Explainer: ಇನ್ನಿಂಗ್ಸ್ ಫಾಲೊ-ಆನ್ ತಪ್ಪಿಸಲು 246 ರನ್ ಗಳಿಸಲೇಬೇಕಾದ ಒತ್ತಡದಲ್ಲಿ ಭಾರತ; ಏನಿದು ನಿಯಮ?
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಇನ್ನಿಂಗ್ಸ್ ಫಾಲೊ-ಆನ್ ತಪ್ಪಿಸಲು 246 ರನ್ ಗಳಿಸಲೇಬೇಕಾದ ಒತ್ತಡದಲ್ಲಿ ಭಾರತ; ಏನಿದು ನಿಯಮ?

Explainer: ಇನ್ನಿಂಗ್ಸ್ ಫಾಲೊ-ಆನ್ ತಪ್ಪಿಸಲು 246 ರನ್ ಗಳಿಸಲೇಬೇಕಾದ ಒತ್ತಡದಲ್ಲಿ ಭಾರತ; ಏನಿದು ನಿಯಮ?

Follow-on rule: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡ ಕನಿಷ್ಠ 246 ರನ್ ಗಳಿಸಬೇಕಾದ ಒತ್ತಡದಲ್ಲಿದೆ. ಇಲ್ಲವಾದಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಇನ್ನಿಂಗ್ಸ್‌ ಫಾಲೊ-ಆನ್‌ ಮಾಡಲು ಹೇಳಬಹುದು. ಈ ನಿಯಮದ ವಿವರ ಇಲ್ಲಿದೆ.

ಇನ್ನಿಂಗ್ಸ್ ಫಾಲೊ-ಆನ್ ತಪ್ಪಿಸಲು 246 ರನ್ ಗಳಿಸಲೇಬೇಕಾದ ಒತ್ತಡದಲ್ಲಿ ಭಾರತ; ಏನಿದು ನಿಯಮ?
ಇನ್ನಿಂಗ್ಸ್ ಫಾಲೊ-ಆನ್ ತಪ್ಪಿಸಲು 246 ರನ್ ಗಳಿಸಲೇಬೇಕಾದ ಒತ್ತಡದಲ್ಲಿ ಭಾರತ; ಏನಿದು ನಿಯಮ?

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ (Australia vs India) ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡುತ್ತಿದೆ. ಮಳೆ ಕಾಟದಿಂದ ಪಂದ್ಯ ಅಲ್ಲಲ್ಲಿ ವಿಳಂಬವಾದರೂ, ಟೀಮ್‌ ಇಂಡಿಯಾ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದೆ. ಒಂದು ವೇಳೆ ಮೊದಲ ಇನ್ನಿಂಗ್ಸ್‌ನಲ್ಲಿ ಬೇಗನೆ ಆಲೌಟ್‌ ಆದರೆ, ಫಾಲೊ-ಆನ್‌ ಎದುರಿಸುವ ಸಾಧ್ಯತೆ ಇದೆ. ಅಲ್ಲದೆ ಪಂದ್ಯದಲ್ಲಿ ಸೋಲುವ ಭೀತಿಯೂ ಇದೆ. ಹಾಗಿದ್ದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಫಾಲೊ-ಆನ್‌ (Follow-on rule) ಎಂದರೇನು? ಅದರ ನಿಯಮಗಳೇನು? ಭಾರತ ಫಾಲೊ-ಆನ್‌ ಎದುರಿಸುವುದನ್ನು ತಪ್ಪಿಸಲು ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಎಷ್ಟು ರನ್‌ ಗಳಿಸಬೇಕು ಎಂಬುದನ್ನು ನೋಡೋಣ.

ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟ ನಡೆಯುತ್ತಿದೆ. ಪದೇ ಪದೇ ಮಳೆ ಅಡ್ಡಿ ನಡುವೆ, ಭಾರತ ತಂಡ 51.5 ಓವರ್‌ ವೇಳೆಗೆ ತಂಡ 6 ವಿಕೆಟ್‌ ಕಳೆದುಕೊಂಡು 180 ರನ್‌ ಗಳಿಸಿದೆ. ಮಳೆಯಿಂದಾಗಿ ಪಂದ್ಯ ನಿಂತಿದೆ. ಇದೀಗ ಭಾರತ ತಂಡ ಫಾಲೊ-ಆನ್ ತಪ್ಪಿಸಬೇಕಾದರೆ, ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 246 ರನ್‌ ಗಳಿಸಬೇಕು. ಸದ್ಯ ನಿತೀಶ್‌ ರೆಡ್ಡಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ ಮಾಡುತ್ತಿದ್ದು, ಇಬ್ಬರ ಮೇಲೆ ದೊಡ್ಡ ಜವಾಬ್ದಾರಿಯಿದೆ.

ಭಾರತ ಫಾಲೊ-ಆನ್‌ ತಪ್ಪಿಸಬೇಕಾದರೆ, ಇಲ್ಲಿಂದ ಕನಿಷ್ಠ 66 ರನ್‌ ಗಳಿಸಲೇಬೇಕು. ಅಂದರೆ 246 ರನ್‌ ಗಡಿ ದಾಟಬೇಕು. ಎರಡನೇ ದಿನದಾಟಕ್ಕೆ ಮತ್ತೆ ಮಳೆ ಅಡ್ಡಿಪಡಿಸುತ್ತಿದ್ದು, ಮಳೆಯಿಂದಾಗಿ ದಿನದಾಟ ಪೂರ್ತಿ ನಡೆಯುತ್ತಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ 445 ರನ್‌ ಗಳಿಸಿದೆ. ಹಾಗಿದ್ದರೂ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 246 ರನ್‌ ಗಳಿಸಲೇಬೇಕು ಎನ್ನಲು ಕಾರಣವಿದೆ. ಅದುವೇ ಫಾಲೊ-ಆನ್‌ ನಿಯಮ.

ಏನಿದು ಫಾಲೊ-ಆನ್‌ ನಿಯಮ?

ಎಂಸಿಸಿ ಕಾನೂನು 14.1.1 ರ ಪ್ರಕಾರ, “5 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ತಲಾ ಎರಡು ಇನ್ನಿಂಗ್ಸ್ ಟೆಸ್ಟ್‌ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಕನಿಷ್ಠ 200 ರನ್‌ಗಳಿಂದ ಮುನ್ನಡೆ ಸಾಧಿಸಿದರೆ, ಎದುರಾಳಿ ತಂಡಕ್ಕೆ ಅದರ ಇನ್ನಿಂಗ್ಸ್ ಅನ್ನು ಅನುಸರಿಸಲು (ಫಾಲೊ-ಆನ್)‌ ಹೇಳುವ ಆಯ್ಕೆ ಹೊಂದಿರುತ್ತದೆ.”

ಈ ಪಂದ್ಯದಲ್ಲಿ ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್ ಗಳಿಸದಿದ್ದರೆ, ಆಸ್ಟ್ರೇಲಿಯಾ ತಂಡವು ಭಾರತವನ್ನು ಮತ್ತೆ ಬ್ಯಾಟಿಂಗ್ ಮಾಡಲು ಹೇಳುವ ಅವಕಾಶ ಪಡೆಯುತ್ತದೆ. ಅಂದರೆ, ಭಾರತವು ಮೊದಲ ಇನ್ನಿಂಗ್ಸ್‌ ಮುಗಿಸಿದ ಬೆನ್ನಲ್ಲೇ ಮತ್ತೆ ಎರಡನೇ ಇನ್ನಿಂಗ್ಸ್‌ ಆರಂಭಿಸಬೇಕು. ಆಗಲೂ ಭಾರತ ತಂಡ ಆಸ್ಟ್ರೇಲಿಯಾ ನೀಡಿದ ಮೊದಲ ಇನ್ನಿಂಗ್ಸ್‌ ಗುರಿ ತಲುಪಲು ಸಾಧ್ಯವಾಗದಿದ್ದರೆ, ತಂಡ ಇನ್ನಿಂಗ್ಸ್‌ ಗೆಲುವು ತನ್ನದಾಗಿಸುತ್ತದೆ. ಒಂದು ವೇಳೆ ಬ್ಯಾಟಿಂಗ್ ಮಾಡಿ ಲೀಡ್‌ ಪಡೆದುಕೊಂಡರೆ, ಕಾಂಗರೂಗಳು ಆ ಮೊತ್ತವನ್ನು ಚೇಸಿಂಗ್‌ ಮಾಡಬೇಕಾಗುತ್ತದೆ.

ಭಾರತ ತಂಡವು ಸದ್ಯ ಫಾಲೊ-ಆನ್ ತಪ್ಪಿಸುವ ಪ್ರಯತ್ನ ಮಾಡಬೇಕಾಗಿದೆ. ಆಗ ಪಂದ್ಯವನ್ನು ಕನಿಷ್ಠ ಡ್ರಾ ಮಾಡುವ ಪ್ರಯತ್ನ ನಡೆಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಸಮಯ ಕೂಡಾ ಕಡಿಮೆ ಇರುವುದರಿಂದ ಭಾರತ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಇದೆ.

Whats_app_banner