ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಸೇಲಾದ ಕಮಿನ್ಸ್; ಸ್ಯಾಮ್ ಕರನ್ ಹಿಂದಿಕ್ಕಿ 20.50 ಕೋಟಿ ಪಡೆದ ಆಸೀಸ್ ನಾಯಕ
Pat Cummins: ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಐಪಿಎಲ್ ಇತಿಹಾಸದಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಪಾಲಾಗುವ ಮೂಲಕ ಐಪಿಎಲ್ ಹರಾಜಿನ ದಾಖಲೆಗಳನ್ನು ಧೂಳೀಪಟಗೊಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡದ ನಾಯಕ ಮತ್ತು ಏಕದಿನ ವಿಶ್ವಕಪ್ ವಿಜೇತ ಪ್ಯಾಟ್ ಕಮಿನ್ಸ್ (Pat Cummins) ಐಪಿಎಲ್ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದಾಖಲೆಯ ಮೊತ್ತ 20.50 ಕೋಟಿಗೆ ಖರೀದಿಯಾಗುವ ಮೂಲಕ ಇಂಗ್ಲೆಂಡ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಸ್ಯಾಮ್ ಕರನ್ (Sam Curran) ಪಡೆದಿದ್ದ 18.50 ಕೋಟಿ ದಾಖಲೆಯನ್ನು ಮುರಿದಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿದ್ದ ಕಮಿನ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 20.50 ಕೋಟಿ ನೀಡಿ ಸನ್ರೈಸರ್ಸ್ ಹೈದರಾಬಾದ್ ತಮ್ಮ ಬುಟ್ಟಿಗೆ ಹಾಕಿಕೊಂಡಿದೆ. ಏಕದಿನ ವಿಶ್ವಕಪ್ ನಾಯಕನ ಖರೀದಿಗೆ ನಾಲ್ಕು ತಂಡಗಳು ಮುಗಿಬಿದ್ದವು.
ಆರ್ಸಿಬಿಗೆ ಇಲ್ಲೂ ವಿರೋಚಿತ ಸೋಲು
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಖರೀದಿಗೆ ಒಟ್ಟು ನಾಲ್ಕು ತಂಡಗಳ ನಡುವೆ ಪೈಟೋಟಿ ನಡೆಸಿತು. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿತು. ಒಂದು ಹಂತದವರೆಗೂ ಹೋರಾಟ ನಡೆಸಿದ ಸಿಎಸ್ಕೆ ಮತ್ತು ಮುಂಬೈ ಬಳಿಕ ಬಿಡ್ನಿಂದ ಹಿಂದೆ ಸರಿದವು.
ಆದರೆ, ಆರ್ಸಿಬಿ ಮತ್ತು ಎಸ್ಆರ್ಎಚ್ ಫ್ರಾಂಚೈಸಿಗಳು ತಾ ಮುಂದು ನಾ ಮುಂದು ಎಂದು ಜಿದ್ದಿಗೆ ಬಿದ್ದವು. ಅಚ್ಚರಿ ಅಂದರೆ 23.25 ಕೋಟಿ ಪರ್ಸ್ ಹೊಂದಿದ್ದ ಆರ್ಸಿಬಿ, 20.25 ಕೋಟಿಯವರೆಗೂ ಬಿಡ್ ನಡೆಸಿ ಇಲ್ಲೂ ವಿರೋಚಿತ ಸೋಲನುಭವಿಸಿತು. ಕೊನೆಯ ಹಂತದವರೆಗೂ ಹೋರಾಡಿ ಬಿಡ್ನಿಂದ ಹಿಂದೆ ಸರಿಯಿತು.
ನಾಯಕನಾಗುವ ಸಾಧ್ಯತೆ?
ಪ್ಯಾಟ್ ಕಮಿನ್ಸ್ ಅವರನ್ನು ಖರೀದಿಸಿದ್ದರ ಹಿಂದಿರುವ ಉದ್ದೇಶ ಎಸ್ಆರ್ಎಚ್ ಕ್ಯಾಪ್ಟನ್ ಮಾಡುವ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ. ಈಗಿರುವ ಏಡನ್ ಮಾರ್ಕ್ರಮ್ ಅವರನ್ನು ಕೆಳಗಿಳಿಸಿ ವಿಶ್ವಕಪ್ ಗೆದ್ದ ಆಟಗಾರನಿಗೆ ತಂಡದ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಕೆಕೆಆರ್ ಪರ ಆಡಿದ್ದ ಕಮಿನ್ಸ್
ವೇಗದ ಬೌಲರ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಭಾಗವಾಗಿದ್ದರು. ಕೆಕೆಆರ್ 2020ರ ಹರಾಜಿನಲ್ಲಿ 15.5 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. 2 ಆವೃತ್ತಿಗಳ ನಂತರ ಮತ್ತೆ 7.25 ಕೋಟಿ ನೀಡಿ ಫ್ರಾಂಚೈಸಿ ಮತ್ತೆ ಖರೀದಿಸಿತ್ತು.
ಐಪಿಎಲ್‌ನಲ್ಲಿ ಆಸೀಸ್ ನಾಯಕನ ಪ್ರದರ್ಶನ
2022ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಪರ ಕಮಿನ್ಸ್ ಅವರು 14 ಎಸೆತಗಳಲ್ಲಿ ಅರ್ಧಶತಕ ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಜಂಟಿ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದರು. ಅದಕ್ಕೂ ಮುನ್ನ ಕೆಎಲ್ ರಾಹುಲ್ ಅವರು 14 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ್ದರು. ಐಪಿಎಲ್‌ನಲ್ಲಿ 42 ಪಂದ್ಯಗಳಲ್ಲಿ ಕಮಿನ್ಸ್ 8.54 ಎಕಾನಮಿಯಲ್ಲಿ 45 ವಿಕೆಟ್ ಪಡೆದಿದ್ದಾರೆ.
ಎರಡು ಐಸಿಸಿ ಟ್ರೋಫಿ ಗೆದ್ದ ಕಮಿನ್ಸ್
ಜೂನ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಟ್ಟಿದ್ದ ಕಮಿನ್ಸ್, ಇಂಗ್ಲೆಂಡ್‌ನಲ್ಲಿ ಆಶಸ್ ಸರಣಿಯನ್ನು ಉಳಿಸಿಕೊಂಡಿದ್ದರು. ನಂತರ ಭಾರತದ ವಿರುದ್ಧ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ದಾಖಲೆಯ 6ನೇ ವಿಶ್ವಕಪ್ ಗೆದ್ದುಕೊಟ್ಟರು. ಇದೇ ಕಾರಣಕ್ಕೆ ಅವರ ಮೇಲೆ 20.50 ಕೋಟಿ ಸುರಿಯಲು ಕಾರಣವಾಗಿದೆ.