ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸಲು ದಿನಾಂಕ ನಿಗದಿ; ಈ ದಿನದೊಳಗೆ ಬದಲಾವಣೆಗೆ ಅವಕಾಶ
ICC T20 Cricket World cup 2024: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸಲು ಐಸಿಸಿ ಡೆಡ್ಲೈನ್ ನಿಗದಿ ಮಾಡಿದೆ. ಮೇ 1ರಂದು ಎಲ್ಲಾ ತಂಡಗಳಿಗೆ ತಂಡಗಳ ಘೋಷಣೆಯ ಗಡುವು ನೀಡಲಾಗಿದೆ ಎನ್ನಲಾಗಿದೆ.
ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ. ಈಗಾಗಲೇ ಎಲ್ಲಾ 20 ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ವೇಳಾಪಟ್ಟಿ ಸಹ ಪ್ರಕಟಗೊಂಡಿದ್ದು, ಟೀಮ್ ಇಂಡಿಯಾ ಜೂನ್ 5ರಿಂದ ಐರ್ಲೆಂಡ್ ವಿರುದ್ಧ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮುನ್ನ ಭಾರತೀಯ ಆಟಗಾರರು ಐಪಿಎಲ್ ನಲ್ಲಿ ಕಣಕ್ಕಿಳಿಯಲಿದ್ದಾರೆ.
ಮೆಗಾ ಟೂರ್ನಿಗೆ ನಾಲ್ಕು ಮಾಸ ಬಾಕಿ ಉಳಿದಿರುವಾಗ ಆಟಗಾರರ ಆಯ್ಕೆಯಲ್ಲಿ ತಂಡಗಳು ಬ್ಯುಸಿಯಾಗಿವೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿಗೆ ಭಾರತ ತಂಡದ ಮ್ಯಾನೇಜ್ ಮೆಂಟ್, ಬಿಸಿಸಿಐ ಮತ್ತು ಸೆಲೆಕ್ಟರ್ಸ್ ಯಾರನ್ನೆಲ್ಲಾ ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಅಭಿಮಾನಿಗಳು ಸಹ ಯಾರಿಗೆ ಸ್ಥಾನ ಸಿಗಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.
ತಂಡ ಪ್ರಕಟಿಸಲು ಮಹೂರ್ತ ಫಿಕ್ಸ್?
ಮೆಗಾ ಈವೆಂಟ್ಗೆ ತಂಡವನ್ನು ಪ್ರಕಟಿಸಲು ಐಸಿಸಿ ಡೆಡ್ಲೈನ್ ನಿಗದಿಪಡಿಸಿದೆ. ಸ್ಪೋರ್ಟ್ಸ್ ಟಾಕ್ ವರದಿ ಪ್ರಕಾರ ಮೇ 1ರಂದು ಎಲ್ಲಾ ತಂಡಗಳಿಗೆ ತಂಡಗಳ ಘೋಷಣೆಯ ಗಡುವು ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಬಳಿಕ ಮೇ 25 ರೊಳಗೆ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಆದರೆ ಇದಕ್ಕೆ ಐಸಿಸಿ ತಾಂತ್ರಿಕ ಸಮಿತಿ ಅನುಮತಿ ಸಿಗಬೇಕಿದೆ. ಟೂರ್ನಿಗೆ 15 ಆಟಗಾರರ ತಂಡ ಪ್ರಕಟಿಸಬಹುದು ಎಂದು ವರದಿ ಹೇಳುತ್ತದೆ.
ಎರಡು ಅಭ್ಯಾಸ ಪಂದ್ಯಗಳು
ಟಿ20 ವಿಶ್ವಕಪ್ ಟೂರ್ನಿ ಪ್ರಾರಂಭಕ್ಕೂ ಮುನ್ನ ಎಲ್ಲಾ ತಂಡಗಳು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಹೀಗಾಗಿ ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ನೋಡಿಕೊಂಡು ಐಪಿಎಲ್ ಫೈನಲ್ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಏಕೆಂದರೆ ಐಪಿಎಲ್ನಲ್ಲಿ ಎಲ್ಲಾ ತಂಡಗಳ ಆಟಗಾರರು ಭಾಗವಹಿಸಲಿದ್ದು, ವಿಶ್ವಕಪ್ಗೂ ಮುನ್ನ ಐಪಿಎಲ್ ತೊರೆಯುವುದಕ್ಕೆ ನಿಯಂತ್ರಣ ಹೇರಲು ನಿರ್ಧಾರ ಕೈಗೊಳ್ಳಲಾಗುತ್ತಿದೆ.
ವಿಶ್ವಕಪ್ ಟೂರ್ನಿಗೆ ಭಾರತದ ವೇಳಾಪಟ್ಟಿ
ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ. ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾ ಯುಎಸ್ಎನಲ್ಲಿ ಟಿ20 ವಿಶ್ವಕಪ್ 2024 ಗುಂಪಿನ ಎಲ್ಲಾ ಪಂದ್ಯಗಳನ್ನು ಆಡುತ್ತದೆ.
ಭಾರತದ ಗುಂಪು ಹಂತದ ವೇಳಾಪಟ್ಟಿ
ಭಾರತ vs ಐರ್ಲೆಂಡ್, ಜೂನ್ 5, ನ್ಯೂಯಾರ್ಕ್
ಭಾರತ vs ಪಾಕಿಸ್ತಾನ, ಜೂನ್ 9, ನ್ಯೂಯಾರ್ಕ್
ಭಾರತ vs ಯುಎಸ್ಎ, ಜೂನ್ 12, ನ್ಯೂಯಾರ್ಕ್
ಭಾರತ vs ಕೆನಡಾ, ಜೂನ್ 15, ಫ್ಲೋರಿಡಾ
ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವ ತಂಡಗಳ ಪಟ್ಟಿ
ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್, ನ್ಯೂಜಿಲ್ಯಾಂಡ್, ಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಉಗಾಂಡಾ, ನೆದರ್ಲ್ಯಾಂಡ್ಸ್, ಪಪುವಾ ನ್ಯೂ ಗಿನಿಯಾ, ನೇಪಾಳ.
ಟೂರ್ನಿ ಆರಂಭ ಯಾವಾಗ?
ಟಿ20 ವಿಶ್ವಕಪ್ 2024 ಜೂನ್ 1 ರಿಂದ ಪ್ರಾರಂಭವಾಗಲಿದ್ದು, 9 ಸ್ಥಳಗಳಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ವೆಸ್ಟ್ ಇಂಡೀಸ್‌ನಲ್ಲಿ ಆರು ಸ್ಟೇಡಿಯಂಗಳು ಮತ್ತು ಉಳಿದ ಪಂದ್ಯಗಳಿಗೆ ಯುಎಸ್ಎ ಆತಿಥ್ಯ ವಹಿಸಲಿದ್ದು, ವೆಸ್ಟ್ ಇಂಡೀಸ್‌ನಲ್ಲಿ ಸೂಪರ್ ಎಂಟು ಮತ್ತು ನಾಕೌಟ್ ಹಂತಗಳನ್ನು ಆಡಲಾಗುತ್ತದೆ.