ಧನುರ್ಮಾಸದ ಹುಗ್ಗಿ ನೈವೇದ್ಯ ಏಕೆ ಶ್ರೇಷ್ಠ, ಮುದ್ಗಾನ್ನ ಮಾಡುವುದು ಹೇಗೆ
ಧನುರ್ಮಾಸದ ಅವಧಿಯಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಬಹುತೇಕ ದೇವಾಲಯಗಳಲ್ಲಿ ಧನುಪೂಜೆ ನಡೆಯುತ್ತದೆ. ಮಹಾವಿಷ್ಣು, ಸುಬ್ರಹ್ಮಣ್ಯ ಮತ್ತು ಶಿವ ದೇವಾಲಯಗಳಲ್ಲಿ ಅರುಣೋದಯದ ಪೂಜೆ ವಿಶೇಷ. ಇನ್ನು ಪೂಜೆಯಲ್ಲಿ ದೇವರಿಗೆ ನೈವೇದ್ಯ ಏನು ಎಂದರೆ ಮುದ್ಗಾನ್ನವೇ ವಿಶೇಷ ಎನ್ನುತ್ತವೆ ಶಾಸ್ತ್ರಗಳು. ಯಾಕೆ ಅದರ ಮಹತ್ವ ಏನು ಇಲ್ಲಿದೆ ವಿವರಣೆ.
ಧನುರ್ಮಾಸ/ ಮಾರ್ಗಶಿರ ಮಾಸ ದೇವತೆಗಳ ಪಾಲಿನ ಅರುಣೋದಯದ ಕಾಲ. ಈ ಅವಧಿಯಲ್ಲಿ ನಿತ್ಯವೂ ಭಗವಂತನ ಆರಾಧನೆ ಮಾಡುವುದರಿಂದ 1000 ವರ್ಷದ ಪೂಜಾ ಫಲವನ್ನು ಒಂದೇ ದಿನದಲ್ಲಿ ಪಡೆಯಬಹುದೆಂಬ ನಂಬಿಕೆ ಇದೆ. ಈ ಅವಧಿಯಲ್ಲಿ ಭಗವಂತನಿಗೆ ನೈವೇದ್ಯ ಎಂದರೆ ಮುದ್ಗಾನ್ನ ಮತ್ತು ಗೊಜ್ಜು. ಮುದ್ಗಾನ್ನ ಎಂದರೆ ಹುಗ್ಗಿ. ಧನುರ್ಮಾಸದಲ್ಲಿ ಹುಗ್ಗಿ ನೈವೇದ್ಯವೇ ಏಕೆ ಶ್ರೇಷ್ಠ ಎಂಬುದಕ್ಕೆ ಇಲ್ಲಿದೆ ವಿವರ.
ಪುರಾಣ ಕಥೆಗಳಲ್ಲಿ ಒಂದು ಕಥೆಯ ಪ್ರಕಾರ, ದೇವತೆಗಳ ರಾಜ, ಸ್ವರ್ಗದ ಒಡೆಯ ಇಂದ್ರ ದೇವ ಅದೊಂದು ಕಾಲಘಟ್ಟದಲ್ಲಿ ರಾಜ್ಯ ಭ್ರಷ್ಟನಾಗಿದ್ದ. ಆಗ ಅಸುರ ಶಕ್ತಿಯ ಅಧೀನದಲ್ಲಿತ್ತು ಇಂದ್ರನ ಸಾಮ್ರಾಜ್ಯ. ತನ್ನ ಸಾಮ್ರಾಜ್ಯವನ್ನು ವಾಪಸ್ ಪಡೆಯಲು ಇಂದ್ರ ದೇವನು ಶತಪ್ರಯತ್ನ ಮಾಡುತ್ತಿದ್ದ. ಆಗ ಇಂದ್ರ ದೇವನ ಪತ್ನಿ ಇಂದ್ರಾಣಿ (ಶಚೀದೇವಿ)ಯು ಇದೇ ಧನುರ್ಮಾಸದ ಅವಧಿಯಲ್ಲಿ ಹುಗ್ಗಿ ನೈವೇದ್ಯವನ್ನು ಮಾಡಿ ಮಹಾಲಕ್ಷ್ಮೀಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು. ಈ ಪೂಜಾ ಫಲವಾಗಿ ಇಂದ್ರ ದೇವನಿಗೆ ಸ್ವರ್ಗ ಸಾಮ್ರಾಜ್ಯ ಪುನಃ ಮರಳಿ ಸಿಕ್ಕಿತು.
ಆಗ್ನೇಯ ಪುರಾಣದ ಪ್ರಕಾರ ಧನುರ್ಮಾಸದ ಪೂಜೆಯ ವಿವರಣೆ ಹಿನ್ನೆಲೆಯಲ್ಲಿ ಇಂದ್ರ ದೇವ ಪುನಃ ಸಾಮ್ರಾಜ್ಯ ಪಡೆದುಕೊಂಡ ಕಥೆಯನ್ನು ಅವಲೋಕಿಸುವುದಾದರೆ ಮುದ್ಗಾನ್ನದ ಮಹತ್ವದ ಅರಿವು ಸಿಕ್ಕೀತು.
ಕೋದಂಡಸ್ಥೇ ದಿವಾನಾಥೇ ಯೋಮುದ್ಗಾನ್ನಂ ಸಹರ್ದ್ರಕಂ
ನಿವೇದಯೇತ್ ಧರೇಸಮ್ಯಗ್‌ಜಿದ್ವಾ ಶತ್ರೂನ್ ಕ್ಷಣೇನ್ನಸಃ
ಸದದ್ಯಾರ್ದ್ರಕ ಮುದ್ಗಾನ್ನಂ ಯೋಧನುರ್ಮಾಸಿ ವಿಷ್ಣವೇ
ಸಮರ್ಪಯೇತ್ ಸದೀರ್ಘಾಯುಃ ಧನಾಢ್ಯೋ ವೇದಪಾರಗಃ
ಈ ಶ್ಲೋಕದಲ್ಲಿರುವ ಪ್ರಕಾರ, ಧನುರ್ಮಾಸದಲ್ಲಿ ದೇವರಿಗೆ ಮುದ್ಗಾನ್ನ ಅಂದರೆ ಹುಗ್ಗಿ ನೈವೇದ್ಯ ವಿಶೇಷ. ‘ಮುದ್ಗ’ ಎಂದರೆ ಹೆಸರುಬೇಳೆ. ಅಕ್ಕಿ ಜೊತೆಗೆ ಸಮಪ್ರಮಾಣದಲ್ಲಿ ಹೆಸರುಬೇಳೆ ಹಾಕಿ ಬೇಯಿಸಿದಾಗ ಮುದ್ಗಾನ್ನವೆನಿಸುತ್ತದೆ. ಇದರೊಂದಿಗೆ ಕೊಬ್ಬರಿ, ಕಾಳುಮೆಣಸುಗಳನ್ನು ಸೇರಿಸಬಹುದು. ಏಲಕ್ಕಿ, ಹಸಿ ಶುಂಠಿ, ಒಣಶುಂಠಿಯನ್ನು ಹಾಕಿ ಹುಗ್ಗಿಯನ್ನು ತಯಾರು ಮಾಡಬೇಕು. ಹುಗ್ಗಿಯ ಜೊತೆಗೆ ಬೆಲ್ಲದ ಗೊಜ್ಜು ಮತ್ತು ಮೊಸರನ್ನು ಕೂಡ ಭಗವಂತನಿಗೆ ಸಮರ್ಪಿಸಬೇಕು. ಕೆಲವರು ಮುದ್ಗಾನ್ನಕ್ಕೆ ಅಕ್ಕಿ ಜತೆಗೆ ಎರಡು ಪಟ್ಟು ಹೆಸರುಬೇಳೆ ಸೇರಿಸುತ್ತಾರೆ. ಈ ಮುದ್ಗಾನ್ನ ಅಥವಾ ಹುಗ್ಗಿಯು ಧನುರ್ಮಾಸದ ವಿಶೇಷ ನೈವೇದ್ಯ.
ಯಾರು ಈ ಹುಗ್ಗಿಯನ್ನು ದೇವರಿಗೆ ಸಮರ್ಪಿಸುತ್ತಾರೋ ಅಂಥವರ ಶತ್ರುನಾಶವಾಗುತ್ತದೆ. ನಮ್ಮ ಬದುಕಿನಲ್ಲಿರುವ ಶತ್ರುಗಳ, ಹಿತಶತ್ರುಗಳ ಕಾಟವನ್ನು ನಿವಾರಿಸುವ ಕೆಲಸ ಧನುರ್ಮಾಸದ ಪೂಜೆಯಿಂದ ಆಗುತ್ತದೆ. ನಾವು ನಮ್ಮ ಆಲಸ್ಯವೆಂಬ ಶತ್ರುವನ್ನು ಗೆದ್ದು ದೇವರ ಪೂಜೆ ನೆರವೇರಿಸುವ ಕಾರಣ, ಎಲ್ಲ ಶತ್ರುಕಾಟವೂ ನಾಶವಾಗುತ್ತದೆ. ದೀರ್ಘಾಯುಷ್ಯವನ್ನೂ, ಆರೋಗ್ಯವನ್ನೂ, ಸಾತ್ವಿಕ ಸಂಪತ್ತನ್ನೂ, ವೇದ ಸಂಪತ್ತನ್ನೂ ಒದಗಿಸುತ್ತಾನೆ. ನಿಷ್ಕಾಮವಾಗಿ ಪೂಜೆ ಸಲ್ಲಿಸುವುದರಿಂದ ಸಿಗುವ ಫಲ ಇದು.
ಇದೇ ರೀತಿ ಇನ್ನೊಂದು ಶ್ಲೋಕ ಹೀಗಿದೆ -
ಕೋದಂಡಸ್ಥೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ |
ಸಹಸ್ರವಾರ್ಷಿಕೀ ಪೂಜಾ ದಿನೇನೈಕೇನ ಸಿದ್ಧ್ಯತಿ ||
ಧನುರ್ಮಾಸದಲ್ಲಿ ಅರುಣೋದಯದಲ್ಲಿ ಹರಿಯನ್ನು ಪೂಜಿಸಿ ಹುಗ್ಗಿಯನ್ನು ನೈವೇದ್ಯವನ್ನಾಗಿ ಅರ್ಪಿಸುವವನು ಸಾವಿರ ವರ್ಷ ಪೂಜೆಯ ಫಲವನ್ನು ಒಂದು ಪೂಜೆಯಿಂದ ಪಡೆಯುತ್ತಾನೆ ಎಂಬುದು ಈ ಶ್ಲೋಕದ ತಾತ್ಪರ್ಯ.
ಇನ್ನು ಋತುವನ್ನು ಗಮನಿಸುವುದಾದರೆ ಧನುರ್ಮಾಸ ಎಂಬುದು ಹೇಮಂತ ಋತುವಿನ ಮಾಸ. ಅರ್ಥಾತ್ ಚಳಿಗಾಲ. ಈ ಅತಿ ಚಳಿಗಾಲದ ಇಬ್ಬನಿ ನಮ್ಮ ದೇಹದ ಸ್ವೇದರಂಧ್ರಗಳ ಮೂಲಕ ಒಳ ಸೇರುವಷ್ಟು ಪ್ರಭಾವಶಾಲಿ. ಚಳಿಯಲ್ಲಿ ಮುಂಜಾನೆ ಎದ್ದು ಧಾರ್ಮಿಕ ಕಾರ್ಯದಲ್ಲಿ ತೊಡಗುವವರ ಮತ್ತು ಇತರರ ಚರ್ಮದ ತೇವಾಂಶ ಒಣಗುವುದು ಸಹಜ. ಆದ ಕಾರಣ ಮೈ ಬೆಚ್ಚಗಾಗಿಸುವ ಹಾಗು ಚಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಶರೀರಕ್ಕೆ ಕೊಡುವ ಸಾತ್ತ್ವಿಕ ಆಹಾರವೇ ಹುಗ್ಗಿ ಅಥವಾ ಮುದ್ಗಾನ್ನ. ಅಕ್ಕಿ, ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನೂ ಸೇರಿಸಿ ಬೇಯಿಸಿದ ಖಾದ್ಯ ಇದು. ಚಳಿಗಾಲದ ಅವಧಿಯಲ್ಲಿ ಶರೀರದಲ್ಲಿ ಚರ್ಮ ಒಣಗುವುದನ್ನು ತಪ್ಪಿಸಲು, ಶರೀರದ ಕೊಬ್ಬಿನಂಶ ಹೆಚ್ಚಿಸುವುದಕ್ಕೆ ಈ ಆಹಾರ ಸಹಾಯಕವಾಗಿದೆ.
ಕೆಲ ಆಹಾರ ಧಾನ್ಯಗಳಲ್ಲಿ ಬೇಸಿಗೆಯಲ್ಲಿ ತಂಪು ನೀಡುವಂತೆ ಚಳಿಗಾಲದಲ್ಲಿ ಶರೀರಕ್ಕೆ ಉಷ್ಣತೆ ಒದಗಿಸುವ ಗುಣವಿದೆ. ಅಂತಹ ಒಂದು ಆಹಾರ ಧಾನ್ಯ ಹೆಸರುಬೇಳೆ. ಇದರ ಜತೆ ಉಳಿದ ಪದಾರ್ಥಗಳು ದೇಹ ಮತ್ತಷ್ಟು ಬಿಸಿ ಹಾಗೂ ಹುರುಪು ಬರಲು, ಮುಖದ ಕಾಂತಿ ಹೆಚ್ಚಿಸಲು, ಸೌಂದರ್ಯವನ್ನು ಹೆಚ್ಚಿಸಲು, ಅದೇ ರೀತಿ ಅಜೀರ್ಣ ತಡೆಯಲು ನೆರವಾಗುತ್ತವೆ. ಆದ್ದರಿಂದ ಹುಗ್ಗಿ ಚಳಿಗಾಲದ ಆಹಾರವೂ ಹೌದು.
ಮುದ್ಗಾನ್ನ ಮಾಡುವುದು ಹೇಗೆ ಎಂಬುದನ್ನು ವೀಕ್ಷಿಸಲು ಈ ಕೆಳಗಿನ ಯೂಟ್ಯೂಬ್ ವಿಡಿಯೋ ಲಿಂಕ್ ಗಮನಿಸಬಹುದು.
https://www.youtube.com/watch?v=j51IVFLr3Ys