ಯಶಸ್ವಿ ಶತಕದೊಂದಿಗೆ ಭರ್ಜರಿಯಾಗಿ ಫಾರ್ಮ್‌ಗೆ ಮರಳಿದ ಜೈಸ್ವಾಲ್; ರಾಜಸ್ಥಾನಕ್ಕೆ ಮತ್ತೊಂದು ರಾಯಲ್ ಗೆಲುವು
ಐಪಿಎಲ್ 2024ರಲ್ಲಿ ಫಾರ್ಮ್ ಸಮಸ್ಯೆಯಿಂದಾಗಿ ರನ್ ಕಲೆ ಹಾಕಲು ಪರದಾಡುತ್ತಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಕೊನೆಗೂ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ, ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ 2024ರಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ತವರಿನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ 9 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಬೌಲಿಂಗ್‌ನಲ್ಲಿ ಸಂದೀಪ್ ಶರ್ಮಾ 5 ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕದ ನೆರವಿನಿಂದ ಟೂರ್ನಿಯಲ್ಲಿ ಆರ್‌ಆರ್ 7ನೇ ಗೆಲುವನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಅತ್ತ ಐದನೇ ಸೋಲು ಕಂಡ ಮುಂಬೈ ಪ್ಳೇ ಆಫ್ ಹಂತಕ್ಕೆ ಅರ್ಹತೆ ಪಡೆಯುವ ಅವಕಾಶ ಕೈ ಜಾರುತ್ತಾ ಸಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಲೆಕ್ಕಾಚಾರ ಫಲ ಕೊಡಲಿಲ್ಲ. ಮಾಜಿ ಚಾಂಪಿಯನ್ ತಂಡ 179 ರನ್ ಗಳಿಸಿ ರಾಜಸ್ಥಾನಕ್ಕೆ 180 ರನ್‌ಗಳ ಗುರಿ ನೀಡಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ರಾಜಸ್ಥಾನ, ಜೈಸ್ವಾಲ್ ಶತಕದೊಂದಿಗೆ 18.4 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿ ಗುರಿ ತಲುಪಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ ಡಕೌಡ್ ಆದರು. ನಂಬರ್ ವನ್ ಟಿ20 ಬ್ಯಾಟರ್ ಸೂರ್ಯಕುಮಾರ್ ಆಟ 10 ರನ್‌ಗಳಿಗೆ ಅಂತ್ಯವಾಯ್ತು. ಆರಂಭದಲ್ಲೇ ರಾಜಸ್ಥಾನ್ ಭಾರಿ ಮುನ್ನಡೆ ಸಾಧಿಸಿತು. ಈ ವೇಳೆ ಮೈದಾನಕ್ಕಿಳಿದ ಅಫ್ಘನ್ ಆಲ್‌ರೌಂಡರ್ ನಬಿ, ಕೆಲಕಾಲ ಬ್ಯಾಟ್ ಬೀಸಿ 23 ರನ್ ಸಿಡಿಸಿದರು. ತಂಡವು 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಒಂದಾದ ತಿಲಕ್ ವರ್ಮಾ ಹಾಗೂ ನೆಹಾಲ್ ವಧೇರಾ ಆಕರ್ಷಕ ಜೊತೆಯಾಟವಾಡಿದರು.
9 ರನ್ ಜೊತೆಯಾಟ
ಉಭಯ ಆಟಗಾರರು ದೊಡ್ಡ ಹೊಡೆತಗಳೊಂದಿಗೆ ತಂಡದ ಮೊತ್ತ ಹೆಚ್ಚಿಸಿದರು. ವಿಕೆಟ್ ಉಳಿಸಿಕೊಂಡು ಜವಾಬ್ದಾರಿಯುತ ಆಟವಾಡಿದರು. ಈ ನಡುವೆ ತಿಲಕ್ ಅರ್ಧಶತಕ ಪೂರೈಸಿದರು. ಅತ್ತ ಅರ್ಧಶತಕದ ಅಂಚಿನಲ್ಲಿ ವಧೇರಾ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲೇ ಇವರಿಬ್ಬರ ಬ್ಯಾಟ್‌ನಿಂದ 99 ರನ್‌ಗಳ ಅಮೂಲ್ಯ ಜೊತೆಯಾಟ ಬಂದಿತ್ತು. ಇವರ ಬಳಿಕ ಯಾರೂ ಅಬ್ಬರಿಸಲಿಲ್ಲ. ನಾಯಕ ಹಾರ್ದಿಕ್ ಆಟ ಕೂಡಾ 10 ರನ್‌ಗಳಿಗೆ ಅಂತ್ಯವಾಯ್ತು. ಅಂತಿಮವಾಗಿ ಎಂಐ 9 ವಿಕೆಟ್ ಕಳೆದುಕೊಂಡು 179 ರನ್ ಕಲೆ ಹಾಕಿತು.
5 ವಿಕೆಟ್ ಕಬಳಿಸಿದ ಸಂದೀಪ್ ಶರ್ಮಾ
ರಾಜಸ್ಥಾನ ಪರ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಸಂದೀಪ್ ಶರ್ಮಾ, ಕೇವಲ 18 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿದರು. ಗಾಯದಿಂದಾಗಿ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ಅವರು, ತಂಡಕ್ಕೆ ಮರಳುತ್ತಿದ್ದಂತೆಯೇ ಈ ಸೀಸನ್‌ನ ಅತ್ಯುತ್ತಮ ಅಂಕಿ ಅಂಶ ದಾಖಲಿಸಿದರು.
ಇದನ್ನೂ ಓದಿ | ಕೆಕೆಆರ್ ವಿರುದ್ಧ ಆರ್‌ಸಿಬಿಯ 1 ರನ್ ಸೋಲಿಗೆ ಅಂಪೈರ್‌ಗಳು ಕಾರಣವೇ? ಸುಯಾಶ್ ಸಿಡಿಸಿದ್ದು ಸಿಕ್ಸರ್ ಎಂಬ ಫ್ಯಾನ್ಸ್ ವಾದಕ್ಕೆ ಕಾರಣವಿದು
ಮುಂಬೈ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ರಾಜಸ್ಥಾನ, ಆರಂಭದಿಂದಲೇ ವೇಗದ ಆಟಕ್ಕೆ ಮಣೆ ಹಾಕಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಜಾಸ್ ಬಟ್ಲರ್ ಅರ್ಧಶತಕದ ಜೊತೆಯಾಟವಾಡಿದರು. ಪವರ್‌ಪ್ಲೇ ಅಂತ್ಯವಾಗುತ್ತಿದ್ದಂತೆಯೇ ಮಳೆ ಬಂದು ಕೆಲಕಾಲ ಪಂದ್ಯದಲ್ಲಿ ವಿಳಂಬವಾಯ್ತು. ಮತ್ತೆ ಬ್ಯಾಟಿಂಗ್ ಮುಂದುವರೆಸಿದ ಬಟ್ಲರ್, 35 ರನ್ ಗಳಿಸಿದ್ದಾಗ ಚಾವ್ಲಾ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು.
ಈ ವೇಳೆ ಜೈಸ್ವಾಲ್ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಮತ್ತೊಂದು ಅಮೋಘ ಜೊತೆಯಾಟ ಕಟ್ಟಿದರು. ಮತ್ತೆ ತಂಡದ ರನ್ ವೇಗ ಹೆಚ್ಚಿತು. ಅಬ್ಬರದಾಟವಾಡಿದ ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ಎರಡನೇ ಶತಕ ಸಿಡಿಸಿದರು. ಇದರೊಂದಿಗೆ ಭರ್ಜರಿಯಾಗಿ ಫಾರ್ಮ್‌ಗೆ ಮರಳಿ, ಟಿ20 ವಿಶ್ವಕಪ್‌ಗೆ ಆಯ್ಕೆಯಾಗಲು ತಾನು ಸಿದ್ದ ಎಂಬ ಸೂಚನೆ ಕೊಟ್ಟರು.