ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಿಂದ ಕೆಎಲ್ ರಾಹುಲ್ ಔಟ್; ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ
Devdutt Padikkal: ಇಂಗ್ಲೆಂಡ್ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ತೋರಿರುವ ರಜತ್ ಪಾಟೀದಾರ್ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅತ್ತ ಕನ್ನಡಿಗ ಕೆಎಲ್ ರಾಹುಲ್ ತಂಡದಿಂದ ಹೊರಬಿದ್ದಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal), ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಡುವ ಸಮಯ ಸನ್ನಿಹಿತವಾಗಿದೆ. ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಡಿಕ್ಕಲ್ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ಲಭಿಸಿದೆ. ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಐದನೇ ಟೆಸ್ಟ್ ಆರಂಭವಾಗಲಿದೆ. ಕಳೆದ ವರ್ಷ ಶಸ್ತ್ರಚಿಕಿತ್ಸೆ ನಡೆಸಿದ ತಜ್ಞರ ಅಭಿಪ್ರಾಯ ಪಡೆಯಲು ರಾಹುಲ್ ಲಂಡನ್‌ಗೆ ಹಾರಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೂ ಮುನ್ನ ರಾಹುಲ್ ಫಿಟ್ ಆಗುವ ಸಾಧ್ಯತೆಗಳು ತೀರಾ ಕಡಿಮೆ ಇದೆ. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯದಿಂದ ಅವರು ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ಆಂಗ್ಲರ ವಿರುದ್ಧ ನಾಲ್ಕನೇ ಟೆಸ್ಟ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ, ಸದ್ಯ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಐದನೇ ಟೆಸ್ಟ್‌ಗೂ ಮುನ್ನ ಸುದೀರ್ಘ ಅಂತರವಿದ್ದು, ಟೀಮ್ ಇಂಡಿಯಾ ಆಟಗಾರರು ತಮ್ಮ ತಮ್ಮ ವೈಯಕ್ತಿಕ ಕೆಲಸಗಳ ಮೇಲೆ ರಾಂಚಿಯಿಂದ ವಿವಿಧೆಡೆ ಪ್ರಯಾಣಿಸಿದ್ದಾರೆ. ಇದೇ ಶನಿವಾರ (ಮಾರ್ಚ್ 3) ಎಲ್ಲಾ ಆಟಗಾರರು ಚಂಡೀಗಢದಲ್ಲಿ ಒಟ್ಟುಗೂಡಲಿದ್ದಾರೆ. ಅಂದು ಸಂಜೆ ಅಥವಾ ಮರುದಿನ ಚಾರ್ಟರ್ಡ್ ವಿಮಾನದಲ್ಲಿ ಧರ್ಮಶಾಲಾಗೆ ತೆರಳಲಿದ್ದಾರೆ.
ಅತ್ತ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ರಜತ್ ಪಾಟೀದಾರ್, ಸದ್ಯ ತಂಡದಿಂದ ಹೊರಬೀಳುವ ಸಾಧ್ಯತೆ ಇದೆ. ಮಧ್ಯಪ್ರದೇಶದ ಕ್ರಿಕೆಟಿಗ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದ ಅವರು, ಕಳಪೆ ಪ್ರದರ್ಶನ ನೀಡಿದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್ ಗಳಿಸಿದ್ದ ಪಾಟೀದಾರ್, ಆ ಬಳಿಕ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 9, 5, 0, 17 ಮತ್ತು 0 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಎರಡು ಡಕೌಟ್ ಕೂಡಾ ಸೇರಿವೆ. ಇದು ಅವರನ್ನು ತಂಡದಿಂದ ಕಿತ್ತು ಹಾಕುವ ಸುಳಿವು ಕೊಟ್ಟಿದೆ.
ಇದನ್ನೂ ಓದಿ | ಸುನಿಲ್ ಗವಾಸ್ಕರ್ 54 ವರ್ಷಗಳ ದಾಖಲೆ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್; ಇಷ್ಟು ರನ್ ಗಳಿಸಿದರೆ ಸಾಕು
ಸದ್ಯ ಧರ್ಮಶಾಲಾ ಟೆಸ್ಟ್‌ಗೂ ಮುನ್ನ ರಾಹುಲ್ ಕಂಬ್ಯಾಕ್ ಕಷ್ಟ. ರಾಂಚಿ ಟೆಸ್ಟ್ ಆರಂಭಕ್ಕೂ ಮುನ್ನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸೂಚಿಸಿದಂತೆ ರಾಹುಲ್ ಆಡಲು ಫಿಟ್ ಆಗದಿದ್ದರೆ, ಅವರನ್ನು ತಂಡಕ್ಕೆ ಸೇರಿಕೊಳ್ಳುವಂತೆ ಕೇಳುವುದರಲ್ಲಿ ಅರ್ಥವಿಲ್ಲ. ಅಲ್ಲದೆ ಅವರು ಲಂಡನ್‌ನಿಂದ ಹಿಂದಿರುಗಿದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ತಜ್ಞರಿಂದ ವರದಿ ಪಡೆದ ನಂತರ, ರಾಹುಲ್ ಬ್ಯಾಟಿಂಗ್ ಪುನರಾರಂಭಿಸುವ ಮೊದಲು ಎನ್‌ಸಿಎಯಿಂದ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಬೇಕಾಗುತ್ತದೆ. ಹೀಗಾಗಿ ಸದ್ಯಕ್ಕಂತೂ ಕನ್ನಡಿಗನ ಆಟ ನೋಡುವ ಸಾಧ್ಯತೆಗಳು ಕಾಣುತ್ತಿಲ್ಲ.
ದೇವದತ್ ಪಡಿಕ್ಕಲ್ ಪದಾರ್ಪಣೆ
ಐದನೇ ಟೆಸ್ಟ್‌ಗೆ ಭಾರತದ ಆಡುವ ಬಳಗದಿಂದ ರಜತ್ ಪಾಟೀದಾರ್ ಹೊರಬೀಳುವ ಸಾಧ್ಯತೆ ಇದೆ. ಇವರ ಬದಲಿಗೆ ಕನ್ನಡಿಗ ಪಡಿಕ್ಕಲ್ ಪದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಈ ಸರಣಿಯಲ್ಲಿ ಪಾಟೀದಾರ್, ಕೀಪರ್ ಧ್ರುವ್ ಜುರೆಲ್, ಬ್ಯಾಟರ್ ಸರ್ಫರಾಜ್ ಖಾನ್ ಮತ್ತು ವೇಗದ ಬೌಲರ್ ಆಕಾಶ್ ದೀಪ್ ಪದಾರ್ಪಣೆ ಮಾಡಿದ್ದಾರೆ. ದೇವದತ್ ಕೂಡಾ ಆಡುವ ಬಳಗ ಸೇರಿಕೊಂಡರೆ, ಟೀಮ್ ಒಂದೇ ಸರಣಿಯಲ್ಲಿ ಐದು ಭಾರತೀಯರು ಟೀಮ್ ಇಂಡಿಯಾ ಕ್ಯಾಪ್ ಪಡೆದಂತಾಗುತ್ತದೆ.
ರಾಂಚಿ ಟೆಸ್ಟ್ ಮುಗಿದ ಕೂಡಲೇ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೋಚಿಂಗ್ ಸಿಬ್ಬಂದಿ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿಯಾದರು. ಎನ್‌ಸಿಎ ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿ ಕೆಎಲ್ ರಾಹುಲ್ ತಮ್ಮ ಸ್ಥಿತಿಯನ್ನು ತಿಳಿಸಿದ ನಂತರ, ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆ ಎಂದು ನಿರ್ಧರಿಸಲಾಯಿತು.
ಇದನ್ನೂ ಓದಿ | ಹೋಗಿ ರಣಜಿ ಸೆಮಿಫೈನಲ್ ಆಡಿ, ಲಯಕ್ಕೆ ಮರಳಿ; 5ನೇ ಟೆಸ್ಟ್‌ನಿಂದ ರಜತ್ ಪಾಟೀದಾರ್ ಕೈಬಿಡಲು ಬಿಸಿಸಿಐ ಚಿಂತನೆ
“ಪಡಿಕ್ಕಲ್ ಧರ್ಮಶಾಲಾ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಲಿದ್ದಾರೆ. ರಾಹುಲ್ ತಂಡಕ್ಕೆ ಲಭ್ಯವಿರುವುದಿಲ್ಲ. ಐಪಿಎಲ್‌ಗೂ ಮುಂಚಿತವಾಗಿ ಇದು ಭಾರತ ತಂಡದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರುವುದರಿಂದ ಪಡಿಕ್ಕಲ್ ಅವರ ಆಟ ನೋಡಲು ಟೀಮ್ ಮ್ಯಾನೇಜ್ಮೆಂಟ್ ಬಯಸಿದೆ” ಎಂದು ಬಿಸಿಸಿಐ ಮೂಲವೊಂದು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದೆ.
ಪಡಿಕ್ಕಲ್ ಪ್ರಚಂಡ ಫಾರ್ಮ್
31 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಪಡಿಕ್ಕಲ್, 44.54ರ ಸರಾಸರಿಯಲ್ಲಿ 6 ಶತಕ ಮತ್ತು 12 ಅರ್ಧಶತಕಗಳೊಂದಿಗೆ 2227 ರನ್ ಗಳಿಸಿದ್ದಾರೆ. 23ರ ಹರೆಯದ ಎಡಗೈ ಬ್ಯಾಟರ್, ಪ್ರಸಕ್ತ ಋತುವಿನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 92.66ರ ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ. ಅವರು ಆಡಿದ ಆರು ಇನ್ನಿಂಗ್ಸ್‌ಳಲ್ಲಿ ಮೂರು ಶತಕ ಸಿಡಿಸಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)