ಕನ್ನಡ ಸುದ್ದಿ  /  Cricket  /  From Ms Dhoni To Pat Cummins 4 Odi World Cup Winning Captains To Lead Ipl Teams Eoin Morgan Ricky Ponting Prs

ಐಪಿಎಲ್ ತಂಡಗಳನ್ನು ಮುನ್ನಡೆಸಿದ ಏಕದಿನ ವಿಶ್ವಕಪ್ ಗೆದ್ದ ನಾಯಕರು ಯಾರು; ಆಸ್ಟ್ರೇಲಿಯಾದವರೇ ಇಬ್ಬರು

IPL 2024 : ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆದ್ದಿರುವ ವಿಶ್ವದ ನಾಯಕರು ಐಪಿಎಲ್​​ನಲ್ಲೂ ವಿವಿಧ ತಂಡಗಳನ್ನು ಮುನ್ನಡೆಸಿದ್ದಾರೆ. ಅವರ ಪಟ್ಟಿ ಇಲ್ಲಿದೆ ನೋಡಿ.

ಐಪಿಎಲ್ ತಂಡಗಳನ್ನು ಮುನ್ನಡೆಸಿದ ಏಕದಿನ ವಿಶ್ವಕಪ್ ಗೆದ್ದ ನಾಯಕರು ಯಾರು
ಐಪಿಎಲ್ ತಂಡಗಳನ್ನು ಮುನ್ನಡೆಸಿದ ಏಕದಿನ ವಿಶ್ವಕಪ್ ಗೆದ್ದ ನಾಯಕರು ಯಾರು

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ (Indian Premier League 2024) ಆರಂಭಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಮಾರ್ಚ್​ 22ರಿಂದ ವಿಶ್ವದ ಶ್ರೀಮಂತ ಕ್ರಿಕೆಟ್​​ ಲೀಗ್​ಗೆ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Chennai Super Kings vs Royal Challengers Bangalore) ತಂಡಗಳು ಸೆಣಸಾಡಲಿವೆ. ಹೈವೋಲ್ಟೇಜ್ ಕದನಕ್ಕೆ ಚೆನ್ನೈನ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಯಶಸ್ವಿಯಾಗಿ 16 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಐಪಿಎಲ್​ 17ನೇ ಸೀಸನ್​ಗೆ ಸಜ್ಜಾಗಿದೆ. 2008ರಿಂದ ಇಲ್ಲಿಯವರೆಗೂ ದಿಗ್ಗಜ ಆಟಗಾರರೇ ಲೀಗ್​ ಆಡಿರುವುದು ವಿಶೇಷ. ವಿಶ್ವ ಶ್ರೇಷ್ಠ ಆಟಗಾರರೇ ಐಪಿಎಲ್ ತಂಡಗಳನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಅದೇ ರೀತಿ ಏಕದಿನ ವಿಶ್ವಕಪ್​​​ ಗೆದ್ದ ನಾಯಕರು ಐಪಿಎಲ್​​ನಲ್ಲೂ ವಿವಿಧ ತಂಡಗಳನ್ನು ಮುನ್ನಡೆಸಿದ್ದಾರೆ. ಅವರ ಪಟ್ಟಿ ಇಲ್ಲಿದೆ ನೋಡಿ.

ಎಂಎಸ್ ಧೋನಿ

ಮಹೇಂದ್ರ ಸಿಂಗ್ ಧೋನಿ ಅವರು 2011ರ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 28 ವರ್ಷಗಳ ನಂತರ ಟೀಮ್ ಇಂಡಿಯಾಗೆ ಟ್ರೋಫಿ ತಂದುಕೊಟ್ಟ ಖ್ಯಾತಿಗೆ ಅವರು ಪಾತ್ರರಾದರು. ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಧೋನಿ, ಐಪಿಎಲ್​ನಲ್ಲಿ 2008ರ ಸೀಸನ್​ನಿಂದಲೂ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧೋನಿ 2010, 2011, 2018, 2021, 2023ರಲ್ಲಿ ಚೆನ್ನೈಗೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ರಿಕಿ ಪಾಂಟಿಂಗ್​

2003 ಮತ್ತು 2007ರ ಏಕದಿನ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ರಿಕಿ ಪಾಂಟಿಂಗ್ ಅವರು 2013ರ ಐಪಿಎಲ್ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದರು. ಪಾಂಟಿಂಗ್ 2013ರ ಐಪಿಎಲ್‌ನಲ್ಲಿ ಆರು ಪಂದ್ಯಗಳಿಗೆ ನಾಯಕತ್ವ ವಹಿಸಿ ಕೆಳಗಿಳಿದರು. ನಂತರ ರೋಹಿತ್ ಶರ್ಮಾ ಕ್ಯಾಪ್ಟನ್​ ಆದರು. ಹಿಟ್​ಮ್ಯಾನ್ ನಾಯಕತ್ವದಲ್ಲಿ ಮುಂಬೈ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಪಾಂಟಿಂಗ್ ಸಹ ತಂಡದಲ್ಲಿದ್ದರು. ರೋಹಿತ್​ ಮುಂಬೈ ಒಟ್ಟು 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ಇಯಾನ್ ಮಾರ್ಗನ್

2019ರಲ್ಲಿ ಇಂಗ್ಲೆಂಡ್​ ತಂಡವನ್ನು ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿದ ಇಯಾನ್ ಮಾರ್ಗನ್ ಅವರು ಐಪಿಎಲ್​ನಲ್ಲಿ 2020 ಮತ್ತು 2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕರಾಗಿದ್ದರು. 2020ರ ಋತುವಿನಲ್ಲಿ ಕೆಕೆಆರ್​​ ನಾಯಕತ್ವವನ್ನು ವಹಿಸಿಕೊಂಡ ಮಾರ್ಗನ್ ಅವರು, 2021ರಲ್ಲಿ ತಂಡವನ್ನು ಫೈನಲ್​ಗೇರಿಸಿದ್ದರು. ಎಂಎಸ್ ಧೋನಿ ನೇತೃತ್ವದ ಚೆನ್ನೈ ವಿರುದ್ಧ ಫೈನಲ್​​ನಲ್ಲಿ ಸೋತು ರನ್ನರ್​ಅಪ್​ಗೆ ಒಳಗಾದರು.

ಪ್ಯಾಟ್ ಕಮಿನ್ಸ್​

ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 2023ರ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಟ್ಟ ಕೆಲವೇ ತಿಂಗಳ ನಂತರ ಪ್ಯಾಟ್ ಕಮಿನ್ಸ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಪ್ಯಾಟ್ ಕಮಿನ್ಸ್ ಸದ್ಯಕ್ಕೆ ಆಸ್ಟ್ರೇಲಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿದ್ದಾರೆ. ಎಸ್‌ಆರ್‌ಹೆಚ್ 20.5 ಕೋಟಿ ರೂಪಾಯಿ ನೀಡಿ ಅವರನ್ನು ಖರೀದಿಸಿತ್ತು. ಇದೀಗ ಹೈದರಾಬಾದ್​ಗೆ ಕ್ಯಾಪ್ಟನ್​ ಮಾಡಲಾಗಿದೆ.

IPL_Entry_Point