ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಸಂಕಷ್ಟ; ಬರೋಬ್ಬರಿ ನಾಲ್ವರಿಗೆ ಇಂಜುರಿ, ಮೊದಲ ಪಂದ್ಯಕ್ಕೆ ಈತ ಅಲಭ್ಯ?
Team India: ನವೆಂಬರ್ 22ರಿಂದ ಆರಂಭವಾಗುವ ಬಾರ್ಡರ್ ಗವಾಸ್ಕರ್ ಟ್ರೋಫಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೇರಿ ಭಾರತ ತಂಡದ ನಾಲ್ವರಿಗೆ ಗಾಯವಾಗಿದೆ. ಮೊದಲ ಪಂದ್ಯಕ್ಕೆ ಶುಭ್ಮನ್ ಗಿಲ್ ಅಲಭ್ಯರಾಗಲಿದ್ದಾರೆ.
ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಆರಂಭಕ್ಕೆ ಇನ್ನೊಂದು ವಾರ ಬಾಕಿ ಇರುವಾಗಲೇ ಭಾರತ ತಂಡಕ್ಕೆ (Team India) ಭಾರೀ ಹೊಡೆತ ಬಿದ್ದಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ನವೆಂಬರ್ 22ರಿಂದ ಪರ್ತ್‌ನಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಜರುಗಿದ ಇಂಟ್ರಾ-ಸ್ಕ್ವಾಡ್ ಅಭ್ಯಾಸ ಪಂದ್ಯದ 2ನೇ ದಿನದಂದು ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಿಲ್ ಹೆಬ್ಬೆರಳಿಗೆ ಗಾಯವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಗಿಲ್ ಮೈದಾನ ತೊರೆದು ಹಿಂತಿರುಗಲಿಲ್ಲ.
ಶುಭ್ಮನ್ ಗಿಲ್ ಗಾಯಗೊಂಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಈ ನಡುವೆ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಶುಭ್ಮನ್ ಗಾಯಗೊಂಡಿದ್ದು, ಆರಂಭಿಕ ಟೆಸ್ಟ್‌ನಿಂದ ಅವರನ್ನು ಹೊರಗಿಡಲು ಮ್ಯಾನೇಜ್ಮೆಂಟ್ ಚಿಂತಿಸಿದೆ. ಪ್ರಸ್ತುತ ವೈದ್ಯಕೀಯ ತಂಡವು ಅವರ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಗಿಲ್ಗೂ ಮುನ್ನ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್ ಗಾಯಗೊಂಡಿದ್ದರು. ಹೀಗಾಗಿ ಭಾರತ ತಂಡದ ಆತಂಕ ಹೆಚ್ಚಿದೆ.
ಇನ್ಟ್ರಾ-ಸ್ಕ್ವಾಡ್ ಪಂದ್ಯದ ಮೊದಲ ದಿನದಂದು ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಗಾಯದ ಸಮಸ್ಯೆಗೆ ತುತ್ತಾದರು. ಆ ಬಳಿಕ ಅವರು ಮತ್ತೆ ಮರಳಲಿಲ್ಲ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ರಾಹುಲ್ ಇನ್ನಿಂಗ್ಸ್ ತೆರೆದಿದ್ದರು. ರೋಹಿತ್ ಶರ್ಮಾ ಅಲಭ್ಯರಾದರೆ ಪರ್ತ್ ಟೆಸ್ಟ್ನಲ್ಲಿ ರೋಹಿತ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಭಿಮನ್ಯು ಈಶ್ವರನ್ ತಂಡದಲ್ಲಿದ್ದರೂ ಅವಕಾಶ ಸಿಗುವುದು ಬಹಳ ಕಡಿಮೆ. ವಿರಾಟ್-ಸರ್ಫರಾಜ್ ಕೂಡ ಬೆರಳುಗಳ ಗಾಯದ ಸಮಸ್ಯೆಗೆ ತುತ್ತಾದರು. ಗಾಯದ ಬಳಿಕ ಅವರೂ ಮತ್ತೆ ಮೈದಾನಕ್ಕೆ ಎಂಟ್ರಿಯಾಗಲಿಲ್ಲ.
ರೋಹಿತ್ ಪರ್ತ್‌ನಲ್ಲಿ ಟೀಂ ಇಂಡಿಯಾ ಸೇರುತ್ತಾರಾ?
ರೋಹಿತ್ ಶರ್ಮಾ ಅವರಿಗೆ ಗಂಡು ಮಗುವಾಗಿದ್ದು, ಮೊದಲ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಪರ್ತ್‌ನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಬಹುದು. ಪತ್ನಿ ತಾಯಿಯಾಗುತ್ತಾರೆ ಎಂಬ ಕಾರಣಕ್ಕೆ ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಆದರೆ, ಪಂದ್ಯದ ಆರಂಭಕ್ಕೆ ವಾರ ಮುನ್ನವೇ ಮಗು ಜನಿಸಿದ ಕಾರಣ ಶೀಘ್ರವೇ ಆಸ್ಟ್ರೇಲಿಯಾಗೆ ಪ್ರಯಾಣಿಸುವ ಸಾಧ್ಯತೆ ಇದೆ. ಸರಿಯಾದ ಸಮಯಕ್ಕೆ ಪರ್ತ್ ತಲುಪಿದರೆ ಯಶಸ್ವಿ ಜೊತೆ ರೋಹಿತ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರೋಹಿತ್ ಲಭ್ಯವಿಲ್ಲದಿದ್ದರೆ ಜಸ್ಪ್ರೀತ್ ಬುಮ್ರಾ ಭಾರತವನ್ನು ಮುನ್ನಡೆಸಲಿದ್ದಾರೆ.
ಆಸೀಸ್ಗೆ ಶಮಿ ಮರಳುವ ಸಾಧ್ಯತೆ
ರೋಹಿತ್ ಮೊದಲ ಪಂದ್ಯಕ್ಕೆ ಶೀಘ್ರವೇ ಭಾರತ ತಂಡವನ್ನು ಸೇರಿಕೊಳ್ಳುವ ಸುದ್ದಿ ಇದೆ. ಇದರ ನಡುವೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ರೋಹಿತ್ ಅವರು ಮೊಹಮ್ಮದ್ ಶಮಿ ಅವರನ್ನು ತನ್ನೊಂದಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ವರದಿಯಾಗಿದೆ. ದೈನಿಕ್ ಭಾಸ್ಕರ್ ಅವರ ವರದಿಯ ಪ್ರಕಾರ, ಶಮಿ ಪರ್ತ್‌ನಲ್ಲಿ ಮೊದಲ ಟೆಸ್ಟ್‌ಗೆ ಮೊದಲು ರೋಹಿತ್ ಅವರೊಂದಿಗೆ ಆಸೀಸ್ಗೆ ಪ್ರಯಾಣಿಸಬಹುದು. ಆದಾಗ್ಯೂ, ಇವರಿಬ್ಬರನ್ನೂ ಮೊದಲ ಪಂದ್ಯಕ್ಕೆ ಆಡುವ XI ನಲ್ಲಿ ಸೇರಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸುಮಾರು ಒಂದು ವರ್ಷಗಳ ಕಾಲ ಗಾಯದಿಂದ ಹೊರಗುಳಿದಿದ್ದ ಶಮಿ ಅವರು ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲರಾದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ತಂಡದಲ್ಲಿ ಸೇರಿಸಲಾಗಿಲ್ಲ.