ಅಂಡರ್​​-19 ಏಷ್ಯಾಕಪ್ ಟೂರ್ನಿ; ಬದ್ಧವೈರಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಟೀಮ್ ಇಂಡಿಯಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂಡರ್​​-19 ಏಷ್ಯಾಕಪ್ ಟೂರ್ನಿ; ಬದ್ಧವೈರಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಟೀಮ್ ಇಂಡಿಯಾ

ಅಂಡರ್​​-19 ಏಷ್ಯಾಕಪ್ ಟೂರ್ನಿ; ಬದ್ಧವೈರಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಟೀಮ್ ಇಂಡಿಯಾ

ACC U19 Asia Cup 2023: ಅಂಡರ್​-19 ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರಾಜಯಗೊಂಡಿದೆ. 8 ವಿಕೆಟ್​ಗಳಿಂದ ಸೋಲಿನ ಕಹಿ ಅನುಭವಿಸಿದೆ.

ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಟೀಮ್ ಇಂಡಿಯಾ.
ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಟೀಮ್ ಇಂಡಿಯಾ.

ಅಂಡರ್​​-19 ಏಷ್ಯಾಕಪ್ ಟೂರ್ನಿಯಲ್ಲಿ (ACC U19 Asia Cup 2023) ಬದ್ಧವೈರಿ ಪಾಕಿಸ್ತಾನ ತಂಡದ ಎದುರು ಟೀಮ್ ಇಂಡಿಯಾ (India vs Pakistan) 8 ವಿಕೆಟ್​ಗಳಿಂದ ಪರಾಜಯ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ಎರಡನೇ ಪಂದ್ಯದಲ್ಲಿ ಮುಗ್ಗರಿಸಿದೆ. ಮತ್ತೊಂದೆಡೆ ಸತತ ಪಾಕ್ ಸತತ 2ನೇ ಗೆಲುವು ದಾಖಲಿಸಿ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೂ ಏರಿದೆ.

ದುಬೈನ ಐಸಿಸಿ ಅಕಾಡೆಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್​ ನಡೆಸಿತು. ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 259 ರನ್‌ ಗಳಿಸಿತು. ಈ ಸವಾಲಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ 2 ವಿಕೆಟ್​ ನಷ್ಟಕ್ಕೆ 47 ಓವರ್‌ಗಳಲ್ಲೇ ಗೆಲುವಿನ ನಗೆ ಬೀರಿತು.

ನಿರೀಕ್ಷಿತ ಆರಂಭ ಸಿಗಲಿಲ್ಲ

ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕಳೆದ ಪಂದ್ಯದಲ್ಲಿ ಆಲ್​ರೌಂಡ್ ಶೋ ನೀಡಿದ್ದ ಅರ್ಶಿನ್ ಕುಲ್ಕರ್ಣಿ 24 ರನ್ ಗಳಿಸಿ ನಿರಾಸೆ ಮೂಡಿಸಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರುದ್ರ ಪಟೇಲ್ 1 ರನ್​ಗೆ ಇನ್ನಿಂಗ್ಸ್ ಮುಗಿಸಿದರು. ಇದರೊಂದಿಗೆ ಪಾಕ್ ಮೇಲುಗೈ ಸಾಧಿಸಿತು.

3ನೇ ವಿಕೆಟ್​ಗೆ 93 ರನ್​ಗಳ ಜೊತೆಯಾಟ

ಈ ಹಂತದಲ್ಲಿ ಒಂದಾದ ಆರಂಭಿಕ ಆಟಗಾರ ಆದರ್ಶ್​ ಸಿಂಗ್ ಮತ್ತು ನಾಯಕ ಉದಯ್ ಸಹರನ್ 3ನೇ ವಿಕೆಟ್​ಗೆ 93 ರನ್​ಗಳ ಜೊತೆಯಾಟ ಆಡಿದರು. ಅಲ್ಲದೆ, ತಲಾ ಅರ್ಧಶತಕ ಸಿಡಿಸಿದರು. ಆದರ್ಶ್​ 62 ರನ್, ಉದಯ್ 60 ರನ್ ಸಿಡಿಸಿ ಔಟಾದರು. ಪಾಕ್​ ಬೌಲರ್​​ಗಳು ಮತ್ತೊಮ್ಮೆ ಹಿಡಿತ ಸಾಧಿಸಿ ಭಾರತದ ರನ್​ ವೇಗಕ್ಕೆ ಕಡಿವಾಣ ಹಾಕಿದರು.

ಸಚಿನ್ ದಾಸ್​ ಅದ್ಭುತ ಆಟ

ಮುಶೀರ್ ಖಾನ್ 2 ಮತ್ತು ಅರವೆಲ್ಲಿ ಅವನೀಶ್ 11 ರನ್ ಗಳಿಸಿ ಬೇಗನೇ ನಿರ್ಗಮಿಸಿದರು. ಇದರಿಂದ ಭಾರತ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತು. ಆದರೆ ಸಚಿನ್ ದಾಸ್ (58) ಅದ್ಭುತ ಆಟವಾಡಿ ಈ ಆತಂಕವನ್ನು ದೂರ ಮಾಡಿ ತಂಡದ ಮೊತ್ತವನ್ನು 250 ದಾಟಲು ನೆರವಾದರು. ಅರ್ಧಶತಕ ಸಿಡಿಸಿ ಗಮನ ಸೆಳೆದರು. ಮುರುಗನ್ ಅಭಿಷೇಕ್ (4), ರಾಜ್ ಲಿಂಬಾನಿ (7) ಯಾರೂ ಸಾಥ್ ನೀಡಲಿಲ್ಲ.

ಭಾರತ 259/9

ಸೌಮಿ ಪಾಂಡೆ ಅಜೇಯ 8 ರನ್, ನಮನ್ ತಿವಾರಿ ಅಜೇಯ 2 ರನ್ ಗಳಿಸಿದರು. ಅಂತಿಮವಾಗಿ ಭಾರತ 50 ಓವರ್​​ಗಳಿಗೆ 9 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು. ಪಾಕಿಸ್ತಾನದ ಪರ ಅಮೀರ್ ಹಸನ್, ಉಬೈದ್ ಶಾ ತಲಾ 2 ವಿಕೆಟ್, ಮೊಹಮ್ಮದ್ ಜೀಶಾನ್ 4 ವಿಕೆಟ್, ಅರಾಫತ್ ಮಿನ್ಹಾಸ್ 1 ವಿಕೆಟ್ ಉರುಳಿಸಿ ಮಿಂಚಿದರು.

ಅಜಾನ್ ಅವೈಸ್ ಶತಕ

260 ರನ್​ಗಳ ಗುರಿ ಬೆನ್ನಟ್ಟಿದ ಪಾಕ್​ಗೆ ಉತ್ತಮ ಆರಂಭ ಸಿಗಲಿಲ್ಲ. ಶಾಮಿಲ್ ಹುಸೇನ್ 8 ರನ್ ಗಳಿಸಿ ಬೇಗನೇ ಔಟಾದರು. ಆದರೆ ಆ ಬಳಿಕ ಭಾರತ ಬೌಲರ್​​ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲು ವಿಫಲವಾದರು. ಶಹಜೈಬ್ ಖಾನ್ 63 ರನ್ ಸಿಡಿಸಿ ಕಂಟಕವಾದರು. ಶಹಜೈಬ್ ಖಾನ್ ಔಟಾದರೂ ಅಜಾನ್ ಅವೈಸ್ ಶತಕ ಸಿಡಿಸಿ ಭಾರತದ ಗೆಲುವನ್ನು ಕಸಿದುಕೊಂಡರು. ಮತ್ತೊಂದೆಡೆ ಸಾದ್ ಬೇಗ್ ಸಹ ಅಜೇಯ 68 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನೂ 3 ಓವರ್​​ಗಳು ಬಾಕಿ ಇರುವಂತೆಯೇ ಗೆದ್ದು ಬೀಗಿದರು.

Whats_app_banner