ಭಾರತೀಯರು ವಿಚಿತ್ರ ಅಲ್ವಾ? ಲಿವಿಂಗ್ ಟುಗೆದರ್ ಒಪ್ಪಲ್ಲ, ಮಕ್ಕಳಿಗೆ ಸ್ವಾತಂತ್ರ್ಯ ಕೊಡಲ್ಲ, ಸೈಕಾಲಜಿಯ ರೂಲ್ ಇಲ್ಲಿಗೇಕೆ ಅಪ್ಲೈ ಆಗಲ್ಲ– ಕಾಳಜಿ-column kalaji why indians wont be able to follow rule of psychology complexities of indian family system by dr roopa rao ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತೀಯರು ವಿಚಿತ್ರ ಅಲ್ವಾ? ಲಿವಿಂಗ್ ಟುಗೆದರ್ ಒಪ್ಪಲ್ಲ, ಮಕ್ಕಳಿಗೆ ಸ್ವಾತಂತ್ರ್ಯ ಕೊಡಲ್ಲ, ಸೈಕಾಲಜಿಯ ರೂಲ್ ಇಲ್ಲಿಗೇಕೆ ಅಪ್ಲೈ ಆಗಲ್ಲ– ಕಾಳಜಿ

ಭಾರತೀಯರು ವಿಚಿತ್ರ ಅಲ್ವಾ? ಲಿವಿಂಗ್ ಟುಗೆದರ್ ಒಪ್ಪಲ್ಲ, ಮಕ್ಕಳಿಗೆ ಸ್ವಾತಂತ್ರ್ಯ ಕೊಡಲ್ಲ, ಸೈಕಾಲಜಿಯ ರೂಲ್ ಇಲ್ಲಿಗೇಕೆ ಅಪ್ಲೈ ಆಗಲ್ಲ– ಕಾಳಜಿ

ಡಾ ರೂಪಾ ರಾವ್: ಭಾರತೀಯ ಕುಟುಂಬ ಪದ್ಧತಿ ಮತ್ತು ಇಲ್ಲಿನ ನಂಬಿಕೆಗಳನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ. ಭಾರತೀಯ ಜೀವನ ಪದ್ಧತಿ ಎನ್ನುವುದು ಒಂದು ಭವ್ಯ ಸೌಧ. ಒಮ್ಮೆ ಅದನ್ನು ಕೆಡವಿದರೆ ಮತ್ತೆ ಅಂಥದ್ದೇ ಮನೆ ಕಟ್ಟುವುದು ತುಂಬಾ ಕಷ್ಟ. ಓದುಗೊಬ್ಬರ ಸುದೀರ್ಘ ಪ್ರಶ್ನೆಯ ಹಲವು ಆಯಾಮಗಳಿಗೆ ನೀಡಿರುವ ಅಪರೂಪದ ಉತ್ತರ ಇಲ್ಲಿದೆ.

ಕಾಳಜಿ ಅಂಕಣ
ಕಾಳಜಿ ಅಂಕಣ

ಓದುಗರೊಬ್ಬರು ಕಳಿಸಿದ್ದ ಸುದೀರ್ಘ ಪ್ರಶ್ನೆಯನ್ನು ಹಲವು ಉಪ-ಪ್ರಶ್ನೆಗಳಾಗಿ ವಿಂಗಡಿಸಿಕೊಂಡು ಇಲ್ಲಿ ಉತ್ತರಿಸಿದ್ದೇನೆ. ಈ ಪ್ರಶ್ನೆ ಕೇಳಿದ್ದಕ್ಕೆ ಹಾಗೂ ನನ್ನ ಮೇಲೆ ಅವರು ಇಟ್ಟಿರುವ ಭರವಸೆಗೆ ಮೊದಲು ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದ ಬಗ್ಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ಅವರು ಕೇಳಿರುವ ಪ್ರಶ್ನೆಗಳನ್ನು ಪ್ರಶ್ನೆಗಳಾಗಿ, ಗೊಂದಲಗಳಾಗಿ ಮಾತ್ರವೇ ಗ್ರಹಿಸಬೇಕು. ಅವು ಖಂಡಿತ ಭಾರತ ವಿರೋಧ ಭಾವನೆ ಅಲ್ಲ. ಅವರಂತೆ ಎಷ್ಟೋ ಜನರಲ್ಲಿ ಇಂಥ ಪ್ರಶ್ನೆಗಳು ಇರಬಹುದು. ಅಂಥವರಿಗೆಲ್ಲಾ ಈ ಬರಹದಲ್ಲಿ ಉತ್ತರವಿದೆ. ಪ್ರಶ್ನೆಯ ಪ್ರತಿ ಆಯಾಮವನ್ನೂ ಪ್ರತ್ಯೇಕವಾಗಿಯೇ ಪರಿಗಣಿಸಿ ಉತ್ತರಿಸಲು ಪ್ರಯತ್ನಿಸಿರುವೆ. ಓದುಗರೂ ಅಷ್ಟೇ, ಪೂರ್ಣ ಬರಹವನ್ನು, ಎಲ್ಲ ಪ್ರಶ್ನೆಗಳಿಗೆ ಉತ್ತರ ಮತ್ತು ಕೊನೆಯ ಉಪಸಂಹಾರ ಓದಿದ ನಂತರವೇ ಈ ಪ್ರಶ್ನೋತ್ತರದ ಭಾವನೆ ಗ್ರಹಿಸಲು ಪ್ರಯತ್ನಿಸಬೇಕು ಎಂದು ವಿನಂತಿಸುವೆ.

1) ಭಾರತೀಯ ಸಮಾಜದಲ್ಲಿ ಸೈಕಾಲಜಿ ಅಳವಡಿಕೆ ಆಗುತ್ತದೆಯಾ?

- ಯಾವ ಸಮಾಜವೇ ಆದರೂ ಅಲ್ಲಿರುವುದು ಮನುಷ್ಯರೇ, ಆ ಮನುಷ್ಯರಿಗೊಂದು ಮನಸು, ಆ ಮನಸಿಗೊಂದಷ್ಟು ನಡೆ, ನುಡಿ , ಸ್ವಭಾವ, ಮನಸ್ಥಿತಿ, ಅಭಿರುಚಿ, ಸಮಾಜದಿಂದ ರೂಪಗೊಂಡ ಅಭಿಪ್ರಾಯಗಳು, ಭಾವನೆಗಳು ಇರುತ್ತವೆ. ಒಂದು ಜೀವಿಯ (ಕೇವಲ ಮನುಷ್ಯರಷ್ಟೇ ಅಲ್ಲ) ಐವತ್ತರಷ್ಟು (ಅರ್ಧದಷ್ಟು) ಭಾಗದ ಸ್ವಭಾವ, ನಂಬಿಕೆ, ಪೂರ್ವಗ್ರಹಗಳು, ಭಾವನೆಗಳು, ಮಾತುಗಳು ರೂಪುಗೊಳ್ಳುವುದು ಅದರ ಸುತ್ತಲಿನ ಪರಿಸರದಿಂದ. ಉಳಿದ ಅರ್ಧದಷ್ಟು ಸ್ವಭಾವಕ್ಕೆ ಆ ಜೀವಿಯ ಅಪ್ಪ-ಅಮ್ಮ ಮತ್ತು ಇನ್ನಿತರ ಪೀಳಿಗೆಯಿಂದ ಬಂದ ವಂಶವಾಹಿಗಳ ಗುಣಗಳು ಕಾರಣ.

ಹಾಗಾಗಿಯೇ ಮನಃಶಾಸ್ತ್ರವು ಎಲ್ಲ ಕಡೆಗೂ ಸಲ್ಲುತ್ತದೆ. ಪ್ರಾಣಿಗಳ ಮನಸ್ಸನ್ನೂ ಅಭ್ಯಾಸ ಮಾಡುವವರಿದ್ದಾರೆ. ಮರಗಿಡಗಳ ಸೈಕಾಲಜಿಯ ಬಗ್ಗೆ ಪೀಟರ್ ವಲ್ಲಾಬೇನ್ ಅನ್ನುವವರು 'ಹಿಡನ್ ಲೈಫ್ ಆಫ್ ಟ್ರೀಸ್' ಎನ್ನುವ ಪುಸ್ತಕವನ್ನೇ ಬರೆದಿದ್ದಾರೆ.

ಹಾಗಾಗಿ ಎಲ್ಲಿ ಮನಸು, ಪ್ರಚೋದನೆ, ಪ್ರತಿಕ್ರಿಯೆ ಇರುತ್ತದೆಯೋ ಅಲ್ಲಿ ಸೈಕಾಲಜಿ ಸಲ್ಲುತ್ತದೆ.

2) ಭಾರತೀಯ ನೆಲೆ ಹಾಗೂ ಪಾಶ್ಚಿಮಾತ್ಯ ನೆಲೆಗಳು ಭಿನ್ನವೇ?

- ಭಾರತೀಯ ನೆಲೆ ಹಾಗು ಪಾಶ್ಚಿಮಾತ್ಯ ನೆಲೆಯ ಚಿಂತನೆಗಳಲ್ಲಿ, ವ್ಯವಸ್ಥೆಗಳಲ್ಲಿ ಹಲವಾರು ವ್ಯತ್ಯಾಸಗಳಿವೆ. ನೀವು ಉಲ್ಲೇಖಿಸಿರುವ ಹದಿನೆಂಟು ವರ್ಷಕ್ಕೆ ಮನೆ ಇಂದ ಹೊರಗೆ ಹೋಗುವ, ಲೀವೀಂಗ್ ಟುಗೆದರ್ ಹಾಗೂ ವಯಸ್ಸಾದ ಮೇಲೆ ತಂದೆತಾಯಿಯನ್ನು ನೋಡಿಕೊಳ್ಳುವ ಬಗ್ಗೆ ಮಾತ್ರ ಮಾತಾಡುವೆ.

ಅಸಲಿಗೆ ಲಿವಿಂಗ್ ಟುಗೆದರ್ ಅಥವಾ ಸಹಬಾಳ್ವೆ ಎನ್ನುವುದು ಒಂದು ಪ್ರತ್ಯೇಕ ವ್ಯವಸ್ಥೆಯೇ ಅಲ್ಲ. ಅಲ್ಲಿ ಕಮಿಟ್‌ಮೆಂಟ್ ಇದ್ದರೆ, ಅದು ಔಪಚಾರಿಕವಾಗಿ ಮದುವೆಯಾಗದ ಆದರೆ ಮದುವೆಯಂಥದ್ದೇ ವ್ಯವಸ್ಥೆ ಎನಿಸಿಕೊಳ್ಳುತ್ತದೆ. ಕಮಿಟ್‌ಮೆಂಟ್ ಇಲ್ಲದಿದ್ದರೆ ಕೇವಲ ಆಕರ್ಷಣೆ ಮತ್ತು ದೈಹಿಕ ಹಾಗೂ ಮಾನಸಿಕ ಅಗತ್ಯಕ್ಕಾಗಿ (Physical and Emotional Bonding) ಅವರಿಬ್ಬರೂ ಜೊತೆಯಲ್ಲಿದ್ದಾರೆ ಎನಿಸಿಕೊಳ್ಳುತ್ತದೆ. ಅದು ತಾತ್ಕಾಲಿಕ ಅಲ್ಲವೇ? ಇದೀಗ ಭಾರತದ ಮೆಟ್ರೋ ಸಿಟಿಗಳಲ್ಲಿ ಲಿವಿಂಗ್ ಟುಗೆದರ್ ಸರ್ವವ್ಯಾಪಿಯಾಗಿದೆ. ಅಲ್ಲಿಯೂ ಕಚ್ಚಾಟ, ಹೊಡೆದಾಟ ಸಾಮಾನ್ಯ ಎನಿಸಿದೆ.

ಇತ್ತೀಚೆಗೆ ಒಂದು ಸುದ್ದಿ ಓದಿದೆ. ಪ್ರತಿ ನಾಲ್ಕು ಕೊಲೆಗಳಲ್ಲಿ ಒಂದು ಕೊಲೆ ಸಂಗಾತಿಯಿಂದಲೇ ಆದದ್ದು, ಪ್ರೀತಿ ಮತ್ತು ಬದ್ದತೆ ಇಲ್ಲದ ಯಾವ ಸಂಬಂಧವೂ ವ್ಯರ್ಥ ಎಂದು ಅದರ ಅರ್ಥ. ಸಹಬಾಳ್ವೆಯಿಂದ ಬದುಕು ಅಥವಾ ಸಮಾಜ ಪಾಸಿಟಿವ್ ಆಗಿ ಬದಲಾಗುತ್ತದೆ ಎಂಬುದು ಚಾಲ್ತಿಯಲ್ಲಿರುವ ಒಂದು ಜೋಕ್ ಅಷ್ಟೇ. ಹಾಗೆಯೇ ಸಮಾಜದ ಮುಂದೆ ವಿಧಿವತ್ತಾಗಿ ಮದುವೆಯಾದವರೆಲ್ಲಾ ಖುಷಿಯಾಗಿರುತ್ತಾರೆ ಎನ್ನುವುದೂ ತಪ್ಪು. ಆದರೆ ಸದ್ಯಕ್ಕೆ ಕೌಟುಂಬಿಕ ಹಾಗೂ ಸಾಮಾಜಿಕ ಜೀವನಕ್ಕಾಗಿ ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಇಲ್ಲ.

ಇನ್ನು ಹದಿನೆಂಟು ವರ್ಷಕ್ಕೆಲ್ಲಾ ಪೋಷಕರಿಂದ ದೂರ ಹೋಗಬೇಕು , ಹೈಸ್ಕೂಲ್ ಮಟ್ಟದಲ್ಲಿ ದೊಡ್ಡ ಮಕ್ಕಳು ಎಂಬುದು ಆಯಾ ಸಮಾಜದ ಅನುಕೂಲಕ್ಕಾಗಿ ಮಾಡಿಕೊಂಡಿರುವ ಪರಿಕಲ್ಪನೆಗಳು. ಮನುಷ್ಯರ ಸೈಕಾಲಜಿ ಮತ್ತೀಗ ನ್ಯೂರೋ ಸೈನ್ಸ್ ಇದರ ಬಗ್ಗೆ ಬೇರೆಯೇ ಹೇಳುತ್ತದೇ. ಮಕ್ಕಳ ಮಿದುಳಿನ ಬೆಳವಣಿಗೆಯು ಮೆದುಳಿನ ಹಿಂಭಾಗದಿಂದ ಶುರುವಾಗುತ್ತದೆ. ಅವುಗಳೆಂದರೆ; ಮೊದಲ ಹಂತದಲ್ಲಿ ಸ್ಪರ್ಶ, ದೃಷ್ಟಿ, ಶ್ರವಣ, ಭಾವನೆ, ಕಲಿಕೆ, ಗಮನಿಸುವಿಕೆಗೆ ಸಂಬಂಧಪಟ್ಟ ಭಾಗಗಳು, ಹಾಗಾಗಿಯೇ ಬಾಲ್ಯದ ಮೊದಲ ಹಂತದಲ್ಲಿ ಕಲಿತ ವಿಷಯ, ಭಾವನೆಗಳು, ಅನುಭವಗಳು, ನೋವು, ನಲಿವು, ವಿಚಾರಗಳು ಸುಪ್ತ ಮನಸ್ಸಿನಲ್ಲಿ ಬೇರೂರುತ್ತದೆ.

ಆದರೆ , ತಾಳ್ಮೆ ಸಹನೆ ವಿಚಾರಶೀಲತೆ ಇವುಗಳು ಮಿದುಳಿನ ಮುಂಭಾಗದಲ್ಲಿರುವ ಒಳಭಾಗದ ಕಾರ್ಯ. ಅದನ್ನು ಪ್ರಿ ಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯುತ್ತೇವೆ. ಇದರ ಪರಿಪೂರ್ಣ ಬೆಳವಣಿಗೆಯು 25 ವರ್ಷಕ್ಕೆ ಮುಗಿಯುತ್ತದೆ. ಅಲ್ಲಿಯವರೆಗೂ ಎಲ್ಲರೂ ಮಕ್ಕಳೇ. ಈ ಮಿದುಳಿನ ಪರಿಪೂರ್ಣ ಬೆಳವಣಿಗೆಯಾಗದ ಸಮಯದಲ್ಲಿ ಯಾವುದು ಸರಿ, ಯಾವುದು ತಪ್ಪು, ಯಾವುದು ಅತಿ ಎನ್ನುವ ಬಗ್ಗೆ ಪೋಷಕರ ಮಾರ್ಗದರ್ಶನ ಅತ್ಯಗತ್ಯ. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಷ್ಟು ಮಾನಸಿಕ ಸಾಮರ್ಥ್ಯ ಇಲ್ಲದ ಸಂದರ್ಭದಲ್ಲಿ ಮಾರ್ಗದರ್ಶನ ಅತ್ಯಗತ್ಯ ಅಲ್ಲವೇ?

ಈ ಪ್ರಕಾರವೂ 25 ವರ್ಷಗಳವರೆಗೂ ಎಲ್ಲರಿಗೂ ಹಿರಿಯರ ಮಾರ್ಗದರ್ಶನ ಬೇಕೇ ಬೇಕು. ಇನ್ನು ಪೋಷಕರಿಗೆ ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳಲಿ ಎಂಬ ನಿರೀಕ್ಷೆ ಇದ್ದೇ ಇರುತ್ತದೆ. ರೆಕ್ಕೆ ಬಂದು ಹಾರಿ ಹೋಗುವ ಹಕ್ಕಿಗಳಂತಲ್ಲ ಮನುಷ್ಯರ ಬದುಕು. ಹಕ್ಕಿ ಹಾರಿ ಹೋಗುವ ವೇಳೆಗೆ ತಮ್ಮ ಬದುಕು, ಹಣ, ಬುದ್ದಿವಂತಿಕೆ, ಯೌವ್ವನ ಎಲ್ಲವನ್ನೂ ವ್ಯಯಿಸಿರುವ ಪೋಷಕರು ತಮ್ಮ ಮಕ್ಕಳು ತಮ್ಮನ್ನು ಮುಪ್ಪಿನ ಕಾಲದಲ್ಲಿ ನೋಡಿಕೊಳ್ಳಲಿ ಎಂಬ ಆಲೋಚನೆ ಇಟ್ಟುಕೊಂಡರೆ ನಿಜಕ್ಕೂ ತಪ್ಪಲ್ಲ, ಆದರೆ ಅದು ಅಧಿಕಾರವಾಗಿ ಮಕ್ಕಳ ಬದುಕನ್ನು ಹಾಳು ಮಾಡುವ ಮಟ್ಟಕ್ಕೆ ಹೋಗುವುದಾದರೆ ಅದು ಅಪಾಯಕಾರಿ. ಭಾರತೀಯ ನೆಲೆಯಲ್ಲಿ ಗೃಹಸ್ಥಾಶ್ರಮದ ನಂತರ ವಾನಪ್ರಸ್ಥಕ್ಕೆ ಹೋಗುವ ಪರಿಪಾಠವಿತ್ತು ಎಂದು ಓದಿದ್ದೇವೆ. ಅದು ಒಂದು ವಯಸಿನ ನಂತರ ಬಹುಶಃ ಎಂಭತ್ತರ ನಂತರವಿರಬೇಕು. ಕೌಟುಂಬಿಕ ಕೂಡು ಕುಟುಂಬದ ವ್ಯವಸ್ಥೆ ನಮ್ಮ ದೇಶದ ಒಂದು ವಿಶಿಷ್ಟ ವ್ಯವಸ್ಥೆ (Unique System).

ಕೂಡು ಕುಟುಂಬದಲ್ಲಿ ಬೆಳೆಯುವ ಮಕ್ಕಳು ಪಾಸಿಟಿವ್ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎನ್ನುತ್ತದೆ ಒಂದು ಅಧ್ಯಯನ. ಹೌದು, ಇಲ್ಲಿ ಹಿರಿಯರು ತಮ್ಮ ಮಕ್ಕಳ ಬದುಕಲ್ಲಿ ಮೂಗು ತೂರಿಸುವುದು ಬಹಳ ಜಾಸ್ತಿಯಿತ್ತು. ಆದರೆ ಇತ್ತೀಚೆಗೆ ಇದು ಕಡಿಮೆ ಆಗುತ್ತಿದೆ. ಕ್ರಮೇಣವಾಗಿ ಈ ಪರಿಪಾಠವೂ ನಿಲ್ಲಬಹುದು. ಆದರೆ ಅದು ಕೂಡು ಕುಟುಂಬ ವ್ಯವಸ್ಥೆಯನ್ನು ತಪ್ಪಾಗಿ ಅರ್ಥಮಾಡಿಕೊಂಡದ್ದರಿಂದ ಆದ ಅನಾಹುತವೇ ಹೊರತು ಕೂಡುಕುಟುಂಬ ವ್ಯವಸ್ಥೆಯ ತಪ್ಪಲ್ಲ. ಕೂಡು ಕುಟುಂಬ ಎಂದರೆ ಅಪ್ಪ, ಅಮ್ಮ ಹಾಗೂ ಮಗ, ಮಗಳ ಸಂಸಾರ. ಇಂಥ ಸಂಸಾರಗಳು ಇರುವುದರಿಂದ ಯಾರಿಗೆ ಏನು ಅಪಾಯ?

3) ದುಡಿದ ಹಣ ಬಳಸಿಕೊಳ್ಳುವುದರಲ್ಲಿಯೂ ಗಂಡು ಹೆಣ್ಣಿಗೆ ಅಜಗಜಾಂತರ ಇದೆ. ಇದು ಸರಿಯೇ?

- ದುಡಿದ ಹಣವನ್ನು ಸ್ವತಂತ್ರವಾಗಿ ಬಳಸಿಕೊಳ್ಳುವುದರಲ್ಲಿಯೂ ಹೆಣ್ಣಿಗೆ ಅವಕಾಶ ಇಲ್ಲ ಎನ್ನುವುದು ವಿಷಾದದ ಸಂಗತಿ. ಈ ಪರಿಸ್ಥಿತಿ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವು ದೇಶಗಳಲ್ಲಿಯೂ ದೂರುಗಳಿವೆ. ಆದರೆ ಇತ್ತೀಚೆಗೆ ಈ ಪರಿಸ್ಥಿತಿ ಬದಲಾಗುತ್ತಿದೆ.

4) ಹೆಣ್ಣುಮಕ್ಕಳು ಈಗಲೂ ತಮ್ಮ ತವರು ಮನೆಗೆ ಹಣ ಕೊಡುವುದು ಕಡಿಮೆ. ಕೊಟ್ಟರೂ ಪುರುಷ ಪ್ರಧಾನ ಮನಸ್ಥಿತಿಯ ಅಪ್ಪ-ಅಮ್ಮನಿಗೆ ಸ್ವೀಕರಿಸಲು ಹಿಂಜರಿಕೆಯಾಗುತ್ತದೆ. ಇದು ಸರಿಯೇ?

- ಹೌದು, ಈ ನಿಟ್ಟಿನಲ್ಲಿ ಬದಲಾವಣೆ ಅಗತ್ಯ ಇದೆ. ಅರಿವು ಮೂಡಿಸಬೇಕು. ಆದರೂ ಈಗಾಗಲೇ ಬಹಳಷ್ಟು ಹೆಣ್ಣುಮಕ್ಕಳು ತಾವು ದುಡಿದುದರಲ್ಲಿ ತಂದೆ ತಾಯಿಯ ಮನೆಗೆ ಕೊಡುತ್ತಿದ್ದಾರೆ. ಸಮಾಜವೂ ಇದನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿದೆ.

5) ಭಾರತೀಯ ಮಹಿಳೆಯ ಸೇವೆ ಅಥವಾ ತ್ಯಾಗಕ್ಕೆ ಬೆಲೆ ಇಲ್ಲವೇ? ಯಾವಾಗಲೂ ಆಕೆಯು ಗಂಡ ಅಥವಾ ಮಕ್ಕಳ ಖುಷಿಯಲ್ಲಿಯೇ ಯಶಸ್ಸು ಕಾಣಬೇಕೆ?

- ಪ್ರಕೃತಿಯಲ್ಲಿ ಕೆಲವು ಪ್ರಾಣಿ-ಪಕ್ಷಿಗಳನ್ನುಳಿದು ಇನ್ನೆಲ್ಲಾ ಕಡೆ ಹೆಣ್ಣಿಗೆ ಮಕ್ಕಳನ್ನು ಹೆರುವ ಹಾಗೂ ನೋಡಿಕೊಳ್ಳುವ ಜವಾಬ್ದಾರಿ ಇದೆ. ಮಾನವ ಜಗತ್ತಿನಲ್ಲಿ ಕೌಟುಂಬಿಕ ವ್ಯವಸ್ಥೆ ಬೆಳೆದಂತೆಲ್ಲಾ ಹೆಣ್ಣಿಗೆ ಒಂದಿಷ್ಟು ಹೊಣೆಗಳು, ಗಂಡಿಗೆ ಒಂದಿಷ್ಟು ಹೊಣೆಗಾರಿಕೆಗಳು ವಿಭಜಿಸಿಲ್ಪಟ್ಟವು. ಆಗಿನ ಕಾಲಕ್ಕೆ ಆಹಾರದ ಸಂಗ್ರಹಕ್ಕೆ ದೇಹದಾರ್ಢ್ಯ ಮಾತ್ರ ಬೇಕಾಗಿತ್ತಾದ್ದರಿಂದ ದುಡಿಯುವ ಹೊಣೆ ದೈಹಿಕವಾಗಿ ಬಲಾಢ್ಯರಾದ ಗಂಡಿಗೆ ಹಾಗೂ ಮನೆ ವಾರ್ತೆಗಳು ಹೆಣ್ಣಿಗೆ ಎಂದು ವಿಭಜಿಸಲ್ಪಟ್ಟವು.

ಇದು ಕೌಟುಂಬಿಕ ವ್ಯವಸ್ಥೆಗೆ ಆಧಾರವಾಗಬೇಕಿತ್ತು. ಸಮಯ ಕಳೆದಂತೆ ಕೆಲವು ದೌರ್ಜನ್ಯಪೂರಿತ ಪುರುಷರಿಂದ ಹೆಣ್ಣು ಅಬಲೆ ಎನ್ನುವುದು, ಅದೂ ಇದೂ ಶುರಾವಾಯಿತು. ಇಷ್ಟರಲ್ಲಿಯೇ ಕಾಲ ಬದಲಾದಂತೆ ಆಹಾರ, ಬಟ್ಟೆ, ವಸತಿ ಹಾಗೂ ಇತರ ಸೌಲಭ್ಯಗಳಿಗಳಿಗೆ ದೇಹ ಬಲವೊಂದೇ ಅಲ್ಲ. ಮಾನಸಿಕ ಬುದ್ದಿಮತ್ತೆ, ಅಥವಾ ನಾಜೂಕಾಗಿ ಮಾಡಬೇಕಾದ ಕೆಲಸಗಳು ಬೇಕಾದಾಗ ಹೆಣ್ಣು ಅಂತಹ ಕೆಲಸಗಳಿಗೆ ಮುಂದಾದಳು. ಆದರೂ ಆ ದೌರ್ಜನ್ಯ ಮನೋಭಾವದ ಪುರುಷರು, ಹಾಗೂ ಆ ಮನೋಭಾವದ ಹೆಂಗಸರಿಂದ ಇಂದಿಗೂ ಹೆಣ್ಣು ಹೊಸಿಲಿಂದಾಚೆ ಹೋಗಬಾರದು ಎನ್ನುವ ಮನೋಭಾವ ಬೆಳೆದಿದೆ. ಹೆಣ್ಣಾದವಳು ಕೇವಲ ಮನೆ, ಮಕ್ಕಳು ಮುಂತಾದ ತ್ಯಾಗಕ್ಕೆ ಮಾತ್ರ ಇರಬೇಕಾದವಳು ಎಂಬೆಲ್ಲಾ ತಪ್ಪು ಕಲ್ಪನೆಗಳಿವೆ. ಇತ್ತೀಚೆಗೆ ಇಂಥವು ಬದಲಾಗುತ್ತಿವೆ. ಮುಂದೆಯೂ ಬದಲಾಗುತ್ತದೆ.

6) ವಿದೇಶಗಳಿಂದ ಟಾಪ್ ಆಗಿ ಬಂದ ಕಿರಿಸೊಸೆಯಿಂದ ಹಿರಿಸೊಸೆಯು ಹಳ್ಳಿಯಲ್ಲಿ ಹೇಗೆ ಇರಬೇಕು? ಏನು ಅಡುಗೆ ಮಾಡೆಬೇಕು ಎನ್ನುವುದನ್ನು ಹೇಳಿಸಿಕೊಳ್ಳಬೇಕಾ?

- ಹೌದು ಹಾಗೇಯೇ ಅದೇ ಹಳ್ಳಿಯಿಂದ ವಿದೇಶಕ್ಕೆ ಹೋದರೂ ಹಿರಿಯ ಸೊಸೆಯು ಅಲ್ಲಿ ಸೊಸೆ ಅಲ್ಲಿ ಹೇಗೆ ಇರಬೇಕು ಎಂಬುದನ್ನೂ ಕಿರಿಸೊಸೆಯಿಂದ ಕಲಿಯಬೇಕು. ಎಲ್ಲೆಡೆಯೂ ಎಲ್ಲಾ ರೀತಿ ಯೋಚಿಸುವ ಜನರು ಇರುತ್ತಾರೆ. ಮಾನವೀಯತೆಗೆ ವಿದೇಶ, ಸ್ವದೇಶ, ಹಳ್ಳಿ ಅಥವಾ ಪಟ್ಟಣ ಅಂತೆಲ್ಲಾ ವಿಭಜನೆಗಳಿರುವುದಿಲ್ಲ. ಓದಿದವರು, ಫಾರಿನ್ ರಿಟರ್ನ್‌ ಅವರಿಗೆ ಎಲ್ಲವೂ ಗೊತ್ತು ಅಥವಾ ಏನೂ ಗೊತ್ತಿರುವುದಿಲ್ಲ ಎನ್ನುವುದು, ಓದದಿರುವವರು ಅಥವಾ ಹಳ್ಳಿಯವರು ಮುಗ್ಧರು ಅಥವಾ ದಡ್ಡರು ಎನ್ನುವುದು ತಪ್ಪುಕಲ್ಪನೆಯಷ್ಟೇ ಅಲ್ಲ. ಅದೊಂದು ದೊಡ್ಡ ಭ್ರಮೆ.

ನಿಮ್ಮ ಎಲ್ಲ ಪ್ರಶ್ನೆಗಳಿಗೂ ನನ್ನ ಉತ್ತರ ಇಷ್ಟೇ; ನಾವು ಒಂದು ಅತ್ಯದ್ಬುತವಾಗಿ ಕಟ್ಟಿರುವ ಪ್ರಾಚೀನ ಮನೆಯಲ್ಲಿ ವಾಸಿಸುತ್ತಿದ್ದೇವೆ. ಇದನ್ನು ಕೆಡವುವುದು ಸುಲಭ. ಆದರೆ ಮರಳಿ ಅಂಥದ್ದೇ ಕಟ್ಟಡ ಕಟ್ಟಲು ಆಗುವುದಿಲ್ಲ. ಒಂದು ವೇಳೆ ಕಟ್ಟಿದರೂ ಅದು ಅಷ್ಟೇ ಬಲಿಷ್ಠ ಹಾಗೂ ವಿಶಿಷ್ಟವಾಗಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಸಾವಿರಾರು ವರ್ಷಗಳ ಈ ಮನೆಯನ್ನು ಒಡೆದು ಹಾಕಿ ನಮ್ಮತನವನ್ನು ಕಳೆದುಕೊಳ್ಳುವ ಬದಲು ಅಲ್ಲಲ್ಲಿ ಕಾಲ ಮತ್ತು ಮನುಷ್ಯರು ಮಾಡಿದ ಬಿರುಕುಗಳನ್ನು, ತಪ್ಪು ಹೆಜ್ಜೆಗಳನ್ನೋ ಸರಿಪಡಿಸುವುದು ಒಳ್ಳೆಯದು. ನಾನು ಹೇಳುತ್ತಿರುವ ಮನೆ ನಮ್ಮ ಭಾರತ ದೇಶ. ನಮಗೆಂದೇ ಇಲ್ಲಿ ಒಂದು ಸಂಸ್ಕೃತಿ, ಪರಂಪರೆ ಇದೆ. ಅದನ್ನು ಉರುಳಿಸಿ ಯಾವ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡರೂ ಅದು ನಮ್ಮದಾಗಲಾರದು. ಹಾಗಾಗಿ ಬಿರುಕು, ತಪ್ಪುಗಳನ್ನು ಸರಿಪಡಿಸುವ ಕೆಲಸವಾಗಬೇಕೇ ಹೊರತು, ಈ ಮನೆಯನ್ನೇ ಉರುಳಿಸುವುದು ಸರಿಯಾದ ವಿಚಾರವಾಗಲಾರದು.

ಭಾರತೀಯರಿಗೆ ಸೈಕಾಲಜಿಯ ಸೂತ್ರಗಳು ಅನ್ವಯಿಸುತ್ತವೆಯೇ? ಅದು ಎಷ್ಟರಮಟ್ಟಿಗೆ ಸೂಕ್ತ ಎನ್ನುವ ನಿಮ್ಮ ಪ್ರಶ್ನೆಗೆ ಮುಂದಿನ ವಾರ ಉತ್ತರ ಹೇಳುತ್ತೇನೆ. ಮೇಲೆ ಹೇಳಿದ ಹಲವಾರು ವಿಷಯಗಳ ಕೆಲವು ತಪ್ಪುಗಳನ್ನು ಸರಿಪಡಿಸಲು ಸೈಕಾಲಜಿಯು ನೆರವಾಗಬಲ್ಲದು.

ಕಾಳಜಿ ಅಂಕಣ– ಡಾ. ರೂಪ ರಾವ್‌
ಕಾಳಜಿ ಅಂಕಣ– ಡಾ. ರೂಪ ರಾವ್‌

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

mysore-dasara_Entry_Point