ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಹಾರೈಸುವ ಸುಬ್ರಹ್ಮಣ್ಯ ಸ್ವಾಮಿ; ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ದೇವಸ್ಥಾನ ದರ್ಶನ

ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಹಾರೈಸುವ ಸುಬ್ರಹ್ಮಣ್ಯ ಸ್ವಾಮಿ; ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ದೇವಸ್ಥಾನ ದರ್ಶನ

Karnataka Temple: ಮಕ್ಕಳು ವಿದ್ಯಾಭ್ಯಾಸದಲ್ಲಿ ಯಶಸ್ವಿಯಾಗಲು ಏಕಾಗ್ರತೆ, ನೆನಪಿನ ಶಕ್ತಿ ಬಹಳ ಮುಖ್ಯ. ಬೆಂಗಳೂರಿನಲ್ಲಿರುವ ಈ ಕುಮಾರಸ್ವಾಮಿ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಂದರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಯಶಸ್ವಿಯಾಗುತ್ತಾರೆ ಎಂದು ಈ ದೇವಾಲಯಕ್ಕೆ ಹೋಗಿ ಬಂದವರು ಹೇಳುತ್ತಾರೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಹಾರೈಸುವ ಸುಬ್ರಹ್ಮಣ್ಯ ಸ್ವಾಮಿ; ಬೆಂಗಳೂರಿನಲ್ಲಿರುವ ಈ ಕುಮಾರಸ್ವಾಮಿ ದೇವಸ್ಥಾನ ದರ್ಶನ
ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಹಾರೈಸುವ ಸುಬ್ರಹ್ಮಣ್ಯ ಸ್ವಾಮಿ; ಬೆಂಗಳೂರಿನಲ್ಲಿರುವ ಈ ಕುಮಾರಸ್ವಾಮಿ ದೇವಸ್ಥಾನ ದರ್ಶನ

ತಂದೆ ತಾಯಿ ಮತ್ತು ಮಕ್ಕಳ ಮನಸ್ಸಿನಲ್ಲಿ ಉತ್ತಮ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಮತ್ತು ಗುರಿ ಇರುತ್ತದೆ. ಮಾನಸಿಕ ಶಕ್ತಿಯ ಜೊತೆಯಲ್ಲಿ ಉತ್ತಮ ಪ್ರಯತ್ನವೂ ಬೇಕು. ಇದರ ಜೊತೆಯಲ್ಲಿ ದೈವಾನುಗ್ರಹವೂ ಮುಖ್ಯ. ವಿದ್ಯಾಭ್ಯಾಸಕ್ಕೆ ನಾವೆಲ್ಲರೂ ತಿಳಿದಿರುವಂತೆ ಸರಸ್ವತಿಯೇ ಅಧಿದೇವತೆ. ಆದರೆ ಸರಸ್ವತಿ ಮಾತೆಯ ಜೊತೆಗೆ ಗೆಲುವಿನ ಕಿಚ್ಚನ್ನು ಹೆಚ್ಚಿಸುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಎದುರಾಗುವ ಅಡ್ಡಿ ಆತಂಕಗಳನ್ನು ದೂರ ಮಾಡುವ ಗಣಪತಿ ಸಹ ಬಹು ಮುಖ್ಯ. ಅದರಲ್ಲಿಯೂ ಪಂಚಮುಖಿ ಗಣಪತಿ ಪೂಜೆಯಿಂದ ಹೆಚ್ಚು ಶುಭಫಲಗಳು ದೊರೆಯುತ್ತವೆ.

ನೆನಪಿನ ಶಕ್ತಿ ನೀಡುವ ಕುಮಾರಸ್ವಾಮಿ

ಶ್ರೀ ಕುಮಾರಸ್ವಾಮಿ ಪೂಜೆಯಿಂದ ವಿದ್ಯಾರ್ಥಿಗಳ ನೆನಪಿನ ಶಕ್ತಿ ವೃದ್ದಿಸುತ್ತದೆ. ಅಲ್ಲದೆ ಮನದಲ್ಲಿ ಇರುವ ಕಲ್ಮಶಗಳು ದೂರವಾಗಿ ಮನಸ್ಸು ತಿಳಿಯಾಗುತ್ತದೆ. ಇದರೊಂದಿಗೆ ಮುಖ್ಯವಾಗಿ ಮಕ್ಕಳಿಗೆ ಸೋಲುಂಟಾದಾಗ ಅವರನ್ನು ಛೇಡಿಸದೆ ಅವರಲ್ಲಿ ಸ್ಪೂರ್ತಿಯನ್ನು ತುಂಬಬೇಕು. ಈ ಮೇಲಿನ ಎಲ್ಲಾ ಅಂಶಗಳು ನಮಗೆ ದೊರೆಯುವ ಒಂದು ಸ್ಥಳ ಎಂದರೆ ಅದು ಬೆಂಗಳೂರಿನಲ್ಲಿ ಒಂದು ದೇವಸ್ಥಾನ. ಸಿಲಿಕಾನ್‌ ಸಿಟಿಯ 50 ಅಡಿ ರಸ್ತೆಯ ನಿರ್ಮಲ ಸ್ಟೋರ್ ಬಳಿ ಇರುವ ಶ್ರೀ ಕುಮಾರಸ್ವಾಮಿ ದೇವಾಲಯವಿದು. ಅಲ್ಲಿಗೆ ಆಗಮಿಸುವ ಭಕ್ತಾದಿಗಳ ಕಷ್ಟಗಳು ಸುಲಭವಾಗಿ ಪರಿಹಾರಗೊಳ್ಳುತ್ತವೆ.

ಬೆಂಗಳೂರಿನಲ್ಲಿ ಬೆಟ್ಟದ ಮೇಲೆ ಇರುವ ದೇವಾಲಯಗಳು ಬಹಳ ಕಡಿಮೆ. ಇಂತಹ ದೇವಾಲಯದಲ್ಲಿ ಒಂದು ಹನುಮಂತನಗರ ಕುಮಾರಸ್ವಾಮಿ ದೇವಾಲಯ. ಇದು ಮೌಂಟ್ ಜಾಯ್ ಎಂಬ ಬೆಟ್ಟದ ಮೇಲೆ ಇದೆ. ಬೆರಳೆಣಿಕೆಯಷ್ಟು ಇರುವ ಮೆಟ್ಟಲುಗಳನ್ನು ಹತ್ತಿ ಮುಖ್ಯ ದೇಗುಲವನ್ನು ತಲುಪಬಹುದು. ಇಲ್ಲಿಯ ವಿಶೇಷವೆಂದರೆ ಇಲ್ಲಿರುವ ಪಂಚಮುಖಿ ಗಣಪತಿ. ಸಾಮಾನ್ಯವಾಗಿ ಪ್ರತಿಯೊಂದು ದೇವಾಲಯದಲ್ಲಿಯೂ ಮೊದಲು ನಾವು ಗಣಪತಿ ದೇಗುಲಕ್ಕೆ ಭೇಟಿ ನೀಡುತ್ತೇವೆ. ಕೆಲವೇ ಮೆಟ್ಟಿಲುಗಳನ್ನು ಹತ್ತಿದ ನಂತರ ಬಲಗಡೆ ಗಣಪತಿ ದೇವಾಲಯವು ಕಾಣಿಸುತ್ತದೆ. ಈ ದೇವಾಲಯದಲ್ಲಿ ಪೂಜೆ ಮಾಡಿಸುವುದರಿಂದ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಫಲಗಳು ದೊರೆಯುತ್ತವೆ. ಸಂಕಷ್ಟಹರ ಚತುರ್ಥಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆ ದಿನದಂದು ಈ ದೇವಾಲಯಕ್ಕೆ ಭೇಟಿ ನೀಡಿದರೆ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ ಎಂಬುದು ಅನುಭವಿಗಳ ಮಾತು. 21 ಗರಿಕೆಯನ್ನು ಸಮರ್ಪಿಸಿದರೆ ವಿಶೇಷ ಫಲಗಳು ದೊರೆಯುತ್ತವೆ.

ವಿವಿಧ ದೋಷಗಳ ನಿವಾರಣೆ

ಆನಂತರ ನಮಗೆ ಸಿಗುವುದೇ ಸ್ವಯಂ ಉದ್ಭವವಾಗಿರುವ ನಾಗದೇವತೆಗಳು. ಇಲ್ಲಿರುವುದು ಶ್ರೀ ಆದಿಶೇಷನ ದೇವಾಲಯ. ಈ ದೇವಾಲಯದಲ್ಲಿ ಪ್ರತಿ ತಿಂಗಳು ಶುದ್ಧಷಷ್ಠಿಯಂದು ಷಷ್ಠಿಪೂಜೆಯನ್ನು ನಡೆಸಲಾಗುತ್ತದೆ. ಈ ಪೂಜೆ ಮಾಡಿಸಿದಲ್ಲಿ ನಾನಾ ವಿಧವಾದ ಫಲಗಳು ದೊರೆಯಲಿವೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಜನ್ಮ ಕುಂಡಲಿಯಲ್ಲಿ ಇರುವ ಕುಜದೋಷ ನಿವಾರಣೆಯಾಗಿ ಶುಭ ಫಲಗಳು ದೊರೆಯುತ್ತವೆ. ಮಕ್ಕಳ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತವೆ. ಭಯ ಪಟ್ಟು ಬೆಚ್ಚುವ ಪುಟ್ಟ ಮಕ್ಖಳಿಗೆ ಧೈರ್ಯ ಉಂಟಾಗುತ್ತದೆ. ಅನ್ನ ತಿನ್ನಲು ಹಟ ಮಾಡುವ ಹಸುಳೆಗಳಿಗೆ ದೃಷ್ಟಿ ಕಳೆದು ಒಳ್ಳೆಯದಾಗುತ್ತದೆ.

ಇಲ್ಲಿಂದ ಮುಂದೆ ನಂತರ ನಮಗೆ ಸಿಗುವುದೇ ಕುಮಾರಸ್ವಾಮಿ, ಪಾರ್ವತಿ ಮತ್ತು ಶಿವಲಿಂಗ, ಈ ದೇಗುಲದಲ್ಲಿ ಮಂಗಳವಾರ ಮತ್ತು ಷಷ್ಠಿಯ ದಿನಗಳಂದು ವಿಶೇಷ ಪೂಜೆ ನಡೆಸಲಾಗುತ್ತದೆ. ಬರುವ ಭಕ್ತಾದಿಗಳಿಗೆ ಪ್ರಸಾದ ಮಾತ್ರವಲ್ಲದೆ ದೇವರಿಗೆ ಅಭಿಷೇಕ ಮಾಡಿದ ಹಾಲನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ. ಅನುಭವಿ ಭಕ್ತರ ಪ್ರಕಾರ ಇದರ ಸೇವನೆಯಿಂದ ಆರೋಗ್ಯವೂ ಸಹ ಸುಧಾರಿಸುತ್ತದೆ. ಹಣದ ಆಸೆ ಇಲ್ಲದೆ ಜನರಿಗಾಗಿ ಪೂಜೆ ಸಲ್ಲಿಸುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಸಹ ಒಂದು. ಇಲ್ಲಿನ ಅರ್ಚಕರ ನಯವಾದ ಮಾತೆ ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ.

ಎಲ್ಲವನ್ನೂ ಮರೆತು ಧ್ಯಾನ ಮಾಡಲು ಇಲ್ಲಿ ವಿಶಾಲವಾದ ಜಾಗವಿದೆ. ಇಲ್ಲಿ ಗೋಡೆಗಳ ಮೇಲೆ ಕೆತ್ತಿರುವ ದೇವರ ಚಿತ್ರಗಳು ಮನಸ್ಸಿನಲ್ಲಿ ಆನಂದ ಉಂಟು ಮಾಡುತ್ತದೆ. ಪ್ರತಿದಿನ ಇಲ್ಲಿ ಕನಿಷ್ಠಪಕ್ಷ 15 ನಿಮಿಷಗಳ ಕಾಲ ಧ್ಯಾನ ಮಾಡಿದರೆ ಮನದಲ್ಲಿರುವ ನೋವು ಮತ್ತು ಬೇಸರ ಮರೆಯಾಗುತ್ತದೆ. ನಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಈ ದೇವಾಲಯವು ತಮಿಳುನಾಡಿನ ದೇವಾಲಯವನ್ನು ಹೋಲುತ್ತದೆ. ಇಲ್ಲಿಗೆ ಭೇಟಿ ನೀಡುವುದರಿಂದ ಮುಖ್ಯವಾಗಿ ತಾಯಿ ಮಕ್ಕಳ ನಡುವೆ ಇರುವ ಮನಸ್ತಾಪ ದೂರವಾಗುತ್ತವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.