ಐಪಿಎಲ್ 2025ರ ಆವೃತ್ತಿಗೂ ಮುನ್ನ ಆರ್‌ಸಿಬಿ ಉಳಿಸಿಕೊಳ್ಳಬಹುದಾದ ನಾಲ್ವರು ಆಟಗಾರರು; ಉಳಿದವರು ರಿಲೀಸ್
ಐಪಿಎಲ್ 2025ರ ಆವೃತ್ತಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈವರೆಗೂ ಕಪ್ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ, ಮುಂದಿನ ಆವೃತ್ತಿಗೂ ಮುನ್ನ ಯಾರನ್ನೆಲ್ಲಾ ರಿಟೈನ್ ಮಾಡಿಕೊಳ್ಳಲಿದೆ ಎಂಬ ಕುತೂಹಲ ಅಭಿಮಾನಿಗಳಿಗಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಐಪಿಎಲ್ 2024ರಲ್ಲಿ ಆರ್‌ಸಿಬಿಯ ಅಭಿಯಾನ ಅಂತ್ಯಗೊಂದಿದೆ. ಮತ್ತೊಂದು ಆವೃತ್ತಿಯಲ್ಲಿ ಕಪ್ ರಹಿತವಾಗಿ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಶೆಯಾಗಿದ್ದು, ಮುಂದಿನ ವರ್ಷ ಮತ್ತದೇ ಉತ್ಸಾಹ ಹಾಗೂ ಹುರುಪಿನೊಂದಿಗೆ ಕಂಬ್ಯಾಕ್ ಮಾಡುವ ಭರವಸೆ ಫ್ರಾಂಚೈಸಿಯದ್ದು. ಮುಂದಿನ ಆವೃತ್ತಿ, ಅಂದರೆ ಐಪಿಎಲ್ 2025ಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಫ್ರಾಂಚೈಸಿಯು ಯಾವೆಲ್ಲಾ ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ. ಮುಂದಿನ ಆವೃತ್ತಿಗೆ ಎಷ್ಟು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ರಿಟೈನಿಂಗ್ ಸಂಖ್ಯೆ ಕಡಿಮೆಯಾದರೂ, ಆರ್‌ಟಿಎಂ ಕಾರ್ಡ್ ಮೂಲಕ ಹೆಚ್ಚುವರಿ ಆಟಗಾರರ ಉಳಿಕೆಗೆ ಅವಕಾಶ ಸಿಗಬಹುದು.
ಮುಂದಿನ ಆವೃತ್ತಿಯಲ್ಲಿ ಗರಿಷ್ಠ 8 ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದ್ದರೂ, ಫ್ರಾಂಚೈಸಿಗಳು ಬಿಸಿಸಿಐ ಜತೆ ಈ ಕುರಿತು ಇನ್ನೂ ಮಾತುಕತೆ ನಡೆಸುತ್ತಿವೆ. ಹೀಗಾಗಿ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ. ಸತತ 17ನೇ ಆವೃತ್ತಿಯಲ್ಲಿಯೂ ಕಪ್ ಗೆಲುವು ಸಾಧ್ಯವಾಗದಿರುವ ಆರ್‌ಸಿಬಿ, 18ನೇ ಆವೃತ್ತಿಯಲ್ಲಿ ಉಳಿಸಿಕೊಳ್ಳಬಹುದಾದ ನಾಲ್ವರು ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ.
1. ವಿರಾಟ್ ಕೊಹ್ಲಿ (15 ಕೋಟಿ)
ನಾನು ಐಪಿಎಲ್ ಆಡಿದರೆ ಅದು ಆರ್‌ಸಿಬಿ ಪರ ಮಾತ್ರ. ಉಳಿದ ತಂಡಗಳ ಪರ ಆಡುವುದನ್ನು ನನ್ನಿಂದ ಕಲ್ಪಿಸಿಕೊಳ್ಳುವುದು ಕೂಡಾ ಅಸಾಧ್ಯ. ಫ್ರಾಂಚೈಸಿಯು ಆರಂಭದಿಂದಲೂ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದೇ ನನಗೆ ಮುಖ್ಯ ಎಂದು ಹಲವು ಬಾರಿ ವಿರಾಟ್ ಕೊಹ್ಲಿ ಹೇಳಿದ್ದರು. ಕೊಹ್ಲಿ ಏನಾದರೂ ಹರಾಜಿಗೆ ನಿಂತರೆ ಕೋಟಿ ಕೋಟಿ ಗಿಟ್ಟಿಸಿಕೊಳ್ಳುವುದು ಖಚಿತ. ಆದರೆ, ಅವರು ತಂಡ ಬಿಡುವ ಸಾಧ್ಯತೆ ಎಳ್ಳಷ್ಟೂ ಇಲ್ಲ. ವಿಶ್ವ ಕ್ರಿಕೆಟ್‌ನ ಬ್ರಾಂಡ್ ಆಗಿರುವ ವಿರಾಟ್, ಆರ್‌ಸಿಬಿ ತಂಡದ ಜನಪ್ರಿಯತೆಯಲ್ಲಿ ಪ್ರಮುಖ ಪಾಲು ಪಡೆದಿದ್ದಾರೆ. ಒಂದು ವೇಳೆ ಕೊಹ್ಲಿ ಪ್ರದರ್ಶನ ಶೂನ್ಯವಾದರೂ ತಂಡ ಇವರನ್ನು ರಿಟೈನ್ ಮಾಡಿಕೊಳ್ಳುವುದು ನೂರಕ್ಕೆ ನೂರರಷ್ಟು ಖಚಿತ. ಇನ್ನು, ಬ್ಯಾಟಿಂಗ್‌ನಲ್ಲಿ ತಂಡದ ಬೆನ್ನಲುಬಾಗಿರುವ ಅವರನ್ನು ಕೈಬಿಡಲು ಹೇಗೆ ಸಾಧ್ಯ. 2024ರ ಆವೃತ್ತಿಯಲ್ಲೀ 15 ಪಂದ್ಯ ಆಡಿರುವ ಅವರು ಬರೋಬ್ಬರಿ 741 ರನ್ ಗಳಿಸಿದ್ದಾರೆ. ಈ ಬಾರಿ ಆರೇಂಜ್ ಕ್ಯಾಪ್ ಗೆಲ್ಲುವುದು ಬಹುತೇಕ ಖಚಿತ.
2. ಮೊಹಮ್ಮದ್ ಸಿರಾಜ್ (8 ಕೋಟಿ)
2018ರಿಂದಲೂ ಆರ್‌ಸಿಬಿ ಫ್ರಾಂಚೈಸ್ ಪರ ಆಡುತ್ತಿರುವ ಮೊಹಮ್ಮದ್ ಸಿರಾಜ್, ತಂಡದ ಪ್ರಮುಖ ವೇಗಿ. ಟೀಮ್ ಇಂಡಿಯಾದ ಪ್ರಧಾನ ಬೌಲರ್ ಅನ್ನು ತಂಡವು ಕೈಬಿಡುವ ಸಾಧ್ಯತೆ ಇಲ್ಲ. ವಿರಾಟ್ ಆಪ್ತನೂ ಆಗಿರುವ ಸಿರಾಜ್, ಕಠಿಣ ಸನ್ನಿವೇಶದಲ್ಲಿ ಮಾರಕ ಬೌಲರ್ ಆಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿ ಆಡಿದ 13 ಪಂದ್ಯಗಳಲ್ಲಿ ಅವರು 13 ವಿಕೆಟ್ ಕಬಳಿಸಿದ್ದಾರೆ. ಎಕಾನಮಿ ಕೂಡಾ ಉತ್ತಮವಾಗಿದೆ. ಇವರನ್ನು ಬಿಟ್ಟುಕೊಟ್ಟರೆ ಮತ್ತೆ ಉತ್ತಮ ವೇಗಿಗಾಗಿ ದುಬಾರಿ ಬೆಲೆ ತೆರಬೇಕಾಗಬಹುದು. ಈ ಹಿಂದೆ ಯುಜ್ವೇಂದ್ರ ಚಹಾಲ್ ಮತ್ತು ಹರ್ಷಲ್ ಪಟೇಲ್ ಅವರನ್ನು ಕೈಬಿಟ್ಟು ತಂಡ ಮಾಡಿದ ಅದೇ ತಪ್ಪನ್ನು ಮತ್ತೆ ಮಾಡುವ ಸಾಧ್ಯತೆ ಇಲ್ಲ.
3. ರಜತ್ ಪಾಟೀದಾರ್ (20 ಲಕ್ಷ)
ಕಳೆದ 2 ವರ್ಷಗಳಿಂದ ಆರ್‌ಸಿಬಿ ಪರ ಅಮೋಘ ಪ್ರದರ್ಶನ ನೀಡುತ್ತಿರುವ ಪಾಟೀದಾರ್, ತಂಡದ ಪ್ರಮುಖ ಪವರ್ ಹಿಟ್ಟರ್. ಕಡಿಮೆ ಬೆಲೆ ಕೊಟ್ಟು ಇವರನ್ನು ತಂಡಕ್ಕೆ ಕರೆತಂದಿರುವ ಆರ್‌ಸಿಬಿ, ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಈ ಬಾರಿ ಟೂರ್ನಿಯ ಮೊದಲಾರ್ಧದಲ್ಲಿ ವಿಫಲರಾಗಿದ್ದರೂ, ಆ ಬಳಿಕ ಅಬ್ಬರಿಸಿದ್ದಾರೆ. 14 ಪಂದ್ಯಗಳಲ್ಲಿ 180ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಬರೋಬ್ಬರಿ 361 ರನ್ ಗಳಿಸಿದ್ದಾರೆ. ಹೀಗಾಗಿ ಪಾಟೀದಾರ್ ತಂಡದ ಪ್ರಮುಖ ರಿಟೈನರ್ ಆಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ, ದುಬಾರಿ ಬೆಲೆ ಪಡೆಯುವ ಭರವಸೆಯಿಂದ ಪಾಟೀದಾರ್ ಆರ್‌ಸಿಬಿ ತೊರೆಯುವ ಸಾಧ್ಯತೆಯೂ ಇಲ್ಲ.
4. ವಿಲ್ ಜಾಕ್ಸ್ (3.2 ಕೋಟಿ)
ಪ್ರಸಕ್ತ ಋತುವಿನಲ್ಲಿ ವಿಲ್ ಜ್ಯಾಕ್ಸ್ ಆರ್‌ಸಿಬಿಯ ಉದಯೋನ್ಮುಖ ತಾರೆಯಾಗಿ ಹೊರಹೊಮ್ಮಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ವೇಗದ ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ್ದ ವಿಲ್, ತಂಡದ ರಿಟೈನ್ ಪಟ್ಟಿಯಲ್ಲಿದ್ದಾರೆ. ಸ್ಫೋಟಕ ಆಟಗಾರನನ್ನು ಫ್ರ್ಯಾಂಚೈಸ್ ಕೈಬಿಡುವ ಸಾಧ್ಯತೆ ಇಲ್ಲ. ಈ ಋತುವಿನಲ್ಲಿ ಎಂಟು ಪಂದ್ಯಗಳಲ್ಲಿ ಆಡಿರುವ ಜಾಕ್ಸ್ 175.57ರ ಸ್ಟ್ರೈಕ್ ರೇಟ್‌ನಲ್ಲಿ 230 ರನ್ ಸಿಡಿಸಿದ್ದಾರೆ.
ಇದನ್ನೂ ಓದಿ | ಮಿತ್ರನಿಂದ ದ್ರೋಹ, ಮೊದಲ ಪತ್ನಿಯಿಂದ ಡಿವೋರ್ಸ್; ಸಾವು-ನೋವು ಗೆದ್ದ ದಿನೇಶ್ ಕಾರ್ತಿಕ್ ಎದ್ದು ನಿಂತಿದ್ದೇ ರೋಚಕ!
ಇದನ್ನೂ ಓದಿ | SRH vs RR live score IPL 2024: ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)