ಅವಳ ಸ್ವಾಭಿಮಾನವೇ ನಮ್ಮ ಕುಟುಂಬದ ಅತಿದೊಡ್ಡ ಸಮಸ್ಯೆಯಾಗಿದೆ; ಅವಳ ನೆಮ್ಮದಿಗೆ, ನಮ್ಮ ಸುಖಕ್ಕೆ ಏನು ಮಾಡಬೇಕು ತಿಳಿಸಿ -ಕಾಳಜಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಅವಳ ಸ್ವಾಭಿಮಾನವೇ ನಮ್ಮ ಕುಟುಂಬದ ಅತಿದೊಡ್ಡ ಸಮಸ್ಯೆಯಾಗಿದೆ; ಅವಳ ನೆಮ್ಮದಿಗೆ, ನಮ್ಮ ಸುಖಕ್ಕೆ ಏನು ಮಾಡಬೇಕು ತಿಳಿಸಿ -ಕಾಳಜಿ ಅಂಕಣ

ಅವಳ ಸ್ವಾಭಿಮಾನವೇ ನಮ್ಮ ಕುಟುಂಬದ ಅತಿದೊಡ್ಡ ಸಮಸ್ಯೆಯಾಗಿದೆ; ಅವಳ ನೆಮ್ಮದಿಗೆ, ನಮ್ಮ ಸುಖಕ್ಕೆ ಏನು ಮಾಡಬೇಕು ತಿಳಿಸಿ -ಕಾಳಜಿ ಅಂಕಣ

ಡಾ ರೂಪಾ ರಾವ್: ತಮ್ಮನ್ನು ರಕ್ಷಿಸಲೆಂದು ಅವರು ಕಟ್ಟಿಕೊಂಡ ಗೋಡೆಯು ಅಂಥವರನ್ನು ಎಂದಿಗೂ ಹೊರಬರಲಾಗದ ಬಂಧಿಯನ್ನಾಗಿ ಮಾಡುತ್ತದೆ. ಸ್ವಾತಂತ್ರ್ಯ ಮತ್ತು ಪರಸ್ಪರ ಸಹಕಾರ, ಪರಸ್ಪರರ ಅವಲಂಬನೆ ಸಹಾಯ ಎರಡೂ ಬೇರೆ ಬೇರೆ ಅಲ್ಲ. ಒಂದಕ್ಕೊಂದು ಪೂರಕ. ಪರಸ್ಪರರ ಸಹಾಯವೂ ಕೂಡ ಇಬ್ಬರ ಸ್ವಾವಲಂಬನೆಗೂ ಸಹಾಯ ಮಾಡುತ್ತದೆ.

ಕಾಳಜಿ ಅಂಕಣ– ಡಾ. ರೂಪ ರಾವ್‌
ಕಾಳಜಿ ಅಂಕಣ– ಡಾ. ರೂಪ ರಾವ್‌

ಪ್ರಶ್ನೆ: ಮೇಡಂ ನನ್ನದು ಲವ್ ಮ್ಯಾರೇಜ್. ಇಬ್ಬರ ನಡುವೆ ಸಿಕ್ಕಾಪಟ್ಟೆ ಪ್ರೀತಿಯಿದೆ. ನೀವು ಹೇಳುವ ಹಾಗೆ ಕಾಳಜಿ, ಗೌರವ ಎಲ್ಲವೂ ಇದೆ. ಆದರೆ ಅವಳು ಭಯಂಕರ ಸ್ವಾಭಿಮಾನಿ. ನನ್ನಿಂದ ಅಲ್ಲ ಯಾರಿಂದಲೂ ಯಾವ ನೆರವನ್ನೂ ಪಡೆಯುವುದಿಲ್ಲ. ಎಲ್ಲ ಜವಾಬ್ದಾರಿಗಳನ್ನೂ ತಾನೇ ವಹಿಸಿಕೊಳ್ಳುತ್ತಾಳೆ. ಇಷ್ಟೆಲ್ಲ ಮಾಡಿದರೂ ಅವಳಲ್ಲಿ ಸಂತೋಷ, ಸಡಗರ ಕಾಣುವುದಿಲ್ಲ. ಯಾವಾಗಲೂ ಸಿಡುಕು, ಯಾವ ಸಮಾರಂಭ, ಪಾರ್ಟಿ, ನೆಂಟರಿಷ್ಟರ ಮನೆ ಎಲ್ಲಿಗೂ ಬರುವುದಿಲ್ಲ. ಇಲ್ಲಿಯವರೆಗೂ ನನ್ನಿಂದ ಹಣ ಇರಲಿ ಒಂದು ಸಣ್ಣ ಗಿಫ್ಟ್ ಸಹ ಕೇಳಿಲ್ಲ. ನಾನಾಗಿಯೇ ಗಿಫ್ಟ್ ಕೊಡಲು ಹೋದರೆ ಎಷ್ಟಾಯಿತು ಹಣ ಕೊಡುತ್ತೇನೆ ಇಲ್ಲ ಎಂದರೆ ಬೇಡ ಎಂದು ನಿರಾಕರಿಸುತ್ತಾಳೆ. ಮನೆಯಲ್ಲಿ ಅಶಾಂತಿಯ ವಾತಾವರಣ ಇದೆ. ಅವಳು ಇಲ್ಲಿಯವರೆಗೆ ಒಂದು ಸಲವೂ ನನ್ನ ಮುಂದೆ ಅತ್ತಿಲ್ಲ. ಏನಾದರೂ ಬೇಸರವಾದರೆ ಎಲ್ಲೋ ಬೇರೆಡೆ ಒಬ್ಬಳೇ ಹೋಗಿ ಅಳುವುದು ನನಗೆ ಇತರರಿಂದ ಗೊತ್ತಾಗಿದೆ. ನಾನೇ ಏನಾದರೂ ತಪ್ಪು ಮಾಡುತ್ತಿರುವೆನಾ ಅಥವಾ ನನ್ನ ಮೇಲೆ ಅವಳಿಗೆ ನಂಬಿಕೆ ಇಲ್ಲವಾ ಒಂದೂ ಗೊತ್ತಾಗುತ್ತಿಲ್ಲ. ಇದಕ್ಕೆ ಪರಿಹಾರವೇನು? ಒಮ್ಮೆ ಕೇಳಿದ್ದಕ್ಕೆ ಅವಳು, 'ಸ್ವಾಭಿಮಾನ ಇರುವುದು ತಪ್ಪಾ ಅಥವಾ ನಾನು ಸ್ವಾವಲಂಬಿ ಆಗಿರುವುದು ನಿನಗೆ ಇಷ್ಟ ಇಲ್ಲವಾ' ಎಂದು ಕೇಳಿದ್ದಳು. ಇವಳನ್ನು ಹೇಗೆ ನಿಭಾಯಿಸುವುದು ಅಂತ್ಲೇ ಗೊತ್ತಾಗುತ್ತಿಲ್ಲ. ನೀವೇ ಉತ್ತರಿಸಿ. - ಮಧುಸೂದನ, ತುಮಕೂರು

ಉತ್ತರ: ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದ. ಇವರೊಬ್ಬರೇ ಅಲ್ಲ ಬಹಳಷ್ಟು ಜನರು ಸ್ವಾಭಿಮಾನ, ಸ್ವಾವಲಂಬನೆಯ ತುತ್ತತುದಿಯಲ್ಲಿರುತ್ತಾರೆ. ಇದಕ್ಕೊಂದು ಮನೋವಿಶ್ಲೇಷಣೆಯ ಆಯಾಮವೂ ಇದೆ. ಅದೇನೆಂದು ನೋಡೋಣ. ಸ್ವಾವಲಂಬನೆಯು ಒಳ್ಳೆಯದು .ಯಾರ ಸಹಾಯವನ್ನೂ ಕೇಳದೆ ತಮಗೆ ತಾವೇ ಮೆಂಟರ್, ಸಹಾಯಕರು ಎಲ್ಲವೂ ಆಗಿರುವ ಗುಣ ಅದು. ಯಾರ ಸಹಾಯವೂ ಇಲ್ಲದೆ ಮೇಲೆ ಬರಬಲ್ಲೆನೆಂಬ ಆಟಿಟ್ಯೂಡ್ ಸಹ ಒಳ್ಳೆಯದೇ.

ಆದರೆ ಎಲ್ಲೋ ಆ ಗುಣದ ಹಿಂದೊಂದು ಭಯ ಇರಬಹುದು. ಅದು ಮೋಸ ಹೋಗುವೆನೆಂಬ ಭಯ, ತನ್ನನ್ನು ಜನ ನಿರ್ಲಕ್ಷ್ಯ ಮಾಡಬಹುದೆಂಬ ಭಯ, ತನ್ನ ಬಗ್ಗೆ ಜನರು ಕೆಟ್ಟದಾಗಿ ಆಡಿಕೊಳ್ಳಬಹುದೆಂಬ ಭೀತಿ, ತನಗಾಗಿ ಯಾರೂ ಇಲ್ಲವೆಂಬ ಯೋಚನೆ, ಯಾರನ್ನೂ ನಂಬಲಾರೆನೆಂಬ ಆತಂಕವೂ ಇರುತ್ತದೆ. ನಮಗೆ ಬೇರೆಯವರ ಅಗತ್ಯವಿಲ್ಲ, ಎಲ್ಲವನ್ನೂ ನಾನೇ ಮಾಡುವೆ ಮತ್ತು ಇತರರ ಸಹಾಯವಿಲ್ಲದೆ ನಾವು ಈ ಜಗತ್ತಿನಲ್ಲಿ ಇರಬಹುದು ಎಂಬ ಸ್ವಾತಂತ್ರ್ಯವು ನಮ್ಮಲ್ಲಿ ಕೊಂಚ ಮಟ್ಟಿಗೆ ಒಳ್ಳೆಯದೇ. ಆದರೆ ಒಬ್ಬ ವ್ಯಕ್ತಿಯು ಅತಿರೇಕದ ಸ್ವತಂತ್ರ ಮನೋಭಾವ ಹೊಂದುವುದು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಇದು ಹಾನಿಕಾರಕವಾಗಬಹುದು.

ಇದನ್ನು ಮನಃಶಾಸ್ತ್ರವು ಹೈಪರ್ ಇಂಡಿಪೆಂಡೆನ್ಸ್ ಅಥವಾ ಅಲ್ಟ್ರಾ ಇಂಡಿಪೆಂಡೆನ್ಸ್ ಎಂದು ಕರೆಯುತ್ತದೆ. ಕನ್ನಡದಲ್ಲಿ ನಾವು ಇದನ್ನು 'ಅತಿ ಸ್ವಾತಂತ್ರ್ಯ ಅಥವಾ ಅತಿ ಸ್ವಾಭಿಮಾನ' ಎಂದು ಕರೆಯಬಹುದು. ಅಲ್ಟ್ರಾ ಇಂಡಿಪೆಂಡೆನ್ಸ್ ಎನ್ನುವುದು ಬಾಲ್ಯದ ಅಥವಾ ಹಿಂದಿನ ಅನುಭವಗಳಿಂದ ಉಂಟಾದ ಆಘಾತದಿಂದ ಚಿಗುರುತ್ತದೆ. ಇದು ಸಾಮಾನ್ಯವಾಗಿ ಚಿಕ್ಕವಯಸ್ಸಿನಲ್ಲಿಯೇ ಮನೆಯಲ್ಲಿನ ಜವಾಬ್ದಾರಿ ಹೊತ್ತಿದ್ದಾಗ, ಅಥವಾ ಮನೆಯಲ್ಲಿ ತಮ್ಮ ತಂಗಿಯರನ್ನು ನೋಡಿಕೊಳ್ಳಬೇಕಾದಾಗ ಅಥವಾ ಅಪ್ಪ ಅಮ್ಮನಿಗೆ ಹೆಗಲಾಗಿ ಕೆಲಸ ಮಾಡುವ ಸಮಯದಲ್ಲಿ ಕೆಲವೊಮ್ಮೆ ಪೋಷಕರು ಅಥವಾ ಕುಟುಂಬದ ಇತರ ಸದಸ್ಯರೊಂದಿಗೆ ದೂರವಾದಾಗ, ಹಿಂಸಾತ್ಮಕ ಜನ ಅಥವಾ ನಾರ್ಸಿಸಿಸ್ಟಿಕ್ (ನಕಾರಾತ್ಮಕ) ಸ್ವಭಾವದ ವಾತಾವರಣ ಇಂತಹ ಕಡೆ ಕೆಟ್ಟ ಬಾಲ್ಯವನ್ನು ನೋಡಿರುವವರಿಗೆ ಇಂತಹ ಅಲ್ಟ್ರಾ ಇಂಡಿಪೆಂಡೆನ್ಸ್ ಮನೋಭಾವ ಬರುವ ಸಾಧ್ಯತೆ ಇದೆ.

ಕಿಚ್ಚು ಬೆಳೆಯಲು ಹಲವು ಕಾರಣ

ಕೆಲವೊಮ್ಮೆ ಶಾಲೆಯಲ್ಲಿ ಜೊತೆಯಲ್ಲಿರುವ ಮಕ್ಕಳಿಂದಲೋ ಅಥವಾ ಶಿಕ್ಷಕರಿಂದಲೋ ಅಪಹಾಸ್ಯಕ್ಕೆ ಈಡಾದಾಗ ಇನ್ನೂ ಕೆಲವೊಮ್ಮೆ ಅವರೆಲ್ಲರ ಮುಂದೆ ಯಾವುದೋ ರೀತಿಯಲ್ಲಿ ಅವಮಾನವಾದಾಗ, ಯಾರೂ ಸಹಾಯಕ್ಕೆ ಬರದಾಗಲೂ ಒಂಟಿಯಾಗಿಯೇ ಬೆಳೆಯಬೇಕೆಂಬ ಕಿಚ್ಚನ್ನು ತೋರುತ್ತದೆ. ಇದರ ಹಿಂದಿನ ನಿಜವಾದ ಕಾರಣ ತನ್ನನ್ನು ಇತರರ ದಾಳಿ, ನಿಂದನೆ ಅಪಹಾಸ್ಯದಿಂದ ರಕ್ಷಿಸಿಕೊಳ್ಳುವುದು.

ಬೇಕಾದರೆ ನೋಡಿ ಇಂತಹವರ ಸಾಮಾನ್ಯ ಮಾತು ಹೀಗಿರುತ್ತದೆ. "ಅವರಿಂದ ಆಗಲ್ಲ ಅಂತ ಹೇಳಿಸಿಕೊಳ್ಳಲು ನನಗೆ ಇಷ್ಟವಿಲ್ಲ“ ಎಂದು ಪದೇಪದೆ ಹೇಳುತ್ತಿರುತ್ತಾರೆ. ಕೇವಲ ಇಷ್ಟೇ ಅಲ್ಲ. ಪ್ರೀತಿ, ಪ್ರೇಮ, ಸ್ನೇಹದಲ್ಲಿ ಮೋಸ ಹೋದವರು, ಅಥವಾ ಇಂತಹ ಸಂಬಂಧದಲ್ಲಿ ದುಃಖ, ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿ ಪಾರಾದವರೂ ಕೂಡ ಅಲ್ಟ್ರಾ-ಇಂಡಿಪೆಂಡೆನ್ಸ್ ಮೊರೆ ಹೋಗಬಹುದು. ಆಗ ಅವರು ಜೀವನದಲ್ಲಿ ಹೊಸಬರಿಗೆ ಪ್ರವೇಶ ಕೊಡುವುದಿಲ್ಲ. ನಿಮ್ಮ ಮಡದಿಯ ವರ್ತನೆಗೆ ಮೇಲಿನ ಕಾರಣಗಳಲ್ಲಿ ಯಾವುದೋ ಒಂದು ಕಾರಣವಿದ್ದೀತು.

ಆಘಾತಕ್ಕೆ ಮನಸ್ಸು ತೋರುವ ಪ್ರತಿಕ್ರಿಯೆ

ನಿಜ ಹೇಳಬೇಕೆಂದರೆ "ಅಲ್ಟ್ರಾ ಇನ್‌ಡಿಪೆಂಡೆನ್ಸ್‌" ಎನ್ನುವುದು ಮನಸಿಗೆ ಆದ ಆಘಾತಗಳಿಗೆ ಮನಸ್ಸು ತೋರಿಸುವ ಪ್ರತಿಕ್ರಿಯೆ. ಚಿಪ್ಪಿನಲ್ಲಿ ಹುದುಗುವ ಆಮೆಯಂತೆ, ತೊಂದರೆ ಎದುರಾದಾಗ ಮರಳಿನಲ್ಲಿ ತಲೆ ಹುದುಗಿಸಿಕೊಳ್ಳುವ ಆಸ್ಟ್ರಿಚ್ ಪಕ್ಷಿಯಂತೆ, ಹುತ್ತ ಸೇರಿ ಬಚ್ಚಿಟ್ಞುಕೊಳ್ಳುವ ಹಾವಿನಂತೆ. ಸಹಾಯ ಹಸ್ತ ಬಂದಾಗ ಹೆದರಿ ನನಗೆ ಯಾರೂ ಸಹಾಯವೂ ಬೇಡ ಎಂದು ಹಿಂದೆ ಸರಿಯುತ್ತಾರೆ. ಸರಿ ನಾವು ಇಂಡಿಪೆಂಡೆಂಟ್ ಆಗಿಯೇ ನಮ್ಮ ಪಾಡಿಗೆ ನಾವು ಇರುತ್ತೇವೆ ಅದರಿಂದ ಏನು ತೊಂದರೆ ಎಂದು ಕೇಳಬಹುದು.

ಇದು ಆ ವ್ಯಕ್ತಿಯ ಸುತ್ತ ಎತ್ತರದ ಗೋಡೆಯನ್ನು ಸೃಷ್ಟಿಸುತ್ತದೆ. ಇದು ಬೆಳೆಯುತ್ತಲೇ ಇರುವ ಕಾರಣ ಇತರರಿಂದ ಅವರನ್ನು ಪ್ರತ್ಯೇಕಿಸಿಯೇ ಇರುತ್ತದೆ. ಹೊರನೋಟಕ್ಕೆ, ಅವರು ಸ್ಟ್ರಾಂಗ್ ಎಂದು ತೋರಿಸಿಕೊಂಡರೂ ಅಂತರಂಗದಲ್ಲಿ, ಅವರು ನಿಜಾರ್ಥದಲ್ಲಿ ಒಂಟಿಯಾಗಿರುತ್ತಾರೆ, ಇತರರಿಂದ ಸಂಪರ್ಕಗಳನ್ನು ಕಡಿತಗೊಳಿಸಿಕೊಂಡಿರುವುದರಿಂದ ತಮಗೆ ತಾವೇ ಹೆಗಲಾಗಿ ಅಂತರಂಗದಲ್ಲಿ ಅಳುತ್ತಾ ದಣಿಯುತ್ತಿರುತ್ತಾರೆ. ನಿಧಾನವಾಗಿ ಮಾನಸಿಕ ಆರೋಗ್ಯ ಹಿನ್ನಡೆಯಾಗುತ್ತಾ ಹಲವಾರು ತೊಂದರೆಗಳು ಸುತ್ತುವರೆಯುತ್ತದೆ.

ತಮ್ಮನ್ನು ರಕ್ಷಿಸಲು ಅವರು ಕಟ್ಟಿಕೊಂಡ ಈ ಗೋಡೆ ಅವರನ್ನು ಎಂದೂ ಹೊರಬರಲಾಗದ ಬಂಧಿಯನ್ನಾಗಿ ಮಾಡುತ್ತದೆ. ಒಬ್ಬ ಮನಃಶಾಸ್ತ್ರಜ್ಞಳಾಗಿ ಹೈಪರ್-ಇಂಡಿಪೆಂಡೆನ್ಸ್ ಪ್ರವೃತ್ತಿಯನ್ನು ಗುರುತಿಸುವುದು ಬಹಳ ಮುಖ್ಯ ಎಂದೇ ನಾನು ಹೇಳುವೆ. ಇದು ಸ್ವರಕ್ಷಣಾ ಕವಚದಂತಿದ್ದೂ ಸಹಾ ದೀರ್ಘಾವಧಿಯಲ್ಲಿ ಇದು ಒಳ್ಳೆಯದಲ್ಲ. ಸ್ವಾತಂತ್ರ್ಯ ಮತ್ತು ಪರಸ್ಪರ ಸಹಕಾರ (ಪರಸ್ಪರರ ಅವಲಂಬನೆ) ಸಹಾಯ ಎರಡೂ ಬೇರೆ ಬೇರೆ ಅಲ್ಲ. ಒಂದಕ್ಕೊಂದು ಪೂರಕ. ಪರಸ್ಪರರ ಸಹಾಯವೂ ಕೂಡ ಇಬ್ಬರ ಸ್ವಾವಲಂಬನೆಗೂ ಸಹಾಯ ಮಾಡುತ್ತದೆ.

ಮೂಲತಃ ಒಂಟಿಯಾಗಿದ್ದ ಮನುಷ್ಯ ತನ್ನ ಪರಸ್ಪರರ ಅವಶ್ಯಕತೆ, ಅಗತ್ಯಗಳ ಪೂರೈಕೆಗಳಿಗಾಗಿಯೇ ಸಂಘಜೀವಿಯಾಗಿ ಬದಲಾಗಿದ್ದಾನೆ. ಇತರರ ಬಳಿ ಸಹಾಯ ಕೇಳುವುದು, ಅಥವಾ ಕಣ್ಣೀರು ಬಂದಾಗ ಒಬ್ಬರ ಹೆಗಲ ಮೇಲೆ ತಲೆ ಇಟ್ಟು ಅಳುವುದು ಬಲಹೀನತೆ ಅಲ್ಲ, ಇದು ಮನಸನ್ನು ಇನ್ನಷ್ಟು ಸಬಲಗೊಳಿಸಲು ಸಹಾಯಕ.

ಇಂಥವರ ಮನಸ್ಸಿಗೆ ನೆಮ್ಮದಿ ತರುವುದು ಹೇಗೆ

ಅವರಿಗೆ ನಿಮ್ಮ ಮೇಲೆ ನಂಬಿಕೆ ತರಿಸಿ ನಿಧಾನವಾಗಿ ನಿಮ್ಮ ಪರಿಧಿಗೆ ಕರೆದುಕೊಳ್ಳಿ, ನಿಮ್ಮ ಬಾಲ್ಯ, ನೀವು ಅನುಭವಿಸಿದ ನೋವು, ಜನರಿಂದ ನಿಮಗೆ ಸಿಕ್ಕ ಸಹಾಯದ ಬಗ್ಗೆ ನಿಧಾನವಾಗಿ ಅವರೊಂದಿಗೆ ಮಾತನಾಡಿ. ನಿಮ್ಮ ಬದುಕು ಅವರ ಬದುಕು ಬೇರೆ ಬೇರೆ ಅಲ್ಲ ನೀವಿಬ್ಬರೂ ಒಂದೇ ದೋಣಿಯ ಪಯಣಿಗರು ಹಾಗೂ ಅದರ ಹುಟ್ಟನ್ನು ಇಬ್ಬರೂ ನಡೆಸಬೇಕು ಅದಕ್ಕೆ ಪರಸ್ಪರ ನಂಬಿಕೆ, ನೆರವು, ಸಹಕಾರ ಮುಖ್ಯ ಎಂದು ಮಾತಾಡಿ.

ಅವರ ಮನಸಿನ ಪರಿಧಿಯೊಳಗೆ ಕೂಡಲೇ ಪ್ರವೇಶಿಸಲು ಹೋಗಬೇಡಿ. ಅವರಾಗಿಯೇ ನಿಮ್ಮೊಂದಿಗೆ ತಮ್ಮ ಹಿಂದಿನ ನೋವು ಆಘಾತಗಳನ್ನು ಹೇಳಿಕೊಂಡಾಗ ಸಮಾಧಾನವಾಗಿ ಕೇಳಿಸಿಕೊಂಡು ನಿನ್ನ ಜೊತೆ ನಾನಿರುವೆ ಎಂದಷ್ಟೇ ಹೇಳಿ. ಸಹಾಯಕ್ಕೆ ಮುನ್ನುಗ್ಗಬೇಡಿ. ಒಂದಷ್ಟು ದಿನಗಳ ನಂತರ ಅವರು ಸರಿಯಾದ ಮನಃಸ್ಥಿತಿಗೆ ಬರಲಿಲ್ಲವಾದರೆ ಆಪ್ತಸಮಾಲೋಚನೆಗೆ ಕರೆದೊಯ್ಯಿರಿ.

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

Whats_app_banner