ಅದೇ ಸ್ಟೈಲ್, ಅದೇ ವೇಗ; ಜಸ್ಪ್ರೀತ್ ಬುಮ್ರಾರಂತೆ ಬೌಲಿಂಗ್ ಮಾಡ್ತಾಳೆ ಬೆಂಗಳೂರು ಶಾಲೆಯ ಹುಡುಗಿ -Video
ಕನ್ನಡ ಸುದ್ದಿ  /  ಕ್ರಿಕೆಟ್  /  ಅದೇ ಸ್ಟೈಲ್, ಅದೇ ವೇಗ; ಜಸ್ಪ್ರೀತ್ ಬುಮ್ರಾರಂತೆ ಬೌಲಿಂಗ್ ಮಾಡ್ತಾಳೆ ಬೆಂಗಳೂರು ಶಾಲೆಯ ಹುಡುಗಿ -Video

ಅದೇ ಸ್ಟೈಲ್, ಅದೇ ವೇಗ; ಜಸ್ಪ್ರೀತ್ ಬುಮ್ರಾರಂತೆ ಬೌಲಿಂಗ್ ಮಾಡ್ತಾಳೆ ಬೆಂಗಳೂರು ಶಾಲೆಯ ಹುಡುಗಿ -Video

ವೇಗದ ಬೌಲಿಂಗ್‌ನಲ್ಲಿ ಜಸ್ಪ್ರೀತ್‌ ಬುಮ್ರಾ ಅವರ ಶೈಲಿಯಲ್ಲೇ ಬೌಲಿಂಗ್‌ ಮಾಡಿದವರು ಯಾರೂ ಇರಲಿಲ್ಲ. ಇದೀಗ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು, ಬುಮ್ರಾರಂತೆ ಆಕ್ಷನ್‌ನಲ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದಿದ್ದಾಳೆ. ಈಕೆಯ ಹೆಸರು ಮೈರಾ ಜೈನ್.

ಜಸ್ಪ್ರೀತ್ ಬುಮ್ರಾರಂತೆ ಬೌಲಿಂಗ್ ಮಾಡ್ತಾಳೆ ಬೆಂಗಳೂರು ಶಾಲೆಯ ಹುಡುಗಿ
ಜಸ್ಪ್ರೀತ್ ಬುಮ್ರಾರಂತೆ ಬೌಲಿಂಗ್ ಮಾಡ್ತಾಳೆ ಬೆಂಗಳೂರು ಶಾಲೆಯ ಹುಡುಗಿ

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಸದ್ಯ ಭಾರತ ಮಾತ್ರವಲ್ಲದೆ ವಿಶ್ವದ ನಂಬರ್‌ ವೇಗದ ಬೌಲರ್‌ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತಕ್ಕೆ ಹಲವು ಪ್ರಮುಖ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಬುಮ್ರಾ ಅವರ ಮಾರಕ ಎಸೆತಗಳನ್ನು ಎದುರಿಸಲು ವಿಶ್ವದ ಘಟಾನುಘಟಿ ಬ್ಯಾಟರ್‌ಗಳೇ ಹೆದರುತ್ತಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬುಮ್ರಾ ಅವರಂಥಾ ಬೌಲಿಂಗ್‌ ಶೈಲಿ ಯಾರದ್ದೂ ಇಲ್ಲ. ಟೀಮ್‌ ಇಂಡಿಯಾ ವೇಗಿಯ ಅಸಾಂಪ್ರದಾಯಿಕ ಬೌಲಿಂಗ್ ಕ್ರಮವನ್ನು ಅನುಕರಿಸುವ ಪ್ರಯತ್ನವನ್ನು ಯಾರೂ ಮಾಡಿದಂತಿಲ್ಲ. ಆದರೆ, ಇದೀಗ ಬೆಂಗಳೂರಿನ ಶಾಲಾ ವಿದ್ಯಾರ್ಥಿನಿಯೊಬ್ಬಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ. ಬುಮ್ರಾ ವೇಗದ ಬೌಲಿಂಗ್‌ ಶೈಲಿಯನ್ನು ಪುನರಾವರ್ತಿಸುವ ಮೂಲಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾಳೆ.

ಬುಮ್ರಾ ಅವರಂತೆ ಬೌಲಿಂಗ್‌ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಮಹಿಳಾ ಹವ್ಯಾಸಿ ಕ್ರಿಕೆಟ್‌ ಆಟಗಾರ್ತಿಯೊಬ್ಬರು ಅದನ್ನು ಸಾಧ್ಯವಾಗಿಸಿದ್ದಾರೆ. ಬೆಂಗಳೂರಿನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ (DPS) ಪೂರ್ವದ ವಿದ್ಯಾರ್ಥಿನಿಯಾಗಿರುವ ಮೈರಾ ಜೈನ್, ಈಗ ಎಲ್ಲೆಡೆ ಗಮನಸೆಳೆದಿರುವ ಹುಡುಗಿ.

9ನೇ ತರಗತಿಯ ವಿದ್ಯಾರ್ಥಿಯು NICEC ಕ್ರಿಕೆಟ್ ಅಕಾಡೆಮಿಯಲ್ಲಿ ಬುಮ್ರಾ ಅವರಂತೆ ಆಕ್ಷನ್‌ ಮಾಡುತ್ತಾ ಬೌಲಿಂಗ್ ಮಾಡಿದ್ದಾರೆ. ರನ್-ಅಪ್‌ನಿಂದ ಹಿಡಿದು ಫಾಲೋ-ಥ್ರೂ ತನಕವೂ, ಬುಮ್ರಾ ಅವರಂತೇಯೇ ಮೈರಾ ಆಕ್ಷನ್‌ ಕಾಣಿಸಿಕೊಂಡಿದೆ. ಚೆಂಡು ಹಿಡಿದು ಓಡುತ್ತಾ ಬರುವಾಗಲೂ ಅದೇ ಎಕ್ಸ್‌ಪ್ರೆಷನ್‌ ಅನ್ನು ಜೈನ್ ಕೊಡುತ್ತಾರೆ. ವೇಗದ ಯಾರ್ಕರ್‌ಗಳನ್ನು ಎಸೆಯುವ ಪ್ರಯತ್ನವೂ ವಿಡಿಯೋದಲ್ಲಿದೆ. ಮೈರಾ ಅವರ ಕ್ರಿಕೆಟ್ ಕ್ಲಬ್ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಎಲ್ಲಾ ದೃಶ್ಯಗಳನ್ನು ನೋಡಬಹುದು.

ಬುಮ್ರಾ ಬೌಲಿಂಗ್‌ ಶೈಲಿ ಹೇಗೆ ಸಾಧ್ಯ?

ಜೈನ್ ತನ್ನ ಮೊಣಕೈಯ ಹೈಪರ್ ಎಕ್ಸ್‌ಟೆನ್‌ಷನ್ ಅನ್ನು ನಿಖರವಾಗಿ ಸಾಧಿಸುತ್ತಾರೆ. ಚೆಂಡನ್ನು ತಲುಪಿಸುವಾಗ ಅವರ ತೋಳು ಸ್ವಲ್ಪ ಬಾಗುತ್ತದೆ. ಇದು ಬುಮ್ರಾ ಅವರಂತೆಯೇ ಪರಿಣಾಮಕಾರಿ ಬೌಲಿಂಗ್‌ ಸಾಧ್ಯವಾಗಿಸುತ್ತದೆ. ಕ್ಲಿಪ್‌ನಲ್ಲಿರುವ ದೃಶ್ಯದ ಪ್ರಕಾರ, ಹುಡುಗಿಯು ಎರಡು ಬಾರಿ ಬ್ಯಾಟರ್‌ ಸೋಲಿಸಲು ಸಾಧ್ಯವಾಗುತ್ತದೆ.

ಶಾಲಾ ಸಮವಸ್ತ್ರದಲ್ಲೇ ಮೈರಾ ಜೈನ್ ಬೌಲಿಂಗ್‌ ಮಾಡಿದ್ದಾರೆ. ಆ ದೃಶ್ಯಗಳು ಈಗ ವೈರಲ್‌ ಆಗಿವೆ. ಅವರ ಬೌಲಿಂಗ್‌ ಶೈಲಿಯು ಜನರನ್ನು ಬೇಗ ತಲುಪಿದೆ. ಅದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಾಲಕಿಯು ಬೇಗನೆ ಭಾರತ ತಂಡಕ್ಕೆ ಆಯ್ಕೆಯಾಗಬೇಕು. ಬಿಸಿಸಿಐ ಇದರತ್ತ ಗಮನ ಹರಿಸಬೇಕು ಎಂದು ಜನರು ಹೇಳುತ್ತಿದ್ದಾರೆ.

“ಬಿಸಿಸಿಐ ಇತ್ತ ಗಮನಿಸಬೇಕು. ಭಾರತೀಯ ಮಹಿಳಾ ಕ್ರಿಕೆಟ್ ಭವಿಷ್ಯಕ್ಕಾಗಿ ಅವಳನ್ನು ಬೆಳೆಸಬೇಕು. ಶುಭವಾಗಲಿ” ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. "ಆಕೆ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬಳಾಗಬಹುದು. ಆದರೆ ಯಾವುದೇ ರಾಜಕೀಯವಿಲ್ಲದೆ ಭಾರತ ತಂಡಕ್ಕೆ ಆಯ್ಕೆ ಮಾಡಬೇಕು" ಎಂದು ಮತ್ತೊಬ್ಬರು ಹೇಳಿದ್ದಾರೆ.

ಇನ್ನೂ ಕೆಲವು ನೆಟ್ಟಗರು, ಮೈರಾ ನೋಡಲು ಬುಮ್ರಾ ಅವರಂತೆಯೇ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬುಮ್ರಾಗೆ ತಂಗಿ ಇದ್ದಿದ್ದರೆ ಹೀಗೆಯೇ ಇರುತ್ತಿದ್ದರು ಎಂಬುದಾಗಿ ಕಾಮೆಂಟ್‌ ಮಾಡಿದ್ದಾರೆ.

Whats_app_banner