Anushka Shetty: ಘಾಟಿ ಸಿನಿಮಾ ಬಿಡುಗಡೆ ದಿನ ಪ್ರಕಟ, ಅನುಷ್ಕಾ ಶೆಟ್ಟಿ ನಟನೆಯ ಸಿನಿಮಾ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆ
Ghaati Movie release date: ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಸಿನಿಮಾದ ಬಿಡುಗಡೆ ದಿನಾಂಕ ಇದೀಗ ಅಧಿಕೃತವಾಗಿ ಪ್ರಕಟವಾಗಿದೆ. ಮುಂದಿನ ವರ್ಷ ಈ ಸಿನಿಮಾ ಬಿಡುಗಡೆಯಾಗಲಿದೆ. ಏಪ್ರಿಲ್ 18, 2025ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.
Ghaati Movie release date: ಅನುಷ್ಕಾ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಘಾಟಿ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಈ ಸಿನಿಮಾವು ಮುಂದಿನ ವರ್ಷ ಏಪ್ರಿಲ್ 18ರಂದು ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡವು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.
ಘಾಟಿ ಸಿನಿಮಾ ಬಿಡುಗಡೆ ದಿನಾಂಕ
ಚಿತ್ರತಂಡವು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಘಾಟಿ ಸಿನಿಮಾವು ಜಗತ್ತಿನಾದ್ಯಂತ ಏಪ್ರಿಲ್ 18, 2025ರಂದು ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದೆ. "ರಾಣಿ ಮತ್ತೆ ಬಾಕ್ಸ್ ಆಫೀಸ್‌ಗೆ ಆಗಮಿಸಲಿದೆ. ಘಾಟಿ ಸಿನಿಮಾವು ಏಪ್ರಿಲ್ 18ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ರಿಲೀಸ್‌ಆಗಲಿದೆ" ಎಂದು ಎಕ್ಸ್‌ನಲ್ಲಿ ಚಿತ್ರತಂಡ ಪೋಸ್ಟ್ ಮಾಡಿದೆ
ಇದು ಅನುಷ್ಕಾ ಶೆಟ್ಟಿಯ ಬಹುನಿರೀಕ್ಷಿತ ಸಿನಿಮಾ. ಕ್ರಿಶ್ ಜಗರ್ಲಮುಡಿ ನಿರ್ದೇಶನದ ಈ ಸಿನಿಮಾ 'ಘಾಟಿ'ಯು ಸಾಕಷ್ಟು ಕಾರಣಗಳಿಂದ ನಿರೀಕ್ಷೆ ಹೆಚ್ಚಿಸಿದೆ. ಸಂಪೂರ್ಣವಾಗಿ ಹೊಸ ಅವತಾರದಲ್ಲಿ 'ಬಾಹುಬಲಿ' ನಟಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್‌ನಲ್ಲಿ ಚಿತ್ರತಂಡವು ಎಕ್ಸ್‌ನಲ್ಲಿ (ಹಳೆಯ ಟ್ವಿಟರ್) ಅನುಷ್ಕಾ ಅವರ ಶಕ್ತಿಯುತ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಆ ಸಮಯದಲ್ಲಿ ಧೂಮಪಾನ ಮಾಡುವ ರಗಡ್ ಲುಕ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು.
ಯುವಿ ಕ್ರಿಯೇಷನ್ಸ್ ನವೆಂಬರ್ ತಿಂಗಳಲ್ಲಿ ಅನುಷ್ಕಾ ಶೆಟ್ಟಿಯ ರೌದ್ರ ಮುಖದ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿತ್ತು. ನಟಿ ಹುಟ್ಟುಹಬ್ಬದ ಸಮಯದಲ್ಲಿ ಬಿಡುಗಡೆಯಾದ ಫೋಟೋ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಘಾಟಿ ಸಿನಿಮಾದಲ್ಲಿ ನಟಿಯು ಈ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯು ಸಂಚಿಗೆ ಬಲಿಯಾದವಳು, ಅಪರಾಧಿಯಾಗುವವಳು, ಅನ್ಯಾಯದ ವಿರುದ್ಧ ಹೋರಾಡಿ ಲೆಜೆಂಟ್ ಆಗುವವಳು ಎನ್ನಲಾಗಿದೆ.
ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಗರ್ಲಮುಡಿ ಜತೆಯಾಗಿ ಘಾಟಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನುಷ್ಕಾ ನಟಿಸುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. 'ಹೈ-ಆಕ್ಟೇನ್, ಆಕ್ಷನ್-ಪ್ಯಾಕ್ಡ್' ಎಂದು ಚಿತ್ರತಂಡ ಘಾಟಿಯನ್ನು ವ್ಯಾಖ್ಯಾನಿಸಿದೆ. ನಾಗವೆಲ್ಲಿ ವಿದ್ಯಾ ಸಾಗರ್ ಅವರ ಸಂಗೀತ ಸಂಯೋಜನೆ, ಮನೋಜ್ ರೆಡ್ಡಿ ಕಾಟಸಾನಿ ಛಾಯಾಗ್ರಹಣ ಮತ್ತು ತೋಟ ಥರಾಣಿ ಕಲಾ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದೀಗ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕ ಪ್ರಕಟಿಸಿರುವುದರಿಂದ ಅನುಷ್ಕಾ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.