ದೇಗುಲ ದರ್ಶನ: ಮಲ್ಲೇಶ್ವರದ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ; ಸೇವಾಲಯದಿಂದಲೇ ಹೆಚ್ಚು ಜನಪ್ರಿಯ
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ಸುತ್ತಮುತ್ತಲಿನ ಭಕ್ತರು ನಿತ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ದೇವಿಯ ಮಹಿಮೆ ಮತ್ತು ಆಸಕ್ತಿಕರ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ದೇವಾಲಯಗಳಲ್ಲಿ ನವರಾತ್ರಿ ಉತ್ಸವ ಜೋರಾಗಿ ನಡೆಯುತ್ತಿದ್ದು, ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಅಕ್ಟೋಬರ್ 3 ರಿಂದ ಆರಂಭವಾಗಿರುವ ನವರಾತ್ರಿಯಲ್ಲಿ ದೇವಿಗೆ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಭಕ್ತರು ದೇವಿಯ ದರ್ಶನ ಪಡೆಯಲು ಅವಕಾಶ ಮಾಡಿಕೊಳಲಾಗಿದೆ. ಪ್ರತಿದಿನ ದೇವಿಯನ್ನು ವಿವಿಧ ಬಣ್ಣದ ಹೂಗಳಿಂದ ಸಿಂಗಾರ ಮಾಡಿ ಪೂಜಿಸಲಾಗುತ್ತಿದೆ. ದೇವಾಲಯದಲ್ಲಿ ದೀಪಾಲಂಕಾರ ಗಮನ ಸೆಳೆಯುತ್ತಿದೆ. ದೇವಿಗೆ ಪೂಜೆ ಸಲ್ಲಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ಹೀಗಾಗಿ ನಿತ್ಯ ನೂರಾರು ಭಕ್ತರು ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ವಿಶೇಷವೆಂದರೆ ಈ ದೇವಾಲಯದಲ್ಲಿ ಪೂಜೆ, ಭಜನೆ ಸೇರಿದಂತೆ ವರ್ಷದ 365 ದಿನ ಹಿಂದೂ ಸಂಸ್ಕೃತವನ್ನು ಬಿಂಬಿಸುವಂತಹ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ.
ನವರಾತ್ರಿಯಲ್ಲಿ ದೇವಿಗೆ ಯಾವ ಅಲಂಕಾರ ಮಾಡಲಾಗುತ್ತೆ?
ಅಕ್ಟೋಬರ್ 3ರ ಗುರುವಾರ ನವರಾತ್ರಿಯ ಮೊದಲ ದಿನವಾಗಿ ದೇವಿಗೆ ಶ್ರೀ ರಕ್ಷಾಂಬಿಕ ಅಲಂಕಾರ ಮಾಡಲಾಗಿತ್ತು. ನವರಾತ್ರಿಯ 2ನೇ ದಿನ (ಅಕ್ಟೋಬರ್ 4ರ ಶುಕ್ರವಾರ) ಶ್ರೀ ವೈಷ್ಣವಿ ಭಾರ್ಗವಿ ಅಲಂಕಾರ, ಮೂರನೇ ದಿನ (ಅಕ್ಟೋಬರ್ 5ರ ಶನಿವಾರ) ಶ್ರೀಕೃಷ್ಣ ಅಲಂಕಾರ, ನವರಾತ್ರಿಯ 4ನೇ (ಅಕ್ಟೋಬರ್ 6ರ ಭಾನುವಾರ) ದಿನ ದುಮವತಿ ಅಲಂಕಾರ, ನವರಾತ್ರಿಯ 5ನೇ ದಿನ (ಅಕ್ಟೋಬರ್ 7ರ ಸೋಮವಾರ) ಶ್ರೀತಾರ ಅಲಂಕಾರ, ನವರಾತ್ರಿಯ 6ನೇ ದಿನ (ಅಕ್ಟೋಬರ್ 8ರ ಮಂಗಳವಾರ) ತ್ರಿಪುರ ಸುಂದರಿ ಅಲಂಕಾರ, 7ನೇ ದಿನ (ಅಕ್ಟೋಬರ್ 9ರ ಬುಧವಾರ) ಮಹಾಸರಸ್ವತಿ ಅಲಂಕಾರ, 8ನೇ ದಿನ (ಅಕ್ಟೋಬರ್ 10ರ ಗುರುವಾರ) ಭದ್ರಕಾಳಿ ಅಲಂಕಾರ, 9ನೇ ದಿನ (ಅಕ್ಟೋಬರ್ 11ರ ಶುಕ್ರವಾರ) ಕಾಳಿಂಗಮರ್ಧನಿ ಅಲಂಕಾರ ಹಾಗೂ ಅಕ್ಟೋಬರ್ 12ರ ಶನಿವಾರ ವಿಜಯದಶಮಿಯಂದು ವಿಜಯದುರ್ಗ ಅಲಂಕಾರವನ್ನು ಮಾಡಲಾಗುತ್ತದೆ.
ಕನ್ನಿಕಾ ಪರಮೇಶ್ವರಿ ದೇವಾಲಯದ ಇತಿಹಾಸ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯವನ್ನು 1934ರ ಮೇ 15 ರಂದು ನಿರ್ಮಿಸಲಾಗಿದೆ. 1927 ರಲ್ಲಿ ಮಲ್ಲೇಶ್ವರಂ ಬಡಾವಣೆಯ ಜನರು ದೇವಿಯ ಪ್ರತಿಷ್ಠಾಪನೆ ಮಾಡಬೇಕೆಂದು ಸಂಕಲ್ಪ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ 1931 ರಲ್ಲಿ ಸರ್ಕಾರದಿಂದ ಸ್ಥಳವನ್ನು ಪಡೆದು ಬಡಾವಣೆಯ ಕೇವಲ 9 ಮನೆಯವರು ಸೇರಿ ದೇವಸ್ಥಾನ ಕಟ್ಟುತ್ತಾರೆ. ಕನ್ನಿಕಾ ಪರಮೇಶ್ವರಿ, ಸತ್ಯನಾರಾಣಯ ಸ್ವಾಮಿ ಹಾಗೂ ನವಗ್ರಹಗಳನ್ನು ಏಕಕಾಲದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ.
ದೇವಾಲಯದಲ್ಲಿ ಪ್ರತಿನಿತ್ಯ ಸಂಗೀತ, ಹರಿಕಥೆ, ಪ್ರವಚನಗಳು ಸುಮಾರು 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. 1982 ರಲ್ಲಿ ದೇವಸ್ಥಾನದ ಪಕ್ಕದಲ್ಲೇ ದೇವಿಯ ಹೆಸರಿನಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಚಿಕಿತ್ಸೆ ಉಚಿತವಾಗಿದ್ದು, ನೂರಾರು ಮಂದಿ ಇದರ ಪ್ರಯೋಜವನ್ನು ಪಡೆಯುತ್ತಿದ್ದಾರೆ. 2000 ಇಸವಿಯಲ್ಲಿ ದೇವಸ್ಥಾನದ ವತಿಯಿಂದ ಹಾಸ್ಟೆಲ್ ತೆರೆಯಲಾಗಿದ್ದು, ಹೊರಗಡೆಯಿಂದ ಬೆಂಗಳೂರಿಗೆ ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ನಿಲಯದಲ್ಲಿ 217 ವಿದ್ಯಾರ್ಥಿಗಳಿದ್ದಾರೆ.
ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವತಿಯಿಂದ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದ್ದು, ಕೇವಲ 600 ರೂಪಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. 13 ವರ್ಷಗಳಲ್ಲಿ 1,17,000 ಡಯಾಲಿಸಿಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಉಚಿತ ವಿವಾಹಗಳನ್ನೂ ದೇವಾಲಯಲ್ಲಿ ನಡೆಸಲಾಗುತ್ತದೆ.
ಸೇವಾಲಯದಿಂದಲೇ ಹೆಚ್ಚು ಜಪ್ರಿಯವಾದ ದೇವಾಲಯ
ಹಿಂದೂ ಸಂಸ್ಕೃತವನ್ನು ಬಿಂಬಿಸುವಂತಹ ಎಲ್ಲಾ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ದೇವಸ್ಥಾನದಲ್ಲಿ ಮತ್ತೊಂದು ವಿಶೇಷ ಎಂದರೆ ಮಕ್ಕಳ ಆರೈಕೆ ಮಾಡದ ವೃದ್ಧರಿಗೆ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಮನೆಗೆ ಉಚಿತವಾಗಿ ಕಳುಹಿಸಿಕೊಡಲಾಗುತ್ತಿದೆ. ಈ ಸೇವೆ 2006 ರಿಂದ ನಡೆಯುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳು ಸರ್ಕಾರದ ಯಾವುದೇ ಅನುದಾನ ಇಲ್ಲದೆ ನಡೆಯುತ್ತಿವೆ. ದೇವಾಲಯ ಸೇವಾಲಯ ಆಗಿದ್ದಾಗ ಜನರಿಗೆ ಹತ್ತಿರವಾಗುತ್ತೆ, ಆಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ದೇವಾಲಯದ ಕಾರ್ಯದರ್ಶಿ ರವಿ ಶಂಕರ್ ವಿವರಿಸಿದ್ದಾರೆ.