ಕನ್ನಡ ಸುದ್ದಿ  /  Cricket  /  Delhi Capitals Women Win By 7 Wickets Against Gujarat Giants To Qualify Into Finals Of Womens Premier League 2024 Jra

‌WPL 2024: ಗುಜರಾತ್‌ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್

Delhi Capitals Women: ಡಬ್ಲ್ಯೂಪಿಎಲ್‌ 2024ರ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್ ವಿರುದ್ಧ ಡೆಲ್ಲಿ‌ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಮೆಗ್‌ ಲ್ಯಾನಿಂಗ್‌ ಬಳಗವು ನೇರವಾಗಿ ಫೈನಲ್‌ ಪ್ರವೇಶಿಸಿದೆ.

ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್
ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ (Women's Premier League Twitter)

ಡಬ್ಲ್ಯೂಪಿಎಲ್‌ (Womens Premier League 2024) ಎರಡನೇ ಆವೃತ್ತಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧದ (Delhi Capitals Women vs Gujarat Giants) ಪಂದ್ಯದಲ್ಲಿ 7 ವಿಕೆಟ್‌ ಗೆಲುವಿನೊಂದಿಗೆ, ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ 2024ರ ಫೈನಲ್‌ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ. ಬೆತ್‌ ಮೂನಿ ನೇತೃತ್ವದ ಗುಜರಾತ್‌ ತಂಡವು, ಈ ಪಂದ್ಯದ ಆರಂಭಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ, ಪ್ರಸಕ್ತ ಆವೃತ್ತಿಯ ಪ್ಲೇ ಆಫ್‌ ಹಾಗೂ ಫೈನಲ್‌ ಪಂದ್ಯಗಳ ಅಂತಿಮ ಚಿತ್ರಣ ಸ್ಪಷ್ಟವಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ತಂಡವು, ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ಕೇವಲ 126 ರನ್‌ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು, ಶಫಾಲಿ ವರ್ಮಾ ಸ್ಫೋಟಕ ಅರ್ಧಶತಕದ ನೆರವಿಂದ ಕೇವಲ 13.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 129 ರನ್‌ ಗಳಿಸಿ ಗುರಿ ತಲುಪಿತು. ಅಲ್ಲದೆ ಯಾವುದೇ ಒತ್ತಡವಿಲ್ಲದಂತೆ ಫೈನಲ್‌ಗೆ ಲಗ್ಗೆ ಇಟ್ಟಿತು.

ಚೇಸಿಂಗ್‌ ಆರಂಭಿಸಿದ ಡೆಲ್ಲಿ ಪರ ನಾಯಕಿ ಮೆಗ್‌ ಲ್ಯಾನಿಂಗ್‌ 18 ರನ್‌ ಗಳಿಸಿ ರನೌಟ್‌ ಆದರು. ಆದರೆ, ಅಬ್ಬರಿಸಿದ ಶಫಾಲಿ ವರ್ಮಾ ಆಕರ್ಷಕ ಅರ್ಧಶತಕ ಸಿಡಿಸಿದರು. ಸ್ಫೋಟಕ 5 ಸಿಕ್ಸರ್‌ ಸಹಿತ 71 ರನ್‌ ಗಳಿಸಿದ ಅವರ ತಂಡದ ಗೆಲುವಿನ ಅಂಚಿನಲ್ಲಿ ಎಡವಿ ಔಟಾದರು. ಅಲಿಸ್‌ ಕ್ಯಾಪ್ಸ್‌ ಶೂನ್ಯಕ್ಕೆ ನಿರ್ಗಮಿಸಿದರೆ, ಜೆಮಿಮಾ ರೋಡ್ರಿಗಸ್‌ 38 ರನ್‌ ಗಳಿಸಿದರು. ಅಲ್ಲದೆ ಗೆಲುವಿನ ಬೌಂಡರಿ ಹೊಡೆದು ಸಂಭ್ರಮಿಸಿದರು.

ಇದನ್ನೂ ಓದಿ | ಇದು ನಿಜವಾಗಲು ಸಾಧ್ಯವಿಲ್ಲ; ಟಿ20 ವಿಶ್ವಕಪ್ ತಂಡದಿಂದ ವಿರಾಟ್‌ ಡ್ರಾಪ್‌ ವರದಿಗೆ ಸ್ಟುವರ್ಟ್‌ ಬ್ರಾಡ್ ಅಚ್ಚರಿ

ಡಬ್ಲ್ಯೂಪಿಎಲ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡವುನೇರವಾಗಿ ಫೈನಲ್‌ ಪ್ರವೇಶಿಸುತ್ತದೆ. ಡೆಲ್ಲಿ ಆ ಕೆಲಸ ಮಾಡಿ ಮುಗಿಸಿದೆ. ಉಳಿದಂತೆ ಎರಡು ಹಾಗೂ ಮೂರನೇ ಸ್ಥಾನ ಪಡೆದ ತಂಡಗಳು ಎಲಿಮನೇಟರ್‌ ಪಂದ್ಯದಲ್ಲಿ ಆಡುತ್ತವೆ. ಎಲಿಮನೇಟರ್‌ ಪಂದ್ಯವು ಮುಂಬೈ ಇಂಡಿಯನ್ಸ್‌ ಹಾಗೂ ಆರ್‌ಸಿಬಿ ತಂಡಗಳ ನಡುವೆ ನಡೆಯಲಿದೆ. ಅದರಲ್ಲಿ ಗೆದ್ದ ತಂಡವು ಫೈನಲ್‌ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ.

ಗುಜರಾತ್ ಜೈಂಟ್ಸ್ ತಂಡ

ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ನಾಯಕಿ ಮತ್ತು ವಿಕೆಟ್‌ ಕೀಪರ್), ದಯಾಲನ್ ಹೇಮಲತಾ, ಫೋಬೆ ಲಿಚ್‌ಫೀಲ್ಡ್, ಆಶ್ಲೀ ಗಾರ್ಡ್ನರ್, ಭಾರತಿ ಫುಲ್ಮಾಲಿ, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ಶಬ್ನಮ್ ಎಂಡಿ ಶಕಿಲ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಆಲಿಸ್ ಕ್ಯಾಪ್ಸೆ, ಮರಿಜಾನ್ನೆ ಕಪ್, ಜೆಸ್ ಜೊನಾಸ್ಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ಶಿಖಾ ಪಾಂಡೆ, ಮಿನ್ನು ಮಣಿ.‌

ಇದನ್ನೂ ಓದಿ | ನೀವು ಗಾಯಗೊಂಡು ಭಾರತದ ಪರ ಆಡಲ್ಲ, ನೇರವಾಗಿ ಐಪಿಎಲ್‌ ಆಡ್ತೀರಿ; ಹಾರ್ದಿಕ್ ಪಾಂಡ್ಯ ನಡೆಗೆ ಮಾಜಿ ಕ್ರಿಕೆಟಿಗ ಆಕ್ರೋಶ

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point