತೆ ಉಪಯೋಗಿಸಬಹುದು.
4. ಗಂಡನ ಯಶಸ್ಸನ್ನು ಕೀಳಾಗಿ ಕಾಣುವುದು: ಸಂಗಾತಿಯ ಸ್ವಾಭಿಮಾನವನ್ನು ಅಥವಾ ವರ್ಷಗಳ ಕಠಿಣ ಪರಿಶ್ರಮ ಮತ್ತು ಸಾಧನೆಯನ್ನೂ. ಸಾರ್ವಜನಿಕವಾಗಿ, ಒಬ್ಬ ಸ್ತ್ರೀ ನಾರ್ಸಿಸಿಸ್ಟ್ ಅದಕ್ಕೆ ಉಳಿ ಮತ್ತು ಸುತ್ತಿಗೆಯನ್ನು ತೆಗೆದುಕೊಂಡು ಒಂದೇ ಮಾತಿನಲ್ಲಿ ಉರುಳಿಸಿಬಿಡುತ್ತಾಳೆ. ಅವನು ತನ್ನ ಕೆಲಸವನ್ನೋ , ಬರಹವನ್ನೋ ಹಂಚಿಕೊಂಡಾಗ, ಅವಳು ಹೇಳುವುದು, ‘ಅದೇನು ಮಹಾ ದೊಡ್ಡ ವಿಷಯವಲ್ಲ. ಇದಕ್ಕಿಂತ ಚೆನ್ನಾಗಿ ಕೆಲಸ ಮಾಡುವವರನ್ನು ನಾನು ನೋಡಿದ್ದೇನೆ,ಹೂ‘ ಅಥವಾ ‘ಇದಕ್ಕಿಂತ ಒಳ್ಳೆ ಕೆಲಸ ಮಾಡಿದ್ದಾರೆ ಅವರನ್ನು ಗುರುತಿಸಿ ಅವಕಾಶ ಕೊಡುವವರಿಲ್ಲ‘ ಅಥವಾ ‘ನಾನು ಎಷ್ಟೇ ಕಷ್ಟ ಪಟ್ಟರೂ ನನ್ನನು ಗುರುತಿಸುವವರೇ ಇಲ್ಲ‘ ‘ಮನೆಮಕ್ಕಳು ನೋಡದೇ ಕೆಲಸ ಮಾಡಿದರೆ ಅಲ್ಲಿ ಮನ್ನಣೆ ಸಿಗುತ್ತದೆ, ಇಲ್ಲಿ ಎಲ್ಲರನ್ನೂ ಕಳೆದುಕೊಳ್ಳೋ ಸಾಧನೆ ಏನು ಮಹಾ‘ ಹೀಗಂದು ಅವನ ಇಡೀ ಸಾಧನೆಯನ್ನೇ ಮಸುಕಾಗಿಸಿಬಿಡುತ್ತಾಳೆ.
5. ವಿಕ್ಟಿಮ್ ಆಗಿ ನಟಿಸುವುದು: ಸ್ತ್ರೀ ನಾರ್ಸಿಸಿಸ್ಟ್ ಒಬ್ಬ ನುರಿತ ಅಭಿನೇತ್ರಿ , ಕಥೆಗಾರ್ತಿ, ಒಂದು ಕಥೆಯನ್ನೇ ಬರೆದು ಗಂಡನನ್ನು ವಿಲನ್ ಆಗಿಯೂ ತನ್ನನ್ನು ಬಲಿಪಶುವಾಗಿ ಚಿತ್ರಿಸಿ ಬಿಡುತ್ತಾಳೆ. ‘ನೀವು ಯಾವಾಗಲೂ ನನ್ನ ಮೇಲೆ ಆಕ್ರಮಣ ಮಾಡುತ್ತಿದ್ದೀರಿ, ನನಗೆ ಮಾತಾಡಲು ಅವಕಾಶವನ್ನೇ ಕೊಡುವುದಿಲ್ಲ‘ ಹೀಗಂದು ಅವನಿಗೆ ಗಿಲ್ಟ್ ಫೀಲ್ ಕೊಟ್ಟರೆ, ‘ನನಗೆ ಬದುಕಲ್ಲಿ ಯಾವತ್ತೂ ಏನೂ ಒಳ್ಳೆಯದಾಗಿಲ್ಲ. ಸರಿಯಾಗಿ ಏನನ್ನೂ ಮಾಡಲಾರೆ‘ ಎಂದು ಅತ್ತು ಅವನಿಗೆ ಅವಳ ಮೇಲೆ ಸಹಾನುಭೂತಿ ಬರಬೇಕು ಹಾಗೇ ಮಾತಾಡುತ್ತಾಳೆ.
ನಾನೋ ನನ್ನಂತಹ ಒಬ್ಬ ಕೌನ್ಸೆಲರ್‌ಗಳೋ ಒಂದು ಸಮಸ್ಯೆಯ ಎಲ್ಲಾ ಬದಿಗಳನ್ನು ನೋಡುವ ದೃಷ್ಟಿ ಹೊಂದಿಕೊಂಡಿರುತ್ತೇವೆ. ಒಬ್ಬರ ಮಾತನ್ನು ಎಚ್ಚರಿಕೆಯಿಂದ ಕೇಳಿಸಿಕೊಳ್ಳಲು, ವಸ್ತುನಿಷ್ಠವಾಗಿ ನಿರ್ಣಯಿಸಲು ಮತ್ತು ಯಾರಿಗೆ ಚಿಕಿತ್ಸೆಯ ನಿಜವಾಗಿಯೂ ಇದೆ ಎಂದು ಗುರುತಿಸಲು ತರಬೇತಿ ಪಡೆದಿದ್ದೇವೆ. ಆದರೆ ಕಾನೂನು ವ್ಯವಸ್ಥೆ ಮತ್ತು ಸಮಾಜ? ಅವರು ನಿಜವಾಗಿಯೂ ಪ್ರತಿ ಕೋನವನ್ನು ಪರ ವಹಿಸದೆ ನೋಡಲಾಗುತ್ತದೆಯಾ?
ಸಾಮಾನ್ಯವಾಗಿ, ಜನರು ಮತ್ತು ಕಾನೂನು ವ್ಯವಸ್ಥೆಯೂ ಸಹ ಹೆಣ್ಣು ಅಬಲೆ ಆಕೆ ಯಾವಾಗಲೂ ದೌರ್ಜನ್ಯಕ್ಕೆ ತುತ್ತಾಗುವವಳು ಎಂಬ ಬಯಾಸ್ ಅನ್ನು ಹೊಂದಿರುತ್ತಾರೆ. ಅದೂ ವಿಶೇಷವಾಗಿ ಮಹಿಳೆ ತನ್ನ ನೋವಿನ ಕಥೆಯನ್ನು ಹಂಚಿಕೊಂಡಾಗಂತೂ ಗಂಡೇ ಅಪರಾಧಿ ಎಂದು ತೀರ್ಮಾನಿಸಿಬಿಡುತ್ತಾರೆ. ಆದರೆ ನಿಜವೆಂದರೆ, ಶೋಷಣೆಗೆ ಯಾವುದೇ ಲಿಂಗಬೇಧವಿಲ್ಲ, ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ದೃಷ್ಟಿಕೋನಗಳನ್ನು ಪರಿಗಣಿಸುವುದು ಬಹಳ ಮುಖ್ಯ.
ಹೀಗೆ ಹಲವಾರು ವಿಚಾರಗಳು ನನ್ನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿದ್ದಂತೆ, ಈ ದಂಪತಿಗಳಿಗೆ ಎರಡೂ ಬದಿಗಳನ್ನು ವಿವರಿಸಲು ನನಗೆ ಅವಕಾಶ ಸಿಕ್ಕಿತು. ಅವರಿಬ್ಬರಲ್ಲಿಯೂ ಪರಸ್ಪರ ಸಮಸ್ಯೆಗಳು, ಎಚ್ಚರಿಕೆ ಅಥವಾ ಅಪಾಯದ ಸಿಗ್ನಲ್‌ಗಳು ಮತ್ತು ತೊಂದರೆಗಳ ಬಗ್ಗೆ ಅವರೊಡನೆ ಚರ್ಚಿಸಿದೆ. ಅವರು ತಮ್ಮಿಬ್ಬರ ನಡುವೆ ಇರುವ ತೊಂದರೆಗಳನ್ನು ಬಗೆಹರಿಸಲು ಮನಸು ಮಾಡಿದರೆ ಹೆಂಡತಿ ತನ್ನಲ್ಲಿರುವ ಗುಣದ ಅರಿವು ಮೂಡಿಸಿಕೊಂಡು ಬದಲಾವಣೆಗೆ ಸಿದ್ದಳೇ ಎಂದು ಕೇಳಿದೆ. ಗಂಡ ಒಪ್ಪಿದನಾದರೂ ಈಕೆ ಊಹೂಂ, ಈಕೆ ಒಪ್ಪಲಿಲ್ಲ. ನಾರ್ಸಿಸಿಸ್ಟ್‌ಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಬಹಳ ವಿರಳ ಈಕೆಯೂ ಹಾಗೆಯೇ, ಒಪ್ಪಲಿಲ್ಲ. ಯಾವ ಬದಲಾವಣೆಗೂ ಸಿದ್ದಳಿರಲಿಲ್ಲ.
ಕೆಲವು ಸಂದರ್ಭಗಳಲ್ಲಿ, ಸಮಾಲೋಚನೆಯು ಚಿಕಿತ್ಸೆ ಮತ್ತು ಸುಧಾರಣೆಗೆ ಹೊಸ ಬಾಗಿಲು ತೆರೆಯುತ್ತದೆ. ಆದರೆ ಅದು ಸಾಧ್ಯವಾಗದಿದ್ದಾಗ, ಕಡಿಮೆ ನಷ್ಟದೊಂದಿಗೆ ಸಂಬಂಧವನ್ನು ತೊರೆಯುವ ಕಡೆಗೆ ಅವರು ಪೂರ್ಣ ನಿರ್ಧಾರ ತೆಗೆದುಕೊಳ್ಳಬಹುದು. ಹಾಗಾಗಿ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಹೇಳಿ ಕಳಿಸಿದೆ. ಆದರೂ ನೆಮ್ಮದಿಯಾಗಿ ಸಾಗಬೇಕಿದ್ದ ಆ ವ್ಯಕ್ತಿಯ ಬದುಕು ಹೀಗೆ ಮುರಿದುಬಿದ್ದದ್ದು ಮಾತ್ರ ಮನಸು ಒಪ್ಪಲೇ ಆಗಲಿಲ್ಲ. ಮೇಲೆ ಹೇಳಲಾದ ಯಾವುದೇ ರೆಡ್ ಫ್ಲಾಗ್ ನಿಮ್ಮ ಸಂಬಂಧದಲ್ಲಿ ಕಾಣಿಸಿಕೊಂಡರೆ ಕೂಡಲೇ ರಿಲೇಶನ್‌ಶಿಪ್ ಕೌನ್ಸೆಲರ್ ಅನ್ನು ಸಂಪರ್ಕಿಸುವುದು ಎಲ್ಲರಿಗೂ ಒಳ್ಳೆಯದು.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990
ವಿಭಾಗ