ಐರ್ಲೆಂಡ್‌ಗೆ ಅಚ್ಚರಿಯ ಸೋಲುಣಿಸಿ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಕೆನಡಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಐರ್ಲೆಂಡ್‌ಗೆ ಅಚ್ಚರಿಯ ಸೋಲುಣಿಸಿ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಕೆನಡಾ

ಐರ್ಲೆಂಡ್‌ಗೆ ಅಚ್ಚರಿಯ ಸೋಲುಣಿಸಿ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಕೆನಡಾ

ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಬರುತ್ತಿವೆ. ನಿನ್ನೆಯಷ್ಟೇ ಬಲಿಷ್ಠ ಪಾಕಿಸ್ತಾನಕ್ಕೆ ಯುಎಸ್‌ಯ ಸೋಲುಣಿಸಿತ್ತು. ಇದೀಗ ಐರ್ಲೆಂಡ್‌ ವಿರುದ್ಧ ಕೆನಡಾ ರೋಚಕ ಜಯ ಸಾಧಿಸಿ ಅಚ್ಚರಿ ಮೂಡಿಸಿದೆ.

ಐರ್ಲೆಂಡ್‌ಗೆ ಅಚ್ಚರಿಯ ಸೋಲುಣಿಸಿ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಕೆನಡಾ
ಐರ್ಲೆಂಡ್‌ಗೆ ಅಚ್ಚರಿಯ ಸೋಲುಣಿಸಿ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಕೆನಡಾ (PTI)

ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್‌ ಶಿಶು ಕೆನಡಾ ಮೊಟ್ಟಮೊದಲ ಜಯ ಸಾಧಿಸಿದೆ. ತನಗಿಂತ ಉನ್ನತ ಶ್ರೇಯಾಂಕದ ಹಾಗೂ ಬಲಿಷ್ಠ ಐರ್ಲೆಂಡ್‌ (Canada vs Ireland) ತಂಡದ ವಿರುದ್ಧ 12 ರನ್‌ಗಳ ರೋಚಕ ಜಯ ಸಾಧಿಸಿದೆ. ಜೂನ್‌ 7ರ ಶುಕ್ರವಾರ ನ್ಯೂಯಾರ್ಕ್‌ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ 2024 ಹಣಾಹಣಿಯಲ್ಲಿ ಕೆನಡಾ ಜಯಭೇರಿ ಬಾರಿಸಿದೆ. ಗುರುವಾರವಷ್ಟೇ ಪಾಕಿಸ್ತಾನಕ್ಕೆ ಯುಎಸ್‌ಎ ಶಾಕ್‌ ಕೊಟ್ಟಿತ್ತು. ಇದೀಗ ಅಮೆರಿಕದ ನೆರೆಯ ದೇಶ ಕೆನಡಾ, ಐರ್ಲೆಂಡ್‌ಗೆ ಅಚ್ಚರಿಯಾಗುವಂತೆ ಗೆದ್ದು ಬೀಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 137 ರನ್‌ ಪೇರಿಸಿತು. ಇದಕ್ಕೆ ಉತ್ತರವಾಗಿ ಐರ್ಲೆಂಡ್‌ 7 ವಿಎಕಟ್‌ ಕಳೆದುಕೊಂಡು 125 ರನ್‌ ಗಳಿಸಲಷ್ಟೇ ಶಕ್ತವಾಯ್ತು

ಕೆನಡಾ ಪರ ಆರನ್ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಇನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ಗೆ ಈ ಇಬ್ಬರೂ ಕೇವಲ 12 ರನ್‌ಗಳನ್ನು ಒಟ್ಟುಗೂಡಿಸಿದರು. ಧಲಿವಾಲ್ ಅವರನ್ನು ಮಾರ್ಕ್ ಅದೈರ್ ಬಲಿಪಡೆದರು. ಅವರ ಗಳಿಕೆ ಕೇವಲ ಆರು ರನ್. ಬಲಗೈ ಬ್ಯಾಟರ್ ಪರ್ಗತ್ ಸಿಂಗ್ 18 ರನ್‌ ಗಳಿಸಿದರು. ಅತ್ತ ಜಾನ್ಸನ್ ಮೂರು ಬೌಂಡರಿಗಳ ನೆರವಿನಿಂದ 14 ರನ್ ಗಳಿಸಿದರು.

ಕಿರ್ಟನ್ ಮತ್ತು ಮೊವ್ವಾ ಆಕರ್ಷಕ ಜೊತೆಯಾಟ

ಜಾನ್ಸನ್ ಔಟಾದ ನಂತರ ಬಂದ ದಿಲ್‌ಪ್ರೀತ್ ಬಾಜ್ವಾ 7 ರನ್‌ ಕಲೆ ಹಾಕಿದರು. ಆಕರ್ಷಕ ಆಟವಾಡಿದ ನಿಕೋಲಸ್ ಕಿರ್ಟನ್, ಕೆನಡಾ ಪರ ಗರಿಷ್ಠ ಮೊತ್ತ ಕಲೆ ಹಾಕಿದರು. ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ಕೆನಡಾ ತಂಡದ ಮೊತ್ತ 53 ರನ್‌ ಆಗಿದ್ದಾಗ ತಂಡ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಏಳು ರನ್ ಗಳಿಸಿದ್ದಾಗ ಬಾಜ್ವಾ ಔಟಾದರು. 10 ಓವರ್‌ಗಳ ನಂತರ ಕೆನಡಾ 63 ರನ್‌ ವೇಳೆಗೆ 4 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಒಂದಾದ ಕಿರ್ಟನ್ ಮತ್ತು ಮೊವ್ವಾ ಆಕರ್ಷಕ ಜೊತೆಯಾಟವಾಡಿದರು. 15.2 ಓವರ್‌ಗಳಲ್ಲಿ ತಂಡ 100 ರನ್ ಗಳಿಸಿತು.

ಮೆಕಾರ್ಥಿ ಎಸೆದ 19ನೇ ಓವರ್‌ನಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡಿತು. ಈ ನಡುವೆ 35 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 49 ರನ್ ಗಳಿಸಿದ್ದ ಕಿರ್ಟನ್‌ ಅರ್ಧಶತಕದ ಅಂಚಿನಲ್ಲಿ ಎಡವಿದರು. ಮೊವ್ವ 36 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 37 ರನ್ ಗಳಿಸಿದರು.

ಐರ್ಲೆಂಡ್‌ ಪರ ಯಂಗ್ ಮತ್ತು ಮೆಕಾರ್ಥಿ ನಾಲ್ಕು ಓವರ್‌ಗಳಲ್ಲಿ ಕ್ರಮವಾಗಿ 32 ಮತ್ತು 24 ರನ್‌ ಬಿಟ್ಟುಕೊಟ್ಟು ತಲಾ ಎರಡು ವಿಕೆಟ್ ಪಡೆದರು. ಅದೈರ್ ಮತ್ತು ಡೆಲಾನಿ ತಲಾ ಒಂದು ವಿಕೆಟ್ ಕಬಳಿಸಿದರು.

ಐರ್ಲೆಂಡ್‌ ಚೇಸಿಂಗ್

ಸ್ಪರ್ಧಾತ್ಮಕ ಮೊತ್ತ ಚೇಸಿಂಗ್‌ಗಿಳಿದ ಐರ್ಲೆಂಡ್‌, ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಪೌಲ್‌ ಸ್ಟಿರ್ಲಿಂಗ್ ಮತ್ತೆ ವಿಫಲರಾಗಿ ಕೇವಲ 9 ರನ್‌ ಗಳಿಸಿ ಔಟಾದರು. ಆಂಡ್ರ್ಯೂ ಬಾಲ್ಬಿರ್ನಿ ಆಟ 17 ರನ್‌ಗಳಿಗೆ ಅಂತ್ಯವಾಯ್ತು. ಹ್ಯಾರಿ ಟೆಕ್ಟರ್‌ 7 ರನ್‌ ಗಳಿಸಿದರೆ, ಲೋರ್ಕನ್ ಟಕರ್ 10 ರನ್‌ ಗಳಿಸಿ ನಿರ್ಗಮಿಸಿದರು. ಕರ್ಟಿಸ್ ಕ್ಯಾಂಫರ್ ಆಟ 4 ರನ್‌ಗಳಿಗೆ ಅಂತ್ಯವಾಯ್ತು. ಈ ನಡುವೆ ಡೆಲಾನಿ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ದಿಢೀರನೆ ಕುಸಿತ ಕಂಡ ತಂಡಕ್ಕೆ ಡಾಕ್ರೆಲ್‌ ಹಾಗೂ ಮಾರ್ಕ್‌ ಅಡೈರ್‌ ಆಸರೆಯಾದರು. ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು.‌ ಆದರೆ, ಕೆನಡಾ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ.

Whats_app_banner