ಸ್ಟಾರ್ ಆಲ್‌ರೌಂಡರ್‌ ಮತ್ತು ಪರ್ಪಲ್ ಕ್ಯಾಪ್ ವಿಜೇತನ ಕೈಬಿಡಲು ಆರ್‌ಸಿಬಿಗೆ ಎಬಿಡಿ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಟಾರ್ ಆಲ್‌ರೌಂಡರ್‌ ಮತ್ತು ಪರ್ಪಲ್ ಕ್ಯಾಪ್ ವಿಜೇತನ ಕೈಬಿಡಲು ಆರ್‌ಸಿಬಿಗೆ ಎಬಿಡಿ ಸಲಹೆ

ಸ್ಟಾರ್ ಆಲ್‌ರೌಂಡರ್‌ ಮತ್ತು ಪರ್ಪಲ್ ಕ್ಯಾಪ್ ವಿಜೇತನ ಕೈಬಿಡಲು ಆರ್‌ಸಿಬಿಗೆ ಎಬಿಡಿ ಸಲಹೆ

ಮುಂಬರುವ ಐಪಿಎಲ್‌ ಆವೃತ್ತಿಗೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ. ಫ್ರಾಂಚೈಸಿಗಳು ಆಟಗಾರರ ಉಳಿಕೆ ಮತ್ತು ರಿಲೀಸ್‌ ಚಿಂತೆಯಲ್ಲಿರುವಂತೆಯೇ, ಆರ್‌ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ತಮ್ಮ ಮಾಜಿ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.

ಆರ್‌ಸಿಬಿ ತಂಡದೊಂದಿಗೆ ಎಬಿ ಡಿವಿಲಿಯರ್ಸ್
ಆರ್‌ಸಿಬಿ ತಂಡದೊಂದಿಗೆ ಎಬಿ ಡಿವಿಲಿಯರ್ಸ್ (PTI)

ಮುಂಬರುವ ಐಪಿಎಲ್‌ ಆವೃತ್ತಿಗೆ ಆಟಗಾರರ ಟ್ರೇಡಿಂಗ್‌ ಮತ್ತು ರಿಟೆನ್ಷನ್‌ ಪ್ರಕ್ರಿಯೆ ನಡೆಯುತ್ತಿರುವುದರ ನಡುವೆ, ಯಾವ ತಂಡ ಹೇಗಿರಲಿದೆ ಎಂಬ ಕುತೂಹಲ ಗರಿಗೆದರಿದೆ. ಈ ನಡುವೆ ದಕ್ಷಿಣ ಆಫ್ರಿಕಾದ ಹಾಗೂ ಆರ್‌ಸಿಬಿ (RCB) ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ (AB De Villiers), ತಮ್ಮ ಹಳೆಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.

2021ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಪರ್ಪಲ್ ಕ್ಯಾಪ್ ಗೆದ್ದಿರುವ ಹರ್ಷಲ್ ಪಟೇಲ್ ಮತ್ತು ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗಾ ಅವರನ್ನು ಫ್ರಾಂಚೈಸಿ ಕೈಬಿಡಬೇಕು ಎಂದು ಎಬಿಡಿ ಸಲಹೆ ನೀಡಿದ್ದಾರೆ. ಫ್ರಾಂಚೈಸಿಯೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ನಂಟು ಹೊಂದಿದ್ದ ಡಿವಿಲಿಯರ್ಸ್, ತಮ್ಮ ತಂಡವೆಂಬ ಪ್ರೀತಿಯೊಂದಿಗೆ ಈ ಸಲಹೆ ನೀಡಿದ್ದಾರೆ. ಈ ಇಬ್ಬರನ್ನು ರಿಲೀಸ್‌ ಮಾಡಿದರೆ, ಹರಾಜಿಗಾಗಿ ತಂಡದ ಬಳಿ ಹೆಚ್ಚು ಹಣ ಉಳಿಯುತ್ತದೆ. ಬೃಹತ್‌ ಪರ್ಸ್‌ ಹಣದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ ಎಂದು ವಿಲಿಯರ್ಸ್ ಹೇಳಿಕೊಂಡಿದ್ದಾರೆ.

ಹರ್ಷಲ್‌ ಮತ್ತು ಪಟೇಲ್‌ ಇಬ್ಬರ ಖರೀದಿಗೆ ತಂಡವು ಒಟ್ಟು 21.50 ಕೋಟಿ ರೂಪಾಯಿ ವಿನಿಯೋಗಿಸಿತ್ತು. ಉಭಯ ಆಟಗಾರರಿಗೆ ತಲಾ 10.75 ಕೋಟಿ ರೂ ನೀಡಿತ್ತು.

“ಆರ್‌ಸಿಬಿ ತಂಡವು ಹರ್ಷಲ್ ಮತ್ತು ಹಸರಂಗ ಅವರಿಗಾಗಿ ಬೃಹತ್ ಮೊತ್ತವನ್ನು ಪಾವತಿಸಿದೆ.‌ ಅವರನ್ನು ಬಿಡುಗಡೆ ಮಾಡುವುದರಿಂದ ಭಾರಿ ಮೊತ್ತ ಉಳಿಯುತ್ತದೆ. ಆಗ ತಂಡ ಎದುರು ನೋಡುತ್ತಿರುವ ಆಟಗಾರರನ್ನು ಖರೀದಿಸಲು ಸುಲಭವಾಗುತ್ತದೆ. ಹರಾಜಿನಲ್ಲಿ ಮತ್ತೆ ಈ ಇಬ್ಬರನ್ನು ಖರೀದಿಸಬಹುದು. ಆದರೆ ಅಲ್ಲೂ ಹಿನ್ನಡೆಯಾಗಬಹುದು. ಫ್ಲವರ್ ಅವರು ತಂಡದ ಆಯ್ಕೆ ಕುರಿತು ಕೆಲವು ಯೋಜನೆಗಳನ್ನು ಹೊಂದಿರುವಂತೆ ತೋರುತ್ತಿದೆ,” ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.

ಮತ್ತೊಂದೆಡೆ ಹರಾಜಿನಲ್ಲಿ ತಂಡವು ಗಮನ ಹರಿಸಬೇಕಾದ ಆಟಗಾರ ಯಾರು ಎಂಬ ಬಗ್ಗೆ ಎಬಿಡಿ ಸಲಹೆ ನೀಡಿದ್ದಾರೆ.‌ ಸದ್ಯ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭಾಗವಾಗಿರುವ ಡೆವಾಲ್ಡ್ ಬ್ರೆವಿಸ್‌ ಅವರನ್ನು ಆರ್‌ಸಿಬಿ ಖರೀಸಲು ನೋಡಬೇಕು ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

2022ರ ಐಸಿಸಿ ಅಂಡರ್‌ 19 ವಿಶ್ವಕಪ್‌ನಲ್ಲಿ ಬ್ರೆವಿಸ್ ಭಾರಿ ಜನಪ್ರಿಯರಾದರು. ಆ ಬಳಿಕ ಮುಂಬೈ ತಂಡದ ಪರ ಕೆಲ ಪಂದ್ಯಗಳಲ್ಲಿ ಆಡಿದರೂ ಅಷ್ಟೇನೂ ಮಿಂಚಲಿಲ್ಲ. ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಂಥ ಬಲಶಾಲಿ ಆಟಗಾರರನ್ನು ಹೊಂದಿರುವ ಆರ್‌ಸಿಬಿಯ ಬ್ಯಾಟಿಂಗ್ ಲೈನ್-ಅಪ್‌ಗೆ ಬ್ರೆವಿಸ್‌ ಸೇರ್ಪಡೆ ಮತ್ತಷ್ಟು ಬಲ ತುಂಬಬಹುದು ಎಂಬುದು ಎಬಿಡಿ ಅಭಿಪ್ರಾಯ.

“ಬ್ರೆವಿಸ್‌ ಆರ್‌ಸಿಬಿಗೆ ಬರುವುದನ್ನು ನಾನು ಇಷ್ಟಪಡುತ್ತೇನೆ. ಚಿನ್ನಸ್ವಾಮಿ ಪಿಚ್ ಅವರಿಗೆ ಸರಿಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ. ಮುಂಬೈ ಅವರನ್ನು ಬಿಡುಗಡೆ ಮಾಡುವ ಬಗ್ಗೆ ನನಗೆ ತಿಳಿದಿಲ್ಲ,” ಎಂದು ಡಿವಿಲಿಯರ್ಸ್‌ ಹೇಳಿದ್ದಾರೆ.

ಮುಂಬರುವ ಐಪಿಎಲ್‌ ಆವೃತ್ತಿಯ ಹರಾಜು ಪ್ರಕ್ರಿಯೆಯು ಡಿಸೆಂಬರ್ 19ರಂದು ದುಬೈನಲ್ಲಿ ನಿಗದಿಪಡಿಸಲಾಗಿದೆ. ಫ್ರಾಂಚೈಸಿಗಳು ನವೆಂಬರ್ 26ರ ಭಾನುವಾರದ ಒಳಗೆ ಆಟಗಾರರ ರಿಟೆನ್ಷನ್‌ ಪಟ್ಟಿಯನ್ನು ಬಿಡುಗಡೆ ಮಾಡಬೇಕಾಗುತ್ತದೆ.

Whats_app_banner