99 ರನ್ನಿಂದ ಶತಕ ವಂಚಿತರಾದ ಬಾಬರ್ ಅಜಮ್; 1 ರನ್ ಗಳಿಸಿ ಔಟಾದ ಪಾಕ್ ಮಾಜಿ ನಾಯಕ ಫುಲ್ ಟ್ರೋಲ್
Babar Azam: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟಾದ ಪಾಕಿಸ್ತಾನ ತಂಡ ಮಾಜಿ ನಾಯಕ ಬಾಬರ್ ಅಜಮ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಮೆಲ್ಬರ್ನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ (Australia vs Pakistan) ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ (Babar Azam) ಮತ್ತೆ ವೈಫಲ್ಯ ಅನುಭವಿಸಿದ್ದಾರೆ. ಮೊದಲ ಟೆಸ್ಟ್ನಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಬಾಬರ್, 2ನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಾಬರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿ ರುಬ್ಬುತ್ತಿದ್ದಾರೆ. 99 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕ್, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಪರಿಣಾಮ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 314 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕ್, ಮತ್ತೆ ಕಳಪೆ ನಿರಾಸೆ ಮೂಡಿಸಿತು. 264 ರನ್ಗೆ ಸರ್ವಪತನ ಕಂಡು 54 ರನ್ಗಳ ಹಿನ್ನಡೆ ಅನುಭವಿಸಿತು. ಈಗ ಆಸೀಸ್ 2ನೇ ಇನ್ನಿಂಗ್ಸ್ನಲ್ಲಿ 54 ರನ್ಗಳ ಮುನ್ನಡೆಯಿಂದ 6 ವಿಕೆಟ್ಗೆ 241 ರನ್ ಗಳಿಸಿದೆ. ನಾಲ್ಕನೇ ದಿನವೂ ಬ್ಯಾಟಿಂಗ್ ಮುಂದುವರೆಸಲಿದೆ.
ಬಾಬರ್ ಹೀನಾಯ ಪ್ರದರ್ಶನ
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ನಾಯಕನಾಗಿ ವೈಫಲ್ಯ ಅನುಭವಿಸಿದ ಕಾರಣ 3 ಸ್ವರೂಪದ ಕ್ರಿಕೆಟ್ ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಇನ್ಮುಂದೆ ಒತ್ತಡ ಮುಕ್ತರಾಗಿ ಬ್ಯಾಟಿಂಗ್ ನಡೆಸಲಿದ್ದು, ಲಯಕ್ಕೆ ಮರಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಮಾಜಿ ಕ್ರಿಕೆಟರ್ಸ್ ಸಹ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಮತ್ತದೇ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಅಲ್ಲದೆ, ಟೀಕೆಗೂ ಒಳಗಾಗಿದ್ದಾರೆ. ಅದರಲ್ಲೂ ಕೊಹ್ಲಿಗೆ ಹೋಲಿಸಿದ್ದ ಕಾರಣ ವಿರಾಟ್ ಅಭಿಮಾನಿಗಳು ಇದೇ ನೆಪವನ್ನಿಟ್ಟುಕೊಟ್ಟು ಟ್ರೋಲ್ ಮಾಡುತ್ತಿ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ ಬಾಬರ್ ಕೇವಲ 1 ರನ್ ಗಳಿಸಿ ಔಟಾದರು. ಏಳು ಎಸೆತಗಳನ್ನು ಎದುರಿಸಿದ ಬಾಬರ್, ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಇನ್ನೂ ಆಡದ ಎರಡನೇ ಇನ್ನಿಂಗ್ಸ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ 21 ರನ್ಗಳಿಗೆ ಔಟ್ ಆಗಿದ್ದ ಬಾಬರ್, ಎರಡನೇ ಇನ್ನಿಂಗ್ಸ್ನಲ್ಲಿ 14 ರನ್ ಗಳಿಗೆ ಆಟ ಮುಗಿಸಿದ್ದರು.
99 ರನ್ಗಳಿಂದ ಶತಕ ಮಿಸ್ ಎಂದ ನೆಟ್ಟಿಗರು
ಬಾಬರ್ ಅವರನ್ನು ವಿರಾಟ್ ಕೊಹ್ಲಿ ಆಟಕ್ಕೆ ಹೋಲಿಸಲಾಗಿತ್ತು. ಶತಕಗಳಲ್ಲಿ ಕೊಹ್ಲಿ ದಾಖಲೆಯನ್ನು ಮುರಿಯುತ್ತಾರೆ ಎಂದು ಹೇಳಲಾಗಿತ್ತು. ಕೆಲ ಮಾಜಿ ಕ್ರಿಕೆಟರ್ಸ್ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದೀಗ 1 ರನ್ನಿಗೆ ಔಟ್ ಆಗುತ್ತಿದ್ದಂತೆ ಬಾಬರ್ರನ್ನು ಟ್ರೋಲ್ ಮಾಡಲಾಗುತ್ತಿದೆ. 99 ರನ್ಗಳಿಂದ ಶತಕ ವಂಚಿತರಾದರು ಎಂದು ವ್ಯಂಗ್ಯವಾಗಿ ರುಬ್ಬುತ್ತಿದ್ದಾರೆ. ಇದು ಬಾಬರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.