ಮಹಿಳೆಯರೇ, ಹೀಗಿರಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ವಿಧಾನ: 30 ದಾಟಿದ ನಂತರ ಈ 5 ವೈದ್ಯಕೀಯ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿ
Dec 20, 2024 06:00 AM IST
ವಯಸ್ಸು 30 ದಾಟಿದ ನಂತರ ಪ್ರತಿ ಮಹಿಳೆಯರು ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳು
Women Health: ಮಹಿಳೆಯರು ವಯಸ್ಸಾದಂತೆ, ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೆಲವು ಆರೋಗ್ಯ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ಆ ಪರೀಕ್ಷೆಗಳಿಂದ ತಿಳಿದುಬರುತ್ತದೆ. ಹಾಗಾದರೆ ಮಹಿಳೆಯರು 30 ವರ್ಷದ ನಂತರ ಕಡ್ಡಾಯವಾಗಿ ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳು ಯಾವುವು? ಇಲ್ಲಿದೆ ಮಾಹಿತಿ. (ಬರಹ: ಅರ್ಚನಾ ವಿ ಭಟ್)
ಇಂದಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಎಲ್ಲಾ ವಯಸ್ಸಿನವರು ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲೇಬೇಕಾಗಿದೆ. ಅದರೆ ಮಹಿಳೆಯರು ತಮ್ಮ ಆರೋಗ್ಯ ಕಾಳಜಿ ಮಾಡಿಕೊಳ್ಳುವುದರ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಕೆಲವು ಮಹಿಳೆಯರು ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ವಿಶೇಷವಾಗಿ 30 ಮತ್ತು 40 ವರ್ಷಗಳ ನಂತರ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಮಹಿಳೆಯರು ಪೌಷ್ಟಿಕ ಆಹಾರವನ್ನು ಸೇವಿಸಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು.
ಸದಾ ಆರೋಗ್ಯದ ಕಡೆ ಗಮನ ಹರಿಸಬೇಕು. ಆದಾಗ್ಯೂ, ಮಹಿಳೆಯರಲ್ಲಿ ಕೆಲವು ರೋಗಗಳು ಆರಂಭಿಕ ಹಂತದಲ್ಲಿ ಪತ್ತೆಯಾಗುವುದಿಲ್ಲ. ವೈದ್ಯಕೀಯ ಪರೀಕ್ಷೆಗಳ ಮೂಲಕವೇ ರೋಗಗಳಿರುವುದು ತಿಳಿದುಬರುತ್ತದೆ. ಇವುಗಳನ್ನು ಆರಂಭದ ಹಂತದಲ್ಲೇ ಗುರುತಿಸಿದರೆ ಗುಣಪಡಿಸುವುದು ಸುಲಭ. ವಿಳಂಬವಾದರೆ ರೋಗ ಉಲ್ಭಣವಾಗುತ್ತದೆ ನಂತರ ಗುಣಪಡಿಸುವುದು ತುಂಬಾ ಕಷ್ಟಕರವಾಗುತ್ತದೆ. ಆದ್ದರಿಂದ 30 ರಿಂದ 40 ವಯಸ್ಸಿನ ಆಸುಪಾಸಿನಲ್ಲಿರುವ ಮಹಿಳೆಯರು ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಕಡ್ಡಾಯವಾಗಿ ಒಳಗಾಗಬೇಕು. ಆ ಪರೀಕ್ಷೆಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.
ಮಹಿಳೆಯರು ಕಡ್ಡಾಯವಾಗಿ ಮಾಡಿಸಬೇಕಾದ 5 ವೈದ್ಯಕೀಯ ಪರೀಕ್ಷೆಗಳು
ಮ್ಯಾಮೊಗ್ರಾಮ್
40 ವರ್ಷ ದಾಟಿದ ಮಹಿಳೆಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಈ ಕ್ಯಾನ್ಸರ್ ಪ್ರಕರಣಗಳು ವರ್ಷಗಳಿಂದ ವರ್ಷಗಳಿಗೆ ಹೆಚ್ಚಾಗುತ್ತಿವೆ. ಆರಂಭಿಕ ಹಂತದಲ್ಲಿ ಅದನ್ನು ಗುರುತಿಸದಿದ್ದರೆ, ಸಮಸ್ಯೆ ಉಲ್ಭಣಗೊಳ್ಳುತ್ತದೆ. ಕ್ಯಾನ್ಸರ್ ಮುಂದುವರಿದರೆ ಅದನ್ನು ಗುಣಪಡಿಸುವುದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, 40 ರಿಂದ 50 ವರ್ಷ ವಯಸ್ಸಿನ ಎಲ್ಲಾ ಮಹಿಳೆಯರು ಮ್ಯಾಮೊಗ್ರಾಮ್‌ಗೆ ಒಳಗಾಗಬೇಕು. ಈ ವಯಸ್ಸಿನ ಜನರು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಈ ಪರೀಕ್ಷೆಗೆ ಒಳಗಾಗಬೇಕು. ಈ ಎಕ್ಸ್-ರೇ ಪರೀಕ್ಷೆಯ ಮೂಲಕ ಯಾವುದೇ ಸ್ತನ ಸಮಸ್ಯೆಗಳು ಅಥವಾ ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದಾಗಿದೆ. ನಿಮ್ಮ ಸ್ತನಗಳಲ್ಲಿ ನೋವು, ಗಂಟುಗಳು ಅಥವಾ ಚರ್ಮದ ಬಣ್ಣದಲ್ಲಿ ಬದಲಾವಣೆ ಮುಂತಾದವುಗಳು ಕಂಡುಬಂದ ತಕ್ಷಣ ನೀವು ಮ್ಯಾಮೊಗ್ರಾಮ್ ಮಾಡಿಸಿಕೊಳ್ಳಬೇಕು.
ನಿಯಮಿತ ರಕ್ತ ಪರೀಕ್ಷೆ
ಯಾವುದೇ ಆರೋಗ್ಯ ಸಮಸ್ಯೆಯ ಆರಂಭಿಕ ಪತ್ತೆ ಬಹಳ ಮುಖ್ಯ. ಅದಕ್ಕಾಗಿ ಮಹಿಳೆಯರು ನಿಯಮಿತವಾಗಿ ರಕ್ತ ಪರೀಕ್ಷೆಗಳನ್ನು ಮಾಡಿಸುತ್ತಿರಬೇಕು. ಮಹಿಳೆಯರು ಅವರ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ರಕ್ತ ಪರೀಕ್ಷೆಗಳನ್ನು ಅವಲಂಬಿಸಿ, ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಿದೆ. ನಿಯಮಿತ ರಕ್ತ ಪರೀಕ್ಷೆಗಳಲ್ಲಿ ರಕ್ತಹೀನತೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಕೊಲೆಸ್ಟ್ರಾಲ್ ತಪಾಸಣೆ, ರಕ್ತದ ಗ್ಲೂಕೋಸ್ ಪರೀಕ್ಷೆ ಮತ್ತು ವಿಟಮಿನ್ ಡಿ ಪರೀಕ್ಷೆ ಸೇರಿವೆ. ಇವುಗಳ ಫಲಿತಾಂಶಗಳನ್ನು ಅವಲಂಬಿಸಿ ಅವರ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಮಹಿಳೆಯರು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಸಂಪೂರ್ಣ ರಕ್ತ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗಬೇಕು.
ಪೆಲ್ವಿಕ್ ಟೆಸ್ಟ್
ಮಹಿಳೆಯರು ಪೆಲ್ವಿಕ್ (ಗರ್ಭಕಂಠದ ತೆರೆಯುವಿಕೆ) ಸೋಂಕುಗಳು ಮತ್ತು ಕ್ಯಾನ್ಸರ್ ಅಪಾಯಕ್ಕೆ ಹೆಚ್ಚು ತುತ್ತಾಗುತ್ತಾರೆ. ಅದಕ್ಕಾಗಿಯೇ ಪೆಲ್ವಿಕ್ ಪರೀಕ್ಷೆಯನ್ನು ತಪ್ಪದೇ ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ಕಂಡುಹಿಡಿಯಬಹುದಾಗಿದೆ. ಆರಂಭಿಕ ಹಂತದಲ್ಲಿ ಈ ಕ್ಯಾನ್ಸರ್ ಪತ್ತೆಯಾದರೆ ಚಿಕಿತ್ಸೆ ಸುಲಭ. ಗರ್ಭಕಂಠದ ಕ್ಯಾನ್ಸರ್ ಮುಂದುವರಿದರೆ ತುಂಬಾ ಅಪಾಯಕಾರಿ. 30 ವರ್ಷದ ನಂತರ ಮಹಿಳೆಯರು ವರ್ಷಕ್ಕೊಮ್ಮೆ ಪೆಲ್ವಿಕ್ ಪರೀಕ್ಷೆಗೆ ಒಳಗಾಗಬೇಕು ಎಂದು ವೈದ್ಯಕೀಯ ತಜ್ಞರು ಸೂಚಿಸುತ್ತಾರೆ.
ಮೂಳೆ ಸಾಂದ್ರತೆ ಪರೀಕ್ಷೆ
ವಯಸ್ಸಾದಂತೆ ಕೆಲವು ಮಹಿಳೆಯರಲ್ಲಿ ಮೂಳೆಯ ಸಾಂದ್ರತೆಯು ಕಡಿಮೆಯಾಗುತ್ತದೆ. ಅದಕ್ಕಾಗಿಯೇ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮೂಳೆ ಸಾಂದ್ರತೆ ಪರೀಕ್ಷೆ (BMD) ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಯನ್ನು ಎರಡು ವರ್ಷಕ್ಕೊಮ್ಮೆಯಾದರೂ ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಯು ಮೂಳೆಗಳು ಎಷ್ಟು ಗಟ್ಟಿಮುಟ್ಟಾಗಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಜೊತೆಗೆ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದು ತಿಳಿದುಬರುತ್ತದೆ. ಇದರಿಂದ ಚಿಕ್ಕ ಪುಟ್ಟ ಅಪಘಾತದಲ್ಲಿ ಆಗುವ ಮೂಳೆ ಮುರಿತದಂತಹ ಆಸ್ಟಿಯೊಪೊರೋಸಿಸ್ ಸಮಸ್ಯೆಯನ್ನು ತಪ್ಪಿಸಬಹುದು.
ಹಾರ್ಮೋನ್‌ಗಳ ಪರೀಕ್ಷೆ
ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಹಾರ್ಮೋನ್ ವ್ಯತ್ಯಾಸ ಹೆಚ್ಚಾಗಿ ಕಂಡುಬರುತ್ತಿದೆ. ದೇಹದಲ್ಲಿನ ಹಾರ್ಮೋನುಗಳ ಅಸಮತೋಲನದಿಂದ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಜೀವನಶೈಲಿಯ ಬದಲಾವಣೆಯಿಂದ ಹಾರ್ಮೋನುಗಳು ನಿಯಂತ್ರಣಕ್ಕೆ ಬರುವುದಿಲ್ಲ. ಇದನ್ನು ತಿಳಿಯಲು ಮಹಿಳೆಯರು ಹಾರ್ಮೋನ್ ರಕ್ತ ಪರೀಕ್ಷೆಗೆ ಒಳಗಾಗಬೇಕು. ಇದು ಅವರ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಈ ಪರೀಕ್ಷೆಗಳಲ್ಲಿ ವಿವಿಧ ರೀತಿಯ ಹಾರ್ಮೋನುಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬರುತ್ತದೆ.
ಬರಹ: ಅರ್ಚನಾ ವಿ ಭಟ್