ಸಿರಾಜ್ ಇನ್ನೂ ಕೆಟ್ಟದಾಗಿ ಬೌಲಿಂಗ್ ಮಾಡ್ತಾರೆ; ಭಾರತದ ವೇಗಿ ಕುರಿತು ಗೌತಮ್ ಗಂಭೀರ್ ಅಸಮಾಧಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿರಾಜ್ ಇನ್ನೂ ಕೆಟ್ಟದಾಗಿ ಬೌಲಿಂಗ್ ಮಾಡ್ತಾರೆ; ಭಾರತದ ವೇಗಿ ಕುರಿತು ಗೌತಮ್ ಗಂಭೀರ್ ಅಸಮಾಧಾನ

ಸಿರಾಜ್ ಇನ್ನೂ ಕೆಟ್ಟದಾಗಿ ಬೌಲಿಂಗ್ ಮಾಡ್ತಾರೆ; ಭಾರತದ ವೇಗಿ ಕುರಿತು ಗೌತಮ್ ಗಂಭೀರ್ ಅಸಮಾಧಾನ

Gautam Gambhir on Mohammed Siraj: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಸೋಲನುಭವಿಸಿದ ಬಳಿಕ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಮ್‌ ಇಂಡಿಯಾ ಬೌಲಿಂಗ್‌ ವಿಮರ್ಶೆ ಮಾಡಿದ್ದಾರೆ.

ಮೊಹಮ್ಮದ್‌ ಸಿರಾಜ್
ಮೊಹಮ್ಮದ್‌ ಸಿರಾಜ್ (AFP)

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 2ನೇ ಟಿ20 ಪಂದ್ಯದಲ್ಲಿ ಟೀಮ್‌ ಇಂಡಿಯಾ ಬೌಲರ್‌ಗಳು ದುಬಾರಿಯಾದರು. ಅಲ್ಲದೆ ವಿಕೆಟ್‌ ಪಡೆಯಲು ಪರದಾಡಿದರು. ಮಳೆಯಿಂದಾಗಿ 152 ರನ್‌ ಗುರಿಯನ್ನು ರಕ್ಷಿಸಬೇಕಿತ್ತು. ಪವರ್‌ಪ್ಲೇನಲ್ಲಿಯೇ ಪಂದ್ಯವನ್ನು ಬಹುತೇಕ ಕಳೆದುಕೊಂಡ ಭಾರತ, ಆ ಬಳಿಕ ಮತ್ತೆ ಹಿಡಿತ ಸಾಧಿಸುವಲ್ಲಿ ವಿಫಲವಾಯ್ತು. ಅಂತಿಮವಾಗಿ ಹರಿಣಗಳು ಐದು ವಿಕೆಟ್‌ಗಳಿಂದ ಪಂದ್ಯ ಗೆದ್ದರು.

ಪಂದ್ಯದ ಬಳಿಕ ಟೀಮ್‌ ಇಂಡಿಯಾ ಬೌಲಿಂಗ್‌ ಕುರಿತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದರು. ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಬೆಂಬಲವಾಗಿ ನಿಲ್ಲುವಲ್ಲಿ ಅರ್ಷ‌ದೀಪ್ ಸಿಂಗ್ ಎಡವಿದರು ಎಂದು ನಿರಾಶೆ ವ್ಯಕ್ತಪಡಿಸಿದರು.

ಇದನ್ನೂ ಓದಿ | ಶುಭ್ಮನ್​ಗೆ ವಿಶ್ರಾಂತಿ, ಋತುರಾಜ್​ಗೆ ಅವಕಾಶ; 3ನೇ ಟಿ20ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ

ಸಿರಾಜ್ ತಮ್ಮ ಮೊದಲ ಓವರ್‌ನಲ್ಲಿ 14 ರನ್‌ಗಳನ್ನು ಬಿಟ್ಟುಕೊಟ್ಟರು. ಆ ಬಳಿಕ ಅರ್ಷದೀಪ್ ಬರೋಬ್ಬರಿ 24 ರನ್ ಸೋರಿಕೆ ಮಾಡಿ ದುಬಾರಿ ಎನಿಸಿದರು. ತಮ್ಮ ಎರಡನೇ ಓವರ್‌ನಲ್ಲಿ ತುಸು ಗ್ರಿಪ್‌ ಪಡೆದುಕೊಂಡು 11 ರನ್ ನೀಡಿದರು. ಹೆನ್ರಿಕ್ ಕ್ಲಾಸೆನ್ ವಿಕೆಟ್ ಪಡೆಯುವುದರೊಂದಿಗೆ ಸಿರಾಜ್ 27 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಕಬಳಿಸಿದರು.

“ಮೊಹಮ್ಮದ್ ಸಿರಾಜ್ ಮುಂದೆ ಇದಕ್ಕಿಂತಲೂ ಕೆಟ್ಟದಾಗಿ ಬೌಲಿಂಗ್ ಮಾಡುತ್ತಾರೆ. ಆದರೆ ಉತ್ತಮ ಅಂಕಿ-ಅಂಶಗಳೊಂದಿಗೆ ಪಂದ್ಯ ಮುಗಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೆ ಅರ್ಷದೀಪ್ ಪ್ರದರ್ಶನ ನೋಡಿ ಸ್ವಲ್ಪ ನಿರಾಶೆಯಾಗಿದೆ. ಅತ್ತ ಮುಖೇಶ್ ಬೌಲ್ ಮಾಡಿದ 13ನೇ ಓವರ್ ಅದ್ಭುತವಾಗಿತ್ತು. ಒದ್ದೆಯಾದ ಚೆಂಡಿನೊಂದಿಗೆ ಪಿನ್ ಪಾಯಿಂಟ್ ಯಾರ್ಕರ್‌ಗಳನ್ನು ಎಸೆದರು. ಮುಂದೆ ಮೈದಾನವು ತೇವದಿಂದ ಇಲ್ಲದಿದ್ದರೆ, ಈ ಬೌಲಿಂಗ್ ಲೈನ್ಅಪ್ ಬಹಳಷ್ಟು ಭಿನ್ನವಾಗಿ ಕಾಣಿಸುತ್ತದೆ” ಎಂದು ಗಂಭಿರ್‌ ಹೇಳಿದ್ದಾರೆ.

ಇದನ್ನೂ ಓದಿ | ಭಾರತ ವಿಶ್ವಕಪ್ ಗೆದ್ದ ಮೈದಾನದಲ್ಲೇ 3ನೇ ಟಿ20; ಅಂತಿಮ ಪಂದ್ಯಕ್ಕೂ ಇದೆಯೇ ಮಳೆಯ ಆತಂಕ? ಇಲ್ಲಿದೆ ಮಾಹಿತಿ

“ವಿಶ್ವಕಪ್‌ಗೆ ಮುಂದೆ 6ರಿಂದ 7 ತಿಂಗಳು ಬಾಕಿ ಉಳಿದಿವೆ. ಈ ದ್ವಿಪಕ್ಷೀಯ ಸರಣಿಯಲ್ಲಿ ಭಾರತವು ಬೌಲರ್‌ಗಳನ್ನು ಪರೀಕ್ಷಿಸಲು ಬಯಸುತ್ತದೆ. ತಂಡದ ಡೆತ್-ಓವರ್‌ಗಳ ಬೌಲಿಂಗ್ ಎಷ್ಟು ಪ್ರಬಲವಾಗಿದೆ ಎಂಬುದನ್ನು ನೋಡಬೇಕು. ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಉತ್ತಮ ಆಯ್ಕೆ ಯಾರಾಗಬಹುದು ಏಂಬುದು ನೋಡುವ ಸಮಯ. ಸದ್ಯ ಪಂದ್ಯಗಳ ಫಲಿತಾಂಶಗಳಿಗಿಂತ ಹೆಚ್ಚಾಗಿ ಇಂಥಾ ಅಂಶಗಳನ್ನು ಹೆಚ್ಚು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕಾಗಿದೆ” ಎಂದು ಗಂಭೀರ್ ಹೇಳಿದ್ದಾರೆ.

3ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ/ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್/ಜಿತೇಶ್ ಶರ್ಮಾ, ರಿಂಕು ಸಿಂಗ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್/ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಅರ್ಷ್​ದೀಪ್ ಸಿಂಗ್.

3ನೇ ಟಿ20 ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ

ರೀಜಾ ಹೆಂಡ್ರಿಕ್ಸ್, ಮ್ಯಾಥ್ಯೂ ಬ್ರೀಟ್ಜ್ಕೆ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಆಂಡಿಲ್ ಫೆಹ್ಲುಕ್ವಾಯೊ, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ತ್ರಬೈಜ್ ಶಂಸಿ, ಒಟ್ನಿಯಲ್ ಬಾರ್ಟ್ಮನ್.

Whats_app_banner